ಸಹಕಾರ ರಂಗದ ಅಗ್ರಜ ಮೊಳಹಳ್ಳಿ ಶಿವರಾವ್
- ಎಸ್. ಜಗದೀಶ್ಚಂದ್ರ ಅಂಚನ್,
ಸೂಟರ್ ಪೇಟೆ
ಸಹಕಾರ ಮಂತ್ರವನ್ನು ತನ್ನ ಜೀವಿತ ಕಾಲದಲ್ಲಿ ಅಕ್ಷರಶಃ ಪಾಲಿಸಿಕೊಂಡು ಬಂದ ಮೊಳಹಳ್ಳಿ ಶಿವರಾವ್ ಅವರು ಸಹಕಾರ ರಂಗದ ಆದರ್ಶ ವ್ಯಕ್ತಿ. ಸಹಕಾರ ರಂಗದಲ್ಲಿ ದಾಖಲಾರ್ಹ ಸಾಧನೆ ಮಾಡಿರುವ ಮಹಾನ್ ಚೇತನ ಮೊಳಹಳ್ಳಿ ಶಿವರಾಯರು ಜನ್ಮ ತಾಳಿದ ದಿನ ಆಗಸ್ಟ್-4. ಸಮಾಜಮುಖಿಯಾಗಿ ಜೀವಿಸಿದ ಶಿವರಾಯರು 1880ರ ಆಗಸ್ಟ್- 4ರಂದು ಪುತ್ತೂರಿನಲ್ಲಿ ರಂಗಪ್ಪಯ್ಯ ಮೂಕಾಂಬಿಕಾ ದಂಪತಿಗೆ ಮಗನಾಗಿ ಜನಿಸಿದರು. ಶಿವರಾಯರು ಸಹಕಾರ ಆಂದೋಲನವನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲೂ ಸಂಘಟಿಸಿ ಹಲವು ಸಹಕಾರ ಸಂಸ್ಥೆಗಳ ಸ್ಥಾಪನೆಗೆ ಕಾರಣರಾಗಿದ್ದರು. ಇದರಿಂದ ಅವರನ್ನು ಅವಿಭಜಿತ ಜಿಲ್ಲೆಯ ಸಹಕಾರ ಪಿತಾಮಹ ರೆಂದು ಕರೆಯಲಾಗುತ್ತಿದೆ.
ವಿದ್ಯಾರ್ಥಿ ದೆಸೆಯಲ್ಲಿಯೇ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡ ಶಿವರಾಯರು ಮುಂದೆ ಸಹಕಾರ ಕ್ಷೇತ್ರದ ಮೂಲಕ ಗ್ರಾಮಾಭಿವೃದ್ಧಿಯ ಕನಸು ಕಂಡರು. ‘‘ಗ್ರಾಮ ಭಾರತ ನಿರ್ಮಾಣದೇ ನನ್ನ ಗುರಿ, ಅದರ ಸಾರ್ಥಕತೆಗೆ ಸಹಕಾರ ಕ್ಷೇತ್ರ ಉತ್ತಮ ಸಾಧನ’’ ಎಂದಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕಲ್ಪನೆಯ ಕೂಸಾಗಿರುವ ಸಹಕಾರ ಆಂದೋಲನವನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದ್ಭುತ ರೀತಿಯಲ್ಲಿ ಶಿವರಾಯರು ಸಾಕ್ಷಾತ್ಕರಿಸಿದ್ದಾರೆ. 1967 ಜುಲೈ -4ರಂದು ಅವರು ಕೀರ್ತಿಶೇಷರಾದರೂ ಸಹಕಾರ ರಂಗದಲ್ಲಿ ಮೂಡಿಸಿದ ಛಾಪು ಅಜರಾಮರ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಸಹಕಾರ ಕ್ಷೇತ್ರದತ್ತ ಹೆಚ್ಚು ಕಾರ್ಯೋನ್ಮುಖರಾಗಿದ್ದರು.
ಸಹಕಾರ ಸಂಘಗಳ ಸಂಸ್ಥಾಪಕ:
ವೃತ್ತಿಯಲ್ಲಿ ಗಣ್ಯ ನ್ಯಾಯಾಧೀಶರಾಗಿದ್ದ ಶಿವರಾಯರು ಸಹಕಾರ ಆಂದೋಲನವನ್ನು ಕೈಗೆತ್ತಿಕೊಂಡಾಗ ತನ್ನ ವೃತ್ತಿಯನ್ನೇ ಮರೆತು ಕಾರ್ಯೋನ್ಮುಖರಾದವರು. ಪ್ರತಿಭೆಯಲ್ಲಿ, ಪಾಂಡಿತ್ಯದಲ್ಲಿ, ಸಂಘಟನಾ ಚಾತುರ್ಯದಲ್ಲಿ, ಆಡಳಿತ ಕೌಶಲ್ಯದಲ್ಲಿ, ಪ್ರಗತಿಪರ ಮನೋಧರ್ಮದಲ್ಲಿ, ಪರೋಪಕಾರಿ ಬುದ್ಧಿಯಲ್ಲಿ, ಬಡವರ ಸೇವೆಯಲ್ಲಿ, ಕರ್ತವ್ಯ ನಿಷ್ಠೆಯಲ್ಲಿ ಎಲ್ಲಕ್ಕೂ ಮಿಗಿಲಾಗಿ ಸಹಕಾರಿ ತತ್ವದಲ್ಲಿ ಅವರು ಇಟ್ಟಿದ್ದ ಅಚಲ ಅಪಾರ ವಿಶ್ವಾಸದಲ್ಲಿ ಶಿವರಾಯರನ್ನು ಹೋಲುವ ವ್ಯಕ್ತಿಗಳು ದುರ್ಲಭ. ಶಿವರಾಯರು ಗಣ್ಯ ವಕೀಲರಾಗಿದ್ದರೂ ಅವರನ್ನು ಆಕರ್ಷಿಸಿದ್ದು ಸಹಕಾರಿ ಕ್ಷೇತ್ರ. ಅವರು ಬಯಸಿದ್ದು ಬಡರೈತರ ಕ್ಷೇಮಾಭಿವೃದ್ಧಿ. ಭಾರತದಲ್ಲಿ ಸಹಕಾರ ಆಂದೋಲನವು 1904ರ ಮಾರ್ಚ್ -23ರಂದು ಕಾಯ್ದೆ ರೂಪದಲ್ಲಿ ಜಾರಿಗೆ ಬಂದಾಗ ಇದರ ಪ್ರಭಾವವು ದಕ್ಷಿಣ ಕನ್ನಡ ಜಿಲ್ಲೆಗೂ ಪಸರಿಸಿತು. ಸಹಕಾರಿ ಕಾಯ್ದೆಯ ಮಹತ್ವವನ್ನು ಮನಗಂಡ ಶಿವರಾಯರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಈ ಕಾಯ್ದೆಯು ಸಹಕಾರಿಯಾಗುವುದೆಂದು ತಿಳಿದುಕೊಂಡರು. ‘‘ನಾನು ನಿನಗಾಗಿ, ನೀನು ನನಗಾಗಿ, ನಾವೆಲ್ಲರೂ ದೇಶಕ್ಕಾಗಿ’’ ಎಂಬ ತಾತ್ವಿಕ ನೆಲೆಯಲ್ಲಿ ಸಹಕಾರ ಸಂಘಗಳ ಸಂಘಟನೆಗೆ ಅವರು ಮುಂದಾದರು .ಶಿವರಾಯರು ಮೊತ್ತ ಮೊದಲಿಗೆ ಹುಟ್ಟೂರಾದ ಪುತ್ತೂರಿನಲ್ಲಿ ಸಹಕಾರಿ ಕ್ರೆಡಿಟ್ ಸೊಸೈಟಿಯನ್ನು 1909ರಲ್ಲಿ ಸ್ಥಾಪಿಸಿದರು. ಸಹಕಾರ ಚಳವಳಿಯನ್ನು ಇನ್ನಷ್ಟು ಫಲಪ್ರದವನ್ನಾಗಿಸುವ ಇರಾದೆಯಿಂದ ಶಿವರಾಯರು ಹಳ್ಳಿ ಹಳ್ಳಿಗಳಿಗೂ ಸಂಚರಿಸಿ ಸಹಕಾರ ತತ್ವದ ಮಹತ್ವವನ್ನು ವಿವರಿಸಿ ಸಹಕಾರಿ ಸಂಘಗಳನ್ನು ಸ್ಥಾಪಿಸಿದರು. ‘ಸಹಕಾರ’ ಶಿವರಾಯರ ಅಂತರಂಗದಲ್ಲಿ ಕುದಿಯುತ್ತಿದ್ದ ಸಾರ್ವಜನಿಕ ಸೇವಾಕಾಂಕ್ಷೆಯಾಗಿತ್ತು. ಇದರಿಂದ ಅವರು ವಕೀಲ ವೃತ್ತಿಗೆ ತಿಲಾಂಜಲಿ ಯನ್ನು ನೀಡಬೇಕಾಗಿತ್ತು. ‘ಸಹಕಾರ’ ಅವರ ಬಾಳಿನ ಉಸಿರಾಯಿತು.
ಎಸ್ಸಿಡಿಸಿಸಿ ಬ್ಯಾಂಕ್ ಸ್ಥಾಪೆ
ಹಳ್ಳಿ ಹಳ್ಳಿಗಳಲ್ಲಿ ಸ್ಥಾಪನೆಗೊಂಡ ಸಹಕಾರ ಸಂಘಗಳಿಗೆ ಹಣಕಾಸಿನ ನೆರವಿನ ಅಗತ್ಯತೆ ಮನಗಂಡು ಒಂದು ಮಾತೃಸಂಸ್ಥೆ ಹುಟ್ಟು ಹಾಕುವ ನಿರ್ಧಾರ ಕೈಗೊಂಡ ಶಿವರಾಯರು 1914ರಲ್ಲಿ ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್) ಸ್ಥಾಪಿಸಿದರು. ಆಗ ಶಿವರಾಯರೇ ಬ್ಯಾಂಕ್ ಅಧ್ಯಕ್ಷರಾಗಬೇಕೆಂದು ಎಲ್ಲರೂ ಬಯಸಿದ್ದರು. ಆದರೆ, ಆ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದರೂ ಎಲ್ಲರ ಒತ್ತಾಯಕ್ಕೆ ಮಣಿದ ಶಿವರಾಯರು 1914ರಿಂದ 1928ರವರೆಗೆ ಬ್ಯಾಂಕ್ ಉಪಾಧ್ಯಕ್ಷರಾಗಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಶಕ್ತಿಯಾದರು. ರೈತರ ಅನುಕೂಲಕ್ಕಾಗಿ 1925ರಲ್ಲಿ ಈ ಬ್ಯಾಂಕ್ ಪುತ್ತೂರಿನಿಂದ ಜಿಲ್ಲಾ ಕೇಂದ್ರ ಮಂಗಳೂರಿಗೆ ವರ್ಗಾಯಿಸಲ್ಪಟ್ಟಿತು. ಶಿವರಾಯರು 1931ರಲ್ಲಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಗೊಂಡು 1952ರವರೆಗೆ ಅಂದರೆ 21 ವರ್ಷ ಕಾಲ ಬ್ಯಾಂಕನ್ನು ಯಶಸ್ವಿಯಾಗಿ ಮುನ್ನಡೆಸಿದರು.
ಎಸ್ಸಿಡಿಸಿಸಿ ಬ್ಯಾಂಕ್ ಇಂದು ಯಶಸ್ವಿಯಾಗಿ 109 ವರ್ಷಗಳನ್ನು ಪೂರೈಸಿದೆ. ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರಕುಮಾರ್ ಅವರ ನೇತೃತ್ವದಲ್ಲಿ ಬ್ಯಾಂಕ್ ಮುನ್ನಡೆಯುತ್ತಿದೆ. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದ ಹೊಸ ಆವಿಷ್ಕಾರಗಳಿಗೆ ತೋರುಬೆರಳಾಗುತ್ತಿರುವ ಈ ಬ್ಯಾಂಕ್ ಇಂದು ರಾಜ್ಯದಲ್ಲೇ ಮೊದಲ ಸ್ಥಾನಿಯಾಗಿದೆ. ಹಲವಾರು ಪ್ರಶಸ್ತಿಗಳ ಗರಿಮೆಗೂ ಪಾತ್ರವಾಗಿದೆ. ಬಡ ರೈತಾಪಿ ವರ್ಗವನ್ನು ಗುರಿಯಾಗಿಸಿ ದೇಶದಲ್ಲೇ ಮೊತ್ತ ಮೊದಲ ಬಾರಿ ರೂಪೇ ಕಿಸಾನ್ ಕಾರ್ಡ್ ನ್ನು ರೈತರಿಗೆ ನೀಡಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೂ ಎಸ್ಸಿಡಿಸಿಸಿ ಬ್ಯಾಂಕ್ ಪಾತ್ರವಾಗಿದೆ.
ಸಹಕಾರಿ ರಂಗದ ಅಗ್ರಜ
ಸಹಕಾರ ಕ್ಷೇತ್ರದ ರಚನಾತ್ಮಕ ಕಾರ್ಯಗಳಲ್ಲಿ ಅಗ್ರಜರಾಗಿದ್ದ ಶಿವರಾಯರು ಶೋಷಣೆ ರಹಿತ ಸಮಾಜ ನಿರ್ಮಾಣದ ಕನಸುಗಾರರು. ಅವರ ಎಲ್ಲಾ ಚಟುವಟಕೆಗಳ ಕೇಂದ್ರ ಬಿಂದು ಕೃಷಿಕರಾಗಿದ್ದರು. ರೈತಾಪಿ ವರ್ಗವನ್ನು ಶೋಷಣೆಯಿಂದ ಮುಕ್ತಗೊಳಿಸುವುದು ಶಿವರಾಯರ ಉದ್ದೇಶವಾಗಿತ್ತು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿಕರ ಶ್ರೇಯೋಭಿವೃದ್ಧಿಯನ್ನೇ ಸಹಕಾರ ಸಂಘದ ಮುಖ್ಯ ಧ್ಯೇಯವನ್ನಾಗಿಸಿ ಶಿವರಾಯರು ಶ್ರಮಿಸಿದರು. 1936ರಲ್ಲಿ ಪುತ್ತೂರು ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕ್ನ ಸ್ಥಾಪನೆ, ದ್ರಾವಿಡ ಬ್ರಾಹ್ಮಣ ಸಹಕಾರಿ ಹಾಸ್ಟೆಲ್ ಸಂಘ, ಸಹಕಾರಿ ಸ್ಟೋರ್, ಧಾನ್ಯದ ಬ್ಯಾಂಕ್, ಮಹಿಳೆಯರ ಕೈಗಾರಿಕಾ ಸಂಘ, ಬಿಲ್ಡಿಂಗ್ ಸೊಸೈಟಿ ಸೇರಿದಂತೆ ಹಲವು ಸಹಕಾರಿ ಸಂಘಗಳನ್ನು ಅವರು ಪುತ್ತೂರಿನಲ್ಲಿ ಸ್ಥಾಪಿಸಿದರು. ಎರಡನೇ ಮಹಾಯುದ್ಧದ ಕಾಲದಲ್ಲಿ ಜಿಲ್ಲಾದ್ಯಂತ ತಲೆದೋರಿದ ಆಹಾರ ಧಾನ್ಯದ ಕೊರತೆಯಿಂದ ಜನರು ಕಂಗಾಲಾಗಿದ್ದ ಸಂದರ್ಭದಲ್ಲಿ ಶಿವರಾಯರು ‘ದ.ಕ . ಜಿಲ್ಲಾ ಸೆಂಟ್ರಲ್ ಕೋ-ಅಪರೇಟನ್ ಹೋಲ್ಸೇಲ್ ಸ್ಟೋರ್’ ಸಂಘವನ್ನು ಸ್ಥಾಪಿಸಿದರು. ಆಹಾರ ಧಾನ್ಯ ಗಳನ್ನು ಸಂಗ್ರಹಿಸಿ ಅದರ ಕ್ರಮಬದ್ಧ ವಿತರಣೆಗೆ ಅಹೋರಾತ್ರಿ ಶ್ರಮಿಸಿ ಜನರ ಮನಗೆದ್ದರು. ನಿಸ್ವಾರ್ಥ ಸೇವೆಯ ಮೂಲಕ ನಾಡಿಗೆ ಬಂದ ಭೀಕರ ಪರಿಸ್ಥಿತಿಯನ್ನು ಶಿವರಾಯರು ನಿಭಾಯಿಸಿ ಆಗಿನ ಮದ್ರಾಸ್ ರಾಜ್ಯ ಸರಕಾರದಿಂದ ಪ್ರಶಸ್ತಿ, ಪುರಸ್ಕಾರಗಳಿಂದ ಸನ್ಮಾನಿಸಲ್ಪಟ್ಟರು.
ಶಿವರಾಯರು ತಮ್ಮ 87 ವರ್ಷಗಳ ಜೀವಿತ ಅವಧಿಯಲ್ಲಿ 58 ವರ್ಷಗಳ ಕಾಲವನ್ನು ಸಹಕಾರ ರಂಗಕ್ಕೆ ಮೀಸಲಿರಿಸಿದರು. ಭಾರತದ ಪ್ರಧಾನ ಮಂತ್ರಿ ದಿವಂಗತ ಜವಾಹರಲಾಲ್ ನೆಹರೂರವರು ‘‘ಒಂದು ಹಳ್ಳಿಗೆ ಒಂದು ಶಾಲೆ, ಒಂದು ಸಹಕಾರಿ ಸಂಘ, ಒಂದು ಪಂಚಾಯತ್ ಇವುಗಳು ಬಹಳ ಅಗತ್ಯ’’ವೆಂದು 1949ರಲ್ಲಿ ಅಭಿಪ್ರಾಯ ಪಟ್ಟಿದ್ದರು. ಆದರೆ, ಶಿವರಾಯರು ಸುಮಾರು 35 ವರ್ಷಗಳ ಮೊದಲೇ ಇದನ್ನು ಕಾರ್ಯರೂಪಕ್ಕೆ ತಂದಿರುವುದು ಇಲ್ಲಿ ಉಲ್ಲೇಖನೀಯ. ಸಹಕಾರಿ ರಂಗವನ್ನು ಶಕ್ತಿ ಪೂರ್ಣ ಪ್ರಭಾವಶಾಲಿಯಾಗಿ ರೂಪಿಸಿದ ಮೊಳಹಳ್ಳಿ ಶಿವರಾಯರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಆಂದೋಲನದಲ್ಲಿ ಮಾಡಿದ ಸೇವೆ ಶ್ಲಾಘನೀಯ ಹಾಗೂ ಅಪ್ರತಿಮವಾದುದು. ಸಹಕಾರ ಆಂದೋಲನದ ಪೀಳಿಗೆಯೊಂದಕ್ಕೆ ಉಸಿರನ್ನು ನೀಡಿ ಜೀವನವಿಡೀ ‘ಸಹಕಾರ ಮಂತ್ರ’ವನ್ನು ಜಪಿಸಿದ ಶಿವರಾಯರು 1967ರ ಜುಲೈ 4ರಂದು ಕೀರ್ತಿಶೇಷರಾದರು. ಅವರ ಅವಿಸ್ಮರಣೀಯ ಅಪಾರ ನೆನಪು ಸಹಕಾರಿಗಳೆಲ್ಲರಲ್ಲಿ ಮರೆಯಲಾಗದಂತಹುದೇ ಆಗಿದೆ.