ಕರ್ನಾಟಕ ರಾಜಕಾರಣ ಮತ್ತು ಅರಸು ಯುಗ
ಇಂದು ದೇವರಾಜ ಅರಸು ಜನ್ಮದಿನ
- ಆರ್. ಕುಮಾರ್
ನಾಡು ಕಂಡ ಮುತ್ಸದ್ದಿ ರಾಜಕಾರಣಿ, ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು. ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ಪಂಗಡಗಳ ಮೂಕ ಬದುಕಿಗೆ ರಾಜಕೀಯ ದನಿ ನೀಡಿದ್ದವರು. ಗ್ರಾಮೀಣಾಭಿವೃದ್ಧಿಗೆ ಕೂಡ ಅವರ ಕೊಡುಗೆ ದೊಡ್ಡದು.
ಡಿ.ದೇವರಾಜ ಅರಸು ಹುಟ್ಟೂರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿ. ೧೯೫೨ರಲ್ಲಿ ದೇಶದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅರಸು ರಾಜಕೀಯ ಪ್ರವೇಶಿಸಿದರು. ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಅವರು, ಆ ಗೆಲುವಿನ ನಂತರ ಮತ್ತೆ ರಾಜಕೀಯಕ್ಕೆ ಬೆನ್ನು ಹಾಕಲಿಲ್ಲ. ಹುಣಸೂರನ್ನು ನಿರಂತರವಾಗಿ ೨೮ ವರ್ಷಗಳ ಕಾಲ (೧೯೫೨ರಿಂದ ೧೯೮೦) ಶಾಸಕರಾಗಿ ಪ್ರತಿನಿಧಿಸಿದರು.
೧೯೬೨ರಲ್ಲಿ ಚುನಾವಣೆಯಲ್ಲಿ ಸೋತಿದ್ದ ಎಸ್. ನಿಜಲಿಂಗಪ್ಪನವರ ಮುಖ್ಯಮಂತ್ರಿ ಉಮೇದುವಾರಿಕೆಯನ್ನು ಕಟುವಾಗಿ ಮತ್ತು ಏಕಾಂಗಿಯಾಗಿ ವಿರೋಧಿಸಿದಾಗ ಅರಸು ಕರ್ನಾಟಕ ರಾಜಕೀಯದಲ್ಲಿ ಬೆಳಕಿಗೆ ಬಂದರು. ಸಭೆಯಲ್ಲಿ ಮಾತನಾಡಿದ ಅವರು, ‘‘ಸೋತವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರ. ನಿಜಲಿಂಗಪ್ಪ ಅವರನ್ನು ಸಿಎಂ ಮಾಡಲು ಶಾಸಕರ ಸಭೆಯ ಈ ನಿರ್ಧಾರವು ಅವರಿಗೆ ಯಾವುದೇ ಲಾಭವನ್ನು ತರುವುದಿಲ್ಲ, ಆದರೆ ಅವರು ಆ ಸ್ಥಾನವನ್ನು ಒಪ್ಪಿಕೊಂಡರೆ, ಅವರು ಖಂಡಿತವಾಗಿಯೂ ತಮ್ಮ ನೈತಿಕ ಶಕ್ತಿ ಮತ್ತು ಸಮಗ್ರತೆಯನ್ನು ಕಳೆದುಕೊಳ್ಳುತ್ತಾರೆ.’’
ಈ ಘಟನೆಯ ನಂತರ ಅರಸು ಅವರನ್ನು ಜನರು ಪ್ರಬಲ ರಾಜಕಾರಣಿಯಾಗಿ ನೋಡಲಾರಂಭಿಸಿದರು. ಆದರೆ, ವಿಚಿತ್ರವೆಂದರೆ ಈ ಘಟನೆಯೂ ನಿಜಲಿಂಗಪ್ಪನವರಿಗೆ ಹತ್ತಿರವಾಯಿತು. ಆರು ತಿಂಗಳ ನಂತರ ನಿಜಲಿಂಗಪ್ಪ ಅವರು ಉಪಚುನಾವಣೆಯಲ್ಲಿ ಗೆದ್ದರು ಮತ್ತು ಅರಸು ಅವರನ್ನು ಕ್ಯಾಬಿನೆಟ್ ಮಂತ್ರಿಯಾಗಿ ಮಾಡಿದರು.
೧೯೬೯ರಿಂದ ೧೯೭೧ರವರೆಗೆ ಕರ್ನಾಟಕ ಕಾಂಗ್ರೆಸ್ನಲ್ಲಿ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರು ಪ್ರಾಬಲ್ಯ ಹೊಂದಿದ್ದರು. ಇಂದಿರಾ ಗಾಂಧಿ ವಿರೋಧಿಯಾಗಿದ್ದ ಆ ಬಣಕ್ಕೆ ಸೇರಲು ಆಹ್ವಾನವನ್ನು ಅರಸು ನಿರಾಕರಿಸಿದರು. ಬದಲಾಗಿ, ಅವರು ರಾಜ್ಯ ಕಾಂಗ್ರೆಸ್ನ ಇಂದಿರಾ ಬಣವನ್ನು ಮುನ್ನಡೆಸಿದರು ಮತ್ತು ೧೯೭೨ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ೧೯೭೭ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದರು. ನಂತರ ಮತ್ತೆ ೧೯೭೮ರಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾದರು. ೧೯೮೦ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ವಿರಸ ತಲೆದೋರಿದ ಕಾರಣ ಅವರು ಪದವಿಯಿಂದ ಕೆಳಗಿಳಿಯಬೇಕಾಗಿ ಬಂತು.
ಮುಖ್ಯಮಂತ್ರಿಯಾಗಿ ದೇವರಾಜ ಅರಸು ಹಿಂದುಳಿದ ವರ್ಗಗಳ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಿದರು, ಸಮಾಜದ ಆ ವರ್ಗಗಳಿಂದ ಬಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ಗಳನ್ನು ನಿರ್ಮಿಸಿದರು. ೧೬,೦೦೦ ನಿರುದ್ಯೋಗಿ ಪದವೀಧರರನ್ನು ಸ್ಟೈಪೆಂಡರಿ ಯೋಜನೆಯಲ್ಲಿ ಸೇರಿಸಿದರು. ಬಡವರ ಪರ ದನಿಯಾದ ಅರಸು, ರಾಜ್ಯದಲ್ಲಿ ಮೌನ ಸಾಮಾಜಿಕ ಕ್ರಾಂತಿ ಪ್ರಾರಂಭಿಸಿದರು. ತುಳಿತಕ್ಕೊಳಗಾದವರ ಪರವಾಗಿ ನಿಂತರು.
೧೯೭೨ರ ಚುನಾವಣೆಯಲ್ಲಿ ಮೊದಲ ಬಾರಿ ಸದನದಲ್ಲಿ ಶೇ.೭೦ಕ್ಕಿಂತಲೂ ಹೆಚ್ಚು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ಪ್ರಾತಿನಿಧ್ಯ ಇರುವಂತೆ ನೋಡಿಕೊಂಡಿದ್ದ ಅರಸು, ತಮ್ಮ ಸಕ್ರಿಯ ಬದುಕಿನುದ್ದಕ್ಕೂ ಆ ವರ್ಗಗಳ ಯುವಕರನ್ನು ಬೆಂಬಲಿಸಿ ಪ್ರೋತ್ಸಾಹಿಸುತ್ತಲೇ ಇದ್ದರು. ಹೀಗೆ ಯುವಪೀಳಿಗೆಯನ್ನು ಎಲ್ಲ ಕ್ಷೇತ್ರಗಳಲ್ಲಿ ಪ್ರೋತ್ಸಾಹಿಸುವ ದೃಷ್ಟಿಯಿಂದಲೇ ಅರಸು ಮುಖ್ಯಮಂತ್ರಿಯಾದ ಆರು ತಿಂಗಳಿಗೇ ಸರಕಾರಿ ನೌಕರಿ ನೇಮಕಾತಿ ನಿಯಮಗಳಲ್ಲಿ ಮಾರ್ಪಾಡು ತಂದರು. ಮುಂಚಿನ ನಿಯಮಾವಳಿಯಂತೆ ನಾಲ್ಕನೇ ದರ್ಜೆ ನೌಕರರ ಹೊರತು ಮಿಕ್ಕೆಲ್ಲರ ನೇಮಕಾತಿ ರಾಜ್ಯಮಟ್ಟದ ಸಾರ್ವಜನಿಕ ಸೇವಾ ಆಯೋಗದಿಂದ ನಡೆಯಬೇಕಿತ್ತು. ಅರಸು ಈಗ ಆ ನಿಯಮಾವಳಿಗೆ ಬದಲಾವಣೆ ತಂದು, ಮೊದಲ ಹಾಗೂ ಎರಡನೇ ದರ್ಜೆ ಗೆಜೆಟೆಡ್ ಅಧಿಕಾರಿಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ನೌಕರರ ನೇಮಕಾತಿಯೂ ಸ್ಥಳೀಯವಾಗಿ ನಡೆಯುವಂತೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗಳನ್ನು ರಚಿಸಿದರು. ಈ ಸಮಿತಿಗಳಲ್ಲಿ ಸ್ಥಳೀಯ ಶಾಸಕರು, ದುರ್ಬಲ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ರಾಜಕೀಯ ಕಾರ್ಯಕರ್ತರು ಇದ್ದುದು ವಿಶೇಷವಾಗಿತ್ತು.
ಅರಸು ಅವರ ಎರಡು ಮುಖ್ಯ ಸಾಧನೆಗಳು ಅವರಿಗೆ ‘ಪರಿವರ್ತನೆಯ ಹರಿಕಾರ’ ಎಂಬ ಬಿರುದು ತಂದುಕೊಟ್ಟವು. ಅವೆಂದರೆ, ಹಾವನೂರ್ ಆಯೋಗ ರಚಿಸಿ ಇತರ ಹಿಂದುಳಿದ ವರ್ಗಗಳ ಸ್ಥಾನಮಾನ ಸಮೀಕ್ಷೆ ಮಾಡಿ ಕಡೆಗೆ ಆ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಒದಗಿಸಿದ್ದು; ಭೂಸುಧಾರಣೆ ಮೂಲಕ ‘ಉಳುವವನೇ ಹೊಲದೊಡೆಯ’ ಎಂಬ ಘೋಷಣೆಯನ್ನು ಕಾರ್ಯರೂಪಕ್ಕೆ ತಂದಿದ್ದು.
ಅರಸರ ಮಹತ್ಸಾಧನೆಗಳೆಲ್ಲವೂ ನಿಂತ ನೀರಾಗಿದ್ದ ಸಮಾಜವನ್ನು ಕಲಕಿ, ಜಡತೆಯನ್ನು ತೊಡೆದು ಹೊಸ ಸಾಮರಸ್ಯ, ಹೊಸ ಸಮತೋಲನ ರೂಢಿಸುವ ಕ್ರಮಗಳಾಗಿದ್ದವು. ಇದು ಸಾಮಾಜಿಕ ಹಾಗೂ ರಾಜಕೀಯ ಅಧಿಕಾರದ ಗುತ್ತಿಗೆ ಹಿಡಿದಿದ್ದ ವರ್ಗಗಳನ್ನು ವಿಚಲಿತಗೊಳಿಸಿದ್ದು ಸಹಜವಾಗಿತ್ತು.
ಎಂಟು ವರ್ಷ ಕಾಲ ಸತತವಾಗಿ ರಾಜ್ಯದ ಚುಕ್ಕಾಣಿ ಹಿಡಿದು ಆಡಳಿತ ನಡೆಸುವ ಅವಕಾಶ ಅರಸರಿಗೆ ಸಿಕ್ಕಿದ್ದು ಈ ನಾಡಿನ ಸೌಭಾಗ್ಯ ಎಂದೇ ವಿಶ್ಲೇಷಿಸಲಾಗುತ್ತದೆ.
ಅರಸು ಮೊದಲಿನಿಂದಲೂ ತಮ್ಮ ಅಧ್ಯಯನ, ವಿವೇಕಗಳ ಮೂಲಕ, ಅದಕ್ಕಿಂತಲೂ ಹೆಚ್ಚಾಗಿ ಹಳ್ಳಿಗಾಡಿನ ಬದುಕಿನಲ್ಲಿ ಬೇರಿಳಿಸಿ ಕಂಡುಕೊಂಡ ಸಂಗತಿಯಿದು: ಈ ಸಮಾಜದಲ್ಲಿ ಜಾತಿಮೂಲ ಅಸಮಾನತೆಯನ್ನು ಅಲುಗಿಸದೆ, ಯಾವ ಚಲನೆಯೂ, ಯಾವ ಪರಿವರ್ತನೆಯೂ ಸಾಧ್ಯವಿಲ್ಲ; ಸಮಾಜದ ಅಸಮತೋಲವನ್ನು ನಿವಾರಿಸಲೂ ಸಾಧ್ಯವಿಲ್ಲ. ಈ ವಿಷಯದಲ್ಲಿ ಅವರಿಗೆ ಯಾವ ಗೊಂದಲವೂ ಇರಲಿಲ್ಲ. ಹಿಂದುಳಿದವರು ಯಾರು ಅಂದರೆ ಆರೋಗ್ಯ, ಆಶ್ರಯ, ಶಿಕ್ಷಣಗಳಿಂದ ವಂಚಿತರಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲಲು ಶಕ್ತಿ ಇಲ್ಲದವರು ಎಂದು ಅರಸು ವ್ಯಾಖ್ಯಾನಿಸುತ್ತಿದ್ದರು.
ಚಿಂತಕ ಎನ್.ಎಸ್. ಶಂಕರ್ ಬರೆಯುತ್ತಾರೆ: ‘‘ದೂರದೃಷ್ಟಿ, ದಕ್ಷತೆ, ಸಂಕಲ್ಪ ಶಕ್ತಿಗಳೊಂದಿಗೆ ಒಟ್ಟು ಜನಸ್ತೋಮದ ಪಾಡನ್ನೇ ಬದಲಿಸಿದ ದೃಷ್ಟಾರ ಕರ್ನಾಟಕಕ್ಕೆ ದಕ್ಕಿದಂತೆ ಭಾರತದಲ್ಲಿ ಇನ್ನಾವ ರಾಜ್ಯಕ್ಕೂ ಸಿಕ್ಕಲಿಲ್ಲ. ಆದರೇನು ಮಾಡುವುದು? ಸ್ವತಃ ಅರಸು ಅದೃಷ್ಟವಂತರಲ್ಲ! ಯಾಕೆಂದರೆ ಅವರು ಇಟ್ಟ ಐತಿಹಾಸಿಕ ಹೆಜ್ಜೆಗಳ ವಸ್ತುನಿಷ್ಠ ಮೌಲ್ಯಮಾಪನ ಎಂದೂ ನಡೆಯಲಿಲ್ಲ. ಅವರ ಕಾಲದಲ್ಲೂ ನಡೆಯಲಿಲ್ಲ, ಆಮೇಲೂ ಇಲ್ಲ. ಯಾವ ಸಮಾಜವಿಜ್ಞಾನಿಯೂ ಅವರ ಕಾಲಮಾನದ ಮೂಲ ಸಂಘರ್ಷಗಳನ್ನು ಅರಿಯುವ ಹಾಗೂ ಅರ್ಥೈಸುವ ಪ್ರಯತ್ನವನ್ನೂ ಮಾಡಲಿಲ್ಲ. ಅವರ ರಾಜ್ಯಭಾರದ ಬಗ್ಗೆ ಇಂದಿಗೂ ಎಣೆಯಿಲ್ಲದಷ್ಟು ಅಪಕಲ್ಪನೆಗಳೇ ಚಾಲ್ತಿಯಲ್ಲಿವೆ. ಇನ್ನೊಂದು ಕಡೆ ಅವರ ಪ್ರಗತಿಪರ ನೀತಿಗಳಿಂದಾಗಿಯೇ ಅವರ ಬಗ್ಗೆ ಮೇಲ್ವರ್ಗಗಳು ಬೆಳೆಸಿಕೊಂಡ ಅಸೀಮ ಅಸಹನೆಯೂ ಹಾಗೇ ಮುಂದುವರಿದಿದೆ.’’