ಬಳ್ಳಾರಿ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ: 23 ವರ್ಷದ ತ್ರಿವೇಣಿ ರಾಜ್ಯದ ಅತಿ ಕಿರಿಯ ಮೇಯರ್
ಬಳ್ಳಾರಿ, ಮಾ.29: ಬಳ್ಳಾರಿ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಕಾಂಗ್ರೆಸ್ನ ಡಿ. ತ್ರಿವೇಣಿ ಆಯ್ಕೆಯಾದರು. ರಾಜ್ಯದ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ 23 ವರ್ಷದ ತ್ರಿವೇಣಿ ಪಾತ್ರರಾಗಿದ್ದಾರೆ.
ಉಪ ಮೇಯರ್ ಆಗಿ ಕಾಂಗ್ರೆಸ್ನ ಬಿ.ಜಾನಕಿ ಅವಿರೋಧವಾಗಿ ಆಯ್ಕೆಯಾಗಿದರು.
ಮೇಯರ್ ಆಯ್ಕೆಗಾಗಿ ಒಟ್ಟು 44 ಮತದಾರರಿಂದ ಮತದಾನ ನಡೆದಿದ್ದು, ತ್ರಿವೇಣಿಗೆ 28 ಮತಗಳು ಬಿದ್ದರೆ, ಬಿಜೆಪಿಯ ನಾಗರತ್ನಮ್ಮ ಅವರಿಗೆ 16 ಮತಗಳು ಚಲಾವಣೆಯಾಗಿವೆ. ಉಪ ಮೇಯರ್ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಬಿ.ಜಾನಕಿ ಅವರ ಆಯ್ಕೆ ಅವಿರೋಧವಾಯಿತು.
ನಾಲ್ಕನೇ ವಾರ್ಡ್ ನಿಂದ ಪಾಲಿಕೆ ಸದಸ್ಯೆಯಾಗಿ ತ್ರಿವೇಣಿ ಆಯ್ಕೆಯಾಗಿದ್ದರೆ, 33 ನೇ ವಾರ್ಡಿನಿಂದ ಬಿ.ಜಾನಕಿ ಆಯ್ಕೆಯಾಗಿದ್ದಾರೆ.
ಪಾಲಿಕೆಯ ಒಟ್ಟು 39 ವಾರ್ಡ್ ಗಳ ಪೈಕಿ ಐದು ಪಕ್ಷೇತರ ಬೆಂಬಲದೊಂದಿಗೆ ಕಾಂಗ್ರೆಸ್ 26 ಸದಸ್ಯರಿದ್ದಾರೆ. ಬಿಜೆಪಿ 13 ಸದಸ್ಯರ ಬಲ ಹೊಂದಿದೆ. ವಿಧಾನಸಭೆ, ವಿಧಾನಪರಿಷತ್ ಹಾಗೂ ಸಂಸದರಿಗೂ ಮತದಾನದ ಹಕ್ಕಿದೆ.
ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಉಪ ಮೇಯರ್ ಸ್ಥಾನ ಎಸ್ಟಿ ಮಹಿಳೆಗೆ ನಿಗದಿಯಾಗಿತ್ತು.
''ಅತಿ ಕಿರಿಯ ವಯಸ್ಸಿನ ಪಾಲಿಕೆ ಸದಸ್ಯೆಯಾಗಿ ಆಯ್ಕೆ ಆಗಿದ್ದೆ. ಇದೀಗ ಮೇಯರ್ ಆಗಿದ್ದೇನೆ. ನಾನು ಕನಸು ಮನಸ್ಸಿನಲ್ಲೂ ಊಹಿಸಿದ್ದನ್ನು ನನ್ನ ತಂದೆ ಸಾಕಾರ ಮಾಡಿದ್ದಾರೆ. ತುಂಬಾ ಖುಷಿಯಾಗಿದೆ. ಎಲ್ಲರ ಜೊತೆಗೂಡಿ ಪಾಲಿಕೆಯ ಅಭಿವೃದ್ಧಿ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತೇನೆ'' ಎಂದು ಮಾಧ್ಯಮದವರಿಗೆ ನೂತನ ಮೇಯರ್ ತ್ರಿವೇಣಿ ತಿಳಿಸಿದರು.
ರಾಜ್ಯಸಭೆ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ನಾಮಪತ್ರ ವಾಪಸ್ ಪಡೆಯಲು ಉಮಾದೇವಿ ಅವರಿಗೆ ಸೂಚಿಸಿದರು. ಕಾಂಗ್ರೆಸ್ ಪಕ್ಷದ ಕುಬೇರ ಮತ್ತು ಉಮಾದೇವಿ ನಾಮಪತ್ರ ಹಿಂಪಡೆದಿದ್ದರಿಂದ ಡಿ. ತ್ರಿವೇಣಿ ಮತ್ತು ನಾಗರತ್ನ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಹಾಜರಿದ್ದ 44 ಜನ ಮತದಾನದ ಹಕ್ಕು ಪಡೆದ ಸದಸ್ಯರು, ಸಂಸದರು, ಶಾಸಕರು ಮತದಾನದಲ್ಲಿ ಪಾಲ್ಗೊಂಡರು. ತ್ರಿವೇಣಿಗೆ 28 ಮತ್ತು ನಾಗರತ್ನಗೆ ನಿರೀಕ್ಷೆಯಂತೆ 16 ಮತಗಳು ಬಂದವು. ತ್ರಿವೇಣಿ ಆಯ್ಕೆಯನ್ನು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಘೋಷಣೆ ಮಾಡಿದರು. ಪಾಲಿಕೆ ಆಯುಕ್ತ ರುದ್ರೇಶ್, ಎಡಿಸಿ ಅವರು ಇದ್ದರು.
ಇದನ್ನೂ ಓದಿ: ಮತ ಎಣಿಕೆಗೆ 2 ದಿನ ಬೇಕೆ ?: ನಟ ಉಪೇಂದ್ರ ಪ್ರಶ್ನೆ