ಈ ದೇಶದ ಅನ್ನದಾತ ಎಂದರೆ, ಅದು ನೆಹರು ಮಾತ್ರ...: ಎಚ್.ವಿಶ್ವನಾಥ್
ಪರಿಷತ್ತಿನಲ್ಲಿ ಸ್ವಪಕ್ಷದ ಸದಸ್ಯರಿಗೆ ತಿರುಗೇಟು ನೀಡಿದ BJP ಮುಖಂಡ
ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.22: ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಕುರಿತ ಟೀಕೆಗಳಿಗೆ ಆಡಳಿತರೂಢ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಅವರು ಸ್ವಪಕ್ಷದ ಸದಸ್ಯರಿಗೆ ತಮ್ಮದೇ ಶೈಲಿಯಲ್ಲಿ ಚಾಟಿ ಬಿಸಿದರು.
ಗುರುವಾರ ಪರಿಷತ್ತಿನಲ್ಲಿ ಆಡಳಿತ ಪಕ್ಷದ ಸದಸ್ಯ ರವಿಕುಮಾರ್ ಹೇಳಿಕೆ ವಿಚಾರ ಕುರಿತು ಮಾತನಾಡಿದ ಅವರು, ಇತ್ತೀಚಿಗೆ ಬಹಳಷ್ಟು ಮಂದಿ ನೆಹರು ಕುರಿತು ಇಲ್ಲಸಲ್ಲದ ಟೀಕೆ ಮಾಡುತ್ತಾರೆ.ಆದರೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ. ನೆಹರು ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.ಅವರೊಬ್ಬರು ದೊಡ್ಡ ನೇತಾರ ಎಂದು ಬಣ್ಣಿಸಿದರು.
ನೆಹರು ಅವರು ನಿಧನರಾದ ಸಂದರ್ಭದಲ್ಲಿ ಸ್ವತಃ ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಲೋಕಸಭಾ ಸದನದಲ್ಲಿ ಅವರ ಕೊಡುಗೆ, ಶ್ರಮವನ್ನು ಬಣ್ಣಿಸಿದ್ದಾರೆ.ಇದನ್ನು ಪುಸ್ತಕ ರೂಪದಲ್ಲಿ ತಂದು ಸಾರ್ವಜನಿಕವಾಗಿ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.
ಈ ದೇಶದ ಅನ್ನದಾತ ಎಂದರೆ, ಅದು ನೆಹರು ಮಾತ್ರ.ಅವರ ಬಗ್ಗೆ ತಿಳಿಯದೆ, ರಾಜಕೀಯ ಕಾರಣಗಳಿಗಾಗಿ ಟೀಕಿಸಿದರೆ ನನಗೆ ತುಂಬಾ ನೋವಾಗುತ್ತದೆ ಎಂದ ಅವರು, ಕೆಲ ಮಾಧ್ಯಮಗಳನ್ನು ಖರೀದಿಸಿಕೊಂಡು ತಾವೇ ದೊಡ್ಡವರೆಂದು ಬಿಂಬಿಸಿಕೊಳ್ಳುವ ಪ್ರಯತ್ನ ಈಗ ನಡೆಯುತ್ತಿದೆ.ಆದರೆ, ನೆಹರು ಅವರು ಈ ಸಾಲಿಗೆ ಸೇರಲ್ಲ ಎಂದರು.