ಶಿವಮೊಗ್ಗ | ಕಾರು-ಬೈಕ್ ಮುಖಾಮುಖಿ ಢಿಕ್ಕಿ: ಮಗು ಸೇರಿ ಒಂದೇ ಕುಟುಂಬದ ಮೂವರು ಮೃತ್ಯು
ಶಿವಮೊಗ್ಗ: ಕಾರು ಮತ್ತು ಬೈಕ್ ಮುಖಾಮುಖಿ ಢಿಕ್ಕಿ ಸಂಭವಿಸಿ ಮಗು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಶಿರಾಳಕೊಪ್ಪ ಸಮೀಪದ ಮಂಚಿಕೊಪ್ಪ ಬಳಿ ರವಿವಾರ ರಾತ್ರಿ ಸಂಭವಿಸಿದೆ.
ಹಲುಗಿನಕೊಪ್ಪದ ಜ್ಯೋತಿ (30), ಗಂಗಮ್ಮ (50) ಮತ್ತು ಸೌಜನ್ಯ (4) ಮೃತರು ಎಂದು ತಿಳಿದುಬಂದಿದೆ. ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ.
ಮಲ್ಲಿಕಾರ್ಜನ, ಮಗಳು ಸೌಜನ್ಯ, ತಾಯಿ ಜ್ಯೋತಿ, ಅವರ ತಾಯಿ ಗಂಗಮ್ಮ ಬೈಕಿನಲ್ಲಿ ತೆರಳುತ್ತಿದ್ದರು. ಇವರು ಶಿರಾಳಕೊಪ್ಪದಿಂದ ಹಲುಗಿನಕೊಪ್ಪದಲ್ಲಿರುವ ಮನೆಗೆ ಹೋಗುತ್ತಿದ್ದರು. ಕಾರು ಹಿರೆಕೆರೂರು ಕಡೆಯಿಂದ ಶಿರಾಳಕೊಪ್ಪ ಕಡೆಗೆ ತೆರಳುತ್ತಿತ್ತು.
ಮಂಚಿಕೊಪ್ಪ ಬಳಿ ಕಾರು, ಬೈಕ್ ಮುಖಾಮುಖಿ ಢಿಕ್ಕಿಯಾಗಿದ್ದು, ಮಗು ಸೌಜನ್ಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಲ್ಲಿಕಾರ್ಜುನ, ಜ್ಯೋತಿ, ಗಂಗಮ್ಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಶಿಕಾರಿಪುರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಯಲ್ಲಿ ಗಂಗಮ್ಮ ಮೃತಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಜ್ಯೋತಿ ಅಸುನೀಗಿದ್ದಾರೆ. ಮಲ್ಲಿಕಾರ್ಜುನ ಅವರ ಸ್ಥಿತಿ ಗಂಭೀರವಾಗಿದೆ.
ಘಟನೆಯಲ್ಲಿ ಬೈಕ್ ನುಜ್ಜುಗುಜ್ಜಾಗಿದೆ. ಕಾರಿನ ಮುಂಭಾಗ ಜಖಂ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಶಿರಾಳಕೊಪ್ಪ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.