'ಫೈರ್ ಮಾಡಿದ್ರೂ ಸಾಯಲಿಲ್ಲ': ಮಂಗಳೂರು 'ಪೊಲೀಸ್ ಅಧಿಕಾರಿಯ' ಆಘಾತಕಾರಿ ಹೇಳಿಕೆ
ವಿಡಿಯೋ ವೈರಲ್
ಮಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ನಿನ್ನೆ ಮಂಗಳೂರಿನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆದ ಸಂದರ್ಭ ಪೊಲೀಸ್ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಈ ಗೋಲಿಬಾರ್ ಘಟನೆ ಭಾರೀ ವಿವಾದ ಸೃಷ್ಟಿಸಿರುವ ನಡುವೆಯೇ ಮಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರದ್ದು ಎನ್ನಲಾದ ವಿಡಿಯೋವೊಂದು ಶುಕ್ರವಾರ ವೈರಲ್ ಆಗಿದೆ.
"ಫೈರ್ ಮಾಡಿದ್ರೂ ಒಂದೂ ಗುಂಡು ಕೂಡ ಬೀಳಲಿಲ್ಲ. ಒಬ್ರೂ ಸಾಯಲಿಲ್ಲ" ಎಂದು ನಗರದ ಕದ್ರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶಾಂತಾರಾಮ್ ಕುಂದರ್ ಅವರಂತೆ ಕಾಣುವ ಪೊಲೀಸ್ ಧಿರಿಸಿನಲ್ಲಿರುವ ವ್ಯಕ್ತಿಯೊಬ್ಬರು ಇತರ ಪೊಲೀಸರ ಜೊತೆ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಇದು ಬಂದರ್ ಠಾಣೆ ಸಮೀಪ ನಡೆದ ಮಾತುಕತೆ ಎಂದು ವಿಡಿಯೋದಲ್ಲಿ ಕಾಣುತ್ತದೆ.
ಆದರೆ ಈ ಬಗ್ಗೆ ಶಾಂತಾರಾಮ್ ಕುಂದರ್ ಅವರಲ್ಲಿ ವಾರ್ತಾಭಾರತಿ ಕೇಳಿದಾಗ " ನಾನು ಹಾಗೆ ಹೇಳಲೇ ಇಲ್ಲ " ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, "ಫೈರ್ ಮಾಡಿದೆವು, ಒಂದು ಗುಂಡೂ ಬೀಳ್ಲಿಲ್ವಲ, ಒಬ್ಬರೂ ಸಾಯಲಿಲ್ವಲ" ಇದು ಮಂಗಳೂರು ಪ್ರತಿಭಟನೆ ವೇಳೆ ಹೋರಾಟಗಾರರನ್ನು ಕೊಂದ ಪೊಲೀಸ್ ಅಧಿಕಾರಿಯೊಬ್ಬರ ಮಾತು. ಸರ್ಕಾರವೇ ಮುಂದೆ ನಿಂತು ಪ್ರತಿಭಟನಾಕಾರರನ್ನು ಕೊಂದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿ ನಿಂತಿದೆ. ಇದರ ಹೊಣೆಯನ್ನು ಮುಖ್ಯಮಂತ್ರಿ @BSYBJP ಹೊರಬೇಕು" ಎಂದಿದ್ದಾರೆ.
"ಫೈರ್ ಮಾಡಿದೆವು, ಒಂದು ಗುಂಡೂ ಬೀಳ್ಲಿಲ್ವಲ, ಒಬ್ಬರೂ ಸಾಯಲಿಲ್ವಲ" ಇದು ಮಂಗಳೂರು ಪ್ರತಿಭಟನೆ ವೇಳೆ ಹೋರಾಟಗಾರರನ್ನು ಕೊಂದ ಪೊಲೀಸ್ ಅಧಿಕಾರಿಯೊಬ್ಬರ ಮಾತು. ಸರ್ಕಾರವೇ ಮುಂದೆ ನಿಂತು ಪ್ರತಿಭಟನಾಕಾರರನ್ನು ಕೊಂದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿ ನಿಂತಿದೆ. ಇದರ ಹೊಣೆಯನ್ನು ಮುಖ್ಯಮಂತ್ರಿ @BSYBJP ಹೊರಬೇಕು.#NRC_CAA
— H D Kumaraswamy (@hd_kumaraswamy) December 20, 2019
(1/4) pic.twitter.com/3p8QN7rmL0