‘ಅಮುಲ್’ ಮಾದರಿಯಲ್ಲಿ ‘ನಂದಿನಿ’ಯೂ ಬೆಳಗಲಿ
ಡಾ. ಟಿ. ಶ್ರೀನಿವಾಸ ರೆಡ್ಡಿ
ನಿವೃತ್ತ ಅಪರ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದಸೇವಾ ಇಲಾಖೆ.
ಹಾಲಿನ ಕೊರತೆಯನ್ನು ನೀಗಿಸಲು ಡಾ. ವರ್ಗೀಸ್ ಕುರಿಯನ್ ರವರ ಪ್ರಯತ್ನ ಮತ್ತು ದೂರದೃಷ್ಟಿಯ ಫಲವಾಗಿ ‘ಕ್ಷೀರಕ್ರಾಂತಿ’ ಯೋಜನೆಗಳನ್ನು ದೇಶದಲ್ಲಿ ಜಾರಿಗೊಳಿಸಲಾಗಿದ್ದು, ಇವುಗಳ ಮೂಲಕ ಹಾಲಿನ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದೆ. 1991-92ರಲ್ಲಿ ದೇಶದಲ್ಲಿ ಒಟ್ಟು ಹಾಲಿನ ಉತ್ಪಾದನೆ 55 ಮಿ. ಟನ್‌ಗಳಿದ್ದು, 2021-22 ರಲ್ಲಿ 221 ಮಿ. ಟನ್‌ಗಳಷ್ಟಾಗಿರುತ್ತದೆ. ಕರ್ನಾಟಕದಲ್ಲಿಯೂ 1991-92ರಲ್ಲಿ ಹಾಲಿನ ಒಟ್ಟು ಉತ್ಪಾದನೆ 25 ಲಕ್ಷ ಟನ್‌ಗಳಿದ್ದು, 2019-20ರಲ್ಲಿ 90 ಲಕ್ಷ ಟನ್‌ಗಳಾಗಿರುತ್ತದೆ. ಕಳೆದ ಮೂರು ದಶಕಗಳಿಂದ ಹಾಲಿನ ಉತ್ಪಾದನೆ ಪ್ರತೀ ವರ್ಷ ಶೇ. 5 ರಿಂದ 8ರಷ್ಟು ಏರಿಕೆಯಾಗುತ್ತಿದೆ. 2003-04 ಮತ್ತು 2004-05ನೇ ಸಾಲಿನಲ್ಲಿ ತೀವ್ರ ಬರಗಾಲದಿಂದ ಮಾತ್ರ ಶೇ. 10ರಿಂದ 15ರಷ್ಟು ಇಳಿಕೆಯಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಇಳಿಕೆಯಾಗಿರುವುದಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳು ಇರುವುದಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನಂತೆ ಪ್ರತಿಯೊಬ್ಬ ವ್ಯಕ್ತಿಯ ದೈನಂದಿನ ಹಾಲಿನ ಅಗತ್ಯ 240 ಗ್ರಾಂಗಳಾಗಿರುತ್ತದೆ. ದೇಶದಲ್ಲಿ 1991-92ರಲ್ಲಿ ಪ್ರತೀ ವ್ಯಕ್ತಿಗೆ ದೈನಂದಿನ ಹಾಲಿನ ಲಭ್ಯತೆ 178 ಗ್ರಾಂ ಇದ್ದು, 2021-22ರಲ್ಲಿ ಲಭ್ಯತೆಯ ಪ್ರಮಾಣ 444 ಗ್ರಾಂ ಗಳಾಗಿರುತ್ತದೆ. ಪ್ರತೀ ವ್ಯಕ್ತಿ ಪ್ರತಿದಿನ ಇಷ್ಟು ಪ್ರಮಾಣದ ಹಾಲನ್ನು ಬಳಕೆ ಮಾಡುತ್ತಾರೆಯೇ ಎನ್ನುವುದು ಆರ್ಥಿಕ, ಸಾಮಾಜಿಕ ಕಾರಣಗಳೊಂದಿಗೆ ಹಾಲಿನ ಅಗತ್ಯತೆಯ ಬಗ್ಗೆ ಬಳಕೆದಾರರ ವೈಜ್ಞಾನಿಕ ಅರಿವಿನ ಮೇಲೆ ಅವಲಂಬಿಸಿದೆ. ಒಟ್ಟಾರೆಯಾಗಿ, ಆರೋಗ್ಯದ ದೃಷ್ಟಿಯಿಂದ ಅಗತ್ಯವಿರುವಷ್ಟು ಪ್ರಮಾಣದ ಹಾಲಿನ ಲಭ್ಯತೆ ರಾಷ್ಟ್ರ ಮತ್ತು ರಾಜ್ಯದಲ್ಲಿರುತ್ತದೆ. ಲಭ್ಯತೆಯ ಈ ಸುಸ್ಥಿರ ಪರಿಸ್ಥಿತಿಗೆ ಅನೇಕ ಪಶುಪಾಲಕರ ಅವಿರತ ಶ್ರಮ ಮತ್ತು ಪರ್ಯಾಯವಿಲ್ಲದೆ ಹೈನುಗಾರಿಕೆಯ ಮೇಲೆ ಅವಲಂಬಿತರಾಗಿರುವ ಅನಿವಾರ್ಯತೆಯೂ ಪ್ರಮುಖ ಕಾರಣಗಳಾಗಿರುತ್ತವೆ.
ಇತ್ತೀಚೆಗೆ ರಾಜ್ಯದಲ್ಲಿ ವರದಿಯಾಗಿರುವ ಹಾಲಿನ ಕೊರತೆಗೆ ಗ್ರಾಹಕರು ಮತ್ತು ಹೊಟೇಲ್‌ಗಳ ಆವಶ್ಯಕತೆಯ ಮೇಲೆಯೂ ಪರಿಣಾಮ ಬೀರಿದೆ ಎಂದೂ, ‘ನಂದಿನಿ’ಯನ್ನು ‘ಅಮುಲ್’ನೊಂದಿಗೆ ವಿಲೀನಗೊಳಿಸುವ ಮತ್ತು ‘ಅಮುಲ್’ ಮಾರಾಟ ಜಾಲವನ್ನು ಬೆಂಗಳೂರಿಗೆ ವಿಸ್ತರಿಸುವ ಬಗ್ಗೆ ಸುದ್ದಿಗಳು ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗಿದ್ದವು, ಈಗ ಎಲ್ಲವೂ ತಣ್ಣಗಾಗಿದೆ. ಹಾಲಿನ ಕೊರತೆ ನಿಜಕ್ಕೂ ಉತ್ಪಾದನೆಯ ಇಳಿಕೆಯಿಂದಾಗಿದೆಯೇ ಅಥವಾ ಕೆಎಮ್‌ಎಫ್‌ನಿಂದ (ಕರ್ನಾಟಕ ಹಾಲು ಮಹಾ ಮಂಡಲಿ, ಜಿಲ್ಲಾ ಹಾಲು ಒಕ್ಕೂಟಗಳು ಮತ್ತು ಗ್ರಾಮೀಣ ಮಟ್ಟದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಎಂದು ಒಟ್ಟಾಗಿ ಪರಿಗಣಿಸುವುದು) ಹಾಲಿನ ಸಂಗ್ರಹಣೆಯಲ್ಲಿ ಆಗಿರುವ ವಿಫಲತೆಯಿಂದ ಉಂಟಾಗಿದೆಯೇ ಎನ್ನುವ ಗಂಭೀರ ಪ್ರಶ್ನೆಯನ್ನು ಬದಿಗಿಟ್ಟು ರಾಜಕೀಯ ಪಕ್ಷಗಳು ‘ಅಮುಲ್’ ಪ್ರವೇಶದ ಪರ ಮತ್ತು ವಿರುದ್ಧವಾಗಿ ಚರ್ಚಿಸುತ್ತಿರುವುದು ಹಾಸ್ಯಾಸ್ಪದವಾಗಿತ್ತು.
2019-20ರ ಸಾಲಿನಲ್ಲಿ ರಾಜ್ಯದ ಒಟ್ಟು ಹಾಲಿನ ಉತ್ಪಾದನೆ ಅಂದಾಜು 90 ಲಕ್ಷ ಟನ್‌ಗಳಿದ್ದು, ಈ ಸಾಲಿನಲ್ಲಿಯೂ ಅಷ್ಟೇ ಪ್ರಮಾಣವನ್ನು ಪರಿಗಣಿಸಿದರೂ, ಈ ಪೈಕಿ ಕೆಎಮ್‌ಎಫ್ ಮೂಲಕ ವಾರ್ಷಿಕ 28-30 ಲಕ್ಷ ಟನ್ ಹಾಲನ್ನು ಮಾತ್ರ ಅಂದರೆ (ಒಟ್ಟು ಉತ್ಪಾದನೆಯ ಅಂದಾಜು ಶೇ. 30ರಷ್ಟು ಮಾತ್ರ) ಸಂಗ್ರಹಿಸಲಾಗುತ್ತಿದೆ. ಖಾಸಗಿ ಸಂಸ್ಥೆಗಳು ಅಂದಾಜು ಶೇ. 5ರಿಂದ 10ರಷ್ಟು ಹಾಲನ್ನು ಸಂಗ್ರಹಿಸುತ್ತಿದ್ದು ಒಟ್ಟು ಉತ್ಪಾದನೆಯ ಶೇ. 60-65 ಹಾಲು ಸ್ಥಳೀಯ ಬಳಕೆದಾರರಿಗೆ, ಸ್ವಯಂ ಬಳಕೆಗೆ ಮತ್ತು ವ್ಯವಸ್ಥಿತವಲ್ಲದ ಖಾಸಗಿ ಮಾರಾಟ ಜಾಲದ ಮೂಲಕ ವಿನಿಯೋಗವಾಗುತ್ತಿದೆ. ರಾಜ್ಯದಲ್ಲಿ ಕಳೆದ ತಿಂಗಳುಗಳಲ್ಲಿ ಕೆಎಮ್‌ಎಫ್ ಮೂಲಕ ಸಂಗ್ರಹಿಸಲಾದ ಒಟ್ಟು ಹಾಲಿನ ಪ್ರಮಾಣವನ್ನು ಗಮನಿಸಿದಲ್ಲಿ (ಡಿಸೆಂಬರ್-2,358 ಲಕ್ಷ ಕಿ.ಗ್ರಾಂ, ಜನವರಿ-2,352 ಲಕ್ಷ ಕಿ.ಗ್ರಾಂ, ಫೆಬ್ರವರಿ-2,029 ಲಕ್ಷ ಕಿ.ಗ್ರಾಂ, ಮಾರ್ಚ್-2,249 ಲಕ್ಷ ಕಿ.ಗ್ರಾಂ) ಸಂಗ್ರಹಣೆಯಲ್ಲಿ ಫೆಬ್ರವರಿ ತಿಂಗಳು ಹೊರತು ಪಡಿಸಿ, ಬೇರೆ ತಿಂಗಳುಗಳಲ್ಲಿ ಗಣನೀಯ ವ್ಯತ್ಯಾಸ ಆಗಿರುವುದಿಲ್ಲ. ಕೆಎಮ್‌ಎಫ್ ಮೂಲಕ ಸಂಗ್ರಹಿಸದೆ ಇರುವ ಒಟ್ಟು ಉತ್ಪಾದನೆಯ ಇನ್ನುಳಿದ ಶೇ. 70 ಹಾಲನ್ನು ಸಂಗ್ರಹಿಸಲು ಪ್ರಯತ್ನಿಸಿದಲ್ಲಿ ಹಾಲಿನ ಕೊರತೆ ಉಂಟಾಗಲು ಸಾಧ್ಯವೇ ಇರುವುದಿಲ್ಲ. ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನದ ಬೆಲೆ ಏರಿಕೆ-ಇಳಿಕೆ ಸಾಮಾನ್ಯವಾಗಿ ಅದರ ಲಭ್ಯತೆ ಹಾಗೂ ಬೇಡಿಕೆಯನ್ನು ಅವಲಂಬಿಸಿರುತ್ತದೆ. ಅದೇ ರೀತಿ, ಉತ್ಪನ್ನದ ಅಗತ್ಯತೆಯ ತೀವ್ರತೆಗೆ ಅನುಸಾರವಾಗಿ ಸರಕಾರಗಳು ರೂಪಿಸುವ ಉತ್ಪಾದನೆ ಮತ್ತು ಲಭ್ಯತೆಯ ನಿಯಂತ್ರಣದ ನಿಯಮಗಳು ಅಥವಾ ಮಾರ್ಗಸೂಚಿಗಳು ಸಹ ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದಕ್ಕೆ ಉದಾಹರಣೆ ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ಮಾರಾಟ ಬೆಲೆ ಹೆಚ್ಚಿಸದೆ, ಗ್ರಾಹಕರಿಗೆ ಹೊರೆಯಾಗುತ್ತದೆ ಎನ್ನುವ ‘ಗ್ರಾಹಕರ ಹಿತದೃಷ್ಟಿ’ಯಿಂದ ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುತ್ತಿರುವುದು ಗಮನಾರ್ಹವಾಗಿದೆ.
ಸರಕಾರವು ಗ್ರಾಹಕರ ಹಿತಾಸಕ್ತಿಯಿಂದ ಉತ್ಪಾದಕರಿಗೆ ಪ್ರತೀ ಲೀಟರ್ ಹಾಲಿಗೆ ನೀಡುತ್ತಿರುವ ರೂ. 5 ಪ್ರೋತ್ಸಾಹಧನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹಾಲನ್ನು ನೀಡಲು ಸಹಕಾರಿಯಾಗಿದ್ದು, ಉತ್ಪಾದಕರಿಗೆ ನೀಡಲಾಗುತ್ತಿರುವ ‘ಪ್ರೋತ್ಸಾಹಧನ’ ಪರೋಕ್ಷವಾಗಿ ಗ್ರಾಹಕರಿಗೆ ನೀಡಲಾಗುತ್ತಿರುವ ‘ಸಹಾಯಧನ’ವಾಗಿರುತ್ತದೆ. ಆರ್ಥಿಕವಾಗಿ ಸಶಕ್ತ ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ಹಾಲನ್ನು ಪೂರೈಸುವ ಪರಿಪಾಠವನ್ನು ಬಿಟ್ಟು, ಆರ್ಥಿಕವಾಗಿ ಹಿಂದುಳಿದ ಗ್ರಾಹಕರಿಗೆ ಮಾತ್ರ ಸಹಾಯಧನ ನೀಡುವ ಪದ್ಧತಿ ತಂದಲ್ಲಿ ಹಾಲಿಗೆ ಪ್ರೋತ್ಸಾಹಧನ ನೀಡಲು ವಾರ್ಷಿಕವಾಗಿ ಅಗತ್ಯವಿರುವ ರೂ. 1,200-1,300 ಕೋಟಿಗಳ ಅನುದಾನದ ಹೊರೆ ಸರಕಾರಕ್ಕೆ ಕಡಿಮೆಯಾಗಲಿದೆ. (ಕಳೆದ ಕೆಲವು ತಿಂಗಳಲ್ಲಿ ಹಾಲಿನ ಪ್ರೋತ್ಸಾಹಧನ ನೀಡದೆ ಇರುವುದನ್ನು ಇಲ್ಲಿ ಸ್ಮರಿಸಬಹುದು) ಕಡಿಮೆ ಬೆಲೆಯಲ್ಲಿ ಈ ಹಾಲನ್ನು ಕೊಂಡು ಹೆಚ್ಚಾಗಿ ಬಳಸುವ ಹೊಟೇಲ್‌ಗಳಿಗೂ ಇದು ಅನ್ವಯಿಸುತ್ತದೆ. ಗ್ರಾಹಕರು ಖಾಸಗಿಯವರಿಂದ ಮತ್ತು ಈಗಿನ ದಿನಗಳಲ್ಲಿ ಅಮುಲ್‌ನಿಂದಲೂ (ಅಮುಲ್ ಮಾರಾಟ ಬೆಲೆ ನಂದಿನಿಗಿಂತ ಪ್ರತೀ ಲೀಟರ್ ಗೆ ರೂ. 15 ಹೆಚ್ಚಿಗೆ ಇದೆ) ಹೆಚ್ಚಿನ ಬೆಲೆಗೆ ಹಾಲು ಮತ್ತು ಇತರ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಿದ್ದರೂ ಕೆಎಮ್‌ಎಫ್ ಮಾತ್ರ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಮಾಡಿಲ್ಲ.
ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನದ ಕೊರತೆ ಇದ್ದಾಗ ಅದರ ಮಾರಾಟ ಬೆಲೆ ಹೆಚ್ಚಾಗಿ ಉತ್ಪಾದಕರಿಗೆ ಅದರ ಲಾಭವಾಗುವುದರಲ್ಲಿ ಸಂಶಯವಿಲ್ಲ. ಕೆಎಮ್‌ಎಫ್ ಸದ್ಯದ ಪರಿಸ್ಥಿತಿಯನ್ನು ಬಳಸಿಕೊಂಡು ನಷ್ಟದಲ್ಲಿರುವ ಉತ್ಪಾದಕರಿಂದ ಹೆಚ್ಚಿನ ಬೆಲೆ ನೀಡಿ ಹಾಲನ್ನು ಸಂಗ್ರಹಿಸದಿರುವುದೂ ಹಾಲಿನ ಲಭ್ಯತೆಯಲ್ಲಿನ ಕೊರತೆಗೆ ಪ್ರಮುಖ ಕಾರಣವಾಗಿರುತ್ತದೆ. ಇದರೊಂದಿಗೆ, ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಉತ್ಪಾದಕರಿಂದ ನೇರವಾಗಿ ಕೊಳ್ಳುವ ಬೆಲೆಗಿಂತ ಕೆಎಮ್‌ಎಫ್ ಹಾಲಿನ ಮಾರಾಟ ಬೆಲೆಯೇ ಕಡಿಮೆ ಇರುವುದರಿಂದ, ಖಾಸಗಿ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ನಂದಿನಿ ಹಾಲನ್ನು ಖರೀದಿಸಿ, ತಮ್ಮ ಬ್ರ್ಯಾಂಡ್‌ಗಳ ಮೂಲಕ ಹೆಚ್ಚಿನ ಬೆಲೆಗೆ ಮಾರುತ್ತಿರುವ ಉಹಾಪೋಹಗಳಲ್ಲಿ ಸಹ ಸತ್ಯಾಂಶವಿರಬಹುದು. ಬೆಂಗಳೂರು ನಗರದಲ್ಲಿ ಉಂಟಾಗಿರುವ ಕೆಎಮ್‌ಎಫ್ ಹಾಲಿನ ಕೊರತೆಗೆ ಇದೂ ಒಂದು ಮುಖ್ಯ ಕಾರಣವಾಗಿರಬಹುದು. ಕೆಎಮ್‌ಎಫ್‌ನಿಂದ ಸಂಗ್ರಹಿಸುವ ಶೇ. 25ರಷ್ಟು ಹಾಲು ಬೆಂಗಳೂರಿನಲ್ಲಿಯೇ ಮಾರಾಟವಾಗುವುದು. ಹಾಗಾಗಿ ಖಾಸಗಿಯವರಿಗೆ ಒಂದೇ ಕಡೆ ಕಡಿಮೆ ಬೆಲೆಯ ನಂದಿನಿ ಹಾಲು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದ್ದು, ಅದೇ ಹಾಲನ್ನು ಇಲ್ಲಿಯೇ ಮಾರಾಟಕ್ಕೂ ಅವಕಾಶವಿರುವುದು ಸಹ ಈ ರೀತಿಯ ವ್ಯವಹಾರಕ್ಕೆ ವರದಾನವಾಗಿರಬಹುದು. ಕೆಎಮ್‌ಎಫ್ ಉತ್ಪಾದಕರಿಗೆ ನೀಡುತ್ತಿರುವ ಸಂಗ್ರಹಣಾ ದರಕ್ಕಿಂತ ಪ್ರತೀ ಲೀಟರ್‌ಗೆ ರೂ. 6-8ಗಳನ್ನು ಹೆಚ್ಚುವರಿಯನ್ನು ಖಾಸಗಿ ಸಂಸ್ಥೆಗಳು ನೀಡುತ್ತಿರುವುದು ಕೆಎಮ್‌ಎಫ್ ಹಾಲಿನ ಸಂಗ್ರಹಣೆ ಕಡಿಮೆಯಾಗಲು ಇನ್ನೊಂದು ಕಾರಣವಾಗಿರುತ್ತದೆ. ಇದರಿಂದಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಸಂಘಗಳಲ್ಲಿ ಸಂಗ್ರಹವಾದ ಹಾಲಿನ ಸ್ವಲ್ಪಭಾಗ ಅನಧಿಕೃತವಾಗಿ ಇಂತಹ ಖಾಸಗಿ ಸಂಸ್ಥೆಗಳಿಗೆ ಮಾರಾಟವಾಗುತ್ತಿರುವ ಸುದ್ದಿಗಳೂ ಕೇಳಿ ಬರುತ್ತಿವೆ. ಹಾಲಿನ ಸಂಗ್ರಹಣೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೇ ಇಳಿಕೆ ಕಂಡುಬಂದಿರುವುದು ಮತ್ತು ಇತ್ತೀಚೆಗೆ ‘ಮುಮಾರ್ಕ್’ ಮುಂತಾದ ಖಾಸಗಿ ಸಂಸ್ಥೆಗಳು ಇದೇ ಜಿಲ್ಲೆಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವುದೂ ಗಮನಾರ್ಹ. ಕೆಎಮ್‌ಎಫ್‌ನಿಂದ ಹಾಲು ಸಂಗ್ರಹಣೆಯಾಗದಿರಲು ಇದೂ ಕಾರಣವಾಗಿರುತ್ತದೆ. ಪ್ರತೀ ಲೀಟರ್ ಹಾಲನ್ನು ರೂ. 28-29ರಂತೆ ಕೊಂಡು, ಶೇ. 30ರ ನಿರ್ವಹಣಾ ವೆಚ್ಚದೊಂದಿಗೆ, ಪ್ರತೀ ಲೀಟರ್ ಹಾಲನ್ನು ರೂ. 39ಕ್ಕೆ ಮಾರಾಟ ಮಾಡುತ್ತಿರುವುದು ಅತಿ ದುಬಾರಿಯಾಗಿದ್ದು, ಕೆಎಮ್‌ಎಫ್ ಈ ನಿರ್ವಹಣಾ ವೆಚ್ಚ ತಗ್ಗಿಸುವ ಬಗ್ಗೆ ಸಹ ಗಂಭೀರವಾಗಿ ಪರಿಶೀಲಿಸಬೇಕಾಗಿದೆ. ಇದೇ ರೀತಿ ಅನವಶ್ಯಕವಾಗಿ ಆಗುತ್ತಿರುವ ಕೆಲವು ಹೆಚ್ಚುವರಿ ವೆಚ್ಚಗಳನ್ನು ಕೆಎಮ್‌ಎಫ್ ನಿಯಂತ್ರಿಸಬೇಕಿದ್ದು, ಹಾಲನ್ನು ಪುಡಿಯಾಗಿ ಪರಿವರ್ತಿಸುವುದೂ ಇವುಗಳಲ್ಲಿ ಒಂದಾಗಿದೆ. ಪ್ರತಿದಿನ ಮಂಡಳಿಯಿಂದ ಸಂಗ್ರಹಿಸುವ ಹಾಲಿನಲ್ಲಿ ಶೇ. 10ರಷ್ಟನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಪ್ರತೀ ಲೀ. ಹಾಲಿಗೆ ರೂ. 2-3ಗಳ ನಷ್ಟವಾಗುತ್ತಿದ್ದು ಇದರಿಂದ ಸಂಸ್ಥೆಗೆ ವಾರ್ಷಿಕ ಸುಮಾರು ರೂ. 90 ಕೋಟಿಗಳ ನಷ್ಟವಾಗುತ್ತಿದೆ. ಈ ಮಟ್ಟದ ನಷ್ಟದೊಂದಿಗೆ ಹಾಲನ್ನು ಪುಡಿಯಾಗಿ ಪರಿವರ್ತಿಸುವ ಅಗತ್ಯವಾದರೂ ಏನಿದೆ? ಹಾಲಿನ ಪುಡಿಯ ಹೆಚ್ಚಿನ ಭಾಗ ಸರಕಾರದ ಕ್ಷೀರಭಾಗ್ಯ ಯೋಜನೆಯ ಮೂಲಕ ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ. ಹಾಲಿನ ಸಂಸ್ಕರಣೆಯ ವ್ಯವಸ್ಥೆಯನ್ನು ವಿಕೇಂದ್ರೀಕರಿಸಿ, ತಾಲೂಕು ಮಟ್ಟದಲ್ಲಿ ಪಾಶ್ಚರೀಕರಿಸಿದ ಹಾಲನ್ನು ನೇರವಾಗಿ ಶಾಲಾ ಮಕ್ಕಳಿಗೆ ನೀಡಿದಲ್ಲಿ ಈ ನಷ್ಟವನ್ನು ತಪ್ಪಿಸಬಹುದಾಗಿದೆ. ತಾಲೂಕು ಮಟ್ಟದಲ್ಲಿ ಅಗತ್ಯ ಸೌಲಭ್ಯಗಳನ್ನು ಸೃಷ್ಟಿಸಲು ಅಗತ್ಯವಿರುವ ಸಂಪನ್ಮೂಲವನ್ನು ಈ ಆವರ್ತಿತ ನಷ್ಟವನ್ನು ತಪ್ಪಿಸುವ ಮೂಲಕ ಸರಿದೂಗಿಸಬಹುದಾಗಿದೆ. ಹಾಲು ಮಾರಾಟ ಬೆಲೆ ನಿಗದಿ ಮಾಡುವಲ್ಲಿ ಕೆಎಮ್‌ಎಫ್‌ಗೆ ಸಂಪೂರ್ಣ ಅಧಿಕಾರವಿದ್ದರೂ ಸರಕಾರ ಯಾವುದೇ ಆದೇಶ ನೀಡದೆ ಮೌಖಿಕ ಒಪ್ಪಿಗೆ ಮಾತ್ರ ನೀಡುವುದನ್ನೇ ಕೆಎಮ್‌ಎಫ್ ‘ಸರಕಾರದ ಸಹಮತದೊಂದಿಗೆ’ ಎಂದು ಬೆಲೆ ನಿಗದಿ ಆದೇಶ ನೀಡುವುದು ವ್ಯವಸ್ಥೆಯ ಗಹನತೆಗೆ ನಿದರ್ಶನವಾಗಿದೆ. ಲಭ್ಯವಿರುವ ಹಾಲಿನ ಉತ್ಪಾದನೆಯನ್ನು ಸಮರ್ಪಕವಾಗಿ ಬಳಸದೆ, ಉತ್ಪಾದನೆಗೆ ಕನಿಷ್ಠ ಬೆಲೆ ನೀಡಲೂ ಆಗದೆ ಇರುವ ಪರಿಸ್ಥಿತಿಯಲ್ಲೂ ಪಶುಪಾಲಕರಿಗೆ ಇನ್ನೂ ಹೆಚ್ಚಿನ ಹಾಲಿನ ಉತ್ಪಾದನೆಗೆ ಪ್ರೇರೇಪಿಸುವ ಬಗ್ಗೆ ಗಂಭೀರವಾಗಿ ಅವಲೋಕಿಸಬೇಕಿರುತ್ತದೆ. ಪಶುಪಾಲಕರು ಹೆಚ್ಚಿನ ಹಾಲನ್ನು ಉತ್ಪಾದಿಸಿದಷ್ಟೂ ಹೆಚ್ಚಿನ ನಷ್ಟಕ್ಕೆ ಒಳಗಾಗುವುದನ್ನು ಗಮನದಲ್ಲಿಟ್ಟುಕೊಂಡು ಸರಕಾರ ತನ್ನ ನೀತಿಯನ್ನು ನಿರೂಪಿಸಬೇಕಿರುತ್ತದೆ.
ಒಟ್ಟಾರೆಯಾಗಿ, ಉತ್ಪಾದಕರು ಉತ್ಪಾದನಾ ವೆಚ್ಚ ದೊರೆಯದೆ ನಷ್ಟದಲ್ಲಿದ್ದರೂ, ಕೆಎಮ್‌ಎಫ್ ಲಭ್ಯವಿರುವ ಹೆಚ್ಚಿನ ಹಾಲನ್ನು ಸಂಗ್ರಹಿಸಲು ಸಾಧ್ಯವಾಗದೇ ಇರುವುದು, ಸದ್ಯ ಉಂಟಾಗಿರುವ ಕೊರತೆಯ ಪರಿಸ್ಥಿತಿಗೆ ಕಾರಣವಾಗಿರುತ್ತದೆ. ಈ ಪರಿಸ್ಥಿತಿಯ ಲಾಭ ಪಡೆದು ‘ಅಮುಲ್’ ನಂತಹ ಹೊರ ರಾಜ್ಯಗಳ ಸಹಕಾರ ಸಂಸ್ಥೆಗಳು, ಮುಮಾರ್ಕ್, ಹೆರಿಟೇಜ್‌ನಂತಹ ಖಾಸಗಿ ಸಂಸ್ಥೆಗಳು ಹೆಚ್ಚಿನ ಬೆಲೆ ನೀಡಿ ಉತ್ಪಾದಕರಿಂದ ಹಾಲನ್ನು ಸಂಗ್ರಹಿಸಲು ವ್ಯವಸ್ಥಿತವಾಗಿ ಕಾರ್ಯೋನ್ಮುಖವಾದಲ್ಲಿ ಕೆಎಮ್‌ಎಫ್ ಸ್ಥಗಿತಗೊಳ್ಳುವ ಪರಿಸ್ಥಿತಿ ಬಂದರೂ ಆಶ್ಚರ್ಯ ಏನೂ ಇಲ್ಲ. ಹಾಗಾಗಿ ಬೆಲೆ ನಿಗದಿ ಮಾಡುವ ಸಂಪೂರ್ಣ ಅಧಿಕಾರ ಹೊಂದಿರುವ ಕೆಎಮ್‌ಎಫ್ ಉತ್ಪಾದನಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ತಾನೇ ಮಾರಾಟ ಬೆಲೆ ಮತ್ತು ಸಂಗ್ರಹಣಾ ಬೆಲೆಯನ್ನು ನಿಗದಿಪಡಿಸುವ ಇಚ್ಛಾಶಕ್ತಿ ತೋರಿದಲ್ಲಿ ಕೃತಕವಾಗಿ ಸೃಷ್ಟಿಸಲಾಗುತ್ತಿರುವ ಪರಿಸ್ಥಿತಿಯಿಂದಾಗಿ ಉಂಟಾಗಿರುವ ಹಾಲಿನ ಕೊರತೆಯಿಂದ ಹೊರಬರಲು ಸಾಧ್ಯವಾಗಲಿದೆ. ರಾಜ್ಯದಲ್ಲಿ ಲಭ್ಯವಿರುವ ಹೆಚ್ಚಿನ ಪ್ರಮಾಣದ ಹಾಲನ್ನು ಸಂಗ್ರಹಿಸಿ ‘ಅಮುಲ್’ ಮಾದರಿಯಲ್ಲಿ ‘ನಂದಿನಿ’ಯೂ ಇತರ ರಾಜ್ಯಗಳ ಮಾರುಕಟ್ಟೆ ಪ್ರವೇಶಿಸಲು ಸಹಕಾರಿಯಾಗುವ ಯೋಜನೆಗಳನ್ನು ರೂಪಿಸಬೇಕಾಗಿದೆ. ಕಡಿಮೆ ಬೆಲೆಯಲ್ಲಿ ಹಾಲು ಉತ್ಪಾದಕರಿಂದ ಹಾಲನ್ನು ಸಂಗ್ರಹಣೆ ಮಾಡುವ ಮೂಲಕ ಹಾಲು ಉತ್ಪಾದಕರನ್ನು ಪರೋಕ್ಷವಾಗಿ ಶೋಷಣೆ ಮಾಡುತ್ತಿರುವ ಕರ್ನಾಟಕ ಹಾಲು ಮಹಾ ಮಂಡಳಿಯ ವೈಫಲ್ಯಗಳನ್ನು ‘ನಂದಿನಿ’ಯ ಭಾವೋದ್ವೇಗದ ಸ್ಥಳೀಯ ಅಸ್ಮಿತೆಯ ಮೂಲಕ ಮುಚ್ಚಿಹಾಕುವುದು ಎಷ್ಟು ಸೂಕ್ತ?