ಜಾತಿವಾರು ಮಹಿಳಾ ಮೀಸಲಾತಿಗೆ ಒತ್ತಾಯಿಸೋಣ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಉದ್ದೇಶದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಮಂಡಿಸಿದೆ.
ಬಹುಶಃ ನಮ್ಮ ರಾಜಕೀಯ ಪಕ್ಷಗಳಲ್ಲಿ ಒಮ್ಮತದ ಕೊರತೆಯಿಂದ ಕಳೆದ 27 ವರ್ಷಗಳಿಂದ ಬಾಕಿಯಿದ್ದ ಈ ಮಸೂದೆಯನ್ನು ನೂತನ ಸಂಸತ್ ಭವನದಲ್ಲಿ ಮಂಡನೆಯಾಗಿರುವುದೇ ಒಂದು ವಿಶೇಷ ಸುದ್ದಿ.
ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳಾಗಿವೆ. ವಾಸ್ತವವಾಗಿ ಭಾರತಕ್ಕೆ ಬಂದ ಸ್ವಾತಂತ್ರ್ಯವಲ್ಲ ಬದಲಾಗಿ ಇದು ಭಾರತ ದೇಶಕ್ಕೆ ಸಾವಿರಾರು ವರ್ಷಗಳ ಹಿಂದೆ ಬಂದ ಪರದೇಶಿ ಆರ್ಯರ ಪಾಲಿಗೆ ಬಂದ ಸ್ವಾತಂತ್ರ್ಯವಾಗಿದೆ. ಏಕೆಂದರೆ 1947ರ ಆಗಸ್ಟ್ 14ರ ನಡುರಾತ್ರಿ ಇಂಡಿಯಾದ ಬಹುಜನ ಮೂಲ ನಿವಾಸಿಗಳೆಲ್ಲರೂ ಮಲಗಿದ್ದ ಹೊತ್ತು ಗಾಂಧಿ, ನೆಹರೂ ನೇತೃತ್ವದಲ್ಲಿ ಬ್ರಾಹ್ಮಣ-ಬನಿಯಾಗಳ ಆಯ್ದ ದಶಕಗಳ ಸ್ವಾತಂತ್ರ್ಯದ ಬುಲ್ಡೋಜರ್, ಎಚ್ಚರ ತಪ್ಪಿ ಮಲಗಿರುವ ಬಹುಜನ ಮೂಲನಿವಾಸಿಗಳ(ದಲಿತ, ಹಿಂದುಳಿದ ಜಾತಿಗಳ, ಮುಸ್ಲಿಮರ, ಸಿಖ್ಖರ, ಕ್ರೈಸ್ತರ...) ಮೇಲೆ ಹಾದು ಹೋಗಿದೆ. ಜಗತ್ತೇ ಕಂಡರಿಯದ ಈ ದುರಾಕ್ರಮಣವನ್ನು ಸುವರ್ಣ ಮಹೋತ್ಸವವಾಗಿ ಆಚರಿಸಿದ್ದೂ ಆಯಿತು. ಇದೇ ವೇಳೆಗೆ ತಾವು ಪರದೇಶಿಗಳಲ್ಲವೆಂದು ಎಲ್ಲರನ್ನು ನಂಬಿಸಿರುವ ಆರ್ಯರಿಗೆ, ಭಾರತ ದೇಶದಲ್ಲಿ ಮಾತ್ರ ಅತ್ಯುತ್ತಮ ಪ್ರಜಾಪ್ರಭುತ್ವ ಜೀವಂತವಾಗಿದೆ ಎಂದು ಇಡೀ ಜಗತ್ತನ್ನೇ ಮೋಸ ಮಾಡಲು ಹೊರಟಿರುವುದು ಇಲ್ಲಿನ ಬಹುಜನರಿಗೆ ಅರ್ಥವಾಗಲೇ ಇಲ್ಲ.
ಶೇ.15ಕ್ಕಿಂತಲೂ ಕಡಿಮೆ ಇರುವ ಈ ಪರದೇಶಿ ಆರ್ಯರಿಗೆ ಇಷ್ಟು ದೊಡ್ಡ ಭೂಭಾಗವನ್ನು ಯಾವುದೇ ಅಡೆತಡೆ ಇಲ್ಲದೆ ಆಳುವಂತಹ ಅವಕಾಶವು ಎಂದೂ ದೊರಕಿರಲಿಲ್ಲ. ಆದ್ದರಿಂದ ಅವರಿಗೆ ಅಮಿತವಾದ ಆನಂದವಾಗುತ್ತಿದೆ. ಈ ನಾಡಿನ ಮೂಲ ನಿವಾಸಿಗಳಾದ ದಲಿತರು (ಶೇ. 20) ಆದಿವಾಸಿಗಳು(ಶೇ. 10), ಹಿಂದುಳಿದ ಜಾತಿಗಳು(ಶೇ. 35), ಮುಸ್ಲಿಮರು(ಶೇ. 15), ಕ್ರೈಸ್ತರು(ಶೇ. 2.5) ಮತ್ತು ಸಿಖ್ಖರು (ಶೇ. 2) ಆರ್ಯರ ಸ್ವಾತಂತ್ರ್ಯ ದರ್ಬಾರಿನಲ್ಲಿ ಯಾವುದೇ ಪಾತ್ರವಹಿಸಿಲ್ಲ. ಬಹುಜನ ಮೂಲ ನಿವಾಸಿಗಳ ನಾಡಿನಲ್ಲಿ ಅವರನ್ನೇ ಹಿಂದಕ್ಕೆ ತಳ್ಳಿ ಈ ಆರ್ಯರು(ಬ್ರಾಹ್ಮಣ, ಬನಿಯಾ) ಮುಂದೆ ಸಾಗುತ್ತಿದ್ದಾರೆ. ನಮ್ಮ ನೆಲವನ್ನು ನುಂಗಿ ನೀರು ಕುಡಿಯುತ್ತಿರುವ ಪರದೇಶಿ ಆರ್ಯರ ವಂಚನೆ ಇದುವರೆಗೂ ಅರ್ಥೈಸಿಕೊಂಡಿಲ್ಲ ಇಲ್ಲಿನ ಬಹುಜನರು.
ಒಂದೇ ತಾಯಿಯ ಮಕ್ಕಳಾದ ಬಹುಜನ ಸಮಾಜದ ದಲಿತರು, ಹಿಂದುಳಿದ ಜಾತಿಯವರು ಮತ್ತು ಮುಸಲ್ಮಾನರನ್ನು ಒಡೆದರು, ಬಾಬರಿ ಮಸೀದಿಯನ್ನು ಕೆಡವಿ ಹಾಕಿ ಕೋಮು ದಳ್ಳುರಿ ಎಬ್ಬಿಸಿ, ಬಹುಜನ ಸಮಾಜವನ್ನು ಅದಕ್ಕೆ ಬಲಿ ಕೊಟ್ಟರು. ಹಿಂದುಳಿದ ಜಾತಿಯವರಿಗೆ ಮಂಡಲ ಆಯೋಗವನ್ನು ಜಾರಿಗೊಳಿಸಿದಾಗ ಆತ್ಮಾಹುತಿಯಂತಹ ಸುಳ್ಳು ಪ್ರಕರಣಗಳನ್ನು ಸೃಷ್ಟಿಸಿದರು. ಬಂಡಿಗೇರಿಯಲ್ಲಿ ದಲಿತರಿಗೆ ಮಲ ತಿನ್ನಿಸಿದರು. ತೂತುಕುಡಿಯಲ್ಲಿ ದಲಿತರಿಗೆ ಮೂತ್ರ ಕುಡಿಸಿದರು. ಕಂಬಾಲಪಲ್ಲಿಯಲ್ಲಿ ದಲಿತರ ನರಹತ್ಯೆ ಮಾಡಿದರು. ದೇವಸ್ಥಾನ ಹೊಕ್ಕ ದಲಿತರ ತಲೆ ಕಡಿದರು. ಅಮಾಯಕ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿದರು. ಕೂಲಿ ಜಾಸ್ತಿ ಕೇಳಿದ ದಲಿತರನ್ನು ಜೀವಂತ ಸುಟ್ಟರು...!
ಅನೇಕ ದೇಶಗಳನ್ನು ಪರಕೀಯರು ಆಳಿದ್ದಾರೆ, ಈಗಲೂ ಆಳುತ್ತಿದ್ದಾರೆ. ಆದರೆ ಇಲ್ಲಿನ ಆರ್ಯರಷ್ಟು ಘಾತುಕರು, ಕ್ರೂರಿಗಳು ಯಾವ ದೇಶದಲ್ಲೂ ಇಲ್ಲ. ಆದ್ದರಿಂದಲೇ ಭಾರತದ ದಾರಿದ್ರ್ಯ ದಿನೇ ದಿನೇ ಹೆಚ್ಚುತ್ತಿದೆ ಮತ್ತು ಬಹುಸಂಖ್ಯಾತ ಮೂಲ ನಿವಾಸಿಗಳ ಬವಣೆಯೂ ಹೆಚ್ಚುತ್ತಿದೆ.
ಈ ಎಲ್ಲಾ ವೈಪರೀತ್ಯಗಳ ನಡುವೆ ಬ್ರಾಹ್ಮಣ ಬನಿಯಾಗಳ ಸುಳ್ಳು ಪ್ರಚಾರದಿಂದಾಗಿ ತಮಗೆ ಅರಿವಿಲ್ಲದ ಹಾಗೆ ಗುಲಾಮರಾಗುತ್ತಿರುವ ಬಹುಜನ ಮೂಲ ನಿವಾಸಿಗಳೆಲ್ಲರೂ ತಮ್ಮ ತಮ್ಮ ಸಂಸ್ಕೃತಿ, ಇತಿಹಾಸ, ಹಕ್ಕು ಮತ್ತು ಅಧಿಕಾರ ಎಲ್ಲವನ್ನೂ ಕಳೆದುಕೊಂಡು ಬಲುಖುಷಿಯಿಂದಲೇ ತಾವಾಗಿಯೇ ಆರ್ಯರ ಮುಂದೆ ಡೊಗ್ಗು ಸಲಾಮು ಹಾಕಿ ಶರಣಾಗುತ್ತಿದ್ದಾರೆ. ಇದಕ್ಕಿಂತ ದೊಡ್ಡ ವಿಪರ್ಯಾಸ ಏನಿದೆ...?
ಬ್ರಾಹ್ಮಣ, ಬನಿಯಾಗಳ ಎಲ್ಲಾ ಕುತಂತ್ರ ಕುಯುಕ್ತಿಗಳ ನಡುವೆಯೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಪೆರಿಯಾರ್, ಜ್ಯೋತಿಬಾ ಫುಲೆ, ನಾರಾಯಣಗುರು ಈ ಎಲ್ಲಾ ಬಹುಜನ ಸಮಾಜದ ನಾಯಕರ ಹೋರಾಟದ ಪ್ರತಿಫಲವಾಗಿ ಅಧಿಕಾರ, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಅಲ್ಪ-ಸ್ವಲ್ಪ ಅವಕಾಶವನ್ನು ಪಡೆದಿರುವ ಬಹುಜನ ಸಮಾಜದ ಎಚ್ಚರಿಕೆಯಿಂದಾಗಿ ನಿದ್ದೆ ಬಾರದ ಬ್ರಾಹ್ಮಣ, ಬನಿಯಾಗಳು ಇನ್ನೊಂದು ಮರು ತಂತ್ರವನ್ನು ಹೂಡಿದ್ದಾರೆ. ಅದುವೇ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ನೀಡಬೇಕೆಂದು ಮಸೂದೆಯನ್ನು ಮಂಡಿಸಿರುವುದು.
ಮೀಸಲಾತಿ ನೀಡುವಾಗ ಯಾವುದೇ ಜಾತಿಯ ಹೆಂಗಸರಿಗೂ ಮೋಸವಾಗಬಾರದು, ಅವರವರ ಜಾತಿ ಸಂಖ್ಯೆಗೆ ತಕ್ಕಂತೆ ಮೀಸಲಾತಿ ಕೊಡಬೇಕು. ಜಾತಿವಾರು ಮೀಸಲಾತಿ ಬೇಡ ಅನ್ನುವವರ ಸಂಖ್ಯೆ ನೂರಕ್ಕೆ 15 ಆದರೆ ಬೇಕು ಅನ್ನುವವರು ನೂರಕ್ಕೆ 85. ಆದರೆ ಮಾಧ್ಯಮಗಳಲ್ಲಿ ಬರುವ ವರದಿಯೇನೆಂದರೆ ದಲಿತ, ಹಿಂದುಳಿದ, ಮುಸ್ಲಿಮ್ ನಾಯಕರು ಹೆಂಗಸರ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ ಎಂದು. ಆದರೆ ನಿಜ ವಿಷಯವೇನೆಂದರೆ ಮೇಲ್ಜಾತಿಯ ನಾಯಕರೇ ದಲಿತ, ಹಿಂದುಳಿದ, ಮುಸ್ಲಿಮ್,ಕ್ರೈಸ್ತ ಮಹಿಳೆಯರನ್ನು ಪಾರ್ಲಿಮೆಂಟ್, ವಿಧಾನಸಭೆಗಳಿಗೆ ಬರದಂತೆ ತಡೆಯುತ್ತಿದ್ದಾರೆ.
ತಮ್ಮ ಅಂಗಳಗಳಲ್ಲಿ ಕಸಗುಡಿಸುವ, ಕೂಲಿ ಮಾಡುವ ಹೆಂಗಸರು ತಮ್ಮ ಸಮಸಮವಾಗಿ ದರ್ಬಾರು ನಡೆಸುವುದನ್ನು ಈ ಮನುವಾದಿಗಳು ಹೇಗೆ ತಡೆದುಕೊಂಡು ಸಹಿಸಿಯಾರು?
ನಮ್ಮ ಮುಂದಿರುವ ಪ್ರಶ್ನೆ ಈ ಮನುವಾದಿಗಳು ತಮ್ಮ ಜತೆ ಮಹಿಳೆಯರನ್ನು ಶಾಸನ ಸಭೆಗಳಿಗೆ, ಅದೂ ಬರೀ ತಮ್ಮ ಜಾತಿಯ ಹೆಂಗಸರನ್ನೇ ಕರೆ ತರುವ ಹಟ ತೊಟ್ಟದ್ದೇಕೆ ಎಂಬುದು. ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು 11.04.1947ರಂದು ಹಿಂದೂ ನೀತಿ ಸಂಹಿತೆಯನ್ನು (Hindu Code Bill) ಲೋಕಸಭೆಯಲ್ಲಿ ಮಂಡಿಸಿದ್ದರು.ಇದನ್ನು ಅಂದಿನ ಹಿಂದೂ ಮಹಿಳೆ ಒಪ್ಪಿಕೊಂಡಿದ್ದರೂ, ನೆಹರೂ, ವಲ್ಲಭಭಾಯಿ ಪಟೇಲರಂತಹವರು ವಿರೋಧಿಸಿದರು. ಇದನ್ನು ಜಾರಿಗೊಳಿಸಲು ಸತತವಾಗಿ ನಾಲ್ಕು ವರ್ಷ ಹೋರಾಡಿ, ಮನುವಾದಿಗಳು ಒಗ್ಗಟ್ಟಾಗಿ ವಿರೋಧಿಸಿದಾಗ ಮಹಿಳೆಯರ ಹಕ್ಕುಗಳಿಗಾಗಿ ತಮ್ಮ ಪದವಿಗೆ ರಾಜೀನಾಮೆ ಕೊಟ್ಟ ಒಬ್ಬನೇ ನಾಯಕ ಅಂಬೇಡ್ಕರ್.
ಡಾ. ಅಂಬೇಡ್ಕರರು ಹೋರಾಟದ ಫಲವಾಗಿ ಶಾಸನ ಸಭೆಯಲ್ಲಿ ದಲಿತರಿಗೆ ಶೇ.22.5 ಮೀಸಲಾತಿ ಇದೆ. ಅಲ್ಲದೆ ಮಂಡಲ್ ವರದಿಯಿಂದಾಗಿ ಶೇ.27ರಷ್ಟು ಹಿಂದುಳಿದ, ಮುಸ್ಲಿಮ್, ಕ್ರೈಸ್ತ ನಾಯಕರುಗಳಿದ್ದರೆ, ಯಾವುದೇ ಮೀಸಲಾತಿಯಿಲ್ಲದ ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬಂದಿರುವ ಹಿಂದುಳಿದ, ಮುಸ್ಲಿಮ್ ಎಂ.ಪಿ., ಎಂ.ಎಲ್.ಎ.ಗಳಿದ್ದಾರೆ. ಹೀಗಾಗಿ ನೂರಕ್ಕೆ ಆರುವತ್ತು ಮಂದಿ ಹಿಂದುಳಿದ, ದಲಿತ, ಪ್ರತಿನಿಧಿಗಳಿದ್ದಾರೆ. ಮುಂದೆ ಈ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ. ಹಾಗಾಗಿ ಮುಂದೊಂದು ದಿನ ಭಾರತ ದೇಶದ ಆಡಳಿತ ಬಹುಜನ ಸಮಾಜದ ಕೈಯೊಳಗಿರುವುದು ಖಂಡಿತ. ಅಂತಹ ಕಾಲಕ್ಕೆ ಈ ಮನುವಾದಿಗಳ ಗತಿಯೇನು? ಗುಲಾಮರಾಗಿದ್ದವರ ಗುಲಾಮರಾಗಿ ಸೇವೆ ಸಲ್ಲಿಸಲು ಅವರು ಒಪ್ಪಿಯಾರೆ? ಮನುಧರ್ಮ ಪ್ರಕಾರ ಶೂದ್ರರ ರಾಜ್ಯದಲ್ಲಿ ಬ್ರಾಹ್ಮಣನು ಇರಬಾರದು. ಇಂತಹ ಆಜನ್ಮ ವೈರಿಗಳಾದ ದಲಿತರ ಆಳ್ವಿಕೆಯಲ್ಲಿ ಬದುಕು ಹೇಗೆ ಸಾದ್ಯ? ಈ ದುರಂತ ತಪ್ಪಿಸಲು ಮಾಡಿರುವ ಕಳ್ಳ ನಾಟಕ ಈ ಮಹಿಳಾ ಮೀಸಲಾತಿ!
ಜನಸಂಖ್ಯೆಯ ಅರ್ಧ ಭಾಗದಷ್ಟಿರುವ ಹೆಂಗಸರಿಗೆ ಮೂರನೇ ಒಂದು ಭಾಗ ಯಾಕೆ? ಅರ್ಧ ಭಾಗ ನೀಡಬೇಕು. ಜಾತಿವಾರು ವಿಂಗಡಣೆ ಇದ್ದು, ಎಲ್ಲಾ ಜಾತಿಯ ಮಹಿಳೆಯರೂ ಲೋಕಸಭೆ, ವಿಧಾನ ಸಭೆಗಳಿಗೆ ಬರಬೇಕು ಎನ್ನುವ ಬಹುಜನ ನಾಯಕರ ವಾದದಿಂದಾಗಿ ಈ ಮನುವಾದಿಗಳು ಸಿಕ್ಕಿಕೊಂಡಿದ್ದಾರೆ. ಕೇವಲ ವೈದಿಕ ಹೆಂಗಸರನ್ನೇ ಗೆಲ್ಲಿಸಿ ಅವರ ಸೆರಗಿನ ಅಡಿಯಲ್ಲಿದ್ದು ದೇಶವಾಳಬೇಕೆಂದಿದ್ದ ಈ ಮೇಲ್ಜಾತಿಗಳಿಗೆ ಈಗ ಹೊಲೆ ಮಾದಿಗ, ಕುರುಬ, ಗಾಣಿಗ, ಬಂಟ, ಬಿಲ್ಲವ, ಮೊಗವೀರ, ಮೊಯ್ಲಿ ಹೆಂಗಸರನ್ನು ಹೆಗಲ ಮೇಲೆ ಹೊರಬೇಕಾದ ನಿಕೃಷ್ಟ ಪರಿಸ್ಥಿತಿ ಒದಗಿ ಬಂದಿದೆ.
ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡಿದರೆ ಲೋಕಸಭೆಯಲ್ಲಿ 160 ಎಂ.ಪಿ. ಸೀಟುಗಳು ಹಾಗೂ ಕರ್ನಾಟಕದಲ್ಲಿ ವಿಧಾನ ಸಭೆಯಲ್ಲಿ 72 ಎಂ.ಎಲ್.ಎ. ಸೀಟುಗಳು ಬ್ರಾಹ್ಮಣ, ಠಾಕೂರ್, ಲಿಂಗಾಯತ ಮಹಿಳೆಯರ ಪಾಲಾಗುವುದರ ಮೂಲಕ ದಲಿತ, ಹಿಂದುಳಿದ, ಮುಸ್ಲಿಮರ ಸಂಖ್ಯೆ ತಗ್ಗುತ್ತದೆ. 160 ಹಿಂದೂ ಮಹಿಳೆಯರ ಜತೆ ಈಗಾಲೇ ಇರುವ 120-130 ಹಿಂದೂ ಗಂಡಸರು ಸೇರಿದರೆ ಮಾತ್ರ ಸರಕಾರ ಸಡೆಸಲು ಸಾಧ್ಯ.
ಆದರೆ ಶೇ.15ಕ್ಕಿಂತಲೂ ಕಡಿಮೆ ಇರುವ ಮನುವಾದಿಗಳು ಮಾಡುತ್ತಿರುವ ನಾಟಕ ನಮ್ಮ ಮುಗ್ಧ ಜನರಿಗೆ ಅರ್ಥವಾಗಬೇಕು. ಆದ್ದರಿಂದ ಈ ನಾಡನ್ನು ಆಳಿವ ಅವಕಾಶವನ್ನು ಗಳಿಸಬೇಕಾದರೆ ನಾವು ಜಾತಿವಾರು ಮಹಿಳಾ ಮೀಸಲಾತಿಯನ್ನು ಪಡೆಯಲೇ ಬೇಕು. ಈ ನಿಟ್ಟಿನಲ್ಲಿ ನಮ್ಮೆಲ್ಲ ಹೋರಾಟ ನಡೆಯಬೇಕಿದೆ.