15 ನಕಲಿ ಚೀನೀ ಆ್ಯಪ್ ಗಳ ಮೂಲಕ 300 ಕೋಟಿ ರೂ. ವಂಚಿಸಿದ ಸೈಬರ್ ಕ್ರಿಮಿನಲ್ ಗಳ ಜಾಲ ಭೇದಿಸಿದ ಪೊಲೀಸರು
► ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಆ್ಯಪ್ ಗಳ ಬಗ್ಗೆ ಇರಲಿ ಎಚ್ಚರ… ► ಸಂತ್ರಸ್ತರ ಅಶ್ಲೀಲ ಚಿತ್ರಗಳನ್ನು ಬಳಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಂಚಕರು
ಹೊಸದಿಲ್ಲಿ, ಜ. 11: ಹದಿನೈದು ನಕಲಿ ಚೀನೀ ಆ್ಯಪ್‌ಗಳ ಮೂಲಕ 300 ಕೋಟಿ ರೂಪಾಯಿ ವಂಚಿಸಿರುವ ಸೈಬರ್ ಕ್ರಿಮಿನಲ್‌ಗಳ ಹಗರಣವೊಂದನ್ನು ಉತ್ತರಾಖಂಡ ಪೊಲೀಸರು ಪತ್ತೆಹಚ್ಚಿದ್ದಾರೆ.
ಕ್ರಿಮಿನಲ್‌ಗಳು ಸಂತ್ರಸ್ತರ ಅಶ್ಲೀಲ ಚಿತ್ರಗಳನ್ನು ಅವರ ಕುಟುಂಬ ಸದಸ್ಯರಿಗೆ ಕಳುಹಿಸುವ ಮೂಲಕ ಬ್ಲಾಕ್‌ಮೇಲ್ ಕೂಡ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
‘‘ಉತ್ತರಾಖಂಡ ಪೊಲೀಸರು ಸೈಬರ್ ವಂಚಕರ ಜಾಲವೊಂದನ್ನು ಪತ್ತೆಹಚ್ಚಿದ್ದಾರೆ. ಕ್ರಿಮಿನಲ್‌ಗಳು ತಮ್ಮ ಮೊಬೈಲ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವಂತೆ ಒತ್ತಾಯಿಸಿ ಜನರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದರು ಹಾಗೂ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಆಮಿಶಗಳನ್ನು ಒಡ್ಡುತ್ತಿದ್ದರು. ಈ ಪ್ರಕ್ರಿಯೆಯಲ್ಲಿ, ಕ್ರಿಮಿನಲ್‌ಗಳು ಜನರ ಮೊಬೈಲ್ ಫೋನ್‌ಗಳಲ್ಲಿರುವ ಚಿತ್ರಗಳು ಮತ್ತು ದಾಖಲೆಗಳನ್ನು ಪಡೆದುಕೊಂಡು ಹಣಕ್ಕಾಗಿ ಅವರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದರು’’ ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹೇಳಿದ್ದಾರೆ.
ಹೆಕ್ಟರ್ ಲೆಂಡ್‌ಕರೊ ಪ್ರೈವೇಟ್ ಲಿಮಿಟೆಡ್ ಎಂಬ ನಕಲಿ ಕಂಪೆನಿಯನ್ನು ಸ್ಥಾಪಿಸಿರುವ ದಿಲ್ಲಿ ನಿವಾಸಿ ಅಂಕುರ್ ದಿಂಗ್ರಾ ಎಂಬಾತನನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ.
ಈ ನಕಲಿ ಕಂಪೆನಿಯು ರುಪೀಗೋ(RupeeGo), ರುಪೀಹಿಯರ್(Rupee Here), ಲೋನ್‌ಯು(LoanU), ಕ್ವಿಕ್‌ರುಪೀ(QuickRupee), ಪಂಚ್ ಮನಿ(Punch Money), ಗ್ರಾಂಡ್ ಲೋನ್(Grand Loan), ಡ್ರೀಮ್‌ಲೋನ್(Dream Loan), ಕ್ಯಾಶ್‌ಎಮ್‌ಒ(CashMO), ರುಪೀಎಮ್‌ಒ(Rupee MO), ಕ್ರೆಡಿಟ್‌ಲೋನ್(CreditLoan), ಲೆಂಡ್‌ಕರ್(Lendkar), ರಾಕ್‌ಆನ್(RockOn), ಹೋಪ್‌ಲೋನ್(HopeLoan), ಲೆಂಡ್‌ನೌ(Lend Now) ಮತ್ತು ಕ್ಯಾಶ್‌ಫುಲ್(Cashfull.) ಮುಂತಾದ ಚೀನಾದ ಸಾಲ ಆ್ಯಪ್‌ಗಳ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುತ್ತಿತ್ತು.
ಮೊದಲು ಈ ಸಾಲ ಆ್ಯಪ್‌ಗಳು ಗೂಗಲ್‌ನ ಪ್ಲೇಸ್ಟೋರ್‌ನಲ್ಲಿದ್ದವು. ಆದರೆ, ಗೂಗಲ್ ಅವುಗಳನ್ನು ತೆಗೆದುಹಾಕಿದ ಬಳಿಕ, ಸೈಬರ್ ವಂಚಕರು ವಾಟ್ಸ್‌ಆ್ಯಪ್/ಎಸ್‌ಎಮ್‌ಎಸ್ ಮತ್ತು ಇತರ ಮಾಧ್ಯಮಗಳನ್ನು ಬಳಸತೊಡಗಿದರು.
ಭಾರತವು ಚೀನಾದ ಸುಮಾರು 600 ಸಾಲ ಆ್ಯಪ್‌ಗಳನ್ನು ನಿಷೇಧಿಸಿದೆ.