ಉದ್ದೇಶಪೂರ್ವಕವಾಗಿಯೇ ಟಿಪ್ಪು ಸುಲ್ತಾನ್ ಹೆಸರನ್ನು ಬದಲಾಯಿಸಿದ್ದೇನೆ: ಸಂಸದ ಪ್ರತಾಪ್ ಸಿಂಹ
ಮೈಸೂರು: ' ಭಾರತದ ಇತಿಹಾಸದಲ್ಲಿ ಒಂದು ರೈಲಿಗೆ ಹೆಸರನ್ನು ಇಡಲಾಗಿದೆ ಹೊರತು ಅದನ್ನು ಬದಲಾಯಿಸಿರುವ ಉದಾಹರಣೆ ಇಲ್ಲ, ಆದರೆ ನಾನೇ ಮೊದಲ ಬಾರಿಗೆ ರೈಲಿಗೆ ಇಟ್ಟ ಹೆಸರನ್ನು ಬದಲಾಯಿಸಿದ್ದೇನೆ' ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನಾನು ಉದ್ದೇಶಪೂರ್ವಕವಾಗಿಯೇ ಟಿಪ್ಪು ರೈಲಿನ ಹೆಸರನ್ನು ತೆಗೆಸುತ್ತಿದ್ದೇನೆ. ಟಿಪ್ಪು ಕೊಡುಗೆ ಮೈಸೂರಿಗೆ ಏನು? ಹೆಸರನ್ನು ಬದಲಾಯಿಸಬಾರದು ಎಂದು ಹೇಳುವವರು ಟಿಪ್ಪು ಮೈಸೂರಿಗೆ ನೀಡಿದ ಮೂರು ಸಾಧನೆಯನ್ನು ತಿಳಿಸಲಿ' ಎಂದು ಸವಾಲು ಹಾಕಿದರು.
'ಮೈಸೂರಿಗೆ ಒಡೆಯರ್ ಅವರು ನೀಡಿದ ನೂರು ಸಾಧನೆಯನ್ನು ನಾನು ಹೇಳಬಲ್ಲೆ, ಆದರೆ ಟಿಪ್ಪು ಸಾಧನೆ ಏನು? ಆತ ಮೈಸೂರಿನವನ? ಟಿಪ್ಪು ಶ್ರೀರಂಗಪಟ್ಟಣದವನು. ಹಾಗಿದ್ದ ಮೇಲೆ ಮೈಸೂರು ರೈಲಿಗೆ ಟಿಪ್ಪು ಹೆಸರನ್ನು ಏಕೆ ಇಡಬೇಕು' ಎಂದು ಪ್ರಶ್ನಿಸಿದರು.
'ಕೆಲವರು ಹೊಸ ರೈಲನ್ನು ತರಬಹುದಿತ್ತು ಎಂದು ಹೇಳುತ್ತಿದ್ದಾರೆ. 2014 ರಲ್ಲಿ ಮೈಸೂರಿನಿಂದ ವಾರಣಾಸಿಗೆ ತಂದ ರೈಲಿನಿಂದ ಹಿಡಿದು ಕಾಚಿಗೂಡ ಎಕ್ಸ್ ಪ್ರೆಸ್, ಕೋಚುವೆಲ್, ಚೆನ್ನೈ ಎಕ್ಸ್ ಪ್ರೆಸ್, ಉದಯ್ ಪುರ ರೈಲು, ವಿಶ್ವಮಾನವ ರೈಲು ಸೇರಿದಂತೆ ಹತ್ತು ರೈಲುಗಳನ್ನು ಮೈಸೂರಿಗೆ ತಂದಿದ್ದೇನೆ. ಇಷ್ಟು ಕಡಿಮೆ ಅವಧಿಯಲ್ಲಿ ದೇಶದ ಯಾವ ಸಂಸದರೂ ಇಷ್ಟೊಂದು ರೈಲನ್ನು ಅವರ ಕ್ಷೇತ್ರಕ್ಕೆ ತಂದಂತಹ ಉದಾಹರಣೆ ಇಲ್ಲ, ಹೊಸ ರೈಲುಗಳನ್ನು ತರುವ ಜೊತೆಗೆ ರೈಲಿನ ಹೆಸರನ್ನು ನಾನು ಬದಲಾಯಿಸಿದ್ದೇನೆ. ಉದ್ದೇಶಪೂರ್ವಕವಾಗಿಯೇ ಟಿಪ್ಪು ರೈಲನ್ನು ಬದಲಾಯಿಸಿದ್ದು ಎಂಬುದಕ್ಕೆ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ' ಎಂದು ಹೇಳಿದರು.
'ಈಗಾಗಲೇ ಕರ್ನಾಟಕದಲ್ಲಿ ಟಿಪ್ಪು ಜಯಂತಿಯನ್ನು ರದ್ದು ಮಾಡಲಾಗಿದೆ. ಅದೇ ರೀತಿ ರೈಲಿಗೆ ಇಟ್ಟಿದ್ದ ಹೆಸರನ್ನು ಬದಲಾಯಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ' ಎಂದರು.
ಮೈಸೂರಿಗೆ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ತರಬೇಕು ಎಂಬ ಉದ್ದೇಶ ಹೊಂದಿದ್ದು, ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅನುಮೋದನೆ ಸಿಗಲಿದ್ದು, ಮೈಸೂರಿನ ಸಾತಗಳ್ಳಿಯಲ್ಲಿ 20 ಎಕರೆ ಜಾಗವನ್ನು ನೋಡಲಾಗಿದೆ. ಕ್ಯಾಬಿನೆಟ್ ಅನುಮೋದನೆ ದೊರೆತ ಮೂರು ತಿಂಗಳಲ್ಲಿ ಕಾಮಗಾರಿ ಪ್ರಾರಂಭ ಮಾಡುವುದಾಗಿ ತಿಳಿಸಿದರು.