ಮಾಧ್ಯಮ ಮತ್ತು ಸ್ವಾತಂತ್ರ್ಯ
ಭಾರತದ ಮಟ್ಟಿಗೆ ಮಾಧ್ಯಮ ಹುಟ್ಟಿದ್ದು ಸ್ವಾತಂತ್ರ್ಯ ಚಳವಳಿಯ ಭಾಗವಾಗಿಯೇ. ಈ ಕಾರಣದಿಂದಾಗಿ ಭಾರತೀಯ ಪತ್ರಿಕೋದ್ಯಮಕ್ಕೆ ಸಮಾಜ ಸುಧಾರಣೆಯ, ಆ್ಯಕ್ಟಿವಿಸಂನ ಚಹರೆಯೊಂದು ಸಹಜವಾಗಿಯೇ ಬಂದಿತ್ತು. ಇದು ಬಹುತೇಕ ಎಲ್ಲ ಭಾರತೀಯ ಭಾಷಾ ಪತ್ರಿಕೆಗಳಿಗೂ ಸತ್ಯ. ಆ ಚರಿತ್ರೆಯ ವಿವರಗಳಿಗೆ ಹೋಗದೆ, ಸ್ವಾತಂತ್ರ್ಯ ಬಂದಲ್ಲಿಂದೀಚೆಗೆ ಭಾರತೀಯ ಮಾಧ್ಯಮೋದ್ಯಮ ಎತ್ತೆತ್ತಲೆಲ್ಲ ಹೋಯಿತು, ಎಲ್ಲಿಗೆ ತಲುಪಿದೆ ಮತ್ತು ಅದರ ಮುಂದಣ ಹಾದಿ ಎತ್ತ ಎಂಬುದನ್ನು ನೋಡೋಣ.
ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಬ್ರಿಟಿಷ್ ಪ್ರಭುತ್ವಕ್ಕೆ ಮುದ್ರಣಾಲಯಗಳ ಮೇಲೆ ಜಿಲ್ಲಾ ಮ್ಯಾಜಿಸ್ಟ್ರೇಟರ್ (ಕಲೆಕ್ಟರ್) ಮಟ್ಟದಲ್ಲೇ ಕಟ್ಟುನಿಟ್ಟಿನ ನಿಯಂತ್ರಣವಿತ್ತು. ಭಾರತದ ಪ್ರೆಸ್ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆ, 1867 ಎಷ್ಟು ಹಳೆಯದೆಂಬುದನ್ನು ಮತ್ತು ಅದು ಎಷ್ಟು ಕಠೋರವಾಗಿತ್ತು ಎಂಬುದನ್ನು ಗಮನಿಸಿ. ಆಗ ಪ್ರಭುತ್ವಕ್ಕೆ ಎದುರಾಗಿ ಸುದ್ದಿಗಳು ಸಮುದಾಯಕ್ಕೆ ತಲುಪಬೇಕೆಂಬ ಜರೂರು ಇತ್ತು. ಹಾಗಾಗಿ, ಸುದ್ದಿಗಳ ರೂಪ, ಚಹರೆಗಳ ಬಗ್ಗೆ ಯಾರಿಗೂ ಯಾವುದೇ ತಗಾದೆಗಳಿರಲಿಲ್ಲ. ಕೈಬರಹದಲ್ಲೇ ಆದರೂ ಸುದ್ದಿ ತಲುಪಬೇಕಾದಲ್ಲಿಗೆ ತಲುಪಿದರೆ ಸಾಕಿತ್ತು. ಆಗ ಓದು-ಬರಹ ಬಲ್ಲವರ ಸಂಖ್ಯೆಯೂ ಕಡಿಮೆ ಇದ್ದುದರಿಂದ, ಸುದ್ದಿ ಹರಡುವ
ಹಾದಿಯೂ ವಿಭಿನ್ನವಿತ್ತು.
ಸ್ವಾತಂತ್ರ್ಯದ ಬಳಿಕ ಪತ್ರಿಕೆಗಳಿಗೆ ಏಕಾಏಕಿ ಒಂದು ಹೊಸ ಸನ್ನಿವೇಶ ಎದುರಾಯಿತು. ಅಲ್ಲಿಯ ತನಕ ಯಾರ ಪರವಾಗಿ ಮಾಧ್ಯಮಗಳು ನಿಂತಿದ್ದವೋ, ಅವರೀಗ ಪ್ರಭುತ್ವದ ಸ್ಥಾನದಲ್ಲಿದ್ದರು. ಬಹುತೇಕ ಅವರಲ್ಲೇ ಹಲವರು ಅಲ್ಲಿಯ ತನಕದ ಪತ್ರಿಕೆಗಳ ಜೀವವಾಗಿದ್ದವರು. ಹಾಗಾಗಿ, ಹೊಸ ಸನ್ನಿವೇಶದಲ್ಲಿ ಪತ್ರಿಕೆಗಳು ತಮ್ಮ ಪಾತ್ರವನ್ನು ಮರುರೂಪಿಸಿಕೊಳ್ಳಬೇಕಾಯಿತು. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಹೊಸ ಪ್ರಭುತ್ವಕ್ಕೆ ಕಠೋರವಾದ ಪ್ರೆಸ್ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆ ಬದಲಾಗಬೇಕು ಎಂದು ಅನ್ನಿಸಲಿಲ್ಲ! ಆದರೆ ನೆಹರೂ ಅವರ ಲಿಬರಲ್ ದೃಷ್ಟಿಕೋನದ ಕಾರಣಕ್ಕೆ ಮಾಧ್ಯಮ ಸ್ವಾತಂತ್ರ್ಯವು ಪ್ರಜಾತಾಂತ್ರಿಕ ಪ್ರಕ್ರಿಯೆಯ ಭಾಗ ಆಗಿತ್ತು. ಸರಕಾರಕ್ಕೆ ಇಷ್ಟ ಇಲ್ಲದಿದ್ದರೂ ಮಾಧ್ಯಮ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಸಲ್ಲದು ಎಂಬುದು ನೆಹರೂ ಅವರ ಸ್ಪಷ್ಟ ನಿಲುವಾಗಿತ್ತು. ಇಂತಹ ನೆಹರೂ ಕೂಡ, ದೇಶದಲ್ಲಿ ಕೋಮು ದಳ್ಳುರಿ ಹಬ್ಬಿದಾಗ, 1951ರಲ್ಲಿ ಪ್ರೆಸ್ನಲ್ಲಿ ಆಕ್ಷೇಪಾರ್ಹ ವಿಚಾರಗಳ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕಾಯಿತು. 50ರ ದಶಕದ ಆರಂಭದಲ್ಲಿ ಭಾರತದಲ್ಲಿ ಇದ್ದುದು ಸುಮಾರು 300 ಪತ್ರಿಕೆಗಳು. ಆಗ ಭಾರತದ ಸಾಕ್ಷರತೆ ಪ್ರಮಾಣ ಶೇ. 16.40. ಪತ್ರಿಕೆಗಳ ಪ್ರಸರಣದ ಪ್ರಮಾಣ 1,000 ಜನಸಂಖ್ಯೆಗೆ ಸುಮಾರು ಐದು. ಈ ಹಂತದಲ್ಲಿ ಭಾರತೀಯ ಪತ್ರಿಕೆಗಳು ಸಮೂಹ ಮಾಧ್ಯಮಗಳಾಗಿರಲಿಲ್ಲ. ಭಾರತದ ಎಲ್ಲ ಪತ್ರಿಕೆಗಳ ಒಟ್ಟು ಪ್ರಸರಣ ಒಂದು ಕೋಟಿ ದಾಟಲು ಸ್ವಾತಂತ್ರ್ಯ ಬಂದು ಮೂರು ದಶಕಗಳ ಕಾಲ ಕಾಯಬೇಕಾಯಿತು!
1971 ಭಾರತೀಯ ಮಾಧ್ಯಮಗಳ ಪಾಲಿಗೆ ಒಂದು ಹೊರಳು ಸಂದು. ಭಾರತ-ಪಾಕ್ ಕದನ ಆರಂಭಗೊಂಡ ಬೆನ್ನಿಗೇ ಇಂದಿರಾ ಗಾಂಧಿ ಅವರು ಡಿಫೆನ್ಸ್ ಆ್ಯಂಡ್ ಇಂಟರ್ನಲ್ ಸೆಕ್ಯುರಿಟಿ ಆ್ಯಕ್ಟ್ ಆಫ್ ಇಂಡಿಯಾ ಜಾರಿಗೆ ತಂದು, ಅಲ್ಲಿಯ ತನಕ ನೆಹರೂ ಯುಗದ ಸ್ವಾತಂತ್ರ್ಯ ಅನುಭವಿಸಿದ್ದ ಮಾಧ್ಯಮಗಳನ್ನು ಹದ್ದುಬಸ್ತಿನಲ್ಲಿ ಇಡಹೊರಟರು ಮತ್ತು 1975ರ ಜೂನ್ ಹೊತ್ತಿಗೆ ತುರ್ತುಪರಿಸ್ಥಿತಿ ಘೋಷಣೆ ಆಯಿತು. ಈ ಅವಧಿಯಲ್ಲಿ ಮಾಧ್ಯಮಗಳ ಮೇಲೆ ಪ್ರಭುತ್ವ ಹೇರಿದ್ದ ಪ್ರತ್ಯಕ್ಷ, ಪರೋಕ್ಷ ನಿಯಂತ್ರಣಗಳೆಲ್ಲ ಕಡೆಗೆ ಸಡಿಲಗೊಂಡದ್ದು 1984ರಲ್ಲಿ ರಾಜೀವ್ ಗಾಂಧಿ ಅವರು ಅಧಿಕಾರಕ್ಕೆ ಬಂದ ಬಳಿಕವೇ. ಅವರಿಗೂ ನಾಲ್ಕೇ ವರ್ಷಗಳಲ್ಲಿ ಮಾಧ್ಯಮಗಳ ಕುರಿತು ಅಸಹನೆ ಹುಟ್ಟಿದಾಗ, ಮಾನನಷ್ಟ ಕಾಯ್ದೆ, 1988 ಜಾರಿಗೆ ಬಂದಿತು.
ಸಮಾಜದ ಕನ್ನಡಿ
ಪತ್ರಿಕೆಗಳು ಯಾವತ್ತಿಗೂ ಸಮಾಜದ ಕನ್ನಡಿ. ಅಲ್ಲಿ ಕಾಣುವುದು ಸಮಾಜದ್ದೇ ಪ್ರತಿಬಿಂಬ. ಸ್ವತಂತ್ರ ಭಾರತದ ಇತಿಹಾಸದ ಉದ್ದಕ್ಕೂ ಭಾರತ ಸಾಮಾಜಿಕವಾಗಿ, ರಾಜಕೀಯವಾಗಿ ಹೊರಳು ಹಾದಿಗಳಲ್ಲಿ ನಡೆದಾಗಲೆಲ್ಲ ಮಾಧ್ಯಮಗಳೂ ಅದರದೇ ಪ್ರತಿಬಿಂಬಗಳಾಗಿ ವರ್ತಿಸಿವೆ. ರಾಜೀವ್ ಗಾಂಧಿ ಅವರ ಬಳಿಕ ಬಂದ ಉದಾರೀಕರಣ, ಕಂಪ್ಯೂಟರೀಕರಣಗಳು ಭಾರತದ ಮಾಧ್ಯಮಗಳಲ್ಲಿ ವಿಚಿತ್ರವಾದ ಬದಲಾವಣೆಗಳಿಗೆ ಕಾರಣ ಆದವು.
ಉದಾರೀಕರಣದ ಫಲಾನುಭವಿಗಳಾಗಿ ಮುಖ್ಯವಾಹಿನಿ ದಿನಪತ್ರಿಕೆಗಳು ಮದ್ರಣ ತಂತ್ರಜ್ಞಾನದಲ್ಲಿನ ಬೆಳವಣಿಗೆಗಳ ಕಾರಣದಿಂದಾಗಿ, ಕೋಟಿಗಳಲ್ಲಿ ಹೂಡಿಕೆ ಅಗತ್ಯ ಇರುವ ‘ಪತ್ರಿಕೋದ್ಯಮ’ ಆಗತೊಡಗಿದಾಗ, ಎರಡು ಸೂಕ್ಷ್ಮ ಬದಲಾವಣೆಗಳಾದವು. ಅಲ್ಲಿಯ ತನಕ ಸುದ್ದಿಗೆ ಕಾಯುತ್ತಿದ್ದ ಓದುಗರು ನಿಧಾನವಾಗಿ ಸುದ್ದಿಯನ್ನು ಪ್ರಸ್ತುತಪಡಿಸುವ ಅಂದ, ಚೆಂದಗಳಿಗೆ ಮಾರುಹೋಗತೊಡಗಿದ್ದು ಒಂದು ಬದಲಾವಣೆ ಆದರೆ, ಉದ್ಯಮವಾಗಿ ಪತ್ರಿಕೆಗಳು ಓದುಗರ ಕೃಪಾಶ್ರಯದಿಂದ ಕಳಚಿಕೊಂಡು, ಲಿಬರಲ್ ಮಾರುಕಟ್ಟೆಯ ಕಾರ್ಪೊರೇಟ್ ಜಾಹೀರಾತುಗಳ ಆಸರೆಗೆ ಆತುಕೊಂಡದ್ದು ಇನ್ನೊಂದು ಬದಲಾವಣೆ. 80ರ ದಶಕದಲ್ಲಿ ನಿಧಾನಕ್ಕೆ ಆರಂಭಗೊಂಡ ಈ ಪ್ರಕ್ರಿಯೆ, 1999ರಲ್ಲಿ ಪೂರ್ಣಪ್ರಮಾಣದ ದರಸಮರ ಮತ್ತು ಸಾಂಪ್ರದಾಯಿಕ ಪತ್ರಿಕೆಗಳ ನಡುವೆ ಹೊಸ ‘ಲಿಬರಲ್’ ದಿಕ್ಕಿನ ಪೈಪೋಟಿಗಳ ಕಾರಣದಿಂದಾಗಿ ನಿಧಾನಕ್ಕೆ ಕಜ್ಜಿ ಕೆರೆಯವ ಉದ್ಯಮವಾಗಿ ಬದಲಾಗತೊಡಗಿತು. ಪತ್ರಿಕೋದ್ಯಮ ಎಂಬುದು ಸಾಂಪ್ರದಾಯಿಕ ಸುದ್ದಿಗಳ ಜಾಗದಲ್ಲಿ ಸಿಕ್ಕವರ ಬೆಡ್ರೂಂ ಹಣಕಿಕ್ಕುವ, ಭ್ರಷ್ಟರು-ಬಲಾಢ್ಯರ ಸೇವೆಗೆ ನಿಂತು ಇನಾಮು ಪಡೆಯುವ ಮತ್ತು ದುರ್ಬಲರೆನ್ನಿಸಿಕೊಂಡವರ ವಸೂಲಿ ದಂಧೆಗೆ ಇಳಿಯುವ ಪರಿಪೂರ್ಣ ‘ವ್ಯವಹಾರ’ ಅನ್ನಿಸಿಕೊಂಡಿತು. ಉದ್ಯಮ ಆ ರೀತಿಯಲ್ಲಿ ವಿಕೃತಗೊಂಡರೆ, ಅಲ್ಲಿ ಕಸುಬುದಾರರೆನ್ನಿಸಿಕೊಂಡವರು ಜಾತಿದಂಡು ಕಟ್ಟಿಕೊಂಡು ಬುಲ್ಲೀಯಿಂಗ್ ನಿಷ್ಣಾತರೆನ್ನಿಸಿಕೊಂಡರು. ಓದುಗರಲ್ಲಿ ಕಾಸಿದ್ದವರಿಗೆ ಚೆಂದದ ಮುದ್ರಣದಲ್ಲಿ ಅವರದೇ ಫೋಟೊಗಳನ್ನು ಬೆಳ್ಳಂಬೆಳಗಾತ ನೋಡಿಸುವುದು, ಜನಸಾಮಾನ್ಯರಿಗೆ ರಸಭರಿತ ಸುದ್ದಿಗಳನ್ನು ಉಣ್ಣಿಸಿ ಕುತೂಹಲದ ನವೆಯಿಳಿಸುವುದು ಪತ್ರಿಕೋದ್ಯಮದ ಯಶಸ್ಸಿಗೆ ಸಿದ್ಧಸೂತ್ರ ಅನ್ನಿಸಿಕೊಂಡಿತು.
ಟ್ಯಾಬ್ಲಾಯ್ಡ್ಗಳಿಗೆ, ಚಾನೆಲ್ಗಳಿಗೆ ಹಳದಿಯೇರಿದ್ದು ತುರ್ತುಪರಿಸ್ಥಿತಿಯ ಕಾಲದಲ್ಲಿ, ಹೆಚ್ಚಿನಂಶ ಮೊದಲ ಬಾರಿಗೆ ಪ್ರಭುತ್ವದ ಪರ ಮತ್ತು ಪ್ರಭುತ್ವದ ವಿರುದ್ಧ ಇರುವ ಮಾಧ್ಯಮಗಳು ಓದುಗರ ಗಮನಕ್ಕೆ ಎದ್ದು ಕಾಣಿಸತೊಡಗಿದ್ದವು. ಅಲ್ಲಿಂದಾಚೆಗೆ, ಮುದ್ರಣ ತಂತ್ರಜ್ಞಾನ ಸುಧಾರಿಸುತ್ತಾ ಹೋದಂತೆ, ಮುಖ್ಯವಾಹಿನಿ ಪತ್ರಿಕೆಗಳ ಜೊತೆಜೊತೆಗೆ ಪ್ರಾದೇಶಿಕವಾಗಿ ಟ್ಯಾಬ್ಲಾಯ್ಡ್ ಪತ್ರಿಕೆಗಳು ಆರಂಭಗೊಂಡವು. ಆರಂಭದಲ್ಲಿ ಪ್ರಭುತ್ವದ ಅಥವಾ ಬಲಿಷ್ಠರ ವಿರುದ್ಧ ಮುಖ್ಯವಾಹಿನಿಯ ‘ಕ್ಲಾಸಿಕಲ್’ ಹಾದಿಗಿಂತ ಭಿನ್ನವಾಗಿ ಪ್ರಕಟಗೊಳ್ಳತೊಡಗಿದ ಈ ಟ್ಯಾಬ್ಲಾಯ್ಡ್ಗಳು ತಮ್ಮ ರಂಗಿನ ಕಾರಣದಿಂದಾಗಿ ಆರಂಭದಲ್ಲಿ ಗಮನ ಸೆಳೆದರೂ, ಕ್ರಮೇಣ ಹಾದಿ ತಪ್ಪತೊಡಗಿದವು. ಕನ್ನಡದಲ್ಲಿ ಲಂಕೇಶರ ಮೂಲಕ ಪರಿಣಾಮಕಾರಿಯಾಗಿ ಆರಂಭಗೊಂಡ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ (1980) ಆರಂಭದಲ್ಲಿ ಸರಕಾರಗಳನ್ನು ಪ್ರತಿಷ್ಠಾಪಿಸಬಲ್ಲ-ಕೆಡಹಬಲ್ಲ ಪ್ರಭಾವ ಹೊಂದಿತ್ತು. ಆದರೆ, ಬರಬರುತ್ತಾ ಕನ್ನಡದಲ್ಲಿ ಕೇವಲ ಲಂಕೇಶ್ ಶೈಲಿಯ ಅನುಕರಣೆ ಮಾತ್ರ ಉಳಿದುಕೊಂಡು, ಇಡಿಯ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ಹೇವರಿಕೆ ಬರುವಷ್ಟು ಹಳದಿಯೇರಿಸಿಕೊಂಡಿತು.
ಇದೇ ಉದಾರೀಕರಣದ ಬೆನ್ನೇರಿ ಬಂದ ಖಾಸಗಿ ಟೆಲಿವಿಷನ್ ಚಾನೆಲ್ಗಳಂತೂ (1998) ಅಕ್ಷರಗಳಲ್ಲಿದ್ದ ಖಾಸಗಿ, ಬೆಡ್ರೂಂ ಸಂಭ್ರಮಗಳನ್ನು ಅಕ್ಷರಶಃ ದೃಶ್ಯರೂಪಕ್ಕಿಳಿಸಿದವು; ರಾಜಕಾರಣದ ಸಂದಿಗೊಂದಿಗಳ ಗಾಸಿಪ್ಗಳನ್ನೇ ಬ್ರೇಕಿಂಗ್ ನ್ಯೂಸ್ಗಳೆಂದು ಸಾರಿ, ನಡುಮನೆಯ ಕಿರುಚಾಟಕ್ಕೆ ಜೋಡಿಸಿಬಿಟ್ಟವು.
2000ನೇ ಇಸವಿಯ ಬಳಿಕ ವೆಬ್ ಪತ್ರಿಕೆಗಳು ಮತ್ತು 2005ರ ಬಳಿಕ ಸಾಮಾಜಿಕ ಮಾಧ್ಯಮಗಳು ರಂಗಪ್ರವೇಶ ಮಾಡತೊಡಗಿದಂತೆ, ಕೆಟ್ಟ ಕುತೂಹಲದ ನವೆ ತಗ್ಗಿಸಿಕೊಳ್ಳುವ ಚಟುವಟಿಕೆಗಳು ಇನ್ನಷ್ಟು ಚುರುಕಾಗತೊಡಗಿದವು. ಯಾವುದೇ ನಿಯಂತ್ರಣಗಳಿಲ್ಲದ ಈ ಸುದ್ದಿತಾಣಗಳು ಓದುಗರಿಗೆ ಮಾತ್ರವಲ್ಲದೆ ಸುದ್ದಿ ನೀಡುವವರಿಗೂ ಒಂದು ಖಾಸಗಿ ವಾತಾವರಣವನ್ನು ನಿರ್ಮಿಸಿಕೊಟ್ಟವು. ಅವರವರ ಮೂಗಿನ ನೇರಕ್ಕೆ ಸುದ್ದಿಗಳು ಹರಿದಾಡತೊಡಗಿದಾಗ ಯಾವುದು ಸತ್ಯ, ಯಾವುದು ಸುಳ್ಳು ಎಂದು ಗೊತ್ತಾಗದ ‘ಪೋಸ್ಟ್ ಟ್ರುತ್’ ಸನ್ನಿವೇಶ ರೂಪುಗೊಂಡಿತು. ಇದು ಸುದ್ದಿ ನೀಡುವವರಿಗೂ ಸುದ್ದಿ ಪಡೆಯುವವರಿಗೂ ನಡುವೆ ವ್ಯತ್ಯಾಸವಿಲ್ಲದ ಸ್ಥಿತಿ! ಬರಬರುತ್ತಾ ಕಾಮಾಲೆ ಏರಿರುವುದು ಸುದ್ದಿ ಕಸುಬಿಗಿಳಿಯುವುದಕ್ಕೆ ಅನಿವಾರ್ಯ ಎಂಬ ಸನ್ನಿವೇಶ ಎದುರಾಯಿತು.
ಡಿಜಿಟಲ್ ಕನ್ವರ್ಜೆನ್ಸ್
ಈಗ ಡಿಜಿಟಲ್ ಸಂಪರ್ಕ ಜಾಲ ಬಲಗೊಳ್ಳುತ್ತಿರುವ ಹಂತದಲ್ಲಿ ಪ್ರಿಂಟ್-ಟೆಲಿವಿಷನ್-ವೆಬ್ ಮೂರೂ ಸುದ್ದಿ ಸ್ವರೂಪಗಳು ಏಕತ್ರಗೊಂಡು ಒಂದು ಕನ್ವರ್ಜೆಂಟ್ ಮಾಧ್ಯಮ ಆಗತೊಡಗಿವೆ. ಜೊತೆಗೆ ಸುದ್ದಿ ಎನ್ನುವುದು ಈಗ ‘ರಿಯಲ್ಟೈಮ್’ ಆಹಾರ ಅನ್ನಿಸತೊಡಗಿದೆ. ಅರ್ಥಾತ್, ಸುದ್ದಿ ಸಂಭವಿಸುತ್ತಿರುವಂತೆಯೇ ಅದನ್ನು ಏಕಕಾಲಕ್ಕೆ ನೋಡುವ, ಕೇಳುವ, ಅನುಭವಿಸುವ ಮತ್ತು ತಿಳಿಯುವ ವೇಗ ಸಮೂಹ ಮಾಧ್ಯಮಗಳಿಗೆ ಪ್ರಾಪ್ತಿಯಾಗಿದೆ.
ಮಾಧ್ಯಮ ಎಂಬುದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಕಾರ್ಪೊರೇಟ್ ಜಗತ್ತಿನ ಭಾಗ ಆದ ಬಳಿಕ, ಈಗ ಬಲಾಢ್ಯ ಮೀಡಿಯಾ ಕಂಗ್ಲಾಮರೇಟ್ಗಳು ರೂಪುಗೊಳ್ಳತೊಡಗಿವೆ. ಅವರದೇ ಟೆಲಿವಿಷನ್ ಚಾನೆಲ್, ಅವರದೇ ಪ್ರಿಂಟ್, ಅವರದೇ ಒಎಫ್ಸಿ ಕೇಬಲ್, ಅವರದೇ ಉಪಗ್ರಹ, ಅವರದೇ ಇಂಟರ್ನೆಟ್ ಜಾಲ, ಅವರದೇ ಹ್ಯಾಂಡ್ ಹೆಲ್ಡ್ ಡಿವೈಸ್ಗಳು (ಉದಾ: ಫೋನ್), ಅವರದೇ ಸುದ್ದಿ ಮೂಲ ಸಂಸ್ಥೆಗಳು ಹೀಗೆ, ನಿಮಗೇನು ಬೇಕೊ ಅದನ್ನೇ ಹಾಗೂ ‘ಅದನ್ನು ಮಾತ್ರ’ ನಿಮಗೆ ಕೊಡುತ್ತಿದ್ದೇವೆಂದು ನಂಬಿಸುವ, ಅವರು ಏನು ತೋರಿಸ/ಕೇಳಿಸ/ತಿಳಿಸ ಬಯಸುತ್ತಾರೋ ಅದನ್ನು ಮಾತ್ರ ನಿಮ್ಮ ಅಂಗೈಗೆ ತಲುಪಿಸುವ ಸಾಮರ್ಥ್ಯ ಇರುವ ಸರ್ವಾಂತರ್ಯಾಮಿ ವ್ಯವಸ್ಥೆ ಅದು. ಅವರೀಗ ಓದುಗರಿಗೆ ಸುದ್ದಿ, ಮಾಹಿತಿ, ಅರಿವು, ಮನರಂಜನೆ ಕೊಡುವ ಬದಲು ಓದುಗರನ್ನು ಗಾಳ ಹಾಕಿ ಸೆಳೆಯವ (ಕ್ಲಿಕ್ ಬೈಟ್) ಆಟದಲ್ಲಿ ತೊಡಗಿಕೊಂಡಿದ್ದಾರೆ.
ಈಗ ಒಮ್ಮೆ ನಾವು ಎಲ್ಲಿಂದ ಹೊರಟು ಎಲ್ಲಿಗೆ ಬಂದು ತಲುಪಿದ್ದೇವೆ ಎಂಬುದನ್ನು ನೋಡಿಕೊಳ್ಳಿ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಭೂಮಿಕೆ ವಹಿಸಿದ್ದ ಮತ್ತು ಸ್ವಾತಂತ್ರ್ಯಕ್ಕಾಗಿ ಹಾತೊರೆದಿದ್ದ ಮಾಧ್ಯಮಗಳು ಇಂದು ಮತ್ತೆ ಬೆರಳೆಣಿಕೆಯ ‘ಆನಿ’ ಗಳ ಆಟದ ಸರಕಾಗಿ ಸ್ವಾತಂತ್ರ್ಯ ಕಳೆದುಕೊಂಡು ಕುಳಿತಿವೆ. ಅಂದು ಸ್ವಾತಂತ್ರ್ಯದ ಸುದ್ದಿಗಾಗಿ ಕಾಯುತ್ತಿದ್ದ ಓದುಗರು ಈಗ ಪಂಚೇಂದ್ರಿಯಗಳಿಗೂ ಹರಿದು ಬರುತ್ತಿರುವ ಅನಾಹತ ಸುದ್ದಿಯ ಮಹಾಪೂರದಲ್ಲಿ ಬಂದಿಗಳಾಗಿದ್ದಾರೆ. ಮಾಧ್ಯಮಗಳ ಸಂದರ್ಭದಲ್ಲಿ ಈಗ ಸ್ವಾತಂತ್ರ್ಯ ಯಾರಿಗಾದರೂ ಸಿಕ್ಕಿರುವುದು ಇದ್ದರೆ, ಅದು ತುರಿಕೆ ಕಜ್ಜಿಗೆ ಮತ್ತು ಅದು ಎಬ್ಬಿಸುತ್ತಿರುವ ನವೆಗೆ!