ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರು
ಬ್ರಿಟಿಷ್ ವಸಾಹತುಶಾಹಿಯ ವಿರುದ್ಧದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ಜಾತಿ ಜನಾಂಗಗಳ ಜನರು ಧರ್ಮಾತೀತರಾಗಿ ಹೋರಾಟ ಮಾಡಿದ್ದಾರೆ. ಅಂತೆಯೇ ಕ್ರಿ.ಶ. ೧೮೩೭ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ(ಕಾಸರಗೋಡು ಭಾಗಗಳೂ ಸೇರಿ)ಯಲ್ಲಿ ನಡೆದ ಬ್ರಿಟಿಷ್ ವಿರೋಧಿ ಹೋರಾಟವು ಅಮರ ಸುಳ್ಯದ ಸ್ವಾತಂತ್ರ್ಯ ಸಂಗ್ರಾಮ ಎಂಬುದಾಗಿ ಚರಿತ್ರೆಯಲ್ಲಿ ಗುರುತಿಸಲ್ಪಡುತ್ತಿದ್ದು, ಇಲ್ಲಿಯ ಎಲ್ಲಾ ಜಾತಿ ಜನಾಂಗದವರು ಈ ಹೋರಾಟದಲ್ಲಿ ಮುಕ್ತವಾಗಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಇದರ ಪರಿಣಾಮವಾಗಿ ಕ್ರಿ.ಶ. ೧೮೩೭ರ ಎಪ್ರಿಲ್ ೬ರಿಂದ ಎಪ್ರಿಲ್ ೧೯ರ ತನಕ ೧೩ ದಿನಗಳ ಆಡಳಿತ ನಡೆಸಿದರು. ಇದೊಂದು ಪರಿಪೂರ್ಣ ಸರಕಾರವಾಗಿದ್ದು ಜನಪರ ನೀತಿ ನಿರೂಪಣೆಗಳನ್ನು ಜಾರಿ ಮಾಡಿರುವುದನ್ನು ನಾವು ಕಾಣಬಹುದು.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸೈನ್ಯವು ೧೮೩೭ರ ಎಪ್ರಿಲ್ ೧೯ರಂದು ಮತ್ತೆ ಮಂಗಳೂರಿನ ಮೇಲೆ ದಾಳಿ ಮಾಡಿ ಅಮರ ಸೈನ್ಯವನ್ನು ಸೋಲಿಸಿತು. ಬಳಿಕ ನಡೆದ ಸಂಗತಿಗಳೇ ದುರಂತಮಯ.
ಈ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಕೆ.ಆರ್.ವಿದ್ಯಾಧರರು ತಮ್ಮ ‘ಅಮರ ಸುಳ್ಯ-೧೮೩೭’ ಕೃತಿಯಲ್ಲಿ ಉಲ್ಲೇಖಿಸಿದಂತೆ, ಕಂಪೆನಿ ಸರಕಾರವು ಒಟ್ಟು ೧,೧೧೫ ಜನರನ್ನು ಬಂಧಿಸಿತ್ತು. ಅವರಲ್ಲಿ ೪೮೪ ಮಂದಿಯನ್ನು ವಿಚಾರಣೆ ನಡೆಸದೆ ಬಿಡುಗಡೆಗೊಳಿಸಿದ್ದಾರೆ. ೧೧ ಮಂದಿಯನ್ನು ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದಾರೆ. ೧೨ ಮಂದಿಯನ್ನು ಕೋರ್ಟ್ ಮಾರ್ಷಲ್ಗೆ ಒಳಪಡಿಸಲಾಯಿತು. ವಿಶೇಷ ಆಯೋಗದ ಮುಂದೆ ೫೪ ಪ್ರಕರಣಗಳಿದ್ದವು. ಅಲ್ಲಿ ಒಟ್ಟು ೪೧೬ ಜನರ ವಿಚಾರಣೆ ನಡೆಸಲಾಯಿತು. ೧೩೩ ಜನರ ವಿಚಾರಣೆಯನ್ನು ಕ್ರಿಮಿನಲ್ ನ್ಯಾಯಾಲಯದಲ್ಲಿ ಜರುಗಿಸಲಾಯಿತು. ೩೫ ಮಂದಿ ವಿಚಾರಣಾಧೀನ ಕೈದಿಗಳು ಸೆರೆಮನೆ ವಾಸದಲ್ಲಿದ್ದಾಗ ಮೃತಪಟ್ಟಿದ್ದಾರೆ. (ಚಿತ್ರಹಿಂಸೆಯಿಂದ ?) ಇವರಲ್ಲದೆ ಇತರ ೧೫೫ ಜನರ ವಿರುದ್ಧ ಬೇರೆ ಆರೋಪಗಳ ಅಡಿಯಲ್ಲಿ ಪ್ರಕರಣಗಳನ್ನು ನಡೆಸಲಾಗಿದೆ.
ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಂದಾವರದ ಲಕ್ಷ್ಮಪ್ಪಬಂಗರಸರನ್ನು ೧೮೩೭ರ ಮೇ ೨೩ರಂದು, ಉಪ್ಪಿನಂಗಡಿ ಮಂಜನನ್ನು ಮೇ ೩೦ರಂದು, ಪುಟ್ಟ ಬಸಪ್ಪನನ್ನು ಜೂ.೧೯ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಹಾಡು ಹಗಲೇ ಸಾರ್ವಜನಿಕರ ಮುಂದೆ ಗಲ್ಲಿಗೇರಿಸಲಾಯಿತು. ಗುಡ್ಡೆಮನೆ ಅಪ್ಪಯ್ಯ ಗೌಡನನ್ನು ಅದೇ ವರ್ಷ ಅಕ್ಟೋಬರ್ ೩೧ರಂದು ಮಡಿಕೇರಿಯ ಕೋಟೆಯೊಳಗೆ ನೇಣಿಗೆ ಹಾಕಲಾಯಿತು. ಇವಿಷ್ಟು ಅಮರ ಸುಳ್ಯ ಸಂಗ್ರಾಮದ ಸಾರಾಂಶ.
ಕೊಡಗು ಸಂಸ್ಥಾನ(ಹಾಲೇರಿ)ವನ್ನು ಹೊರತು ಪಡಿಸಿ, ದಕ್ಷಿಣ ಭಾರತದ ಬಹು ಭಾಗವನ್ನು ಆಳುತ್ತಿದ್ದ ಮೈಸೂರಿನ ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ಬ್ರಿಟಿಷರಿಗೆ ಒಳ ಪ್ರವೇಶಿಸಲು ಅವಕಾಶವನ್ನೇ ಕೊಡಲಿಲ್ಲ. ಆತನ ಬಲಿಷ್ಠ ಸೈನ್ಯವನ್ನು ಬಗ್ಗು ಬಡಿಯುವ ಯಾವ ತಾಕತ್ತೂ ಬ್ರಿಟಿಷರಿಗೆ ಇರಲಿಲ್ಲ. ಆತನಲ್ಲಿದ್ದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಫಿರಂಗಿಗಳು ಮತ್ತು ಅಸಂಖ್ಯಾತ ಸೈನಿಕರ ಮುಂದೆ ಬ್ರಿಟಿಷರ ಆಟ ನಡೆಯಲಿಲ್ಲ. ಆ ಕಾಲಕ್ಕೆ ಚೀನಾ ಮತ್ತು ಫ್ರಾನ್ಸ್ ಜೊತೆಗೆ ಟಿಪ್ಪು ಸುಲ್ತಾನ್ ರಾಜ ತಾಂತ್ರಿಕ ವ್ಯವಹಾರ ಹೊಂದಿದ್ದ. ಆದರೆ ಕ್ರಿ.ಶ. ೧೭೯೯ರ ಶ್ರೀರಂಗಪಟ್ಟಣ ಯುದ್ಧವು ಭಾರತದ ಚರಿತ್ರೆಯನ್ನೇ ಬದಲಾಯಿಸಿತು. ಇದರೊಂದಿಗೆ ಮಂಗಳೂರಿನಿಂದ ಮಡಿಕೇರಿ ವರೆಗಿನ ಭೂ ಪ್ರದೇಶವೂ ಕಂಪೆನಿಯ ಸ್ವಾಧೀನಕ್ಕೆ ಹೋಯಿತು.
ಟಿಪ್ಪು ಮಡಿದರೂ ಆತನ ಸೈನ್ಯದಲ್ಲಿದ್ದವರು ಬ್ರಿಟಿಷರನ್ನು ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಆತನ ಸಾಮ್ರಾಮ್ಯದ ಉದ್ದಕ್ಕೂ ಅನಂತರದ ದಿನಗಳಲ್ಲಿ ಬ್ರಿಟಿಷರು ನಿರಂತರ ಸ್ಥಳೀಯರ ಪ್ರತಿರೋಧವನ್ನು ಎದುರಿಸಬೇಕಾಯಿತು. ೧೮೦೦ರಲ್ಲಿ ಮೆಹ್ತಾಬ್ ಖಾನ್ ಎಂಬಾತ ತಾನು ಟಿಪ್ಪುವಿನ ಮಗ ಫತೇ ಹೈದರ್ ಎಂಬುದಾಗಿ ತನ್ನನ್ನು ಘೋಷಿಸಿಕೊಂಡು ಕಾಸರಗೋಡು ಸಮೀಪದ ಅಡೂರಿನಲ್ಲಿ ಪ್ರತ್ಯಕ್ಷನಾಗುತ್ತಾನೆ. ಈ ಪ್ರದೇಶದಲ್ಲಿ ಆತನಿಗೆ ಅಪಾರ ಜನಬೆಂಬಲ ದೊರೆಯುತ್ತದೆ. ಆದರೆ ಆತನನ್ನು ಬ್ರಿಟಿಷರು ಬಂಧಿಸುತ್ತಾರೆ ಮತ್ತು ೧೮೦೦ರ ಜುಲೈ ೧೫ರಂದು ಗಲ್ಲಿಗೇರಿಸುತ್ತಾರೆ.
೧೮೩೨ರಲ್ಲಿ ಉಸ್ಮಾನ್ ಬೇಗ್ ಎಂಬಾತ ಬ್ರಿಟಿಷರಿಗೆ ತಲೆನೋವಾಗಿ ಪರಿಣಮಿಸುತ್ತಾನೆ. ಈತ ಅಪರಿಮಿತ ಸಾಹಸಿ, ವೀರಯೋಧ, ಬ್ರಿಟಿಷರನ್ನು ಸಹಿಸಲಾರದಾತ. ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದಲ್ಲಿದ್ದುಕೊಂಡು ಬ್ರಿಟಿಷ್ ಸೈನಿಕರನ್ನೇ ಬ್ರಿಟಿಷರ ವಿರುದ್ದ ದಂಗೆ ಏಳುವಂತೆ ಹುರಿದುಂಬಿಸುತ್ತಾನೆ. ಈತನಿಗೆ ಅಬ್ಬಾಸ್ ಸಾಹೇಬ ಎಂಬಾತ ಪ್ರೇರಣೆ ನೀಡುತ್ತಿದ್ದ. ಈ ಪ್ರಕರಣವು ‘ಕಂಟೋನ್ಮೆಂಟ್ ಕಾನ್ಸ್ಪಿರಸಿ’ ಅಥವಾ ‘ದಂಡು ಪ್ರದೇಶದ ಪಿತೂರಿ’ ಎಂಬುದಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಆದರೆ ೧೮೩೨ರ ಜುಲೈ ೨೧ರಂದು ಈತ ಸೆರೆಯಾಗುತ್ತಾನೆ. ಬಳಿಕ ಆತನಿಗೆ ಮರಣ ದಂಡನೆ ವಿಧಿಸಲಾಗುತ್ತದೆ. ಉಸ್ಮಾನ್ ಬೇಗ್ ಸೆರೆ ಸಿಕ್ಕಿದ ತಕ್ಷಣ ಅತ್ಯಂತ ಚಾಣಾಕ್ಷನಾದ ಅಬ್ಬಾಸ್ ಸಾಹೇಬನು ಬ್ರಿಟಿಷ್ ಸೈನ್ಯದಿಂದ ತಪ್ಪಿಸಿಕೊಂಡು ಕೊಡಗಿಗೆ ಪ್ರಯಾಸುತ್ತಾನೆ. ಕೊಡಗಿನ
ರಾಜ ಚಿಕ್ಕವೀರರಾಜೇಂದ್ರ ಒಡೆಯನ ಆಶ್ರಯ ಪಡೆದುಕೊಂಡು ಜೊತೆಯಾಗಿ ಬ್ರಿಟಿಷರ ವಿರುದ್ಧ ಹೋರಾಡುವ ಒಪ್ಪಂದಕ್ಕೆ ಬರುತ್ತಾನೆ. ಬಳಿಕ ಗಂಜಂ(ಒರಿಸ್ಸಾ)ನ ಫಕ್ರುದ್ದೀನ್ ಎಂಬಾತನನ್ನು ಸಂಪರ್ಕಿಸುತ್ತಾನೆ. ಬ್ರಿಟಿಷರ ವಿರುದ್ಧ ಹೋರಾಡಲು ೨,೦೦೦ ಸಿಪಾಯಿಗಳನ್ನು ಕೊಡಗಿಗೆ ಒದಗಿಸುವಂತೆ ಒಪ್ಪಂದ ಮಾಡಿಕೊಳ್ಳುತ್ತಾನೆ. ಅಬ್ಬಾಸ್ ಸಾಹೇಬನ ರಾಜತಾಂತ್ರಿಕ ಚಾಕಚಕ್ಯತೆಯನ್ನು ಅರಿತುಕೊಂಡ ಚಿಕ್ಕವೀರರಾಜೇಂದ್ರ ಆತನನ್ನು ದಿವಾನನನ್ನಾಗಿ ಮಾಡುತ್ತಾನೆ. ಇವನಲ್ಲದೆ ಬದ್ರುದ್ದೀನ್ ಮುನ್ಶಿ ಮತ್ತು ಶೇಕ್ ಹುಸೈನ್ ಎಂಬಿಬ್ಬರು ಅಪ್ರತಿಮ ಹೋರಾಟಗಾರರಾಗಿದ್ದರು.
ಇದೇ ಹೊತ್ತಿಗೆ ಮೈಸೂರಿನಲ್ಲಿ ಬೇರೊಂದು ಹೋರಾಟ ಆರಂಭವಾಗಿತ್ತು. ಅದರ ನಾಯಕ ಮಮ್ಮು ಮಿಯಾ ಅಲಿಯಾಸ್ ಗುಲಾಮ್ ಮುಹಮ್ಮದ್ ಕ್ರಿ.ಶ. ೧೮೨೬ರಲ್ಲಿ ಬ್ರಿಟಿಷರ ವಿರುದ್ಧ ಮೈಸೂರಿನಲ್ಲಿ ದಂಗೆ ಏಳುವಂತೆ ಜನಸಂಘಟನೆ ಮಾಡುತ್ತಿದ್ದ. ಕ್ರಿ.ಶ. ೧೮೩೭ರ ಎಪ್ರಿಲ್ ೧೯ರಂದು ಮಂಗಳೂರಿನಲ್ಲಿದ್ದ ಅಮರ ಸುಳ್ಯದ ಸರಕಾರವು ಪತನವಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರನ್ನು ಹುಡುಕಿ ಜೈಲಿಗೆ ಹಾಕುತ್ತಿದ್ದರು. ಅಮರ ಸುಳ್ಯದ ಹೋರಾಟದ ಮುಂದುವರಿದ ಭಾಗ ಎಂಬಂತೆ ಉತ್ತರ ಕನ್ನಡ ಜಿಲ್ಲೆಯ ಸೂಪಾದಲ್ಲಿ ತಾನು ಟಿಪ್ಪು ಸುಲ್ತಾನ್ನ ಮಗನೆಂದು ಫಕೀರ್ ಇಸ್ಸಾಮ್ ಶಾ ಎಂಬಾತ ಬ್ರಿಟಿಷರ ವಿರುದ್ಧ ಜನಸಂಘಟನೆ ಮಾಡುತ್ತಾನೆ. ಆದರೆ ನಿರೀಕ್ಷಿತ ಪರಿಣಾಮ ದೊರೆಯಲಿಲ್ಲ. ಯಾಕೆಂದರೆ ಬ್ರಿಟೀಷರು ಅದಾಗಲೇ ಭಾರತದಲ್ಲಿ ಭದ್ರವಾಗಿ ಬೇರೂರಿದ್ದರು. ಅದೇನಿದ್ದರೂ ಇವರೆಲ್ಲಾ ಈ ಮಣ್ಣಿನ ಮಕ್ಕಳಾಗಿದ್ದು ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ಬಲಿದಾನ ಗೈದಿದ್ದಾರೆ.
ಈ ಹಿಂದೆ ಸಂಕ್ಷಿಪ್ತವಾಗಿ ವಿವರಿಸಲಾದ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದ ಮುಸಲ್ಮಾನ ಯೋಧರ ವಿವರಗಳನ್ನು ನೋಡೋಣ.
ವಿವಿಧ ಬ್ರಿಟೀಷ್ ದಾಖಲೆಗಳ ಪ್ರಕಾರ ಅಮರ ಸೈನ್ಯದ ಒಟ್ಟು ಸಂಖ್ಯಾಬಲ ೧೦ರಿಂದ ೧೨ ಸಾವಿರ. ಈ ಪೈಕಿ ೧,೧೧೫ ಮಂದಿಯನ್ನು ಬಂಧಿಸಿರುವುದಾಗಿ ತಿಳಿದು ಬರುತ್ತದೆ. ಇವರ ಪೈಕಿ ಕೇವಲ ೯೮ ಮಂದಿಯ ಹೆಸರು ಪತ್ತೆ ಹಚ್ಚಲಾಗಿದೆ. ಇವರಲ್ಲಿ ೮ ಮಂದಿ ಮುಸ್ಲಿಮರು. ಬ್ರಿಟಿಷರ ಪ್ರಕಾರ ಹೋರಾಟದಲ್ಲಿ ಭಾಗಿಯಾದವರೆಲ್ಲ ದೇಶದ್ರೋಹಿಗಳೇ. ಅದೇನಿದ್ದರೂ ಬಂಧಿಸಲ್ಪಟ್ಟ ೧,೧೧೫ ಮಂದಿ ಮಾತ್ರ ಹೋರಾಟಗಾರರಲ್ಲ. ಹಾಗೆಯೇ ಈ ೮ ಮಂದಿ ಮಾತ್ರ ಮುಸ್ಲಿಮ್ ಹೋರಾಟಗಾರರಲ್ಲ. ಸ್ವಾತಂತ್ರ್ಯ ಹೋರಾದಲ್ಲಿ ಅದಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಮುಸಲ್ಮಾನರಿದ್ದರು. ಅಮರ ಸುಳ್ಯದ ಹೋರಾಟದ ಕುರಿತಾಗಿ ಅಧ್ಯಯನ ನಡೆಸಿದಾಗ ದೊರೆತ ಮುಸಲ್ಮಾನ ಯೋಧರ ವಿವರ ಈ ಕೆಳಗಿನಂತಿದೆ.
ಬ್ರಿಟಿಷ್ ವಿರುದ್ಧ ಹೋರಾಟ ನಡೆಸಿದ ಕಾರಣಕ್ಕಾಗಿ ಬೈಕಂಪಾಡಿಯ ಇಸಾಕ್ ಬ್ಯಾರಿ ಎಂಬಾತನನ್ನು ಬಂಧಿಸಿ ಕೊಯಮುತ್ತೂರಿನ ಕಾರಾಗ್ರಹದಲ್ಲಿ ಜೀವನ ಪರ್ಯಂತ ಇರಿಸಿದ್ದರು. ಮಮ್ಮು ಬ್ಯಾರಿ ಎಂಬಾತನಿಗೆ ೧೪ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಶೇಕ್ ಎಂಬ ವ್ಯಕ್ತಿಗೆ ಜೀವನ ಪರ್ಯಂತ ಜೈಲು ಶಿಕ್ಷೆ, ಸುಳ್ಯದ ಹುಸೈನ್ ಎಂಬಾತನಿಗೆ ೧೦ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಹುಸೈನ್ ಬ್ಯಾರಿ ಉರುಫ್ ಹುಸೈನ್ ಮುಹಮ್ಮದ್ಗೆ ೭ ವರ್ಷಗಳ ಜೈಲು ಶಿಕ್ಷೆ. ಇವರಲ್ಲದೆ ಬಾವು ಕುಟ್ಟಿ, ಕೊಟ್ಟಕುಂಞಿ, ಬೇಕಲದ ಅಬ್ಬಾಸ್ ಬ್ಯಾರಿ ಮೊದಲಾದವರನ್ನು ಬಂಧಿಸಲಾಗಿತ್ತಾದರೂ ಹೆಚ್ಚಿನ ವಿವರ ದೊರೆಯುತ್ತಿಲ್ಲ. ಆ ದಿನಗಳಲ್ಲಿ ಮಂಗಳೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದ ಮುಸ್ಲಿಮ್ ವರ್ತಕರು ಅಮರ ಸೈನ್ಯಕ್ಕೆ ಬೆಂಬಲ ಸೂಚಿಸಿ ಸಹಕರಿಸಿದ್ದರೆಂದು ನಂತರದ ಬ್ರಿಟಿಷ್ ವರದಿಗಳಲ್ಲಿ ದಾಖಲಿಸಲ್ಪಟ್ಟಿದೆ.
ಬ್ರಿಟಿಷರು, ಫ್ರೆಂಚರು, ಪೋರ್ಚುಗೀಸರು ಭಾರತವನ್ನು ಆಕ್ರಮಿಸಲು ಬರುವಾಗ ಇಲ್ಲಿ ಬಹುವಾಗಿ ಮುಸ್ಲಿಮ್ ಅರಸರೇ ರಾಜ್ಯಭಾರ ನಡೆಸುತ್ತಿದ್ದರು. ಹಾಗಾಗಿ ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಮುಸಲ್ಮಾನರೇ ಭಾರತದಾದ್ಯಂತ ನೇತೃತ್ವ ವಹಿಸಿದ್ದು ಕಂಡು ಬರುತ್ತದೆ. ಎರಡನೇಯದಾಗಿ ಅಂತರ್ರಾಷ್ಟ್ರೀಯ ವ್ಯಾಪಾರವನ್ನು ಬಹು ಕಾಲದಿಂದಲೂ ಮುಸಲ್ಮಾನ ವ್ಯಾಪಾರಿಗಳೇ ಮುನ್ನಡೆಸುತ್ತಿದ್ದರು. ಇವರನ್ನು ನಿಯಂತ್ರಿಸುವ ಕೆಲಸಕ್ಕೆ ಐರೋಪ್ಯರು ಕೈ ಹಾಕಿದ ಕಾರಣ ಈ ಹಿತಾಸಕ್ತಿಗಳು ಪರಸ್ಪರ ಪೈಪೋಟಿಗಿಳಿದಂತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮುಸಲ್ಮಾನರು ಭಾರತೀಯರಾಗಿಯೇ ಐರೋಪ್ಯರ ವಿರುದ್ಧ ಸಿಡಿದೆದ್ದರು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಕೊಡುಗೆಗಳನ್ನು ನೀಡಿರುವುದು ಇತಿಹಾಸದುದ್ದಕ್ಕೂ ಕಂಡು ಬರುತ್ತದೆ. ದೇಶಕ್ಕಾಗಿ ತ್ಯಾಗ, ಬಲಿದಾನ ಗೈದವರಲ್ಲಿ ಇವರು ಪ್ರಮುಖರಾಗಿ ಕಾಣಿಸಿಕೊಂಡಿದ್ದಾರೆ.