"ಪಿಯು ವಿದ್ಯಾರ್ಥಿನಿಯ ಬಳಿ ಶಾಲಾ ಗೇಟ್ನಲ್ಲಿ ಹಿಜಾಬ್ ತೆಗೆಯುವಂತೆ ಹೇಳುವುದು ಆಕೆಯ ಘನತೆ, ಗೌಪ್ಯತೆಯ ಮೇಲಿನ ದಾಳಿ"
ನಮ್ಮ ಸಂವಿಧಾನ ಅಲ್ಪಸಂಖ್ಯಾತರು ಬಹುಸಂಖ್ಯಾತರ ಮೇಲೆ ಇಟ್ಟಿರುವ ನಂಬಿಕೆಯಾಗಿದೆ ಎಂದ ನ್ಯಾಯಮೂರ್ತಿ ಧುಲಿಯಾ
ಜಸ್ಟೀಸ್ ಧುಲಿಯಾ (eastmojo)
ಹೊಸದಿಲ್ಲಿ: ಪಿಯು ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ಕುರಿತು ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಾಧೀಶರು ಇಂದು ವಿಭಿನ್ನ ರೀತಿಯ ತೀರ್ಪು ನೀಡಿದ್ದು, ಜಸ್ಟಿಸ್ ಹೇಮಂತ್ ಗುಪ್ತಾ ಅವರು ಹಿಜಾಬ್ ನಿಷೇಧವನ್ನು ಬೆಂಬಲಿಸಿದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹೆಣ್ಣುಮಕ್ಕಳ ಶಿಕ್ಷಣವನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಿ ಹಿಜಾಬ್ ನಿಷೇಧದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ರದ್ದು ಪಡಿಸಿದ್ದಾರೆ.
ಆದೇಶವನ್ನು ನೀಡುವಾಗ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಜಾತ್ಯತೀತತೆ, ಸಾಂವಿಧಾನಿಕ ಸ್ವಾತಂತ್ರ್ಯಗಳು ಮತ್ತು ಹೆಣ್ಣುಮಕ್ಕಳ ಶಿಕ್ಷಣವನ್ನು ಸಕ್ರಿಯಗೊಳಿಸುವ ಬಗ್ಗೆ ಒತ್ತಿ ಹೇಳಿದ್ದಾರೆ. “ನಮ್ಮ ಸಂವಿಧಾನದ ಹಲವು ಅಂಶಗಳಲ್ಲಿ ನಂಬಿಕೆಯೂ ಒಂದು. ನಮ್ಮ ಸಂವಿಧಾನವೂ ಕೂಡಾ ನಂಬಿಕೆಯ ದಾಖಲೆಯಾಗಿದೆ. ಇದು ಅಲ್ಪಸಂಖ್ಯಾತರು ಬಹುಸಂಖ್ಯಾತರ ಮೇಲೆ ಇಟ್ಟಿರುವ ನಂಬಿಕೆಯಾಗಿದೆ.” ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದ್ದಾರೆ.
"ಶಾಲೆಗಳಲ್ಲಿ ಶಿಸ್ತು ಬೇಕು. ಆದರೆ ಶಿಸ್ತಿಗಾಗಿ ಸ್ವಾತಂತ್ರ್ಯ, ಘನತೆ ಬೆಲೆ ತೆರಬಾರದು. ಪದವಿ ಪೂರ್ವ ವಿದ್ಯಾರ್ಥಿನಿಯೊಬ್ಬಳ ಬಳಿ ತನ್ನ ಶಾಲೆಯ ಗೇಟ್ನಲ್ಲಿ ಹಿಜಾಬ್ ಅನ್ನು ತೆಗೆಯುವಂತೆ ಹೇಳುವುದು ಅವಳ ಗೌಪ್ಯತೆ ಮತ್ತು ಘನತೆಯ ಮೇಲಿನ ಆಕ್ರಮಣವಾಗಿದೆ. ," ನ್ಯಾಯಾಧೀಶ ಧುಲಿಯಾ ಹೇಳಿದರು.
"ಭಾರತದ ಇಂದಿನ ಅತ್ಯುತ್ತಮ ದೃಶ್ಯಗಳಲ್ಲಿ ಒಂದು ಹೆಣ್ಣು ಮಗು ತನ್ನ ಶಾಲಾ ಚೀಲವನ್ನು ಬೆನ್ನಿನ ಮೇಲೆ ಇಟ್ಟುಕೊಂಡು ಬೆಳಿಗ್ಗೆ ತನ್ನ ಶಾಲೆಗೆ ಹೊರಡುವುದು. ಅವಳು ನಮ್ಮ ಭರವಸೆ, ನಮ್ಮ ಭವಿಷ್ಯ. ಆದರೆ ಇದು ತುಂಬಾ ಸತ್ಯ. ತನ್ನ ಸಹೋದರನಿಗೆ ಹೋಲಿಸಿದರೆ ಹೆಣ್ಣು ಮಗುವಿಗೆ ಶಿಕ್ಷಣ ಪಡೆಯುವುದು ಹೆಚ್ಚು ಕಷ್ಟಕರವಾಗಿದೆ" ಎಂದು ನ್ಯಾಯಮೂರ್ತಿ ಧುಲಿಯಾ ಅಭಿಪ್ರಾಯಪಟ್ಟಿದ್ದಾರೆ.
“ ಭಾರತದ ಅನೇಕ ಭಾಗಗಳಲ್ಲಿ, ಒಂದು ಹೆಣ್ಣು ಮಗು ಶಾಲೆಗೆ ಹೋಗುವ ಮೊದಲು ಮನೆಕೆಲಸಗಳನ್ನು ಮಾಡಬೇಕಾಗಿದೆ. "ನಾವು ಇದನ್ನು (ಹಿಜಾಬ್ ನಿಷೇಧ) ಮಾಡುವ ಮೂಲಕ ಅವಳ ಜೀವನವನ್ನು ಉತ್ತಮಗೊಳಿಸುತ್ತಿದ್ದೇವೆಯೇ?" ಎಂದು ಧುಲಿಯಾ ಪ್ರಶ್ನಿಸಿದ್ದಾರೆ.
"ಇದು ಅಂತಿಮವಾಗಿ ಆಯ್ಕೆಯ ವಿಷಯವಾಗಿದೆ, ಬೇರೇನೂ ಇಲ್ಲ” ಎಂದು ಅವರು ಹೇಳಿದ್ದಾರೆ.
" ಹಿಜಾಬ್ ಧರಿಸುವುದನ್ನು ಅರ್ಜಿದಾರರು ಬಯಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಷ್ಟು ಕೇಳುವುದು ಹೆಚ್ಚೇ? ಇದು ಸಾರ್ವಜನಿಕ ಸುವ್ಯವಸ್ಥೆಗೆ ಹೇಗೆ ವಿರುದ್ಧವಾಗಿದೆ? ನೈತಿಕತೆ, ಸಭ್ಯತೆ ಅಥವಾ ಆರೋಗ್ಯಕ್ಕೆ ಹೇಗೆ ವಿರುದ್ಧವಾಗಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.