ತುಮಕೂರು: ಮನೆಯಲ್ಲೇ ಹೆರಿಗೆ ಬಳಿಕ ತಾಯಿ, ಅವಳಿ ಮಕ್ಕಳು ಸಾವು
ತಾಯಿ ಕಾರ್ಡ್ ಇಲ್ಲದ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿದ ತುಮಕೂರು ಜಿಲ್ಲಾಸ್ಪತ್ರೆ: ಆರೋಪ
ತುಮಕೂರು,ನ.3: ಸಕಾಲದಲ್ಲಿ ತುಂಬು ಗರ್ಭೀಣಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೇ ಇದ್ದರಿಂದ ಗರ್ಭಿಣಿ ಮತ್ತು ಅವಳಿ ಮಕ್ಕಳು ಸಾವನ್ನಪ್ಪಿರುವ ಅಮಾನವೀಯ ಪ್ರಕರಣವೊಂದು ತುಮಕೂರು ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ನಗರದ ಭಾರತಿ ನಗರದಲ್ಲಿ ವಾಸವಾಗಿದ್ದ ಕಸ್ತೂರಿ ಎಂಬಾಕೆ ಪ್ರಸವ ಬೇನೆಯಿಂದ ಜಿಲ್ಲಾಸ್ಪತ್ರೆಗೆ ತಡರಾತ್ರಿ ಹೋದಾಗ, ಅಲ್ಲಿನ ಸಿಬ್ಬಂದಿ ಚಿಕಿತ್ಸೆ ನೀಡದೇ ಆಕೆಯನ್ನು ವಾಪಸ್ ಕಳುಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅನಾಥೆಯಾಗಿದ್ದ ಕಸ್ತೂರಿಗೆ ಒಂದು ಹೆಣ್ಣು ಮಗುವಿದ್ದು, ಮತ್ತೆ ಗರ್ಭಿಣಿಯಾಗಿದ್ದಳು, ತುಂಬು ಗರ್ಭಿಣಿಯಾಗಿದ್ದ ಆಕೆಗೆ ಅಕ್ಕಪಕ್ಕದವರ ಹಣ ನೀಡಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದು, ಆಸ್ಪತ್ರೆಯ ಸಿಬ್ಬಂದಿ ಆಕೆ ತಾಯಿ ಕಾರ್ಡ್ ಸೇರಿದಂತೆ ಇತರೆ ದಾಖಲೆ ತಂದಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನೀಡಿಲ್ಲ. ಪ್ರಸವ ಬೇನೆಯಿಂದ ಬಳಲುತ್ತಿದ್ದ ಆಕೆಗೆ ಚಿಕಿತ್ಸೆ ನೀಡದೇ ಇದ್ದರಿಂದ ವಾಪಸ್ ಮನೆಗೆ ಬಂದಿದ್ದಾಳೆ. ಮನೆಗೆ ಬಂದ ಬಳಿಕ ನೋವು ವಿಪರೀತವಾಗಿ ಹೆರಿಗೆಯಾಗಿದ್ದು, ತಾಯಿ, ಅವಳಿ ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಕ್ಕಪಕ್ಕದ ಮನೆಯವರು ಇಂದು ಬೆಳಿಗ್ಗೆ ಆಕೆಯ ಮನೆಗೆ ಹೋದಾಗ ವಿಚಾರ ಬೆಳಕಿಗೆ ಬಂದಿದ್ದು, ಎನ್ಇಪಿಎಸ್ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಬಂದ ಆಕೆಗೆ ತುರ್ತು ಚಿಕಿತ್ಸೆ ದೊರಕಿದ್ದರೆ ತಾಯಿ ಮಗು ಇಬ್ಬರು ಉಳಿಸಿಕೊಳ್ಳುವ ಅವಕಾಶವಿದ್ದರು ಸಹ ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ತಾಯಿ ಮಗು ಸಾವನ್ನಪ್ಪಿದ್ದಾರೆ ಎಂದು ಕೆಆರ್ ಎಸ್ ಪಕ್ಷದ ಕಾರ್ಯಕರ್ತ ನಾಗೇಂದ್ರ ಆಕ್ರೋಶ ವ್ಯಕ್ಯಪಡಿಸಿದ್ದಾರೆ.