ಚಿಕ್ಕಮಗಳೂರು | ತರೀಕೆರೆ ಶಾಸಕರ ಅಭಿನಂದನೆ ಕಾರ್ಯಕ್ರಮದಲ್ಲಿ ಗಲಾಟೆ, ಯುವಕನ ಹತ್ಯೆ
ಚಿಕ್ಕಮಗಳೂರು, ಜೂ.4: ನೂತನ ಶಾಸಕರ ಅಭಿನಂದನಾ ಕಾರ್ಯಕ್ರಮದ ವೇಳೆ ಉಂಟಾದ ಗಲಾಟೆಯಲ್ಲಿ ಓರ್ವ ಯುವಕನ ಬರ್ಬರ ಹತ್ಯೆಯಾಗಿರುವ ಘಟನೆ ತರೀಕೆರೆ ಪಟ್ಟಣದಲ್ಲಿ ಶನಿವಾರ ರಾತ್ರಿ 11:30ರ ಸುಮಾರಿಗೆ ನಡೆದಿದೆ.
ಮೃತರನ್ನು ವರುಣ್ (28) ಎಂದು ಗುರುತಿಸಲಾಗಿದೆ. ಕಬಾಬ್ ಮೂರ್ತಿ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ತರೀಕೆರೆ ಕಾಂಗ್ರೆಸ್ ಶಾಸಕ ಜಿ.ಎಚ್.ಶ್ರೀನಿವಾಸ್ ರಿಗೆ ಅವರ ಅಭಿಮಾನಿಗಳು ಶನಿವಾರ ತರೀಕೆರೆಯಲ್ಲಿ ಅಭಿನಂದನೆ ಸಮಾರಂಭವನ್ನು ಏರ್ಪಡಿಸಿದ್ದರು. ಶಾಸಕರಿಗೆ ಅಭಿನಂದನೆ ಮುಗಿದ ಬಳಿಕ ಆರ್ಕೆಸ್ಟ್ರಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹಾಡು ಬದಲಿಸುವ ವಿಚಾರದಲ್ಲಿ ವರುಣ್ ಮತ್ತು ಕಬಾಬ್ ಮೂರ್ತಿ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಕ್ಷುಲ್ಲಕ ವಿಚಾರದಲ್ಲಿ ಇವರಿಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ಉಂಟಾಗಿದೆ. ಆ ಬಳಿಕ ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆ ವರುಣ್ನ ಹೊಟ್ಟೆ ಹಾಗೂ ಪಕ್ಕೆಲುಬಿಗೆ ಆರೋಪಿ ಕಬಾಬ್ ಮೂರ್ತಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ವರುಣ್ ರನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಇದೇವೇಳೆ ಮಂಜು ಹಾಗೂ ಸಂಜು ಎಂಬವರಿಗೂ ಚೂರಿ ಇರಿತದಿಂದ ಗಾಯಗಳಾಗಿವೆ.
ಈ ಬಗ್ಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.