ಮೋದಿ ಸರಕಾರದ ಹೊಸ ಮಸೂದೆ ಚುನಾವಣಾ ಆಯೋಗದ ನಿಯಂತ್ರಣಕ್ಕೆ ಅಸ್ತ್ರವೆ?
- ವಿನೀತ್ ಭಲ್ಲಾ
ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಗಳನ್ನು ನಿಯಂತ್ರಿಸುವ ಮಸೂದೆಯನ್ನು ಮೋದಿ ಸರಕಾರ ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಿದೆ.
ಭಾರತದ ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದು ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆಗಳು, ರಾಜ್ಯ ಶಾಸಕಾಂಗ ಮಂಡಳಿಗಳು ಮತ್ತು ಭಾರತದಲ್ಲಿ ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರ ಕಚೇರಿಗಳಿಗೆ ಚುನಾವಣೆಗಳನ್ನು ನಡೆಸುತ್ತದೆ ಮತ್ತು ನಿಯಂತ್ರಿಸುತ್ತದೆ. ಇದು ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023, ಚುನಾವಣಾ ಆಯುಕ್ತರ ನೇಮಕಾತಿಗಾಗಿ ಪ್ರಧಾನ ಮಂತ್ರಿ (ಅಧ್ಯಕ್ಷರಾಗಿ), ಲೋಕಸಭಾ ಪ್ರತಿಪಕ್ಷ ನಾಯಕ ಹಾಗೂ ಪ್ರಧಾನಿಯಿಂದ ನಾಮನಿರ್ದೇಶನಗೊಳ್ಳುವ ಕೇಂದ್ರ ಸಚಿವರೊಬ್ಬರನ್ನು ಒಳಗೊಂಡ ಸಮಿತಿಯನ್ನು ರಚಿಸುವ ಉದ್ದೇಶದ್ದಾಗಿದೆ.
ಇದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಿಂದ ಜಾರಿಗೆ ಬಂದ ವ್ಯವಸ್ಥೆಯನ್ನು ತೆಗೆದುಹಾಕುತ್ತದೆ, ಅದರ ಪ್ರಕಾರ ಆಯ್ಕೆಸಮಿತಿ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡಿತ್ತು. ಹೊಸ ಕಾನೂನು ರಚನೆಯಾಗುವವರೆಗೂ ಇದು ಅಸ್ತಿತ್ವದಲ್ಲಿರಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಚುನಾವಣಾ ಆಯೋಗ ಕಾರ್ಯಾಂಗದ ಪ್ರಭಾವಕ್ಕೊಳಗಾಗುವುದನ್ನು ತಪ್ಪಿಸಲು ಸುಪ್ರೀಂ ಕೋರ್ಟ್ ಈ ಸಮಿತಿಯನ್ನು ರಚಿಸಿತ್ತು. ಈ ತೀರ್ಪಿನ ಮೊದಲು, ಆಯೋಗದ ನೇಮಕಾತಿಗಳನ್ನು ಕೇಂದ್ರದ ಸ್ವಂತ ವಿವೇಚನೆಯಿಂದ ಮಾಡಲಾಗುತ್ತಿತ್ತು. ಈಗ ಮಂಡಿಸಲಾಗಿರುವ ಮಸೂದೆ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಟ್ಟಿದ್ದು, ಆ ಜಾಗದಲ್ಲಿ ಪ್ರಧಾನಿಯಿಂದ ನಾಮನಿರ್ದೇಶನಗೊಳ್ಳುವ ಕೇಂದ್ರ ಸಚಿವರೊಬ್ಬರು ಇರುವುದರೊಂದಿಗೆ, ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರು ಕೇಂದ್ರದ ನಿಯಂತ್ರಣಕ್ಕೊಳಪಡುವ ಸಾಧ್ಯತೆಯೇ ಕಾಣಿಸುತ್ತದೆ.
ಮಸೂದೆಯಲ್ಲಿ ಸೂಚಿಸಲಾದ ಕಾರ್ಯವಿಧಾನದ ಪ್ರಕಾರ, ಕೇಂದ್ರ ಸರಕಾರದ ಮೂವರು ಅಧಿಕಾರಿಗಳನ್ನು ಒಳಗೊಂಡ ಶೋಧನಾ ಸಮಿತಿ ಆಯ್ಕೆ ಸಮಿತಿಯ ಪರಿಗಣನೆಗಾಗಿ ಐವರು ವ್ಯಕ್ತಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಈ ಪಟ್ಟಿಯಲ್ಲಿರುವ ಹೆಸರಿನಿಂದ ಚುನಾವಣಾ ಆಯುಕ್ತರನ್ನು ನೇಮಿಸಲಾಗುತ್ತದೆ.
ಮುಖ್ಯ ಚುನಾವಣಾ ಆಯುಕ್ತ ಅಥವಾ ಚುನಾವಣಾ ಆಯುಕ್ತರಾಗಿ ನೇಮಕಗೊಳ್ಳಲು ಮಸೂದೆಯು ನಿದಿಗೊಳಿಸಿರುವ ಅರ್ಹತೆಗಳು ಹೀಗಿವೆ:
ಪ್ರಸಕ್ತ ಹೊಂದಿರುವವರು ಅಥವಾ ಹಿಂದೆ ಕೇಂದ್ರ ಕಾರ್ಯದರ್ಶಿ ಹುದ್ದೆಗೆ ಸಮಾನವಾದ ಹುದ್ದೆಯಲ್ಲಿ ಈಗ ಇರುವವರು ಅಥವಾ ಹಿಂದೆ ಇದ್ದವರು.
ಸಮಗ್ರತೆಯುಳ್ಳ ವ್ಯಕ್ತಿ.
ಚುನಾವಣೆಗಳ ನಿರ್ವಹಣೆ ಮತ್ತು ನಡವಳಿಕೆಯಲ್ಲಿ ಜ್ಞಾನ ಮತ್ತು ಅನುಭವ ಹೊಂದಿರುವವರು.
ಎರಡನೇ ಮತ್ತು ಮೂರನೇ ಅರ್ಹತೆಗಳನ್ನು ಹೇಗೆ ಪೂರೈಸಬಹುದು ಎಂಬುದನ್ನು ನಿರ್ಧರಿಸಲು ಯಾವುದೇ ವಸ್ತುನಿಷ್ಠ ಮಾನದಂಡಗಳಿಲ್ಲ, ಅವುಗಳನ್ನು ಶೋಧನಾ ಸಮಿತಿಯ ವ್ಯಕ್ತಿನಿಷ್ಠ ದೃಷ್ಟಿಕೋನಕ್ಕೆ ಬಿಡಲಾಗುತ್ತದೆ.
ಆಯ್ಕೆ ಸಮಿತಿಯ ಸಂವಿಧಾನಕ್ಕೆ ಸಂಬಂಧಿಸಿದಂತೆ, ಲೋಕಸಭೆಯಲ್ಲಿ ಮಾನ್ಯತೆ ಪಡೆದ ವಿರೋಧ ಪಕ್ಷದ ನಾಯಕರಿಲ್ಲದಿದ್ದರೆ (ಪ್ರಸಕ್ತ ಲೋಕಸಭೆಯಲ್ಲಿರುವಂತೆ), ಲೋಕಸಭೆಯಲ್ಲಿನ ಏಕೈಕ ದೊಡ್ಡ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಸಮಿತಿಯ ಸದಸ್ಯ ಎಂದು ಪರಿಗಣಿಸಬೇಕೆಂದು ಮಸೂದೆ ಹೇಳುತ್ತದೆ. ಆಯ್ಕೆ ಸಮಿತಿ ಶೋಧನಾ ಸಮಿತಿಯು ಶಿಫಾರಸು ಮಾಡಿದ ಹೆಸರುಗಳ ಹೊರಗಿರುವ ನೇಮಕಾತಿ ಹೆಸರುಗಳನ್ನು ಸಹ ಪರಿಗಣಿಸಬಹುದು.
ಆಯ್ಕೆ ಸಮಿತಿ ತನ್ನ ನಿರ್ಧಾರಗಳನ್ನು ಬಹುಮತದ ಆಧಾರದ ಮೇಲೆ ಅಥವಾ ಸರ್ವಾನುಮತದ ಆಧಾರದ ಮೇಲೆ ಹೇಗೆ ಮಾಡುತ್ತದೆ ಎಂಬುದು ಈ ಸಮಯದಲ್ಲಿ ಅಸ್ಪಷ್ಟವಾಗಿದೆ. ಸಮಿತಿ ತನ್ನ ಆಯ್ಕೆಗಳನ್ನು ಮಾಡಲು ಪಾರದರ್ಶಕ ರೀತಿಯಲ್ಲಿ ತನ್ನದೇ ಆದ ಕಾರ್ಯವಿಧಾನವನ್ನು ನಿಯಂತ್ರಿಸುತ್ತದೆ ಎಂದು ಮಸೂದೆ ಅಪಾರದರ್ಶಕವಾಗಿ ಹೇಳುತ್ತದೆ.
ಮಸೂದೆ ಸುಪ್ರೀಂ ಕೋರ್ಟ್ನ ತೀರ್ಪನ್ನು ತಳ್ಳಿಹಾಕುತ್ತದೆಯೇ?
2015 ಮತ್ತು 2020 ರ ನಡುವೆ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾದ ಅರ್ಜಿಗಳ ಸರಣಿ ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರನ್ನು ಕೇಂದ್ರ ಸರಕಾರವೇ ನೇಮಿಸುವ ವಿಧಾನವನ್ನು ಪ್ರಶ್ನಿಸಿತ್ತು.
ಇಂತಹ ನೇಮಕಾತಿ ವ್ಯವಸ್ಥೆ ಸಂವಿಧಾನದ 324(2)ನೇ ವಿಧಿಯನ್ನು ಉಲ್ಲಂಸುತ್ತದೆ ಎಂದು ಅರ್ಜಿಗಳು ವಾದಿಸಿದ್ದವು.
324ನೇ ವಿಧಿ ಚುನಾವಣಾ ಆಯೋಗವನ್ನು ಸ್ಥಾಪಿಸಿತು. 324(2)ನೇ ವಿಧಿಯು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಗಳನ್ನು ಸಂಸತ್ತಿನಿಂದ ಅದಕ್ಕಾಗಿ ಮಾಡಿದ ಯಾವುದೇ ಕಾನೂನಿನ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳುತ್ತದೆ. ಇಲ್ಲಿಯವರೆಗೆ, ಈ ಬಗ್ಗೆ ಸಂಸತ್ತಿನಲ್ಲಿ ಯಾವುದೇ ಕಾನೂನು ಮಾಡಲಾಗಿಲ್ಲ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಸಂಸತ್ತು ಈ ಸಂಬಂಧ ಕಾನೂನನ್ನು ಜಾರಿಗೊಳಿಸುವವರೆಗೆ ಎಂದು ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳ ಆಯ್ಕೆ ಸಮಿತಿಯನ್ನು ರಚಿಸಿತ್ತು.
ಅಷ್ಟರ ಮಟ್ಟಿಗೆ ಈ ಆಯ್ಕೆ ಸಮಿತಿ ತಾತ್ಕಾಲಿಕ ವ್ಯವಸ್ಥೆಯಾಗಿತ್ತು. ಕಳೆದ ಐದು ತಿಂಗಳುಗಳಿಂದ ಚುನಾವಣಾ ಆಯೋಗದಲ್ಲಿ ಯಾವುದೇ ಹುದ್ದೆಗಳು ಖಾಲಿಯಾಗದ ಕಾರಣ ಅದು ನಿಜವಾಗಿ ತನ್ನ ಕಾರ್ಯವನ್ನು ನಿರ್ವಹಿಸಿಲ್ಲ.
ಆದರೂ, ಈ ವ್ಯವಸ್ಥೆಯನ್ನು ಅದು, ಚುನಾವಣಾ ಆಯುಕ್ತರನ್ನು ನೇಮಿಸುವ ನಿಷ್ಪಕ್ಷಪಾತ ವಿಧಾನದ ಅಗತ್ಯವಿದೆ ಎಂಬ ಪ್ರತಿಪಾದನೆಯೊಂದಿಗೆ ತಂದಿತ್ತು. ಚುನಾವಣಾ ಆಯುಕ್ತರನ್ನು ನೇಮಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ಪ್ರತ್ಯೇಕವಾಗಿ ನೀಡಬಾರದು ಎಂದು ಅದು ತೀರ್ಮಾನಿಸಿದೆ. ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಸಂವಿಧಾನವು 324(2)ನೇ ವಿಧಿ ಅಡಿಯಲ್ಲಿ ಕಾನೂನು ರೂಪಿಸಲು ಅವಕಾಶ ಕಲ್ಪಿಸಿದೆ ಎಂದು ನ್ಯಾಯಾಲಯ ಹೇಳಿದೆ. ಚುನಾವಣೆಯ ಸಮಗ್ರತೆಗೆ ಪ್ರಮುಖವಾದ ಆಯೋಗದ ಸ್ವಾತಂತ್ರ್ಯವನ್ನು ಕಾಪಾಡಲು ಇದು ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕಳೆದ ಕೆಲವು ವರ್ಷಗಳಲ್ಲಿ, ವಿರೋಧ ಪಕ್ಷದ ನಾಯಕರು ಮತ್ತು ನಾಗರಿಕ ಸಮಾಜದ ಸದಸ್ಯರು ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಪ್ರಶ್ನಿಸಿದ್ದಾರೆ, ಅದರ ಕೆಲವು ನಿರ್ಧಾರಗಳು ಮೋದಿ ಸರಕಾರ ಮತ್ತು ಬಿಜೆಪಿಗೆ ಒಲವು ತೋರುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಈ ಮಸೂದೆಯನ್ನು ಜಾರಿಗೊಳಿಸಿದರೆ, ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ನೇಮಕಾತಿಯ ಅಧಿಕಾರವನ್ನು ಕಾರ್ಯಾಂಗ ಮಾತ್ರವೇ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ನ ತೀರ್ಪಿನ ಮೂಲ ತತ್ವವನ್ನು ಉಲ್ಲಂಸಿದಂತಾಗುತ್ತದೆ.
(ಕೃಪೆ:scroll.in)