‘ಮಹಾರಾಷ್ಟ್ರ ಸಚಿವರಿಬ್ಬರಿಗೆ ಗಡಿ ಪ್ರವೇಶಕ್ಕೆ ನಿರ್ಬಂಧ’ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ಆದೇಶ
ಬೆಳಗಾವಿ, ಡಿ. 5: ಗಡಿ ವಿವಾದದ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸುವುದಾಗಿ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಉನ್ನತ ಶಿಕ್ಷಣ, ಸಂಸದೀಯ ವ್ಯವಹಾರ ಸಚಿವ ಚಂದ್ರಕಾಂತ (ದಾದಾ) ಪಾಟೀಲ್, ಅಬಕಾರಿ ಸಚಿವ ಶಂಬುರಾಜ ದೇಸಾಯಿ ಹಾಗೂ ಸಂಸದ ಧೈರ್ಯಶೀಲ ಅವರಿಗೆ ಕರ್ನಾಟಕ ರಾಜ್ಯದ ಗಡಿ ಪ್ರವೇಶ ಮಾಡದಂತೆ ನಿರ್ಬಂಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಸೋಮವಾರ ಆದೇಶ ಹೊರಡಿಸಿದ್ದಾರೆ.
ಬೆಳಗಾವಿಯಲ್ಲಿ ಮರಾಠಿಗರು ಹಾಗೂ ಕನ್ನಡಿಗರು ಸಹಬಾಳ್ವೆ ನಡೆಸುತ್ತಿದ್ದು, ಗಡಿ ವಿಷಯದ ಚರ್ಚೆ ನೆಪದಲ್ಲಿ ಮಹಾರಾಷ್ಟ್ರ ಸಚಿವರಿಬ್ಬರು ನಾಳೆ(ಡಿ.6) ಬೆಳಗಾವಿಗೆ ಆಗಮಿಸುವುದಾಗಿ ಪ್ರಕಟಿಸಿದ್ದರು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ಷೇಪಿಸಿದ್ದರು. ಅಲ್ಲದೆ, ಗಡಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವರು ರಾಜ್ಯಕ್ಕೆ ಆಗಮಿಸುವುದು ಬೇಡ ಎಂದು ಮನವಿ ಮಾಡಿದ್ದರು.
ಆದರೆ, ಇದಕ್ಕೆ ಪರಿಗಣನೆಗೆ ತೆಗೆದುಕೊಳ್ಳದ ಮಹಾರಾಷ್ಟ್ರ ಸಚಿವರು ನಾವು ಬೆಳಗಾವಿಗೆ ತೆರಳಿಯೇ ತಿರುತ್ತೇವೆಂದು ಉದ್ಧಟತನ ಪ್ರದರ್ಶಿಸಿದ್ದರು. ಆ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿ ಪ್ರವೇಶಕ್ಕೆ ಮಹಾರಾಷ್ಟ್ರ ಸಚಿವರಿಬ್ಬರಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ಗಡಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಿದ್ದು, ಒಂದು ವೇಳೆ ನಿರ್ಬಂಧ ಉಲ್ಲಂಘಿಸಿ ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಆಗಮಿಸಿದರೆ ಅವರನ್ನು ಬಂಧಿಸುವ ಸಾಧ್ಯತೆಗಳಿವೆ.