ಡಿ.31ರಿಂದ 49 ಫೋನ್ ಗಳಲ್ಲಿ ವಾಟ್ಸ್ಆ್ಯಪ್ ಸ್ಥಗಿತಗೊಳ್ಳಲಿದೆ
ಹೊಸದಿಲ್ಲಿ,ಡಿ.27: ವಾಟ್ಸ್ಆ್ಯಪ್(Whatsapp) ಪ್ರತಿವರ್ಷವೂ ಹಲವಾರು ಫೋನ್ ಗಳಲ್ಲಿ ತನ್ನ ಕಾರ್ಯ ನಿರ್ವಹಣೆಯನ್ನು ನಿಲ್ಲಿಸುತ್ತದೆ ಮತ್ತು ಈ ವರ್ಷವೂ ಭಿನ್ನವಾಗಿಲ್ಲ. 2022ನೇ ವರ್ಷದ ಅಂತ್ಯವು ಸಮೀಪಿಸಿರುವಂತೆ ವಾಟ್ಸ್ಆ್ಯಪ್ ಕೂಡ ಕೆಲವು ಆ್ಯಂಡ್ರಾಯ್ಡಾ ಮತ್ತು ಕೆಲವು ಐಫೋನ್ ಮಾಡೆಲ್ ಗಳಲ್ಲಿ ಕೆಲಸ ಮಾಡುವುದನ್ನು ಅಂತ್ಯಗೊಳಿಸಲಿದೆ.
ಇದು ಚಿಂತೆಗೆ ಕಾರಣವಾಗಬೇಕಿದ್ದರೂ ಹೆಚ್ಚಿನ ಬಳಕೆದಾರರು ಚಿಂತಿಸುವ ಅಗತ್ಯವಿಲ್ಲ,ಏಕೆಂದರೆ ಹಳೆಯ ಆಪರೇಟಿಂಗ್ ಸಿಸ್ಟಮ್ ನಲ್ಲಿ ಚಾಲನೆಯಲ್ಲಿರುವ ಫೋನ್ ನಳು ಮಾತ್ರ ವಾಟ್ಸ್ಆ್ಯಪ್ ಸೌಲಭ್ಯದಿಂದ ವಂಚಿತಗೊಳ್ಳಲಿವೆ. ಗಿಝ್ಚೈನಾ(Gizchina) ಮೊದಲು ವರದಿ ಮಾಡಿರುವಂತೆ ವಾಟ್ಸ್ಆ್ಯಪ್ ಡಿ.31ರಿಂದ ಆ್ಯಪಲ್(I Phone),ಸ್ಯಾಮ್ಸಂಗ್(Samsung) ಸೇರಿದಂತೆ ಹಲವು ಬ್ರಾಂಡ್‌ಗಳ ಸುಮಾರು 49 ಸ್ಮಾರ್ಟ್ ಫೋನ್ ಮಾಡೆಲ್ ಗಳಿಗೆ ತನ್ನ ಬೆಂಬಲವನ್ನು ನಿಲ್ಲಿಸಲಿದೆ.
ಅಂದರೆ ಈ ದಿನಾಂಕದ ಬಳಿಕ ಈ ಫೋನುಗಳ ಬಳಕೆದಾರರು ಹೊಸ ಫೀಚರ್ ಗಳು ಮತ್ತು ಭದ್ರತಾ ಅಪ್ಡೇಟ್ ಗಳು ಸೇರಿದಂತೆ ವಾಟ್ಸ್ಆ್ಯಪ್ ನಿಂದ ಯಾವುದೇ ಅಪ್ಡೇಟ್ ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಅಂತಿಮವಾಗಿ ವಾಟ್ಸ್ಆ್ಯಪ್ ಸೇವೆ ಅಂತ್ಯಗೊಳ್ಳುತ್ತದೆ.
ವಾಟ್ಸ್ಆ್ಯಪ್ ಸ್ಥಗಿತಗೊಳ್ಳಲಿರುವ ಪಟ್ಟಿಯಲ್ಲಿನ ಹೆಚ್ಚಿನ ಫೋನ್ ಗಳು ಹಳೆಯದಾಗಿದ್ದು, ಅವುಗಳನ್ನು ಕೆಲವೇ ಜನರು ಬಳಸುತ್ತಿರುವ ಸಾಧ್ಯತೆಯಿದೆ. ವಾಸ್ತವದಲ್ಲಿ ಕೆಲವು ಫೋನ್ ಗಳು ಎಷ್ಟು ಹಳೆಯದಾಗಿವೆ ಎಂದರೆ ಯಾರೂ ಅವುಗಳನ್ನು ಬಳಸದೆ ಮೂಲೆಗೆ ಬಿದ್ದಿರಬಹುದು. ಹೀಗಾಗಿ ವಾಟ್ಸ್ಆ್ಯಪ್ ತನ್ನ ಬೆಂಬಲವನ್ನು ನಿಲ್ಲಿಸುವ ಬಗ್ಗೆ ಹೆಚ್ಚಿನ ಸ್ಮಾರ್ಟ್ ಫೋನ್ ಬಳಕೆದಾರರು ತಲೆ ಕೆಡಿಸಿಕೊಳ್ಳಬೇಕಿಲ್ಲ.