'ಎಲ್ಲದಕ್ಕೂ ರಾಜಕೀಯ ತರಬೇಡಿ...': ಹೆಡ್ ಬುಷ್ ಸಿನೆಮಾ ಬಗ್ಗೆ ಸಚಿವ ಸುನಿಲ್ ಕುಮಾರ್ ಟ್ವೀಟ್ ಗೆ ನೆಟ್ಟಿಗರ ಆಕ್ರೋಶ
ವೀರಗಾಸೆ ಕುಣಿತ ಕಲಾವಿದರಿಗೂ ಪಿಂಚಣಿ ಯೋಜನೆ ಜಾರಿ ಮಾಡಿ ಎಂದು ಒತ್ತಾಯ
ಬೆಂಗಳೂರು: ಡಾಲಿ ಧನಂಜಯ್ ನಟನೆಯ ಮತ್ತು ನಿರ್ಮಾಣದ ಹೆಡ್ ಬುಶ್ ಚಿತ್ರದಲ್ಲಿ ಬೆಂಗಳೂರು ಕರಗಕ್ಕೆ ಮತ್ತು ವೀರಗಾಸೆ ನೃತ್ಯಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆ ಕನ್ನಡ–ಸಂಸ್ಕೃತಿ ಮತ್ತು ಇಂಧನ ಸಚಿವ ಸುನಿಲ್ ಕುಮಾರ್ ಅವರು ನಿಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸಿನಿಮಾದ ಕುರಿತು ಬಲಪಂಥೀಯರು ಹಾಗೂ ಹಿಂದುತ್ವ ಸಂಘಟನೆಗಳು ವಿವಾದವೆಬ್ಬಿಸಿದ್ದು, ಚಿತ್ರದಲ್ಲಿ ವೀರಗಾಸೆ ನೃತ್ಯಗಾರನಿಗೆ ಹೊಡೆಯುವ ದೃಶ್ಯವಿದೆ ಮತ್ತು ಬೆಂಗಳೂರು ಕರಗಕ್ಕೆ ಅವಮಾನವಾಗುವಂತೆ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿ, ಚಿತ್ರ ತಂಡದ ವಿರುದ್ಧ ಪೊಲೀಸ್ ದೂರು ಕೂಡ ಸಲ್ಲಿಸಿದ್ದಾರೆ. ಆದರೆ ಈ ಆರೋಪಗಳನ್ನು ಚಿತ್ರತಂಡ ಅಲ್ಲಗಳೆದಿದೆ.
ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿ ಕನ್ನಡ–ಸಂಸ್ಕೃತಿ ಮತ್ತು ಇಂಧನ ಸಚಿವ ಸುನಿಲ್ ಕುಮಾರ್ ಅವರು ಮಾಡಿರುವ ಟ್ವೀಟ್ ಒಂದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದು, 'ಎಲ್ಲ ವಿಚಾರಕ್ಕೂ ರಾಜಕೀಯ ತರಬೇಡಿ. ಈ tweet ಯಾರನ್ನು ಖುಷಿಪಡಿಸಲು?' ಎಂದು ಸಚಿವರಿಗೆ ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ.
''ನಿಮ್ಮ ರಾಜಕಾರಣವನ್ನು ರಾಜಕಾರಣ ಸಂಘಟನೆಗಳನ್ನು ಚಿತ್ರೋದ್ಯಮದಿಂದ ದೂರವಿಟ್ಟರೆ ಚಿತ್ರೋದ್ಯಮಕ್ಕೆ ಒಳಿತು ಇಲ್ಲದಿದ್ದರೆ ದಶಕದ ನಂತರ ಮತ್ತೆ ವಾಪಸ್ ಬಂದಿರುವ ಕನ್ನಡ ಚಿತ್ರರಂಗ ಇಂತಹ ಸಂಘಟನೆಗಳಿಂದ ಮತ್ತೆ ಬೆಳೆಯುವ ಪೈರು ಮೊಳಕೆಯಲ್ಲೆ ಅನ್ನೋ ತರ ಆಗುತ್ತೆ, ಸಿನಿಮಾನ ಸಿನೆಮಾ ತರ ನೋಡಿದರೆ ಒಳಿತು ಅದಕ್ಕೆ ರಾಜಕಾರಣದ ಸೊಪ್ಪನ್ನು ಮೆತ್ತಬೇಡಿ'' ಎಂದು ದಿನಕರನ್ ಎಂಬವರು ಟ್ವೀಟ್ ಮಾಡಿದ್ದಾರೆ.
'ವೀರಗಾಸೆ ಕುಣಿತ ಕಲಾವಿದರಿಗೆ ಪಿಂಚಣಿ ಯೋಜನೆ ಜಾರಿ ಮಾಡಿ. ಅವರಿಗೂ ಗೌರವ ಧನ ಕೊಡಿ. ಕನ್ನಡದ ಕಲೆಗಳನ್ನು ಉಳಿಸಿ' ಎಂದು ಗೋವಿಂದ್ ಜಿ. ಎಸ್ ಎಂಬವರು ಸಚಿವರನ್ನು ಒತ್ತಾಯಿಸಿದ್ದಾರೆ.
ಸಚಿವ ಹೇಳಿಕೆ ಏನು? 'ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕೃತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ'' ಎಂದು ಸಚಿವ ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದರು.
ಈ tweet ಯಾರನ್ನು ಖುಷಿಪಡಿಸಲು? ವೀರಗಾಸೆ ಕಲಾವಿದರು ಯಾರಾದರೂ ನಿಮ್ಮ ಬಳಿ ದೂರು ನೀಡಿದ್ದಾರಾ? ಸಾಮಾಜಿಕ ಜಾಲತಾಣದ ಅವಿವೇಕಿಗಳ ಮಾತು ನಿಮಗೆ ಅಷ್ಟೊಂದು ಮುಖ್ಯವೇ? ಅಶ್ಲೀಲ ಜೋಕ್ ಗಳೇ ಹಾಸ್ಯ ಎಂದು ತೋರಿಸುವ ಚಿತ್ರಗಳಿಂದ ನಮ್ಮ ಸಂಸ್ಕೃತಿಗೆ ಹಾನಿ ಆಗಿಲ್ಲವೇ? ಎಲ್ಲದಕ್ಕೂ ರಾಜಕೀಯ ತರಬೇಡಿ.
— Shatrugna (@Shatrugna5) October 26, 2022
ಹಾಗಾದರೆ #kantara ಚಿತ್ರದಲ್ಲಿ ದೈವನರ್ತಕನಿಗೆ ಆಸ್ತಿಯ ಆಮಿಷ ಒಡ್ಡುವ ಸನ್ನಿವೇಶ ನಿಮ್ಮ ಪ್ರಕಾರ ದೈವದ ಅಪಮಾನ ಅಲ್ಲವಾ?? ದೈವನರ್ತಕನಿಗೆ ಹೀಗೆ ಹೇಳಬೇಕು ಎನ್ನುವುದು ನಂಬಿಕೆಯ ಅಪಮಾನ ಅಲ್ವಾ??
— Deepak (@Dipakaar) October 26, 2022
ನಿಮಗೆ ವೀರಗಸೆ ಬಗ್ಗೆ ಅಷ್ಟ್ಟು ಕಾಳಜಿ ಇದ್ರೆ ವೀರಗಸೆ ನೃತ್ಯ ಮಾಡೋರ್ಗೆ ಮಸಶಾನ ಕೊಡಿ.. ಅದು ಬಿಟ್ಟು ನಿಮ್ ಬೆಳೆ ಬೇಯಿಸಿಕೊಳ್ಳೋದು ಯಾಕೆ?
— Mahadeva (@HarishGowda1706) October 26, 2022