'ಜಿಲ್ಲಾ ಉಸ್ತುವಾರಿ ಸಚಿವರಿಗೂ 15 ಲಕ್ಷ ರೂ. ಸಂದಾಯ': ದಾವಣಗೆರೆ ಪಾಲಿಕೆ ವ್ಯವಸ್ಥಾಪಕ– ಗುತ್ತಿಗೆದಾರನ ಆಡಿಯೊ ವೈರಲ್
ದಾವಣಗೆರೆ: ಜಕಾತಿ ಟೆಂಡರ್ ಕೊಡಲು 7 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಹಾಗೂ ಗುತ್ತಿಗೆದಾರ ಕೃಷ್ಣ ಅವರದ್ದೆನ್ನಲಾದ ಆಡಿಯೊ ಒಂದು ವೈರಲ್ ಆಗಿದೆ.
‘ಜಿಲ್ಲಾ ಉಸ್ತುವಾರಿ ಸಚಿವರಿಗೂ (ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ) 15 ಲಕ್ಷ ರೂ. ಸಂದಾಯ ಮಾಡಲಾಗಿದೆ’ ಎಂದು ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಅವರು ಹೇಳಿರುವುದು ಆಡಿಯೊದಲ್ಲಿ ದಾಖಲಾಗಿದೆ ಎಂದು ಗುತ್ತಿಗೆದಾರ ಕೃಷ್ಣ ಅವರು ಆರೋಪಿಸಿದ್ದಾರೆ.
ಸೋಮವಾರ ಶ್ರೀರಾಮಸೇನೆಯ ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೃಷ್ಣ ಅವರು, ''2021ರಲ್ಲಿ ಜಕಾತಿ ಸಂಗ್ರಹದ ಗುತ್ತಿಗೆ ಪಡೆದಿದ್ದೆ. ನಷ್ಟದ ಕಾರಣ ಗುತ್ತಿಗೆ ಅವಧಿ ವಿಸ್ತರಿಸುವಂತೆ ಪಾಲಿಕೆ ಆಯುಕ್ತರನ್ನು ಕೇಳಿಕೊಂಡಿದ್ದೆ. ಅದಕ್ಕೆ ಆಯುಕ್ತರು, ವ್ಯವಸ್ಥಾಪಕ ವೆಂಕಟೇಶ್ ಅವರನ್ನು ಸಂಪರ್ಕಿಸಲು ಸೂಚಿಸಿದ್ದರು. ಗುತ್ತಿಗೆ ನವೀಕರಿಸಲು ವೆಂಕಟೇಶ್ 7 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇರಿಸಿ, ಮುಂಗಡವಾಗಿ 2 ಲಕ್ಷ ಪಡೆದಿದ್ದರು. ರವಿವಾರ ರಾತ್ರಿ ಮತ್ತೆ 3 ಲಕ್ಷ ರೂ. ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ'' ಎಂದು ತಿಳಿಸಿದರು.
ಪಾಲಿಕೆ ಆಯುಕ್ತ, ಸಚಿವರ ವಿರುದ್ಧ ಕ್ರಮಕ್ಕೆ ಒತ್ತಾಯ: ಜಕಾತಿ ಟೆಂಡರ್ ನೀಡಲು ಲಕ್ಷಗಟ್ಟಲೆ ಲಂಚ ಪಡೆದಿರುವ ಪಾಲಿಕೆ ಆಯುಕ್ತ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಮಣಿಕಂಠ ಒತ್ತಾಯಿಸಿದ್ದಾರೆ.
ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಅಥವಾ ಜಿಲ್ಲೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳ ಸಂಬಂಧಪಟ್ಟಂತೆ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಕಾತಿ ಹೊಸಿಲಿಗೆ ಸಂಬಂಧಪಟ್ಟಂತೆ 6ತಿಂಗಳ ನವೀಕರಣಕ್ಕೆ ಪಾಲಿಕೆ ಆಯುಕ್ತರು 7ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 2 ಲಕ್ಷ ರೂ. ಕೇಳಿ ಕೇಳಿದ್ದು, ಉಳಿದ 5ಲಕ್ಷ ರೂ. ಗಳನ್ನು ಆದೇಶಕ್ಕೆ ಸಹಿ ಮಾಡಿದ ನಂತರ ನೀಡುವುದಾಗಿ ಒಪ್ಪಂದ ಮಾಡಿಕೊಂಡು ಮಾತುಕತೆ ನಡೆಸಿದ್ದು ಈ ಹಿನ್ನೆಲೆಯಲ್ಲಿ ರವಿವಾರ ರಾತ್ರಿ ಹಣ ನೀಡಲು ಹೋದಾಗ ಲೋಕಾಯುಕ್ತ ದಾಳಿ ನಡೆಸಿ ವೆಂಕಟೇಶ್ ಅವರನ್ನು ಬಂಧಿಸಿದೆ ಎಂದು ಮಾಹಿತಿ ನೀಡಿದರು.
ರವಿವಾರ ರಾತ್ರಿ ನಗರದ ರಾಮ್ ಅಂಡ್ ಕೋ ವೃತ್ತದ ಸಮೀಪ ಇರುವ ವೆಂಕಟೇಶ್ ಅವರ ರೂಮಿನಲ್ಲಿ 3ಲಕ್ಷ ರೂ. ನೀಡುವ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದು, ಅವರನ್ನು ಈಗ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇದೇ ರೀತಿ ಪಾಲಿಕೆಯಲ್ಲೂ ಎಲ್ಲಾ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಕುರಿತಂತೆ ಲೋಕಾಯುಕ್ತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಇದಲ್ಲದೇ ಪಾಲಿಕೆಯಲ್ಲಿ ಕರ್ತವ್ಯ ನಿರತ ವೆಂಕಟೇಶ್ ಅವರು ಕೃಷ್ಣ ಅವರೊಂದಿಗೆ ಮಾತುಕತೆ ನಡೆಸುವಾಗ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜು ಅವರಿಗೆ ಇತ್ತೀಚೆಗಷ್ಟೇ ಹದಿನೈದು ಲಕ್ಷ ರೂಗಳನ್ನು ನೀಡಿರುವುದಾಗಿ ಮಾತುಕತೆ ನಡೆಸಿದ್ದಾರೆ ಇದರಿಂದಾಗಿ ಉಸ್ತುವಾರಿ ಸಚಿವರ ವಿರುದ್ಧವೂ ಲೋಕಾಯುಕ್ತರು ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ವೆಂಕಟೇಶ್ ಅವರು ಮಾತನಾಡಿರುವ ಆಡಿಯೋಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಪೊಲೀಸರು ಸಮಗ್ರವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: 'ಹಿಂದೂ' ಪದದ ಬಗ್ಗೆ ಹೇಳಿಕೆ: ಸತೀಶ್ ಜಾರಕಿಹೊಳಿ ಸ್ಪಷ್ಟನೆ