ಮಾಜಿ ರೌಡಿ 'ಸೈಲೆಂಟ್' ಸುನೀಲ್‍ಗೆ ಬಿಜೆಪಿ ಟಿಕೆಟ್?
ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ರೌಡಿ ಸೈಲೆಂಟ್ ಸುನೀಲ್ ಯಾನೆ ಸುನೀಲ್ ಕುಮಾರ್ ಗೆ ಬಿಜೆಪಿ ಟಿಕೆಟ್ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ರವಿವಾರ ಇಲ್ಲಿನ ವೆಂಕಟರಾವ್ ಕಲಾಭವನದಲ್ಲಿ ಸೈಲೆಂಟ್ ಸುನೀಲ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಬಿಜೆಪಿ ನಾಯಕರು ಮಾತ್ರ ಭಾಗಿಯಾಗಿದ್ದು, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಎಂದು ಬಿಂಬಿಸಲಾಯಿತು.
(ಸೈಲೆಂಟ್ ಸುನೀಲ್ Photo:jansatta.com)
ಇನ್ನು, ಈ ಕುರಿತು ಪ್ರತಿಕ್ರಿಯಿಸಿದ್ದ ಸೈಲೆಂಟ್ ಸುನೀಲ್, ಮುಂದಿನ ದಿನಗಳಲ್ಲಿ ಸೂಕ್ತ ಅವಕಾಶ ಸಿಕ್ಕರೆ ಖಂಡಿತವಾಗಿ ರಾಜಕೀಯಕ್ಕೆ ಬರುತ್ತೇನೆ. ಪ್ರಾಮಾಣಿಕವಾಗಿ ಜನ ಸೇವೆ ಮಾಡಲು ಆರಂಭಿಸಿದ್ದೇನೆ. ಗುರುಹಿರಿಯರ ಮಾರ್ಗದರ್ಶನದಂತೆ ಸಮಾಜ ಸೇವೆ ಮಾಡುತ್ತೇನೆ ಎಂದರು.
ಬಿಜೆಪಿ ಸಂಸದ ಪಿ.ಸಿ.ಮೋಹನ್ ಮಾತನಾಡಿ, ಸುನೀಲ್ ಕುಮಾರ್ ಸಾಮಾಜಿಕ ಸೇವೆ ಮೂಲಕ ರಕ್ತದಾನ ಶಿಬಿರಕ್ಕೆ ಹೊಸ ಮುನ್ನುಡಿ ಬರೆಯಲು ಹೊರಟಿದ್ದಾರೆ. ಸುನೀಲ್ ಕುಮಾರ್ ಸೇವೆ ಕಾರ್ಯ ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸಲಿ. ಅದಕ್ಕೆ ನಮ್ಮ ಬೆಂಬಲ ಮತ್ತು ಸಹಕಾರ ಇರುತ್ತದೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಪ್ರಾರಂಭ ಮಾಡುತ್ತಿರುವ ಸುನೀಲ್ ಕುಮಾರ್ ಅವರಿಗೆ ಶುಭಾಶಯಗಳು. ಈ ಒಂದು ಕ್ಷೇತ್ರದಲ್ಲಿ ನಡೆದಿರುವ ನೂರಾರು ಕೋಟಿ ಹಗರಣ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಈ ಒಂದು ಕ್ಷೇತ್ರದಲ್ಲಿ ಭಯ ವಾತಾವರಣ ಇದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಉದಯ್ ಬಿ.ಗರುಡಾಚಾರ್, ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಸೇರಿದಂತೆ ಪ್ರಮುಖರಿದ್ದರು.
ಸಿಸಿಬಿ ದಾಳಿ ನಡೆಸಿತ್ತು..!
ಈ ಹಿಂದೆ ಅಕ್ರಮವಾಗಿ ಶಸ್ತ್ರಾಸ್ತ್ರ ಸಂಗ್ರಹಿಸಿದ ಆರೋಪದಡಿ ನ್ಯಾಯಾಂಗ ಬಂಧಿತನಾಗಿದ್ದ ಸೈಲೆಂಟ್ ಸುನೀಲ್ ಸದ್ಯ ಜಮೀನಿನ ಮೇಲೆ ಹೊರಗಡೆ ಇದ್ದಾರೆ. 2021ನೆ ಸಾಲಿನಲ್ಲಿ ಇವರ ನಿವಾಸದ ಮೇಲೆ ಕಳೆದ ವರ್ಷ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.