ಯಾದಗಿರಿಯಲ್ಲಿ ಸ್ಪರ್ಧಿಸಿದರೆ 1 ಕೋಟಿ ರೂ. ಕೊಡ್ತೇನೆ: ಸಿದ್ದರಾಮಯ್ಯ ಹೆಸರಲ್ಲಿ ಚೆಕ್ ಬರೆದ ಬಿಜೆಪಿ ಮುಖಂಡ
ಯಾದಗಿರಿ: ಮುಂಬರಲಿರುವ ವಿಧಾನಸಭೆ ಚುನಾವಣೆಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರ ಚುನಾವಣಾ ಖರ್ಚಿಗೆ ಒಂದು ಕೋಟಿ ರೂ. ನೀಡುತ್ತೇನೆ ಎಂದು ಬಿಜೆಪಿ ಮುಖಂಡರೊಬ್ಬರು ಘೋಷಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಗೆ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಚೆಕ್ ಬರೆದು ತಂದಿರುವ ಬಿಜೆಪಿ ಮುಖಂಡರಾಗಿರುವ ಚಂದ್ರಾಯ ಕೊಂಕಲ್ ಅವರು, 'ಸಿದ್ರಾಮಯ್ಯ ಇಲ್ಲಿಗೆ ಬಂದ್ರೆ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯ' ಎಂದು ತಿಳಿಸಿದರು.
''ಇಲ್ಲಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ, ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ, ಸಿದ್ದರಾಮಯ್ಯ ಅವರ ಸ್ಪರ್ಧೆಗಾಗಿ 7 ಎಕರೆ ಜಮೀನು ಮಾರಾಟ ಮಾಡಿದ್ದೇನೆ. ನಾನು ಬಿಜೆಪಿಯಲ್ಲಿದ್ದರೂ ಹಿಂದಿನಿಂದಲೂ ನನ್ನ ಕುಟುಂಬದ ಸದಸ್ಯರೆಲ್ಲರೂ ಸಿದ್ದರಾಮಯ್ಯ ಅವರ ಅಭಿಮಾನಿಗಳು'' ಎಂದು ಹೇಳಿದರು.
''ನಮ್ಮ ಸ್ಥಳೀಯ ಬಿಜೆಪಿ ಶಾಸಕರು ಸರಿಯಾಗಿಲ್ಲ, ನನಗೆ ವಯಸ್ಸಾಗಿರೋದರಿಂದ ನಾನು ಈ ರೀತಿ ಮಾತನಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ಸ್ಪಷ್ಟವಾಗಿಯೇ ಹೇಳುತ್ತಿದ್ದೇನೆ. ನನ್ನ ಮಕ್ಕಳಲ್ಲಿ ಒಪ್ಪಿಗೆ ಪಡೆದೇ ಈ ನಿರ್ಧಾರ ಕೈಗೊಂಡಿದ್ದೇನೆ'' ಎಂದು ಸ್ಪಷ್ಟಪಡಿಸಿದರು.