ಶ್ರೀರಂಗಪಟ್ಟಣ | ಮನೆ ಮೇಲಿನ ಹಸಿರು ಧ್ವಜ ಕಿತ್ತೆಸೆದು ಕೇಸರಿ ಧ್ವಜ ಹಾರಾಟ, ಸ್ವತ್ತುಗಳಿಗೆ ಹಾನಿ ಆರೋಪ: FIR ದಾಖಲು
ಮಂಡ್ಯ/ಶ್ರೀರಂಗಪಟ್ಟಣ, ಡಿ.5: ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ ಅಂಗವಾಗಿ ಹಿಂದೂ ಜಾಗರಣ ವೇದಿಕೆ ರವಿವಾರ ಆಯೋಜಿಸಿದ್ದ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಮನೆಯೊಂದರ ಮೇಲಿನ ಹಸಿರು ಧ್ವಜ ಕಿತ್ತೆಸೆದು ಹನುಮ ಧ್ವಜ(ಕೇಸರಿ) ಪ್ರತಿಷ್ಠಾಪಿಸಿದ್ದ ಪ್ರಕರಣ ಸಂಬಂಧ ಶ್ರೀರಂಗಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶ್ರೀರಂಗಪಟ್ಟಣ ಕರಿಘಟ್ಟ ಮುಖ್ಯರಸ್ತೆಯ ಗಂಜಾಂ ನಿವಾಸಿ ಸೈಯ್ಯದ್ ರೆಹಮಾನ್ ರವಿವಾರ ಸಂಜೆ ಠಾಣೆಗೆ ದೂರು ನೀಡಿದ್ದು, ಐಪಿಸಿ ಕಲಂ 295(ಎ), 448, 504, 506 ಆರ್/ಡಬ್ಲ್ಯೂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಶ್ರೀರಂಗಪಟ್ಟಣದ ಅಡಿಷನಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಪ್ರಥಮ ಮಾಹಿತಿ ವರದಿ ಸಲ್ಲಿಸಲಾಗಿದೆ.
‘ರವಿವಾರ ಹನುಮ ಜಯಂತಿ ಮೆರವಣಿಗೆ ವೇಳೆ ಸುಮಾರು ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಮಾಲಾಧಾರಿ ನನ್ನ ಮನೆಯ ಮೇಲಿದ್ದ ಹಸಿರು ಧ್ವಜವನ್ನು ಕಿತ್ತು ಹಾಕಿ, ಅದರ ಬದಲಿಗೆ ಹನುಮ ಧ್ವಜವನ್ನು ಹಾಕಿದ್ದಾರೆ. ಈ ಕೃತ್ಯಕ್ಕೆ ಕೆಲವರು ಸಹಾಯ ಮಾಡಿದ್ದಾರೆ. ನನ್ನ ಸ್ವತ್ತಿಗೆ(ಮನೆಗೆ) ಹಾನಿಯಾಗಿದೆ. ಜತೆಗೆ, ಮನೆಯಲ್ಲಿದ್ದ ಮಹಿಳೆ ಮತ್ತು ಮಕ್ಕಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ರವಿವಾರ ಗಂಜಾಂನಿಂದ ಶ್ರೀರಂಗಪಟ್ಟಣದವರೆಗೆ ಹನುಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಹನುಮ ಮಾಲಾಧಾರಿ ಯುವಕನೊಬ್ಬ ಮಾರ್ಗದ ಮನೆ ಮೇಲೆ ಹತ್ತಿ ಹಸಿರು ಧ್ವಜ ಕಿತ್ತು ಕೇಸರಿ ಧ್ವಜ ಹಾರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
“ಮನೆ ಮೇಲೆ ಹಸಿರು ಧ್ವಜ ಕಿತ್ತು ಕೇಸರಿ ಧ್ವಜ ಹಾರಿಸಿರುವ ಕುರಿತು ಸೈಯ್ಯದ್ ರೆಹಮಾನ್ ಅವರು ಠಾಣೆಗೆ ನೀಡಿರುವ ದೂರನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಪ್ರಥಮ ಮಾಹಿತಿ ವರದಿ ಸಲ್ಲಿಸಲಾಗಿದೆ. ದೂರಿನಲ್ಲಿ ಇಂತಹವರೇ ಕೃತ್ಯ ಎಸಗಿದ್ದು ಎಂಬುದಾಗಿ ಯಾವುದೇ ವ್ಯಕ್ತಿಯ ವಿರುದ್ಧ ಆರೋಪವಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ.”
-ರೇಖಾ, ಪಿಎಸ್ಸೈ, ಶ್ರೀರಂಗಪಟ್ಟಣ.
ಇದನ್ನೂ ಓದಿ: ಐಎಎಸ್ ಅಧಿಕಾರಿ ಸಹಾಯದಿಂದ ಆಸ್ತಿ ಕಬಳಿಕೆ: ರೋಹಿಣಿ ಸಿಂಧೂರಿ ಪತಿ ವಿರುದ್ಧ ಗಾಯಕ ಲಕ್ಕಿ ಅಲಿ ಆರೋಪ