ಚಂದ್ರು ಸಾವಿನ ಪ್ರಕರಣದಲ್ಲಿ ನಮ್ಮ ಪ್ರಶ್ನೆಗಳಿಗೆ ಪೊಲೀಸರಿಂದ ಉತ್ತರವೇ ಇಲ್ಲ: ಶಾಸಕ ರೇಣುಕಾಚಾರ್ಯ
"ನಾನು ಯಾವುದೇ ಮಾಧ್ಯಮದವರಿಗೆ ಹಣ ಕೊಟ್ಟು ಕರೆಸಿಕೊಂಡಿಲ್ಲ"
ದಾವಣಗೆರೆ: ನನ್ನ ಮಗ ಚಂದ್ರು ಸಾವಿನ ಪ್ರಕರಣದ ತನಿಖೆ ವಿಚಾರದಲ್ಲಿ (Chandrashekhar murder case) ಪೊಲೀಸ್ ಇಲಾಖೆ ವೈಫಲ್ಯದ ವಿರುದ್ಧ ನಾನು ಆಕ್ರೋಶಗೊಂಡಿದ್ದು, ನಮ್ಮ ಇನ್ನೂ ಕೆಲವು ಪ್ರಶ್ನೆಗಳಿಗೆ ಪೊಲೀಸರಿಂದ ಉತ್ತರವೇ ಇಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ (Renukacharya) ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಹೊನ್ನಾಳಿಯಲ್ಲಿ ರವಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೊನ್ನಾಳಿ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ವೀಕ್ಷಿಸಲು ನಾನು ಹೋಗಿದ್ದ ವೇಳೆ ಅವಕಾಶ ನೀಡಲಿಲ್ಲ. ತುಂಗಾ ನಾಲೆಗೆ ಕಾರು ಬಿದ್ದ ರೀತಿಯನ್ನು ನೋಡಿದರೆ, ಚಂದ್ರು ವ್ಯವಸ್ಥಿತವಾಗಿ ಕೊಲೆಯಾಗಿರುವ ಅನುಮಾನಗಳಿವೆ. ಆದರೆ, ಪೊಲೀಸರು ಅದನ್ನು ಆರಂಭದಿಂದಲೂ ಅಪಘಾತ ಎಂಬಂತೆ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ರಾತ್ರಿ ನನಗೆ ಕರೆ ಮಾಡಿ ಮಾತನಾಡಿದರು. ಚಂದ್ರು ಪ್ರಕರಣದ ವರದಿಯನ್ನು ತರಿಸಿಕೊಂಡು ಇನ್ನು 2-3 ದಿನಗಳಲ್ಲಿ ನಾನೇ ಬಂದು ಮಾತನಾಡುತ್ತೇನೆಂಬುದಾಗಿ ಹೇಳಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ಪಾರದರ್ಶಕವಾಗಿ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ನಾನು ಯಾವುದೇ ಮಾಧ್ಯಮದವರಿಗೆ ಹಣ ಕೊಟ್ಟು ಕರೆಸಿಕೊಂಡಿಲ್ಲ. ನನ್ನ ಮಗನ ಸಾವಿನಲ್ಲಿ ರಾಜಕಾರಣ ಮಾಡುವವನು ನಾನಲ್ಲ. ಅದರ ಅಗತ್ಯವೂ ನನಗೆ ಇಲ್ಲ ಎಂದರು.