ಗಾಂಧೀಜಿಯನ್ನೇ ಕೊಂದವರು ನನ್ನನ್ನು ಬಿಡುತ್ತಾರಾ?: ಸಿದ್ದರಾಮಯ್ಯ
''ಬಿಜೆಪಿಯವರಿಗೆ ಸತ್ಯ ಹೇಳುವವರನ್ನು ಕಂಡರೆ ಆಗಲ್ಲ''
ಚಿಕ್ಕಮಗಳೂರು, ಆ.19: 'ಬಿಜೆಪಿಯವರಿಗೆ ಸತ್ಯ ಹೇಳುವವರನ್ನು ಕಂಡರೇ ಆಗುವುದಿಲ್ಲ. ಬಿಜೆಪಿಯವರ ಭ್ರಷ್ಟಾಚಾರ, ಜನವಿರೋಧಿ ನೀತಿಗಳು, ತಂತ್ರ, ಕುತಂತ್ರಗಳನ್ನು ನಾನು ಬಿಚ್ಚಿಡುತ್ತಿದ್ದೇನೆ. ಈ ಕಾರಣಕ್ಕೆ ಬಿಜೆಪಿಯವರಿಗೆ ನನ್ನ ಮೇಲೆ ಕೋಪ, ಸಿಟ್ಟು. ಸತ್ಯ ಹೇಳುವವರನ್ನು ಕಂಡರೇ ಬಿಜೆಪಿಯವರಿಗೆ ಆಗುವುದಿಲ್ಲ, ಸತ್ಯವನ್ನೇ ಹೇಳುತ್ತಿದ್ದ ಗಾಂಧೀಜಿಯನ್ನೇ ಅವರು ಬಿಡಲಿಲ್ಲ. ಗಾಂಧೀಜಿಯವರನ್ನು ಕೊಂದವರು ನನ್ನನ್ನು ಬಿಡುತ್ತಾರಾ?' ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಪ್ರದೇಗಳ ವೀಕ್ಷಣೆಗಾಗಿ ಕಾಫಿನಾಡಿನಲ್ಲಿ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಎನ್.ಆರ್,ಪುರ ತಾಲೂಕಿನ ಬಾಸಾಪುರ ಗ್ರಾಮದಲ್ಲಿರುವ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಮನೆಯ ಆವರಣದಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ಸ್ವಾತಂತ್ರ್ಯ, ಸಮಾನತೆ, ಸಂವಿಧಾನದ ಬಗ್ಗೆ ಎಳ್ಳಷ್ಟು ಗೌರವವಿಲ್ಲ. ಅವರಿಗೆ ಗೌರವ ಇರುವುದು ಆರೆಸೆಸ್ ಸಿದ್ಧಾಂತದ ಮೇಲೆ ಮಾತ್ರ. ಅಂಬೇಡ್ಕರ್ ಅವರನ್ನು ಹೊಗಳುವ ಬಿಜೆಪಿಯವರಿಗೆ ಅದೇ ಅಂಬೇಡ್ಕರ್‍ನಂತಹ ಮಾನವತಾವಾದಿ ರಚಿಸಿರುವ ಸಂವಿಧಾನದ ಮೇಲೆ ಕಿಂಚಿತ್ ನಂಬಿಕೆ ಇಲ್ಲ. ಅಂಬೇಡ್ಕರ್ ಅವರನ್ನು ಹೊಗಳುವುದರ ಹಿಂದೆ ದಲಿತರ ಓಟ್ ಬ್ಯಾಂಕ್‍ನ ಹುನ್ನಾರವಷ್ಟೇ ಎಂದರು.
'ಕಳೆದ 40 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೇನೆ. ರಾಜಕೀಯ ಉದ್ಯೋಗ ಅಲ್ಲ. ಅದು ಸಮಾಜಸೇವಾ ಕ್ಷೇತ್ರ ಎಂದು ನಾನು ನಂಬಿದ್ದೇನೆ. ನನಗೀಗ 75 ವರ್ಷ ಕಳೆದಿದ್ದು, ನನ್ನಲ್ಲಿ ಸಾಮರ್ಥ್ಯ ಇರುವಷ್ಟು ಕಾಲ ರಾಜಕೀಯ ಕ್ಷೇತ್ರದಲ್ಲಿದ್ದುಕೊಂಡು ಜನರ ಸೇವೆ ಮಾಡುತ್ತೇನೆ. ಬಿಜೆಪಿಯವರ ಬೆದರಿಕೆಗಳಿಗೆ ಅಂಜುವುದಿಲ್ಲ. ನನ್ನ ರಾಜಕೀಯ ಜೀವನದುದ್ದಕ್ಕೂ ಸತ್ಯ ಹೇಳುತ್ತಾ ಬಂದಿದ್ದೇನೆ. ಸತ್ಯ ಹೇಳುವವರನ್ನು ಕಂಡರೇ ಬಿಜೆಪಿಯವರಿಗೆ ಆಗುವುದಿಲ್ಲ. ನಾನು ಸತ್ಯ ಹೇಳಿದರೆ ಬಿಜೆಪಿಯವರು ಮೈ ಪರಚಿಕೊಳ್ಳುತ್ತಾರೆ. ಸತ್ಯವನ್ನೇ ಉಸಿರಾಗಿಸಿಕೊಂಡಿದ್ದ ಗಾಂಧೀಜಿಯವರನ್ನೇ ಬಿಡದ ಸಂಘಪರಿವಾರದವರು ನನ್ನನ್ನು ಬಿಡುತ್ತಾರಾ?' ಎಂದರು.
'ಎಲ್ಲ ಜಾತಿ, ಧರ್ಮದವರೂ ಸಮಾನತೆ, ಸಹೋದತ್ವದಿಂದ ಬದುಕಬೇಕೆಂಬ ಉದ್ದೇಶದಿಂದ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ. ಸಂವಿಧಾನದ ಕಾನೂನಿನ ಎದುರು ಎಲ್ಲರೂ ಸಮಾನರಾಗಿದ್ದಾರೆ. ಎಲ್ಲರಿಗೂ ಸಮಾನ ಅವಕಾಶವನ್ನೂ ನೀಡಿದ್ದಾರೆ. ಆದರೂ ದೇಶದಲ್ಲಿ ಇನ್ನೂ ಸಾಮಾಜಿಕ ಸಮಾನತೆ, ಆರ್ಥಿಕ ಸಾಮಾನತೆ ಇದೆ. ಬಡವರು ಕಡುಬಡವರಾಗುತ್ತಿದ್ದಾರೆ. ಶ್ರೀಮಂತರು ಅಗರ್ಭ ಶ್ರೀಮಂತರಾಗುತ್ತಿದ್ದಾರೆ. ಇಂತಹ ಸಮಾಜದಿಂದ ದೇಶದ ಜನರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಇದು ದೇಶದ ಅಭಿವೃದ್ಧಿಗೆ ಮಾರಕ. ಅಧಿಕಾರಕ್ಕೇರುವ ಯಾವುದೇ ಸರಕಾರ ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ತರಲು ಪ್ರಯತ್ನಿಸಬೇಕು. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ. ಹಾಲಿ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೋಮುಗಲಭೆಗಳ ಮೂಲಕ ಮತ್ತೆ ಅಧಿಕಾರಕ್ಕೇರಲು ಸಂಚು ಮಾಡಿದೆಯೇ ಹೊರತು ತಮ್ಮ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ' ಎಂದು ಟೀಕಿಸಿದರು.
'ಸಾವರ್ಕರ್ ಅವರ ಬಗ್ಗೆ ನನಗೇನೂ ಧ್ವೇವಿಲ್ಲ. ಆದರೆ ಅವರ ನಡವಳಿಕೆ ಬಗ್ಗೆ ನನಗೆ ಅಸಮಾಧಾನವಿದೆ. ಸ್ವಾತಂತ್ರ್ಯ ಚಳವಳಿ ಸಂದರ್ಭ ಬ್ರಿಟಿಷ್ ಅಧಿಕಾರಿಯನ್ನು ಹತ್ಯೆ ಮಾಡಿದ್ದ ಅವರು ಜೈಲುಪಾಲಾಗಿದ್ದರು. ಈ ವೇಳೆ ಅವರು ಬ್ರಿಟಿಷರಿಗೆ 6 ಬಾರಿ ಕ್ಷಮಾಪಣೆ ಕೋರಿ ಪತ್ರ ಬರೆದಿದ್ದರು. ಇದು ಸುಳ್ಳಾ? ಜೈಲಿನಿಂದ ಅವರು ಬಿಡುಗಡೆಯಾಗಿದ್ದು ಹೇಗೇ? ಕ್ಷಮಾಪಣೆ ಪತ್ರ ಬರೆದವರು ವೀರನಾಗುವುದು ಹೇಗೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ, ನೆಹರು, ಲೋಹಿಯಾ, ಶಾಸ್ತ್ರಿ, ಜೆಪಿ ಮುಂತಾದ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು ಸೆರೆಮನೆಗೆ ತಳ್ಳಿದ್ದು, ಈ ನಾಯಕರು ಕ್ಷಮಾಪಣೆ ಕೋರಿ ಬ್ರಿಟಿಷರಿಗೆ ಪತ್ರ ಬರೆದಿದ್ದರಾ?. ಈ ಸತ್ಯವನ್ನು ಹೇಳಿದರೇ ಬಿಜೆಪಿ, ಸಂಘಪರಿವಾರದವರಿಗೆ ಕೋಪ ಬರುವುದು ಏಕೆ?' ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ಸಿಗರು: ಶಾಸಕ ರೇಣುಕಾಚಾರ್ಯ
ಪ್ರಧಾನಿ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗಾ ಎಂದು ಪ್ರತಿ ಮನೆಗಳ ಮೇಲೂ ರಾಷ್ಟ್ರಧ್ವಜ ಹಾರಿಸಲು ಹೇಳಿದರು. ಆದರೆ ಇದೇ ರಾಷ್ಟ್ರಧ್ವಜವನ್ನು ಸಾವರ್ಕರ್, ಗೋಳ್ವಾರ್ಕರಂತಹ ಹಿಂದುತ್ವವಾದಿಗಳು ಒಪ್ಪಿಕೊಂಡಿರಲಿಲ್ಲ. ಇಂತಹ ನಾಯಕರ ಪಕ್ಷದವರಿಗೆ ರಾಷ್ಟ್ರಧ್ವಜದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ?ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇದನ್ನು ಹೇಳಿದರೇ ಬಿಜೆಪಿಯವರಿಗೆ ಸಿಟ್ಟು ಬರುತ್ತದೆ. ರಾಜ್ಯ ಸರಕಾರ ಇತ್ತೀಚೆಗೆ ಪತ್ರಿಕೆಗಳಿಗೆ ನೀಡಿದ ಜಾಹೀರಾತುಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ 9 ವಷಗಳ ಕಾಲ ಜೈಲಲ್ಲಿದ್ದ ನೆಹರು ಅವರು ಭಾವಚಿತ್ರವನ್ನು ಕೈಬಿಟಿದ್ದರು. ಗಾಂಧೀಜಿ, ಅಂಬೇಡ್ಕರ್ ಅವರ ಭಾವಚಿತ್ರವನ್ನು ಚಿಕ್ಕದಾಗಿ ಹಾಕಿದ್ದರು. ಆದರೆ ಬ್ರಿಟಿಷರಿಗೆ ಪತ್ರ ಬರೆದ ಸಾವರ್ಕರ್ ಪೊಟೊವನ್ನು ದೊಡ್ಡದಾಗಿ ಹಾಕಿದ್ದಾರೆ. ಈ ಮೂಲಕ ಬಿಜೆಪಿಯವರು ಇತಿಹಾಸವನ್ನು ತಿರುಚುವ ಕೆಲಸ ಮಾಡಿದ್ದಾರೆ. ಆದರೆ ಇತಿಹಾಸ ತಿರುಚಿದ ಮಾತ್ರಕ್ಕೆ ಸತ್ಯ ಎಂದಿಗೂ ಸುಳ್ಳಗಲ್ಲ ಎಂದು ಕಿಡಿಕಾರಿದರು.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಕೊಪ್ಪ ಬ್ಲಾಕ್ ಕಾಂಗ್ರೆಸ್ ಮುಖಂಡ ಸುಧೀರ್‍ಕುಮಾರ್ ಮುರೋಳ್ಳಿ ಮಾತನಾಡಿದರು. ಮಾಜಿ ಶಾಸಕ ಶ್ರೀನಿವಾಸ್, ಕಡೂರು ಆನಂದ್, ಎಂ.ಎಲ್.ಮೂರ್ತಿ, ಮುಖಂಡರಾದ ಎಚ್.ಪಿ.ಮಂಜೇಗೌಡ, ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ಬಾರಿಯ ಚುನಾವಣೆಯಲ್ಲಿ ಟಿ.ಡಿ.ರಾಜೇಗೌಡ ಅವರು ಗೆಲ್ಲುತ್ತಾರೆಂಬ ವಿಶ್ವಾಸ ಇರಲಿಲ್ಲ. ಆದರೆ ಅವರು ಕ್ಷೇತ್ರದಲ್ಲಿ ಜನರೊಂದಿಗೆ ಹೊಂದಿದ್ದ ಸಂಪರ್ಕ, ಜಾತ್ಯತೀತ ಮನೋಭಾವನೆ, ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಥಿತಿ ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ಅವರು ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳೆಲ್ಲರೂ ಜಾತ್ಯತೀತರಾಗಿರಬೇಕು. ಇದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ.
- ಸಿದ್ದರಾಮಯ್ಯ
----------------------
ನನಗೆ ಜನ್ಮದಿನಾಂಕವೇ ತಿಳಿದಿಲ್ಲ. ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದೂ ಇಲ್ಲ. ಶಾಲಾ ದಿನಗಳಲ್ಲಿ ನೇರವಾಗಿ 5ನೇ ತರಗತಿಗೆ ದಾಖಲಾಗಿದ್ದೆ. ಆಗ ಶಾಲಾ ಶಿಕ್ಷಕರನ್ನು ನನ್ನ ಜನ್ಮದಿನಾಂಕವನ್ನು ದಾಖಲಿಸಿದ್ದರು. ಇದರ ಆಧಾರದ ಮೇಲೆ ಇತ್ತೀಚೆಗೆ ದಾವಣಗೆರೆಯಲ್ಲಿ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದಾರೆಯೇ ಹೊರತು ನಾನು ಹುಟ್ಟು ಹಬ್ಬ ಆಚರಿಸಿಕೊಂಡಿದ್ದಲ್ಲ.
- ಸಿದ್ದರಾಮಯ್ಯ