ಪ್ರಾಚೀನ ಭಾರತದಲ್ಲಿ ವೈಚಾರಿಕತೆ
ಈ ಹೊತ್ತಿನ ಹೊತ್ತಿಗೆ
ಪುರೋಹಿತ ಶಾಹಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಅತ್ಯಂತ ಪ್ರಾಚೀನ ಚಿಂತಕ ಬುದ್ಧ. ಭೌತವಾದಿ ನೆಲೆಯಲ್ಲಿ ವೈಚಾರಿಕತೆಯನ್ನು ಬುದ್ಧ ಹಂಚಿದ. ಬುದ್ಧನ ಚಿಂತನೆಯನ್ನು ಮುಂದಿಟ್ಟುಕೊಂಡು ಡಾ. ಕೆ. ಪಿ. ಮಹಾಲಿಂಗು ಕಲ್ಕುಂದ ಅವರು ‘ಪ್ರಾಚೀನ ಭಾರತದಲ್ಲಿ ವೈಚಾರಿಕತೆ-ಭೌತವಾದ ಒಳನೋಟ’ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯ ಮೂಲಕ ಕಲ್ಕುಂದ ಅವರು ಭಾರತದ ಮೂಲ ನಿವಾಸಿಗಳ ಚರಿತ್ರೆಯನ್ನು ಬಿಚ್ಚಿಡುತ್ತಾರೆ. ಕ್ರಿ. ಪೂ. ಮತ್ತು ಆನಂತರದ ಭಾರತದ ಇತಿಹಾಸದಲ್ಲಿ ವೈಜ್ಞಾನಿಕ ವಿಚಾರಗಳ ಬೆಳವಣಿಗೆಗೆ ಬುದ್ಧನ ಬೌದ್ಧವಾದ ಮತ್ತು ಚಾರ್ವಾಕ, ಲೋಕಾಯತರ ಭೌತವಾದಗಳು ಪ್ರಮುಖವಾಗಿ ಕಾರಣವೆಂಬುದನ್ನು ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
ಕೃತಿಯಲ್ಲಿ ಒಟ್ಟು 13 ಅಧ್ಯಾಯಗಳಿವೆ. ಭಾರತದ ಇತಿಹಾಸ, ಭಾರತದಲ್ಲಿ ತತ್ವ ಚಿಂತನೆಯ ವಿಕಾಸ, ಭಾರತದಲ್ಲಿ ಜಾತಿ ಪದ್ಧತಿ, ಪ್ರಾಚೀನ ಕಾಲದ ವಿಡಂಬನಾತ್ಮಕ ಪದ್ಧತಿಗಳು, ಪ್ರಾಚೀನ ಭಾರತದಲ್ಲಿ ಭೌತವಾದದ ನೆಲೆಗಳು, ಪ್ರಾಚೀನ ಭಾರತದಲ್ಲಿ ವೈಚಾರಿಕ ಮತಗಳ ಉಗಮ, ಪ್ರಾಚೀನ ಭಾರತದಲ್ಲಿ ವೈಚಾರಿಕ ಕಾಲಘಟ್ಟ, ಲೋಕಾಯತ, ಚಾರ್ವಾಕ ದರ್ಶನ, ಪರಿವರ್ತನೆಯ ಪಥದಲ್ಲಿ ಚಾರ್ವಾಕರು, ಪ್ರಾಚೀನ ಬೌದ್ಧವಾದದ ವೈಚಾರಿಕತೆ, ಪ್ರಾಚೀನ ಬೌದ್ಧ ಕಾಲದಲ್ಲಿ ಧರ್ಮ ಮತ್ತು ಜ್ಞಾನ ಇತ್ಯಾದಿಗಳನ್ನು ಈ ಅಧ್ಯಾಯಗಳು ಒಳಗೊಂಡಿವೆ.
ಮುನ್ನುಡಿಯಲ್ಲಿ ಹೇಳುವಂತೆ ಈ ಕೃತಿಯು ಭಾರತದ ಮೂಲಧರ್ಮ ಮತ್ತು ರಾಷ್ಟ್ರ, ಧರ್ಮ ಮತ್ತು ಜಾತಿ, ಧರ್ಮ ಮತ್ತು ಜನ ಎಂಬ ಪ್ರಶ್ನೆಗಳನ್ನು ವಸ್ತು ನಿಷ್ಠವಾಗಿ ಚರ್ಚೆಗೆ ಎಡೆ ಮಾಡುತ್ತದೆ. ಆರ್ಯಧರ್ಮ ಹೇಗೆ ಈ ದೇಶವನ್ನು ಪರಕೀಯರ ದಾಳಿಗೆ ತಳ್ಳಿತು ಎನ್ನುವುದನ್ನು ಲೇಖಕರು ಅತ್ಯಂತ ಪರಿಣಾಮಕಾರಿಯಾಗಿ ಕೃತಿಯಲ್ಲಿ ನಿರೂಪಿಸುತ್ತಾರೆ. ಈ ಕೃತಿಯ ಮೂಲಕ ಅಕ್ಷರ ಬಲ್ಲವರೆಂದು ಸ್ವಘೋಷಣೆ ಮಾಡಿಕೊಂಡು ತಮ್ಮಿಷ್ಟದಂತೆ ಬರೆದ ಚರಿತ್ರೆಯನ್ನು ಪ್ರಶ್ನೆ ಮಾಡುವ ದಿಕ್ಕಿನಲ್ಲಿ ಸಾಗುತ್ತದೆ. ಇಡೀ ಕೃತಿಯ ಉದ್ದೇಶವೇ ಚರಿತ್ರೆಯನ್ನು ವುರು ವಿಮರ್ಶೆಗೆ ಒಳಪಡಿಸುವುದು.
ಚಳವಳಿ ಪ್ರಕಾಶನ, ಮೈಸೂರು ಜಿಲ್ಲೆ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 206. ಮುಖಬೆಲೆ 200 ರೂಪಾಯಿ. ಆಸಕ್ತರು 99725 26647 ದೂರವಾಣಿಯನ್ನು ಸಂಪರ್ಕಿಸಬಹುದು.