ಇಂದಿರಾ ಗಾಂಧಿ, ತಾಯಿ ಸೋನಿಯಾ ಗಾಂಧಿಯನ್ನು ಗೆಲ್ಲಿಸಿದ ಕರ್ನಾಟಕಕ್ಕೆ ಧನ್ಯವಾದ: ಬಳ್ಳಾರಿಯಲ್ಲಿ ರಾಹುಲ್ ಗಾಂಧಿ
ಬಳ್ಳಾರಿ: ರಾಜ್ಯದಲ್ಲಿ 14ನೇ ದಿನಕ್ಕೆ ಕಾಲಿಟ್ಟಿರುವ ಭಾರತ್ ಜೋಡೊ ಯಾತ್ರೆಯು ಬಳ್ಳಾರಿ ನಗರ ಪ್ರವೇಶಿಸಿದ್ದು, ನಗರದ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿದೆ.
ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ (Rahul Gandhi), 'ನಮ್ಮ ಅಜ್ಜಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಕರ್ನಾಟಕ. ಚಿಕ್ಕಮಗಳೂರಿನ ಜನರು ಇಂದಿರಾ ಗಾಂಧಿಯನ್ನು ಗೆಲ್ಲಿಸಿದರು. ನಮ್ಮ ತಾಯಿ ಸೋನಿಯಾರನ್ನು ಬಳ್ಳಾರಿ ಜನರು ಗೆಲ್ಲಿಸಿದರು. ಇದನ್ನು ಮರೆಯಲು ಸಾಧ್ಯವೇ ಇಲ್ಲ. ಕರ್ನಾಟಕದ ಜನತೆಗೆ ನನ್ನ ಧನ್ಯವಾದಗಳು' ಎಂದು ತಿಳಿಸಿದರು.
''ಎಸ್. ಸಿ, ಎಸ್ .ಟಿ ಮೀಸಲಾತಿ ಹೆಚ್ಚಳ ವಿಚಾರ ಪ್ರಸ್ತಾಪ ಮಾಡಿದ್ದು ಕಾಂಗ್ರೆಸ್. ನ್ಯಾ.ನಾಗಮೋಹನ್ ದಾಸ್ ಸಮಿತಿ ರಚಿಸಿದ್ದು ಕಾಂಗ್ರೆಸ್. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷ ಆಗಿದೆ. ಮೀಸಲಾತಿ ಹೆಚ್ಚಳಕ್ಕೆ ಇಷ್ಟು ವರ್ಷ ವಿಳಂಬ ಮಾಡಿದ್ದೇಕೆ?'' ಎಂದು ಪ್ರಶ್ನೆ ಮಾಡಿದರು.
ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನ ಸಿಎಂ ಅಶೋಕ್ ಗೆಹಲೊಟ್, ಛತ್ತೀಸಗಡ ಸಿಎಂ ಭೂಪೇಶ್ ಬಘೇಲ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಬಳ್ಳಾರಿ ನಗರ ಪ್ರವೇಶಿಸಿದ ಭಾರತ್ ಜೋಡೊ ಯಾತ್ರೆ: ರಾಹುಲ್ ಗಾಂಧಿಗೆ ಸಚಿವ ಶ್ರೀರಾಮುಲು ಸ್ವಾಗತ ಕೋರಿದ್ದು ಹೀಗೆ...