ಕಾಲೇಜು ಯುವತಿಯರ ಅಶ್ಲೀಲ ವೀಡಿಯೊ ಹರಿಬಿಟ್ಟ ಪ್ರಕರಣ: ತೀರ್ಥಹಳ್ಳಿ ಎಬಿವಿಪಿ ಮುಖಂಡನ ಬಂಧನ
ಶಿವಮೊಗ್ಗ: ಕಾಲೇಜು ಯುವತಿಯರ ಅಶ್ಲೀಲ ವೀಡಿಯೊ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಎಬಿವಿಪಿ ಮುಖಂಡನನ್ನು ರವಿವಾರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ ಅಶ್ಲೀಲ ವಿಡಿಯೋಗಳ ತುಣುಕುಗಳು ಹರಿದಾಡುತ್ತಿತ್ತು. ಆ ದೃಶ್ಯಗಳಲ್ಲಿ ಇದ್ದ ತೀರ್ಥಹಳ್ಳಿ ಎಬಿವಿಪಿ ಅಧ್ಯಕ್ಷ ಪ್ರತೀಕ್ ಗೌಡ, ಹೆಣ್ಣುಮಕ್ಕಳಿಗೆ ಆಮಿಷವೊಡ್ಡಿ ಅವರನ್ನು ಬಳಸಿಕೊಂಡು ಆ ಕೃತ್ಯಗಳ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಎನ್ಎಸ್ಯುಐ ಸಂಘಟನೆ ತೀರ್ಥಹಳ್ಳಿ ಡಿವೈಎಸ್ಪಿಯವರಿಗೆ ಮನವಿಯನ್ನು ಸಹ ಸಲ್ಲಿಸಿತ್ತು. ಅಲ್ಲದೇ ಆರೋಪಿಯ ವಿರುದ್ಧ ಸುಮೋಟೋ ಕೇಸ್ ದಾಖಲಿಸುವಂತೆ 'ನೈಜ ಹೋರಾಟಗಾರರ ವೇದಿಕೆ' ಶಿವಮೊಗ್ಗ ಎಸ್ಪಿಗೆ ಮನವಿ ಸಲ್ಲಿಸಿತ್ತು.
ಇದರ ಬೆನ್ನಲ್ಲೆ ಇದೀಗ ಶಿವಮೊಗ್ಗ ಪೊಲೀಸರು, ಆರೋಪಿಯನ್ನು ಬಂಧಿಸಿದ್ದು, ಆತನನ್ನ ಕೋರ್ಟ್ಗೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿಯ ನಗ್ನ ದೃಶ್ಯ ಹರಿಬಿಟ್ಟ ABVP ಮುಖಂಡನ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ: ನೈಜ ಹೋರಾಟಗಾರರ ವೇದಿಕೆ