VIDEO - 'ಹಿಂದೂ' ಪದದ ಬಗ್ಗೆ ಹೇಳಿಕೆ: ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಬೆಂಗಳೂರು, ನ.7: 'ಹಿಂದೂ ಎನ್ನುವ ಪದ ಅಶ್ಲೀಲವಾಗಿದೆ. ಇದರ ಮೂಲ ಭಾರತೀಯವಲ್ಲ, ಬದಲಾಗಿ ಪರ್ಷಿಯನ್ ನೆಲಕ್ಕೆ ಸೇರಿದೆ’ ಎಂಬ ಚರ್ಚೆಗೆ ಕಾರಣವಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಅವರ ಹೇಳಿಯನ್ನು ಕಾಂಗ್ರೆಸ್ ಪಕ್ಷ ಖಂಡಿಸಿದ್ದು, 'ಹಿಂದೂ ಪದದ ಕುರಿತ ಹೇಳಿಕೆ ದುರದೃಷ್ಟಕರ' ಎಂದು ಹೇಳಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಸತೀಶ್ ಜಾರಕಿಹೊಳಿಯವರು 'ಒಂದು ಶಬ್ಧದ ಬಗ್ಗೆ ಎಲ್ಲ ಮಾಧ್ಯಮಗಳಲ್ಲಿ ಚರ್ಚೆ, ಟೀಕೆ, ಟಿಪ್ಪಣಿಗಳಾಗುತ್ತಿವೆ. ಹಿಂದೂ ಶಬ್ಧ ಪರ್ಶಿಯನ್ ಭಾಷೆ ಅಥವಾ ಆ ಭಾಗದಿಂದ ಬಂದಿದೆ ಎಂದು ನಾನು ಹೇಳಿದ್ದು ನಿಜ. ಇದರ ಬಗ್ಗೆ ಚರ್ಚೆಯಾಗಬೇಕೆಂದು ಹೇಳಿದ್ದೇನೆ. ಹಿಂದೂ ಶಬ್ಧದ ಬಗ್ಗೆ ಕೆಲವು ನಿಂದನೆ ಮಾಡಿರುವ ಹಲವು ದಾಖಲೆಗಳು ಸಿಗುತ್ತವೆ ಎಂದು ಉಲ್ಲೇಖಿಸಿ ಹೇಳಿದ್ದೇನೆ. ಅವು ಸತೀಶ್ ಜಾರಕಿಹೊಳಿಯವರ ಮಾತುಗಳಲ್ಲ' ಎಂದಿದ್ದಾರೆ.
''ಈ ರೀತಿಯ ಸಾವಿರಾರು ಭಾಷಣಗಳುಈ ದೇಶದಲ್ಲಿ ನಡೆದಿವೆ. ಆದರೂ ಕೂಡ ಮಾಧ್ಯಮಗಳು ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಹಿಂದೂ, ಪಾರ್ಷಿ, ಜೈನ, ಇಸ್ಲಾಮ್, ಕ್ರಿಶ್ಚಿಯನ್, ಬೌದ್ಧ ಯಾವುದೇ ಧರ್ಮವಿರಲಿ ಅದನ್ನು ಮೀರಿ ಬೆಳೆಯುವ ಕೆಲಸ ನಾವು ಮಾಡುತ್ತಿದ್ದೇವೆ. ಜಾತಿ-ಧರ್ಮ ಮೀರಿ ಕೆಲಸ ಮಾಡಬೇಕು ಎಂಬುದು ನಮ್ಮ ಆಶಯ. ಹಾಗಾಗಿ ನಾನು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ'' ಎಂದಿದ್ದಾರೆ.