'ಕಳಪೆ' ಆಹಾರ ಸೇವನೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 26 ವಿದ್ಯಾರ್ಥಿಗಳು ಅಸ್ವಸ್ಥ
ಚಿಕ್ಕಮಗಳೂರು: ಕಳಪೆ ಗುಣಮಟ್ಟದ್ದೆನ್ನಲಾದ ಆಹಾರ ಸೇವಿಸಿ ಮೊರಾರ್ಜಿ ವಸತಿ ಶಾಲೆಯ 26 ವಿದ್ಯಾರ್ಥಿನಿಯರುವ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ತರೀಕೆರೆ (Tarikere) ಪಟ್ಟಣದಲ್ಲಿ ವರದಿಯಾಗಿದೆ.
ತರೀಕೆರೆ ಪಟ್ಟಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾತ್ರಿ ಊಟ ಮಾಡಿದ ವಿದ್ಯಾರ್ಥಿನಿಯರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ಈ ಪೈಕಿ ಸುಮಾರು 26 ವಿದ್ಯಾರ್ಥಿನಿಯರು ವಾಂತಿ ಬೇಧಿಯಿಂದಾಗಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.
ತೀವ್ರವಾಗಿ ಅಸ್ವಸ್ಥರಾದ 26 ವಿದ್ಯಾರ್ಥಿನಿಯರನ್ನು ಕೂಡಲೇ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದ ವಿದ್ಯಾರ್ಥಿನಿಯರು ಚೇತರಿಸಿಕೊಂಡಿದ್ದಾರೆ.
ಶಾಸಕ ಡಿ.ಎಸ್.ಸುರೇಶ್ ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಆಸ್ಪತ್ರೆಗೆ ಭೇಟಿ ನೀಡಿ ಶಾಸಕರ ಎದುರು ಆತಂಕ ತೋಡಿಕೊಂಡಿದ್ದಾರೆ. ಇಂತಹ ಘಟನೆ ಮತ್ತೆ ಮರುಕಳಿಸಿದಂತೆ ಎಚ್ಚರಿಕೆ ವಹಿಸಲಾಗುವುದು, ಕಳಪೆ ಆಹಾರ ಪೂರೈಕೆ ಮಾಡಿದ ವಸತಿ ನಿಲಯದ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ಶಾಸಕರು ಪೋಷಕರಿಗೆ ಭರವಸೆ ನೀಡಿದರು.