ಪಿಎಫ್ಐ ಮತ್ತದರ 8 ಅಂಗಸಂಸ್ಥೆಗಳಿಗೆ ಕೇಂದ್ರ ಸರಕಾರದಿಂದ 5 ವರ್ಷ ನಿಷೇಧ
ಹೊಸದಿಲ್ಲಿ: ಉಗ್ರಗಾಮಿ ಚಟುವಟಿಕೆಗಳಿಗೆ ನೆರವು ನೀಡುವ ಆರೋಪದಲ್ಲಿ ಕೇಂದ್ರೀಯ ಏಜೆನ್ಸಿಗಳು ದೇಶಾದ್ಯಂತ ಪಿಎಫ್ಐ ಕಚೇರಿಗಳ ಮೇಲೆ ದಾಳಿ ನಡೆಸಿ ಹಲವು ಮಂದಿ ಮುಖಂಡರನ್ನು ಬಂಧಿಸಿದ ಬೆನ್ನಲ್ಲೇ, ದೇಶಾದ್ಯಂತ ಮುಂದಿನ ಐದು ವರ್ಷಗಳ ಅವಧಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
PFI ಜತೆ ನಂಟು ಹೊಂದಿರುವ ಎಂಟು ಸಹ ಸಂಸ್ಥೆಗಳನ್ನು ಕೂಡಾ ನಿಷೇಧಿಸಲಾಗಿದೆ. ತನಿಖಾ ಏಜೆನ್ಸಿಗಳ ವರದಿ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಕಾನೂನು ಬಾಹಿರ ಸಂಘಟನೆಗಾಗಿ PFI ಹಾಗೂ ಇತರ ಎಂಟು ಸಹ ಸಂಸ್ಥೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಅನ್ವಯ ನಿಷೇಧೀಸಲಾಗಿದೆ ಎಂದು ಸರ್ಕಾರದ ಅಧಿಸೂಚನೆ ಹೇಳಿದೆ.
ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ), ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಎಸ್ಐಎಸ್) ಸಂಘಟನೆಗಳ ಜತೆ ನಂಟು ಹೊಂದಿರುವ ಕಾರಣಕ್ಕೆ ಪಿಎಫ್ಐ ನಿಷೇಧಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಗಳಾದ ರೆಹಾಬ್ ಇಂಡಿಯಾ ಫೌಂಡೇಶನ್ (Rehab India Foundation), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ (NCHRO), ನ್ಯಾಷನಲ್ ವಿಮೆನ್ಸ್ ಫ್ರಂಟ್ (NWF), ಜೂನಿಯರ್ ಫ್ರಂಟ್ (JF), ಎಂಪವರ್ ಇಂಡಿಯಾ ಫೌಂಡೇಶನ್ (EIF) ಮತ್ತು ರಿಹಾಬ್ ಫೌಂಡೇಶನ್, ಕೇರಳ (EFRF) ನಿಷೇಧಿಸಲಾಗಿದೆ.