ಕರ್ತವ್ಯನಿರತ ಚಾಲಕ ವಿಶ್ರಾಂತಿಯಲ್ಲಿ ಸಾವನ್ನಪ್ಪಿದ್ದರೂ ವಿಮೆ: ಹೈಕೋರ್ಟ್
ಬೆಂಗಳೂರು, ಸೆ.25: ಕರ್ತವ್ಯದಲ್ಲಿದ್ದಾಗ ಚಾಲಕ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದರೂ ಮೃತ ಚಾಲಕನ ಕುಟುಂಬಕ್ಕೆ ವಿಮಾ ಪರಿಹಾರ ನೀಡಬೇಕೆಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕರ್ತವ್ಯದಲ್ಲಿದ್ದಾಗ ಲಾರಿಯನ್ನು ನಿಲ್ಲಿಸಿ ನಿದ್ರಿಸುತ್ತಿದ್ದಾಗ ಹೃದಯಾಘಾತ ಸಂಭವಿಸಿ ಚಾಲಕ ಸಾವನ್ನಪ್ಪಿದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಕರ್ತವ್ಯದ ಸಮಯದಲ್ಲಿ ಚಾಲಕ ಸಾವನ್ನಪ್ಪಿದ್ದಾನೆ. ಅದನ್ನು ಉದ್ಯೋಗ ಮಾಡುವ ವೇಳೆ ಸಂಭವಿಸಿದ ಸಾವು ಎಂದು ಪರಿಗಣಿಸಿ ಚಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
2008ರಲ್ಲಿ ಬಾಗಲಕೋಟೆಯ ಬಾದಾಮಿ ತಾಲೂಕಿನ ನಿವಾಸಿ ಈರಣ್ಣ ಎಂಬುವರು ಲಾರಿ ನಿಲುಗಡೆ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ, ಚಾಲಕ ವಾಹನ ನಿಲುಗಡೆ ಮಾಡಿ ನಿದ್ರೆ ಮಾಡುತ್ತಿದ್ದ ವೇಳೆ ಸಾವನ್ನಪ್ಪಿದ್ದಾನೆ. ಲಾರಿ ಓಡಿಸುವಾಗ ಅಪಘಾತ ಉಂಟಾಗಿ ಚಾಲಕ ಮೃತಪಟ್ಟಿಲ್ಲ. ಹೀಗಾಗಿ, ಪರಿಹಾರ ನೀಡುವಂತೆ ಕಾರ್ಮಿಕ ಆಯುಕ್ತರ ಆದೇಶ ಕಾನೂನು ಬಾಹಿರವಾಗಿದೆ ಎಂಬ ವಿಮಾ ಕಂಪೆನಿಯ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.