ಆಸ್ಕರ್ 2023: 'Everything Everywhere All at Once' ಚಿತ್ರಕ್ಕೆ ಏಳು ವಿಭಾಗಗಳಲ್ಲಿ ಪ್ರಶಸ್ತಿ
ಲಾಸ್ ಏಂಜಲೀಸ್: ರಾಜಮೌಳಿ ನಿರ್ದೇಶನದ, ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿರುವ 'RRR' ಚಿತ್ರದ 'ನಾಟು ನಾಟು' ಗೀತೆ ಮೂಲಗೀತೆ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಮತ್ತೊಮ್ಮೆ ಭಾರತದ ಮುಡಿಗೆ ಆಸ್ಕರ್ ಗರಿ ಮುಡಿಸಿದೆ. ಇದಲ್ಲದೆ ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದ 'ಎಲಿಫೆಂಟ್ ವ್ಹಿಸ್ಪರ್ಸ್' ಪ್ರಶಸ್ತಿಗೆ ಭಾಜನವಾಗಿದೆ.
95ನೇ ಆಸ್ಕರ್ ಪ್ರಶಸ್ತಿಯ 11 ವಿಭಾಗಗಳಲ್ಲಿ ಒಟ್ಟು 87 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ಈ ಪೈಕಿ 'Everything Everywhere All at Once' ಚಿತ್ರವೊಂದೇ ಒಟ್ಟು ಏಳು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯಲ್ಲದೆ, ತಾಂತ್ರಿಕ ವಿಭಾಗದಲ್ಲಿ ಅತ್ಯುತ್ತಮ ಮೂಲ ಚಿತ್ರಕತೆ ಹಾಗೂ ಅತ್ಯುತ್ತಮ ಸಂಕಲನ ಪ್ರಶಸ್ತಿಗೂ ಭಾಜನವಾಗಿದೆ.
ಆಸ್ಕರ್ ಪ್ರಶಸ್ತಿಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಾಮನಿರ್ದೇಶನಗೊಂಡಿದ್ದ ಬ್ರೆಂಡನ್ ಫ್ರೇಸರ್ ತಮ್ಮ 'ದ ವೇಲ್' ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾದರೆ, ಯಾವುದೇ ವಿಭಾಗದಲ್ಲಿ ಎರಡನೆ ಬಾರಿ ಆಸ್ಕರ್ ಪ್ರಶಸ್ತಿಗೆ ಭಾಜನವಾದ ಮೊದಲ ಕಪ್ಪುವರ್ಣೀಯ ನಟಿ ಎಂಬ ಹಿರಿಮೆಗೆ ರುತ್ ಕಾರ್ಟರ್ ಪಾತ್ರರಾದರು. (ಅವರು ಈ ಮುನ್ನ 'ಬ್ಲ್ಯಾಕ್ ಪ್ಯಾಂಥರ್: ವಕನಾಡಾ ಫಾರ್‌ಎವರ್' ಚಿತ್ರದ ಪ್ರಸಾದನಕ್ಕೆ ಆಸ್ಕರ್ ಪ್ರಶಸ್ತಿ ಗಳಿಸಿದ್ದರು)
ಆಸ್ಕರ್ ಪ್ರಶಸ್ತಿ ವಿತರಿಸಿದ ಗಣ್ಯರ ಪೈಕಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಒಬ್ಬರಾಗಿದ್ದರು. ಈ ಅವಕಾಶ ಪಡೆದ ಮೂರನೆಯ ಭಾರತೀಯಳು ಎಂಬ ಶ್ರೇಯ ಅವರದಾಯಿತು.