ಮೂರು ವರ್ಷದ ಮಗುವಿಗೆ ನೇಣು ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ!
ಭೋಪಾಲ್ : ಮೂರು ವರ್ಷದ ಪುಟ್ಟ ಹೆಣ್ಣುಮಗುವನ್ನು ನೇಣು ಬಿಗಿದು ಸಾಯಿಸಿದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಇಲ್ಲಿನ ಅಶೋಕ್ ಗಾರ್ಡನ್‍ನಲ್ಲಿ ಬೆಳಕಿಗೆ ಬಂದಿದೆ.
ಈ ಘಟನೆ ನಡೆದಾಗ ಪತಿ ಪಕ್ಕದ ಕೊಠಡಿಯಲ್ಲಿ ನಿದ್ದೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ತಾಯಿ ಮನೆಗೆ ಬಂದು ನೋಡಿದಾಗ, ಪುಟ್ಟ ಮಗು ಹಾಗೂ ತಾಯಿಯ ಶವ ನೇತಾಡುತ್ತಿದ್ದುದು ನೋಡಿ ಆಘಾತಗೊಂಡರು. ಮಹಿಳೆಯ ರೋಧನ ಕೇಳಿ ಎಚ್ಚರಗೊಂಡ ಪತಿ ತಕ್ಷಣವೇ ಪತ್ನಿ ಹಾಗೂ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ ಇಬ್ಬರೂ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು. ಈ ಮಾಹಿತಿ ಸಿಕ್ಕಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಮಹಿಳೆಯನ್ನು ವರ್ಷಾ ರಾವತ್ (30) ಎಂದು ಗುರುತಿಸಲಾಗಿದೆ. ನಾಲ್ಕು ವರ್ಷದ ಹಿಂದೆ ಈಕೆ ಪಂಡೂರ್ನಾ ನಿವಾಸಿ ರಾಜೇಂದ್ರ ರಾವತ್ ಎಂಬವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಪ್ರಸ್ವಿ ಎಂಬ ಮೂರು ವರ್ಷದ ಹೆಣ್ಣುಮಗು ಇತ್ತು. ರಾಜೇಂದ್ರ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮದುವೆ ಬಳಿಕ ವರ್ಷಾ- ರಾಜೇಂದ್ರ ಹಾಗೂ ಅವರ ಮಗಳು ವರ್ಷಾ ಅವರ ತಂಗಿ ಪೂನಂ ಮನೆಯಲ್ಲಿ ವಾಸವಿದ್ದರು. ಮೂರು ತಿಂಗಳ ಹಿಂದೆ ದಂಪತಿ, ವರ್ಷಾಳ ತವರು ಮನೆಗೆ ಸ್ಥಳಾಂತರಗೊಂಡಿದ್ದರು ಎಂದು ಠಾಣಾಧಿಕಾರಿ ಅಲೋಕ್ ಶ್ರೀವಾಸ್ತವ ಹೇಳಿದ್ದಾರೆ.
ವರ್ಷಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಮೂರು ನಾಲ್ಕು ದಿನಗಳ ಹಿಂದೆ ಅವರ ತಾಯಿ ಮಮತಾ ಕಿರಿಯ ಮಗಳ ಮನೆಗೆ ಹೋಗಿದ್ದು, ವಾಪಸ್ಸಾದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ವಿವರಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.