ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣ -ಒಂದು ಅವಲೋಕನ

ಪ್ರಸಕ್ತ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕಾಗಿ ಕರ್ನಾಟಕ ಸರಕಾರವು ನಾಗಮೋಹನ್ದಾಸ್ ಅವರ ಆಯೋಗವನ್ನು ರಚಿಸಿದೆ. ಈ ವಿಷಯ ಕುರಿತು ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೆಲವು ಅಂಶಗಳು ಇಲ್ಲಿವೆ.
ಭಾರತದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಒಂದು ಸಾವಿರಕ್ಕೂ ಮಿಗಿಲಾದ ಸಮುದಾಯಗಳಿವೆ. ದಿನಾಂಕ 11.08.1950 ಗೆಝೆಟ್ ಆಫ್ ಇಂಡಿಯಾದ ಪ್ರಕಾರ ಸಂವಿಧಾನದ ವಿಧಿ 341ರ ಅನ್ವಯ ಭಾಗ 12ರಲ್ಲಿ ಮೈಸೂರು ಸಂಸ್ಥಾನದಲ್ಲಿ 6 ಜಾತಿಗಳನ್ನು ಪರಿಶಿಷ್ಟ ಜಾತಿಗಳನ್ನಾಗಿ ಗುರುತಿಸಲಾಯಿತು. ಅವು ಆದಿದ್ರಾವಿಡ, ಆದಿಕರ್ನಾಟಕ, ಬಂಜಾರ ಅಥವಾ ಲಂಬಾಣಿ, ಭೋವಿ, ಕೊರಚ, ಕೊರಮ. ಇಲ್ಲಿ ಆದಿದ್ರಾವಿಡ, ಆದಿಕರ್ನಾಟಕ ಅಸ್ಪಶ್ಯ ಜಾತಿಗಳೆಂಬುದು ಗಮನಿಸಬೇಕು.
1956ರಲ್ಲಿ ಕರ್ನಾಟಕ ಏಕೀಕರಣವಾದಾಗ ಬಾಂಬೆ ಪ್ರೆಸಿಡೆನ್ಸಿ, ಹೈದರಾಬಾದ್, ಮದ್ರಾಸು ಪ್ರಸಿಡೆನ್ಸಿ, ಕೊಡಗು ಪ್ರದೇಶಗಳ ಪರಿಶಿಷ್ಟ ಜಾತಿಯ ಸಮುದಾಯಗಳೆಲ್ಲವೂ ಮೈಸೂರಿನಲ್ಲಿ ಸೇರ್ಪಡೆಯಾದವು. 18.09.1976ರಲ್ಲಿ ರಾಷ್ಟ್ರಪತಿ ಅಂಕಿತದೊಂದಿಗೆ ಪರಿಶಿಷ್ಟ ಜಾತಿಗಳನ್ನು ಪರಿಷ್ಕರಿಸಿ ಅಧಿಕೃತವಾಗಿ ಘೋಷಿಸಲಾಯಿತು. 20.09.1976ರ ಭಾರತದ ರಾಜಪತ್ರ(ಗೆಝೆಟ್)ದಲ್ಲಿ ಪ್ರಕಟಿಸಲಾಗಿದೆ. ಇದರಿಂದಾಗಿ ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳು ಮಾನ್ಯವಾಗಿ, ಕೆಲವನ್ನು ಸಮಾನಾಂತರ ಜಾತಿಗಳೆಂದು ತನ್ನೊಳಗೆ ಸೇರಿಸಿಕೊಂಡಿವೆ. ಈ ಸಮುದಾಯಗಳು ಸ್ಪಶ್ಯ ಜಾತಿಗಳಾಗಿರುವುದರಿಂದ ಅಸಾಂವಿಧಾನಿಕವಾಗಿ ಪರಿಶಿಷ್ಟ ಜಾತಿಯಲ್ಲಿ ಸೇರಿಸಲಾಗಿದೆ ಎನ್ನುವುದು ಒಂದು ವಾದ.
2017ರ ಭಾರತದ ಪರಿಶಿಷ್ಟ ಜಾತಿಯಲ್ಲಿ ರಾಜ್ಯವಾರು ಉಪಜಾತಿಗಳ ಸಂಖ್ಯೆ ಈ ರೀತಿ ಇವೆ. ಆಂಧ್ರಪ್ರದೇಶ-61, ಗುಜರಾತ್-36, ಜಾರ್ಖಂಡ್-22, ಮಹಾರಾಷ್ಟ್ರ-59, ಮಧ್ಯಪ್ರದೇಶ-48, ರಾಜಾಸ್ಥಾನ-59, ಉತ್ತರಪ್ರದೇಶ-66, ತೆಲಂಗಾಣ-59, ಒಡಿಶಾ-95, ತಮಿಳುನಾಡು-76, ಕೇರಳ-61, ಹರ್ಯಾಣ-37, ಪಂಜಾಬ್-39, ಹಿಮಾಚಲ ಪ್ರದೇಶ-57, ಪಶ್ಚಿಮ ಬಂಗಾಳ-60, ಛತ್ತೀಸ್ಗಡ-44, ದಿಲ್ಲಿ-36, ಕರ್ನಾಟಕ-101 ಇತ್ಯಾದಿ.
ಭೋವಿ ಸಮುದಾಯವು ಕರ್ನಾಟಕದಲ್ಲಿ ಮಾತ್ರ ಪರಿಶಿಷ್ಟ ಜಾತಿಯಲ್ಲಿದ್ದು ಉಳಿದ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದೆ. ಅದೇ ರೀತಿ ಲಂಬಾಣಿ ಸಮುದಾಯವು ಕರ್ನಾಟಕ, ದಿಲ್ಲಿ ಮತ್ತು ಪಂಜಾಬ್ಗಳಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದೆ. 2008ರಿಂದ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಲ್ಲಿ ಪರಿಶಿಷ್ಟ ವರ್ಗದ ಪಟ್ಟಿಯಲ್ಲಿದೆ. ಛತ್ತೀಸ್ಗಡ, ಗುಜರಾತ್, ಹರ್ಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದೆ. ಪರಿಶಿಷ್ಟರಲ್ಲಿ ಅತಿ ಹೆಚ್ಚು ಜಾತಿಗಳನ್ನು ಹೊಂದಿರುವ ಕರ್ನಾಟಕದಲ್ಲಿ, ಕೇವಲ ಶೇ.15ರಷ್ಟು ಮೀಸಲಾತಿಯಲ್ಲಿ ಎಲ್ಲರೂ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರ ಪ್ರಾರಂಭವಾಗಿದ್ದು ಅಂದಿನ ಆಂಧ್ರಪ್ರದೇಶ (ತೆಲಂಗಾಣ ಮತ್ತು ಆಂಧ್ರಪ್ರದೇಶ)ದಲ್ಲಿ. 1995-2000ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಸರಕಾರವು ಮಾದಿಗ ದಂಡೋರದ ಒತ್ತಾಯದ ಮೇರೆಗೆ ಪರಿಶಿಷ್ಟ ಜಾತಿಯನ್ನು ಪುನರ್ವಿಂಗಡಿಸಲು 1997ರಲ್ಲಿ ಆಯೋಗ ರಚಿಸಿ, ನ್ಯಾಯಮೂರ್ತಿ ರಾಮಚಂದ್ರರಾಜು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿತು. 1991ರ ಜನಗಣತಿಯ ಆಧಾರದ ಮೇಲೆ ಅವಿಭಜಿತ ಆಂಧ್ರದ ಜನಸಂಖ್ಯೆಯು 6.65 ಕೋಟಿಯಾಗಿದ್ದು, ಪರಿಶಿಷ್ಟ ಜಾತಿಯ ಜನಸಂಖ್ಯೆಯು 1.05 ಕೋಟಿಯಾಗಿತ್ತು. ಪರಿಶಿಷ್ಟ ಜಾತಿಯಲ್ಲಿ 57 ಜಾತಿಗಳಿದ್ದು ಮಾಲಾ (ಬಲಗೈ) ಜನಾಂಗವು ಶೇ.41 ಮತ್ತು ಮಾದಿಗ (ಎಡಗೈ) ಜನಾಂಗವು ಶೇ.47ರಷ್ಟಿತ್ತು. ರೆಲ್ಲಿ, ಆದಿಆಂಧ್ರ ಮತ್ತಿತರ ಜಾತಿಗಳಿದ್ದವು. ಆಯೋಗವು ಜನಸಂಖ್ಯೆಯ ಆಧಾರದ ಮೇಲೆ ಪರಿಶೀಲಿಸಿ, ಪರಿಶಿಷ್ಟ ಜಾತಿಯನ್ನು ಎ, ಬಿ, ಸಿ ಮತ್ತು ಡಿ ಆಧಾರದಲ್ಲಿ ವರ್ಗೀಕರಿಸಿ ಶೇ.15ರ ಮೀಸಲಾತಿಯನ್ನು ಈ ರೀತಿ ವಿಂಗಡಿಸಿತು.
12 ಉಪಜಾತಿಗಳನ್ನು ‘ರೆಲ್ಲಿ’ ಗುಂಪಿಗೆ ಸೇರಿಸಿ ‘ಎ’ ವರ್ಗ ಎಂದು ಶೇ. 1ರಷ್ಟು ಮೀಸಲಾತಿಯನ್ನು ನಿಗದಿ ಮಾಡಿತು. ‘ಮಾದಿಗ’ ಜನಾಂಗದ ಗುಂಪಿಗೆ 19 ಜಾತಿಗಳನ್ನು ಸೇರಿಸಿ ‘ಬಿ’ ವರ್ಗ ಎಂದು ಶೇ. 7ರಷ್ಟು ಮೀಸಲಾತಿಯನ್ನು ನಿಗದಿ ಮಾಡಿತು. ‘ಮಾಲಾ’ ಜನಾಂಗದ ಗುಂಪಿಗೆ 25 ಉಪಜಾತಿಗಳನ್ನು ಸೇರಿಸಿ ‘ಸಿ’ ವರ್ಗ ಎಂದು ಶೇ.6ರಷ್ಟು ಮೀಸಲಾತಿ ಮತ್ತು ‘ಆದಿ ಆಂಧ್ರ’ ಗುಂಪಿಗೆ 4 ಉಪಜಾತಿಗಳನ್ನು ಸೇರಿಸಿ ‘ಡಿ’ ವರ್ಗವೆಂದೂ ಶೇ.1ರಷ್ಟು ಮೀಸಲಾತಿಯೆಂದು ನಿಗದಿ ಮಾಡಿ ಸರಕಾರಕ್ಕೆ ಶಿಫಾರಸು ಮಾಡಿತು. ಸರಕಾರವು ಆ ವರ್ಷದಿಂದಲೇ ಜಾರಿಗೆ ನಿರ್ಧರಿಸಿದರೂ ಯಶಸ್ವಿಯಾಗಲಿಲ್ಲ.
ಕರ್ನಾಟಕದಲ್ಲಿಯೂ ಮಾದಿಗ ಸಮುದಾಯವು ಒಳಮೀಸಲಾತಿಗೆ ಒತ್ತಾಯಿಸಿದ್ದರಿಂದ, ಸರಕಾರವು ಎನ್.ವೈ. ಹನುಮಂತಪ್ಪ ಮತ್ತು ಎ.ಜೆ. ಸದಾಶಿವ ಆಯೋಗಗಳನ್ನು ರಚಿಸಿತು. ಆ ಸಮಯದಲ್ಲಿ ಮಾದಿಗ ಜನಾಂಗವು ಶೇ. 15ರಲ್ಲಿ ಶೇ. 9ರಷ್ಟು ನಿಗದಿ ಮಾಡಬೇಕೆಂದು ಕೇಳಿತ್ತು.
ಒಳಮೀಸಲಾತಿ ವರ್ಗೀಕರಣದ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪನವರು ‘‘ರಾಜ್ಯದಲ್ಲಿ ಮಾದಿಗರ ಸಂಖ್ಯೆ 75 ಲಕ್ಷ, ಹೊಲೆಯರ ಸಂಖ್ಯೆ 25 ಲಕ್ಷ ಇರುತ್ತದೆ, ಹೊಲೆಯರು ಮತ್ತು ಮಾದಿಗರು ಇಬ್ಬರೂ ಆದಿಕರ್ನಾಟಕ ಎಂದು ಬರೆಸಿರುವುದರಿಂದ ಮಾದಿಗರು ಅಥವಾ ಹೊಲೆಯರು ಯಾರು ಎಂದು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ’’ ಎಂದು ಹೇಳಿದ್ದರು.
ಈ ಗೊಂದಲ ನಿವಾರಿಸುವ ಸಲುವಾಗಿ ಎ.ಜೆ.ಸದಾಶಿವ ಆಯೋಗವು ಹಲವು ಕ್ರಮಗಳನ್ನು ಕೈಗೊಂಡಿತ್ತು. ಅದರನ್ವಯ ಅರ್ಜಿಯ ನಮೂನೆಗಳು ಕೇಂದ್ರ, ರಾಜ್ಯ ಸರಕಾರದ ಕಚೇರಿಗಳು ಮತ್ತು ಸಾರ್ವಜನಿಕ ಉದ್ದಿಮೆಗಳು ಮುಂತಾದ ಕಡೆಗಳಲ್ಲಿ ಬಂದಿದ್ದವು. ಉದ್ಯೋಗಿಗಳು ಕಾಲಂ 5ರಲ್ಲಿ ಜಾತಿ ಮತ್ತು ಉಪಜಾತಿಯ ಹೆಸರನ್ನು ಕಡ್ಡಾಯವಾಗಿ ನಮೂದಿಸುವಂತೆ ತಿಳಿಸಲಾಗಿತ್ತು. ಹೊಲೆಯ ಮತ್ತು ಮಾದಿಗರು ತಮ್ಮ ಉಪಜಾತಿಯ ಕಾಲಂಗಳಲ್ಲಿ ಆದಿಕರ್ನಾಟಕ, ಆದಿದ್ರಾವಿಡ ಮತ್ತು ಹರಿಜನ ಎಂದು ನಮೂದಿಸಿದ್ದರು ಮತ್ತು 2015ರ ಜಾತಿ ಸಮೀಕ್ಷೆಯಲ್ಲಿ ಈ ಪದಗಳನ್ನೇ ಬಳಸಿದ್ದರು. ಭೋವಿ, ಕೊರಮ, ಕೊರಚ, ಲಂಬಾಣಿ ಅಥವಾ ಬಂಜಾರ, ಮೊಗೇರ, ದೊಂಬ ಸಮುದಾಯಗಳು ತಮ್ಮ ಜಾತಿ ಹೆಸರನ್ನು ನಮೂದಿಸುತ್ತವೆ. ಆದರೆ ಸಮಸ್ಯೆ ಇರುವುದು ಹೊಲೆಯ ಮತ್ತು ಮಾದಿಗ ಅಂದರೆ ಆದಿದ್ರಾವಿಡ ಮತ್ತು ಆದಿಕರ್ನಾಟಕದಲ್ಲಿ.
ಸದಾಶಿವ ಆಯೋಗವು ವರ್ಗೀಕರಣವನ್ನು ಈ ರೀತಿ ಹಂಚಿಕೆ ಮಾಡಿತ್ತು. ಮಾದಿಗ ಸಂಬಂಧಿತ ಸಮುದಾಯಗಳಿಗೆ ಶೇ.6, ಹೊಲೆಯ ಸಂಬಂಧಿತ ಸಮುದಾಯಗಳಿಗೆ ಶೇ.5, ಸ್ಪಶ್ಯ ಸಮುದಾಯಗಳಿಗೆ ಶೇ.3 ಮತ್ತು ಇತರ ಸಮುದಾಯಗಳಿಗೆ ಶೇ.1ರಷ್ಟು ಹಂಚಿಕೆ ಮಾಡಿತ್ತು. ಹೊಲೆಮಾದಿಗ ಸಮುದಾಯಗಳು ಒಪ್ಪಿದರೆ, ಸ್ಪಶ್ಯ ಸಮುದಾಯಗಳು ವಿರೋಧಿಸಿದವು. ಇದಾದ ನಂತರ ನಾಗಮೋಹನ್ದಾಸ್ ಸಮಿತಿಯು ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯ ಪ್ರಮಾಣವನ್ನು ಶೇ.15.ರಿಂದ ಶೇ.17ಕ್ಕೆ ಏರಿಸಿತು.
ಸ್ಪಶ್ಯ ಜಾತಿಗಳಾದ ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳ ಸೇರ್ಪಡೆಯ ಬಗ್ಗೆ ಮೊದಲಿನಿಂದಲೂ ಅಸಮಾಧಾನವಿದ್ದುದರಿಂದ, ಅವು ಹೆಚ್ಚಿಗೆ ಪಾಲನ್ನು ಕಬಳಿಸುತ್ತಿದ್ದು ಶೋಷಿತ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಆ ಸಮುದಾಯಗಳನ್ನು ಕೈಬಿಡಬೇಕೆಂದು ಎಡ-ಬಲದ ಸಂಘಟನೆ ಒಕ್ಕೂಟ ರಚಿಸಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದವು. ಘನ ನ್ಯಾಯಾಲಯವು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಸ್ಪಷ್ಟನೆ ನೀಡುವಂತೆ ತಿಳಿಸಿತ್ತು. ಆಯೋಗವು ಇದರ ಬಗ್ಗೆ ಕರ್ನಾಟಕ ಸರಕಾರಕ್ಕೆ ಸ್ಪಷ್ಟೀಕರಣ ಕೇಳಿತ್ತು.
ಇದಾದ ನಂತರ ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ನೀಡಿರುವುದರಿಂದ ಕರ್ನಾಟಕದಲ್ಲಿ ಚಾಲನೆ ಪಡೆದಿದೆ. ಜನಾಂಗೀಯ ದೃಷ್ಟಿಯಿಂದ ಪರಿಗಣಿಸುವುದಾದರೆ ಕರ್ನಾಟಕದ ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಉತ್ತರ ಕರ್ನಾಟಕದ ಬೀದರ್, ಗುಲ್ಬರ್ಗ, ಬೆಳಗಾವಿ, ಬಿಜಾಪುರ ಇತ್ಯಾದಿ ಜಿಲ್ಲೆಗಳಲ್ಲಿ ಹೊಲೆಯರು ಮಾದಿಗರಿಗಿಂತ ಅಧಿಕ ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ದಾವಣಗೆರೆ ಜಿಲ್ಲೆಗಳಲ್ಲಿ ಮಾದಿಗರು ಹೊಲೆಯರಿಗಿಂತ ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಜಿಲ್ಲೆಗಳಲ್ಲಿ ಮಾತ್ರ ಹೊಲೆಯರಿಗೆ ಛಲವಾದಿ, ಬ್ಯಾಗಾರ ಎಂದೂ, ಮಾದಿಗರಿಗೆ ಮಣೆಗಾರರೆಂದೂ ಕರೆಯುತ್ತಾರೆ. ಚಿಕ್ಕಬಳ್ಳಾಪುರ ಮತ್ತು ಧಾರವಾಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಮ-ಸಮ ಇದ್ದಾರೆ ಎಂದು ಅಭಿಪ್ರಾಯವಿದೆ.
ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಹೊಲೆಯ, ಮಾದಿಗರಿಬ್ಬರಿಗೂ ‘ಆದಿಕರ್ನಾಟಕ’ ಎಂದು ಜಾತಿ ಪ್ರಮಾಣ ಪತ್ರ ನೀಡಲಾಗುತ್ತದೆ. ದೊಡ್ಡಬಳ್ಳಾಪುರ ತಾಲೂಕು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹೊಲೆಯರಿಗೆ ‘ಆದಿದ್ರಾವಿಡ’ ಮತ್ತು ಮಾದಿಗರಿಗೆ ‘ಆದಿಕರ್ನಾಟಕ’ ಎಂದೂ ಜಾತಿ ಪ್ರಮಾಣಪತ್ರ ನೀಡಲಾಗುತ್ತದೆ. ಬಿಜಾಪುರ, ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ ಹೊಲೆಯರಿಗೆ ‘ಹೊಲೇರ’, ‘ಹೊಲೆಯ’ ಎಂದೂ, ಮಾದಿಗರಿಗೆ ‘ಮಾದರ’ ಎಂದೂ ಜಾತಿ ಪ್ರಮಾಣ ಪತ್ರ ನೀಡಲಾಗುತ್ತದೆ.
ಭಾಷಾವಾರು ಪ್ರಾಂತದ ನಂತರ ಕರ್ನಾಟಕದ ತೆಲುಗು ಸಮುದಾಯಗಳು ಆದಿಕರ್ನಾಟಕ ಎಂದೂ, ಆಂಧ್ರಪ್ರದೇಶದ ಅನಂತಪುರ, ಕರ್ನೂಲು ಜಿಲ್ಲೆಗಳಲ್ಲಿರುವ ಹೊಲೆಯ ಸಮುದಾಯಗಳು ‘ಮಾಲಾ’ ಎಂದೂ, ಮಹಾರಾಷ್ಟ್ರದಲ್ಲಿ ‘ಮಹಾರ್’ಎಂದೂ ಜಾತಿ ಪ್ರಮಾಣ ಪತ್ರ ಪಡೆಯುತ್ತಿವೆ. ಆಂಧ್ರದ ಮಾದಿಗ ದಂಡೋರವು ಒಳಮೀಸಲಾತಿಗಾಗಿ ಹೋರಾಟ ಮಾಡಿದಾಗ, ಹೊಲೆಯ ಸಮುದಾಯಗಳು ಮಾಲಾ ಮಹಾನಾಡು ಜೊತೆ ಗುರುತಿಸಿಕೊಂಡವು. ತಮಿಳಿನ ಪರೈಯನ್, ಪಲ್ಲರ್, ಚಕ್ಲಿಯರ್ ಮತ್ತು ಬೆಂಗಳೂರಿನ ಸ್ಥಳವಂದಿಗ ಹೊಲೆಯ ಸಮುದಾಯಗಳು ಆದಿದ್ರಾವಿಡ ಎಂದು ಪ್ರಮಾಣ ಪತ್ರ ಪಡೆಯುತ್ತಿವೆ.
ಭಾರತ ಸರಕಾರ 1950ರಲ್ಲಿ ಸಿಖ್ ಮತ್ತು 1993ರಲ್ಲಿ ಬೌದ್ಧಧರ್ಮಕ್ಕೆ ಮತಾಂತರ ಹೊಂದಿದ ಅಸ್ಪಶ್ಯರಿಗೆ ಮಾತ್ರ ಮೀಸಲಾತಿ ಕಲ್ಪಿಸಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಒಳಮೀಸಲಾತಿ ಅನಿವಾರ್ಯವಾಗಿರುವುದರಿಂದ ಕರ್ನಾಟಕ ಸರಕಾರ ಮತ್ತು ಪರಿಷ್ಕರಣಾ ಆಯೋಗವು ಈ ಕೆಳಕಂಡ ಅಂಶಗಳನ್ನು ಪರಿಶೀಲಿಸಿ ವಿಂಗಡಣೆ ಮಾಡಬಹುದು.
ಹೊಲೆಯ ಮತ್ತು ಮಾದಿಗ ಸಮುದಾಯಗಳು ಆದಿಕರ್ನಾಟಕ ಮತ್ತು ಆದಿದ್ರಾವಿಡ ಎಂದು ನಮೂದಿಸುತ್ತಿರುವುದರಿಂದ ಈ ರೀತಿ ವರ್ಗೀಕರಿಸಬಹುದು.
1. ಹೊಲೆಯರ(ಬಲಗೈ) ಸಂಬಂಧಿತ ಸಮುದಾಯಗಳು - ಆದಿಯ, ಬಲಗೈ, ಬ್ಯಾಗಾರ, ಹಲ್ಲೇರ್, ಆರ್ಯಮಾಲ, ಅರ್ವಮಾಲ, ಅರುಂಧತಿಯರ್(ಮಾಲ), ಛಲವಾದಿ, ಚಲುವಾದಿ, ಚಲವಾದಿ, ಛಲ್ವಾದಿ, ಚೆನ್ನಯ್ಯ, ಚನ್ನದಾಸರ್, ಗೊಡ್ಡ, ಹನ್ನೈ, ಹೊಲೆಯ ದಾಸರ್, ಹೊಲಾರ್, ಹೊಲಿಯ, ಹೊಲಯ, ವಲ್ಹಾರ್, ಮಹಾರ್(ಸಂಬಂಧಿತ ಒಳಸಮುದಾಯಗಳು), ಮೈಲಾ, ಮಾಲಾ(ಹೊಲೆಯ), ಮಾಲಾ (ತೆಲುಗು), ಮಾಲಾ (ದುಡ್ಡು), ಮಾಲಾದಾಸರಿ, ಮಾಲ ಹನ್ನೈ, ಮಾಲ ಜಂಗಮ, ಮಾಲ ಮಸ್ತಿ, ಮಾಲ ಸಾಲೈ, ಮಾಲಸನ್ಯಾಸಿ, ಮುಂಡಾಲ, ಅಜಿಲ, ನಲಿಕೆ, ಪಂಬದ, ಪರವ, ಪಾಣಾರ್, ಬಾಕುಡ, ಮೊಗೇರ, ಪಂಚಮ, ಪಲ್ಲರ್, ಪಲ್ಲನರ್, ಪರೈಯನ್, ಪರೆಯ (ತಮಿಳು ಹೊಲೆಯ), ಸಾಂಬ, ವಳ್ಳುವನ್, ಪುಲೈಯಾರ್, ಚೆರುಮಾನ, ಚಂಡಾಲ ಇತ್ಯಾದಿ.
2. ಆದಿಜಾಂಬವ ಮಾದಿಗ(ಎಡಗೈ) ಸಂಬಂಧಿತ ಸಮುದಾಯಗಳು- ಮಾದಿಗ, ಭಂಗಿ, ಅಸಾದರು, ಅಸೋಡಿ, ಚಮಡಿಯ, ಅರುಂಧತಿಯರ್(ಮಾದಿಗ), ಚಮ್ಮಾರ್, ಚಮ್ಮಾರ್ ಹರಳಯ್ಯ, ಚಂಭಾರ್, ಹರಳಿ, ಮಚ್ಚೆಗಾರ್, ಚರ್ಮಕಾರ, ಮೋಚಿಗಾರ, ಮಾದರ್, ಮೋಚಿ, ರೋಹಿದಾಸ್, ರವಿದಾಸ್, ಸಮಗಾರ, ಚಕ್ಲಿಯನ್, ಎಲ್ಲಮ್ಮನವರು, ಜಾಂಬವುಲು, ಮಾಂಗ್, ಮಾತಂಗ, ಮಾತಂಗಿ, ಮಿನಿಮಾದ್, ಮಾಂಗ್ಗಾರುಡಿ, ಮಾಂಗ್ಗೇರೋ ಇತ್ಯಾದಿ.
ಮಾದಿಗ ಉಪಸಮುದಾಯಗಳಾದ ಭಂಗಿ, ಮೆಹತಾರ, ರೆಲ್ಲಿ, ಒಲ್ಗಣ, ರೂಖಿ, ಮಲ್ಕನ, ಹಲಾಲುಕೋರ, ಲಾಲ್ಬೇಗಿ, ವಾಲ್ಮೀಕಿ, ಜಾಡಮಾಲಿ, ಜಲಗಾರ, ದಕ್ಕಲ ಇತ್ಯಾದಿ ಸಮುದಾಯಗಳಿಗೆ ವಿಶೇಷ ಸಂರಕ್ಷಣೆ ಒದಗಿಸಬೇಕು. ಈ ಸಮುದಾಯಗಳು ಹೊಲೆಯ ಮಾದಿಗರಿಗಿಂತ ಹೀನ ಸ್ಥಿತಿಯಲ್ಲಿವೆ.
ಉತ್ತರ ಭಾರತದ ಪರಿಶಿಷ್ಟ ಜಾತಿಯಲ್ಲಿ ‘ವಾಲ್ಮೀಕಿ’ ಸಮುದಾಯವಿದೆ. ಪರಿಶಿಷ್ಟ ವರ್ಗದಲ್ಲಿರುವ ಕರ್ನಾಟಕದ ಮ್ಯಾಸ, ಪರಿವಾರ, ಬೇಡ ಮತ್ತು ಇತರ ನಾಯಕ ಸಮುದಾಯಗಳು ‘ವಾಲ್ಮೀಕಿ’ ಜೊತೆ ಗುರುತಿಸಿಕೊಳ್ಳುತ್ತವೆ. ಸಾಮಾಜಿಕ ಸ್ಥಾನಮಾನದಲ್ಲಿ ಉತ್ತರ ಭಾರತದ ಮತ್ತು ಕರ್ನಾಟಕದ ವಾಲ್ಮೀಕಿಗಳಲ್ಲಿ ಸಾಕಷ್ಟು ಅಂತರವಿದೆ.
3. ಭೋವಿ (ಒಡ್ಡ), ಲಂಬಾಣಿ (ಲಂಬಾಡ, ಬಂಜಾರ), ಕೊರಮ, ಕೊರಚ, ಮೊಗೇರ ಜಾತಿಗಳ ಒಳಪಂಗಡಗಳನ್ನು ಒಂದು ಗುಂಪು ಮಾಡಬೇಕು.
4. ದೊಂಬ, ಸುಡುಗಾಡು ಸಿದ್ಧ, ಶಿಳ್ಳೆಕ್ಯಾತ, ಬಾಂದಿ ಇತ್ಯಾದಿ ಅತಿಸೂಕ್ಷ್ಮ ಸಮುದಾಯಗಳೆಲ್ಲವನ್ನು ಒಂದು ಗುಂಪು ಮಾಡಿ ಸೂಕ್ತ ರಕ್ಷಣೆ ಒದಗಿಸಬೇಕು.
ಇದಷ್ಟೇ ಅಲ್ಲದೆ ಒಳಮೀಸಲಾತಿ ವರ್ಗೀಕರಣ ಆಯೋಗವು ಸಮಸ್ಯೆ ಇರುವ ಆದಿಕರ್ನಾಟಕ ಮತ್ತು ಆದಿದ್ರಾವಿಡ ಎಂದು ನಮೂದಿಸುತ್ತಿರುವ ಹೊಲೆಯ ಮತ್ತು ಮಾದಿಗ ಸಮುದಾಯಗಳ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುವಾಗ ಆದಿಕರ್ನಾಟಕ (ಹೊಲೆಯ, ಛಲವಾದಿ ಅಥವಾ ಮಾದಿಗ) ಮತ್ತು ಆದಿದ್ರಾವಿಡ (ಹೊಲೆಯ, ಛಲವಾದಿ, ಮಾದಿಗ, ಪರೈಯ, ಪಲ್ಲರ್, ಚಕ್ಲಿಯರ್), ಆದಿ ಆಂಧ್ರ (ಮಾಲಾ, ಹೊಲೆಯ, ಮಾದಿಗ) ಎಂದು ಕಡ್ಡಾಯವಾಗಿ ನಮೂದಿಸುವಂತೆ ಮಾಡಬೇಕು. ಈ ರೀತಿ ಮಾಡುವುದರಿಂದ ಜನಸಂಖ್ಯೆಯನ್ನು ನಿಖರವಾಗಿ ಗುರುತಿಸುವುದರ ಜೊತೆಗೆ ಸುಳ್ಳುಜಾತಿ ಪತ್ರ ಪಡೆಯುವ ಪಿಡುಗನ್ನು ನಿಯಂತ್ರಿಸಬಹುದು. ಇದಷ್ಟೇ ಅಲ್ಲದೆ ಹೊಲೆಯ ಮಾದಿಗರೂ ಸಹ ಆಯೋಗದ ನಮೂನೆಗಳಲ್ಲಿ ಆದಿಕರ್ನಾಟಕ (ಹೊಲೆಯ), ಆದಿಕರ್ನಾಟಕ (ಮಾದಿಗ), ಆದಿದ್ರಾವಿಡ (ಹೊಲೆಯ), ಆದಿದ್ರಾವಿಡ (ಮಾದಿಗ), ಆದಿ ಆಂದ್ರ (ಮಾಲ, ಹೊಲೆಯ, ಮಾದಿಗ) ಎಂದು ಕಡ್ಡಾಯವಾಗಿ ಬರೆಯಬೇಕು. ಇದರಿಂದ ಜನಸಂಖ್ಯಾ ಆಧಾರದ ಮೇಲೆ ಮೀಸಲಾತಿಯಲ್ಲಿ ಶೇಕಡವಾರು ನಿರ್ಧರಿಸಲು ಸಾಧ್ಯವಾಗುತ್ತದೆ. ಜಾತಿ ಹೆಸರು ನಮೂದಿಸುವಲ್ಲಿ ಹಿಂಜರಿಕೆ ಮಾಡಬಾರದು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಮತ್ತು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ಆಯೋಗವು ಸವಾಲುಗಳನ್ನು ಯಾವ ರೀತಿ ನಿಭಾಯಿಸುತ್ತದೆ ಕಾದು ನೋಡಬೇಕಷ್ಟೇ.