ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ
ಎಲ್ಲ ರೀತಿಯ ಅಸಮಾನತೆಯನ್ನು ಮೆಟ್ಟಿ ನಿಂತು ಮಾನವ ಹಕ್ಕುಗಳ ಧ್ವಜವನ್ನು ಹಾರಿಸಿದ ಸಮಾಜವನ್ನು ಮೊದಲ ಬಾರಿಗೆ ಬಸವಣ್ಣನವರು ಈ ಭೂಮಿಯ ಮೇಲೆ ತಂದರು. ಇಲ್ಲಿ ಎಲ್ಲರೂ ತಮ್ಮ ಮತ್ತು ಇತರರ ಜಾತಿಗಳನ್ನು ಮನಸ್ಸಿನಿಂದ ಅಳಿಸಿಹಾಕಿ ಕಾಯಕ ಉಳಿಸಿಕೊಂಡರು. ಸಮಗಾರ ಹರಳಯ್ಯ ಎಂದು ಹೇಳುವಲ್ಲಿ ಸಮಗಾರ ಎಂಬುದು ಜಾತಿ ಅಲ್ಲ ಕಾಯಕ ಎಂಬುದನ್ನು ತೋರಿಸಿಕೊಟ್ಟರು. ಗಂಡ ಹೆಂಡಿರಲ್ಲಿ ಮೇಲು ಕೀಳಿನ ಅನುಚರ ಭಾವ ಹೋಗಿ ಸಮಾನತೆಯ ಸಹಚರ ಭಾವ ಮೂಡಿತು. ಹೀಗೆ ವರ್ಣ, ವರ್ಗ, ಜಾತಿ, ಕುಲ, ಕಾಯಕ ಮತ್ತು ಲಿಂಗಭೇದಗಳಿಲ್ಲದೆ ಎಲ್ಲರನ್ನೂ ಒಂದಾಗಿಸಿ ಸಮಾನತೆ ಸಾಧಿಸಿದ್ದು ಮಾನವ ಇತಿಹಾಸದ ಬಹುಮುಖ್ಯ ಘಟನೆಗಳಲ್ಲಿ ಒಂದಾಗಿದೆ.
ಇನ್ನೂ ಆಶ್ಚರ್ಯವೆಂದರೆ ವಿಶ್ವಸಂಸ್ಥೆ ಅಂಗೀಕರಿಸಿದ ಮಾನವಹಕ್ಕುಗಳ ಎಲ್ಲ 30 ಅಂಶಗಳು ಬಸವಣ್ಣನವರ ವಚನಗಳಲ್ಲಿವೆ. ಇದು ನಮ್ಮ ಶರಣರ ಬಹಳ ದೊಡ್ಡದಾದಂಥ ಸಾಧನೆ. ವಿಶ್ವಸಂಸ್ಥೆ ಘೋಷಿಸಿದ ಮಾನವ ಹಕ್ಕುಗಳ 30 ಅಂಶಗಳು ಬಸವಣ್ಣನವರ ವಚನಗಳಲ್ಲಿ ಯಾವ ರೀತಿಯಲ್ಲಿ ಮೂಡಿ ಬಂದಿವೆ ಎಂಬುದು ತಿಳಿದುಕೊಳ್ಳುವುದು ಅವಶ್ಯವಾಗಿದೆ.
ಎಲ್ಲ ಮಾನವರು ಹುಟ್ಟಿನಿಂದಲೇ ಸ್ವತಂತ್ರರು ಮತ್ತು ಘನತೆ ಹಾಗೂ ಹಕ್ಕುಗಳಲ್ಲಿ ಸಮಾನರು ಎಂಬುದು ಮೊದಲನೆಯ ಅಂಶ. ದಾಂಪತ್ಯ ಸಂಬಂಧದಿಂದ ಜನಿಸಿದ ಮಗುವಿನ ಹಕ್ಕುಗಳು ಮತ್ತು ಅನೈತಿಕ ಸಂಬಂಧದಿಂದ ಹುಟ್ಟಿದ ಮಗುವಿನ ಹಕ್ಕುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು 20ನೇ ಶತಮಾನದಲ್ಲಿ ವಿಶ್ವಸಂಸ್ಥೆ ಹೇಳಿತು.
‘‘ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ ಸಂಗವ ಮಾಡಿದರು
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ’’
ಎಂದು ಬಸವಣ್ಣನವರು ಹೇಳಿದ್ದಾರೆ.
ಮಾದಾರ ಚೆನ್ನಯ್ಯ, ಈ ಶ್ರೇಣೀಕೃತ ಸಮಾಜದಲ್ಲಿ ಕಟ್ಟಕಡೆಯ ಮನುಷ್ಯ. ಅವನ ಮನೆಯ ದಾಸನ ಮಗ ಮತ್ತು ಕಕ್ಕಯ್ಯನ ಮನೆಯ ದಾಸಿಯ ಮಗಳು ಹೊಲಕ್ಕೆ ಹೋಗಿ ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವ ಸಾಕ್ಷಿಯಾಗಿ, ಅಂದರೆ ಹೆಣ್ಣು ಗಂಡಿನ ಅನೈತಿಕ ಸಂಬಂಧದಿಂದ ಹುಟ್ಟಿದ ಮಗು ನಾನು ಎಂದು ಹೇಳಬೇಕಾದರೆ ಬಸವಣ್ಣನವರು ಎಂಥ ಅಂತಃಕರಣ ಮತ್ತು ಸಂವೇದನಾಶೀಲತೆಯನ್ನು ಹೊಂದಿದ್ದರು ಎಂಬುದು ನಮ್ಮ ಕಲ್ಪನೆಗೂ ಮೀರಿದ್ದಾಗಿದೆ.
ಎರಡನೆಯದಾಗಿ ಮಾನವ ಹಕ್ಕುಗಳ ಘೋಷಣೆಯಲ್ಲಿನ ಎಲ್ಲ ಹಕ್ಕುಗಳು ಮತ್ತು ಸ್ವಾತಂತ್ರ್ಯ ಎಲ್ಲರಿಗೂ ಸಮಾನವಾಗಿವೆ.
‘‘ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’’ ಎಂದು ಬಸವಣ್ಣನವರು ಹೇಳುತ್ತಾರೆ. ಇಲ್ಲಿ ಮತ್ತೆ ಸಮಾಜದಲ್ಲಿನ ವರ್ಗ ವೈರುಧ್ಯಗಳನ್ನು ಸೂಚಿಸುತ್ತಾರೆ. ವರ್ಗಪ್ರಜ್ಞೆ ಇಲ್ಲದೆ ನಾವು ಸಾಮಾಜಿಕ ನ್ಯಾಯ ಒದಗಿಸಲಾರೆವು. ನಮ್ಮ ನ್ಯಾಯ, ಚಿಂತನೆ, ಮೌಲ್ಯ ಹೀಗೆ ಎಲ್ಲವೂ ವರ್ಗಪ್ರಜ್ಞೆಯ ಮೇಲೆಯೆ ನಿಂತಿರುವುದರಿಂದಲೇ ಬಸವಣ್ಣನವರು ಈ ಕ್ರಮದಲ್ಲಿ ಚಿಂತಿಸಿದ್ದಾರೆ.
‘‘ಕುದುರೆ ಸತ್ತಿಗೆಯವರು ಕಂಡಡೆ ಹೊರಳಿ ಬಿದ್ದು ಕಾಲು ಹಿಡಿವರು, ಬಡ ಭಕ್ತರು ಬಂದರೆ ಎಡೆಯಿಲ್ಲ ಅತ್ತ ಸನ್ನಿ ಎಂಬರು’’ ಎಂದು ಬಸವಣ್ಣನವರು ಸಾತ್ವಿಕ ಕೋಪ ವ್ಯಕ್ತಪಡಿಸಿದ್ದಾರೆ. ಕುದುರೆ ಸತ್ತಿಗೆಯವರು ಅಂದರೆ ಶ್ರೀಮಂತರು. ಸತ್ತಿಗೆ ಅಂದರೆ ಛತ್ರ. ಸಮಾನತೆಗೋಸ್ಕರ ವಿಶ್ವಸಂಸ್ಥೆ ಏನು ಹೇಳುವುದೋ ಅದನ್ನು ಬಸವಣ್ಣನವರು ಸಾಧಿಸಿದ್ದರು.
ಮೂರನೇ ಅಂಶ: ಪ್ರತಿಯೊಬ್ಬನಿಗೂ ಬದುಕುವ, ಸ್ವತಂತ್ರವಾಗಿರುವ ಮತ್ತು ಭದ್ರತೆಯ ಹಕ್ಕಿದೆ.
‘‘ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಯಿಂದ ಕರಕಷ್ಟ’’ ಎಂದು ಬಸವಣ್ಣನವರು ತಿಳಿಸಿದ್ದಾರೆ. ಬಸವಣ್ಣನವರ ಭಕ್ತಿಪಕ್ಷವು ಪ್ರತಿಯೊಬ್ಬರಿಗೂ ಬದುಕುವ ಸ್ವತಂತ್ರವಾಗಿರುವ ಮತ್ತು ಭದ್ರತೆಯ ಹಕ್ಕನ್ನು ಕೊಡುವುದು.
ನಾಲ್ಕನೇ ಅಂಶ: ಗುಲಾಮಗಿರಿಗೆ ಅವಕಾಶವಿಲ್ಲ.
‘‘ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ’’ ಎಂದು ಬಸವಣ್ಣನವರು ತಿಳಿಸಿದ್ದಾರೆ. ಹೀಗೆ ದಾಸೀಪುತ್ರನೇ ಇರಲಿ, ವೇಶ್ಯಾಪುತ್ರನೇ ಇರಲಿ, ಅನೈತಿಕ ಮಗುವೇ ಇರಲಿ, ರಾಜಪುತ್ರನೇ ಇರಲಿ, ಇಷ್ಟಲಿಂಗ ದೀಕ್ಷೆಯಾದ ಬಳಿಕ ಎಲ್ಲರೂ ಸಮಾನರು, ಗುಲಾಮಗಿರಿಗೆ ಅವಕಾಶವಿಲ್ಲ ಎಂದು ಬಸವಣ್ಣನವರು ಹೇಳುತ್ತಾರೆ. ಗುಲಾಮಗಿರಿಯನ್ನು ಬಸವಣ್ಣನವರು ಹೇಗೆ ತೊಡೆದುಹಾಕಿದರು ಎಂಬುದಕ್ಕೆ ಇದೊಂದು ಉದಾಹರಣೆ.
ಐದನೇ ಅಂಶ: ಯಾರ ವಿರುದ್ಧವೂ ಕ್ರೂರವಾಗಿ ನಡೆದುಕೊಳ್ಳುವಂತಿಲ್ಲ. ಅಮಾನುಷ ಶಿಕ್ಷೆ ವಿಧಿಸುವಂತಿಲ್ಲ.
‘‘ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೆ ಕುಲಜರು’’ ಎಂದು ಬಸವಣ್ಣನವರು ಹೇಳುವುದರ ಮೂಲಕ ಕ್ರೌರ್ಯ ಮತ್ತು ಅಮಾನುಷ ನಡವಳಿಕೆಯನ್ನು ವಿರೋಧಿಸಿದ್ದಾರೆ.
ಆರನೆಯ ಅಂಶ: ಕಾನೂನಿನ ಮುಂದೆ ಪ್ರತಿಯೊಬ್ಬನು ವ್ಯಕ್ತಿಯಾಗಿ ಗುರುತಿಸಿಕೊಳ್ಳುವ ಹಕ್ಕನ್ನು ಪಡೆದಿರುತ್ತಾನೆ.
ಶರಣರು ಈ ಹಕ್ಕಿನ ಪರವಾಗಿದ್ದರು. ಆದರೆ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಗೆ ಸಂಬಂಧಿಸಿದಂತೆ ಅವರಿಗೆ ತಮ್ಮ ವಿಚಾರ ವ್ಯಕ್ತಪಡಿಸಲು ಅವಕಾಶ ಕೊಡದೆ ಚಿತ್ರಹಿಂಸೆ ನೀಡಲಾಯಿತು.
ಏಳನೆಯ ಅಂಶ: ಕಾನೂನಿನ ಮುಂದೆ ಎಲ್ಲರೂ ಒಂದೇ.
‘‘ನ್ಯಾಯನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ, ಲೋಕವಿರೋಧಿ, ಶರಣನಾರಿಗಂಜುವನಲ್ಲ, ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ’’. ಇದು ಬಹಳ ಮಹತ್ವದ ಸಾಲು. ನಮ್ಮ ದೇಶದಲ್ಲಿ ರಾಜನೇ ಸಾಕ್ಷಾತ್ ದೇವರಾಗಿದ್ದ. ಆ ರಾಜನನ್ನು ಪ್ರಶ್ನೆ ಮಾಡುವುದು ಯಾವುದು ಅಂದರೆ ಅದು ಸಂವಿಧಾನ. ಇಲ್ಲಿ ಸ್ವಲ್ಪ ವಿವರಣೆಯ ಅವಶ್ಯಕತೆ ಇದೆ. 15.07.1215 ರಲ್ಲಿ ಇಂಗ್ಲೆಂಡಲ್ಲಿ ಕಿಂಗ್ ಜಾನ್ ಮತ್ತು ಬಂಡಾಯವೆದ್ದ ಪಾಳೆಯಗಾರರ ನಡುವೆ ಒಂದು ಒಪ್ಪಂದವಾಗುವುದು. ಅದುವೇ ಮ್ಯಾಗ್ನಾಕಾರ್ಟಾ ಅಂದರೆ ಮಹಾ ಒಪ್ಪಂದ ಅಥವಾ ಮಹಾ ಹಕ್ಕುಪತ್ರ. ಈ ಮ್ಯಾಗ್ನಾಕಾರ್ಟಾದಿಂದಾಗಿ ರಾಜನ ಹಕ್ಕುಗಳು ಮೊಟಕುಗೊಂಡವು. ಈ ಮ್ಯಾಗ್ನಾಕಾರ್ಟಾ ಜಗತ್ತಿನ ಎಲ್ಲ ಸಂವಿಧಾನಗಳ ತಾಯಿ ಎಂದು ನಮ್ಮ ಸಂವಿಧಾನ ತಜ್ಞರು ಹೇಳುತ್ತಾರೆ. ಈ ಹೇಳಿಕೆಯನ್ನು ಒಪ್ಪಲಿಕ್ಕಾಗದು. ಏಕೆಂದರೆ ಇದು 13ನೇ ಶತಮಾನದ ಒಪ್ಪಂದ. ಆ ಒಪ್ಪಂದ ಒಬ್ಬ ರಾಜ ಮತ್ತು ಮಾಂಡಲಿಕರ ಮಧ್ಯೆ ಆಯಿತು. ರಾಜ ಮತ್ತು ಜನರ ಮಧ್ಯೆ ಆಗಲಿಲ್ಲ. ಆದರೆ ಬಸವಣ್ಣನವರ ವಚನಗಳು ಕಟ್ಟ ಕಡೆಯ ಮನುಷ್ಯನ ಪರ ಇವೆ. ಇವು 12ನೇ ಶತಮಾನದಲ್ಲಿ ಅಂದರೆ ಮ್ಯಾಗ್ನಾಕಾರ್ಟಾಗಿಂತ ಒಂದು ಶತಮಾನ ಹಿಂದೆ. ಈ ಹಿನ್ನೆಲೆಯಲ್ಲಿ ವಚನಗಳು ಜಗತ್ತಿನ ಎಲ್ಲ ಸಂವಿಧಾನಗಳ ತಾಯಿ ಎಂಬುದರಲ್ಲಿ ಸಂಶಯವಿಲ್ಲ. ಆದ್ದರಿಂದ ಕೂಡಲಸಂಗಮದೇವರ ರಾಜತೇಜದಲ್ಲಿರುವುದಾಗಿ ಬಸವಣ್ಣನವರು ಹೇಳುತ್ತಾರೆ. ತಾವೇಕೆ ನ್ಯಾಯನಿಷ್ಠುರಿ, ತಾವೇಕೆ ದಾಕ್ಷಿಣ್ಯಪರ ಅಲ್ಲ, ತಾವೇಕೆ ಲೋಕವಿರೋಧಿ ಎಂದರೆ ತಮಗೊಂದು ಸಂವಿಧಾನವಿದೆ ಅದಕ್ಕಿಂತ ದೊಡ್ಡದು ಯಾವುದು? ಎಂಬುದು ಬಸವಣ್ಣನವರ ದೃಢ ನಿರ್ಧಾರವಾಗಿದೆ. ಕೂಡಲಸಂಗಮದೇವರ ರಾಜತೇಜವೆಂಬ ಈ ಆತ್ಮಸಾಕ್ಷಿಯೇ ಶರಣರ ಸಂವಿಧಾನ. ಅವರ ಅಂತಸ್ಸಾಕ್ಷಿಯ ವಚನಗಳೇ ದೇವರು. ಕೂಡಲಸಂಗಮದೇವ ಶರಣರ ಮಾತಿನಲ್ಲಿ ಅಂದರೆ ವಚನಗಳಲ್ಲಿ ರಾಶಿಯಾಗಿಪ್ಪ ಎಂದು ಬಸವಣ್ಣನವರು ಹೇಳುತ್ತಾರೆ. ಇದು ಬಸವ ಸಂವಿಧಾನದ ಮೂಲ.
ಎಂಟನೆಯ ಅಂಶ: ತನ್ನ ಮೂಲಭೂತ ಹಕ್ಕುಗಳ ಪ್ರಕಾರ ನ್ಯಾಯ ಕೇಳುವ ಹಕ್ಕು ಪ್ರತಿಯೊಬ್ಬನಿಗೆ ಇದೆ.
‘‘ಆನೀ ಬಿಜ್ಜಳಂಗೆ ಅಂಜುವೆನೆ ಅಯ್ಯಾ’’ ಎಂದು ಬಸವಣ್ಣನವರು ಹೇಳುತ್ತಾರೆ. ಒಬ್ಬ ಪ್ರಧಾನಿಯಾಗಿ ತಮ್ಮ ವ್ಯಕ್ತಿತ್ವವನ್ನು ಹೇಗೆ ಉಳಿಸಿಕೊಂಡಿದ್ದರು ಎನ್ನುವುದಕ್ಕೆ ಇದು ಅತ್ಯುತ್ತಮ ಉದಾಹರಣೆ. ನಾನು ಈ ಬಿಜ್ಜಳನಿಗೆ ಅಂಜುವೆನೆ ಅಯ್ಯಾ ಕೂಡಲಸಂಗಮದೇವಾ ನಿನ್ನ ರಾಜತೇಜದಲ್ಲಿರುವೆ ಅಂದರೆ ತಮ್ಮದೇ ಆದ ಶೀಲಗಳು (ಸದ್ಗುಣಗಳು) ಇವೆ ಎಂದು ಸೂಚಿಸುತ್ತಾರೆ. ಶೀಲಗಳು ಸಾಮಾಜೀಕರಣಗೊಂಡಾಗ ಮೌಲ್ಯಗಳಾಗುವವು. ಈ ಮೌಲ್ಯಗಳು ಯಾವುದೇ ಸಂವಿಧಾನದ ಮತ್ತು ಕಾನೂನಿನ ತಾಯಿ ಬೇರಾಗುವವು. ಇದನ್ನು ಬಸವಣ್ಣನವರು ಇಷ್ಟು ಚೆನ್ನಾಗಿ 12ನೇ ಶತಮಾನದಲ್ಲಿ ಗುರುತಿಸಿದ್ದಾರೆ. ರಾಜ ಹೇಳಿದ್ದೇ ಸತ್ಯ ಎಂದು ಬಸವಣ್ಣನವರು ಹೇಳಲಿಲ್ಲ. ಇದು ಆ ಕಾಲದ ಮಹಾ ಬಂಡಾಯದ ವಿಚಾರ ಎಂಬುದನ್ನು ಮರೆಯಬಾರದು.
ಒಂಭತ್ತನೇ ಅಂಶ: ಯಾರನ್ನೂ ಮನಸ್ಸಿಗೆ ಬಂದಂತೆ ಬಂಧಿಸಲಾಗದು.
ಶೀಲವಂತ, ಸಮಗಾರ ಹರಳಯ್ಯನವರ ಮಗ. ಲಾವಣ್ಯವತಿ, ಬ್ರಾಹ್ಮಣ ಮೂಲದ ಮಧುವರಸರ ಮಗಳು. ಅವರು ವಧೂ ವರ ಆಗುವರು. ಇದಕ್ಕೆ ಮನುಸ್ಮತಿಯಲ್ಲಿ ವಿಲೋಮ ಅಥವಾ ಪ್ರತಿಲೋಮ ವಿವಾಹ ಎನ್ನುತ್ತಾರೆ. ಮೇಲ್ಜಾತಿಯ ಕನ್ಯೆ ಕೆಳಜಾತಿಯ ಪುರುಷನನ್ನು ಮದುವೆಯಾಗುವುದು ಮನುಧರ್ಮ ಸಮ್ಮತವಲ್ಲ. ಆದ್ದರಿಂದ ಈ ಹೆಣ್ಣು ಗಂಡಿನ ತಂದೆಗಳಾದ ಮಧುವರಸ ಮತ್ತು ಹರಳಯ್ಯನವರಿಗೆ ಎಳೆಹೂಟಿ ಶಿಕ್ಷೆ ಕೊಟ್ಟು ಅಂದರೆ ಆನೆ ಕಾಲಿಗೆ ಕಟ್ಟಿ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಾರೆ. ಆದರೆ ಇವತ್ತು ಇಂಥ ಮದುವೆಗಳು ಮಾನವಹಕ್ಕುಗಳ ಭಾಗವಾಗಿದ್ದು ನಮ್ಮ ಸಂವಿಧಾನಬದ್ಧವಾಗಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬಸವಣ್ಣನವರು ಹೀಗೆ ಮುಂದಾಲೋಚನೆಯುಳ್ಳವರಾಗಿದ್ದರು.
10ನೇ ಅಂಶ: ಸ್ವತಂತ್ರ ನ್ಯಾಯಮಂಡಲಿಗಳ ಮೂಲಕ ನ್ಯಾಯ ಪಡೆಯುವ ಹಕ್ಕು ಪ್ರತಿಯೊಬ್ಬರಿಗೆ ಇದೆ.
ಇದನ್ನು ಬಿಜ್ಜಳ ನಿರಾಕರಣೆ ಮಾಡಿದ. ಬಿಜ್ಜಳನು ಶರಣರಿಗೆ ನ್ಯಾಯ ಪಡೆಯುವ ಹಕ್ಕನ್ನು ನಿರಾಕರಿಸಿ ಹಿಂಸೆಗೆ ಒಳಪಡಿಸಿದ.
11ನೇ ಅಂಶ: ಆರೋಪಕ್ಕೊಳಗಾದವರು ಯಾರೇ ಇರಲಿ ಅಪರಾಧಿ ಎಂದು ತೀರ್ಪು ಬರುವವರೆಗೂ ಮುಗ್ಧರು ಎಂದು ಹೇಳುವ ಹಕ್ಕನ್ನು ಹೊಂದಿದ್ದಾರೆ.
ಈ ಹಕ್ಕು ಶರಣರಿಗೆ ಸಿಗುವಂಥ ನ್ಯಾಯಪದ್ಧತಿ ಬಿಜ್ಜಳನ ರಾಜ್ಯದಲ್ಲಿ ಇರಲಿಲ್ಲ. ಏಕೆಂದರೆ ಆತ ಅನ್ಯಾಯ ಮತ್ತು ಅಸಮಾನತೆಯಲ್ಲಿ ನಂಬಿಕೆ ಇಟ್ಟ ಮನುವಾದಿಗಳ ಒತ್ತಡಕ್ಕೆ ಮಣಿದಿದ್ದ.
12ನೇ ಅಂಶ: ಯಾರದೇ ಖಾಸಗಿ ಬದುಕಿನಲ್ಲಿ ಕೈ ಹಾಕುವಂತಿಲ್ಲ. ಯಾರ ಘನತೆಗೂ ಕುಂದು ತರುವಂತಿಲ್ಲ.
‘‘ಕೂಡಲಸಂಗಮದೇವಾ ಭಕ್ತರ ಕುಲವನರಿಸಿದಡೆ ನಿಮ್ಮ ರಾಣಿವಾಸದಾಣೆ’’ ಎಂದು ಬಸವಣ್ಣನವರು ಹೇಳಿದ್ದಾರೆ.
13ನೇ ಅಂಶ: ಪ್ರತಿಯೊಬ್ಬರಿಗೂ ತಮ್ಮ ದೇಶದಲ್ಲಿ ಮುಕ್ತವಾಗಿ ಸಂಚರಿಸುವ ಹಕ್ಕಿದೆ.
ಮನುಸ್ಮತಿಯ ಪ್ರಕಾರ ಅಸ್ಪಶ್ಯರು ಈ ಹಕ್ಕನ್ನು ಕಳೆದುಕೊಂಡಿದ್ದರು. ಬಸವಣ್ಣನವರು ‘‘ಕುಲವನರಸುವರೆ ಶರಣರಲ್ಲಿ ಜಾತಿಸಂಕರವಾದ ಬಳಿಕ’’ ಎಂದು ಪ್ರಶ್ನಿಸಿ ಎಲ್ಲರಿಗೂ ಮುಕ್ತವಾಗಿ ಸಂಚರಿಸುವ ಹಕ್ಕು ಬರುವಂತೆ ಮಾಡಿದರು.
14ನೇ ಅಂಶ: ತಮ್ಮ ದೇಶದಲ್ಲಿ ಮಾನವ ಹಕ್ಕುಗಳ ದಮನ ನಡೆದಾಗ ಬೇರೆ ದೇಶಗಳಲ್ಲಿ ಆಶ್ರಯ ಪಡೆಯುವ ಅವಕಾಶವಿದೆ.
ಕಲ್ಯಾಣದಲ್ಲಿ ಶರಣರ ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ಅನೇಕ ಶರಣರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದರು.
15ನೇ ಅಂಶ: ಪ್ರತಿಯೊಬ್ಬರಿಗೂ ರಾಷ್ಟ್ರೀಯತೆಯ ಹಕ್ಕಿದೆ.
ಇಂದಿನ ರಾಷ್ಟ್ರೀಯತೆಯ ಪರಿಕಲ್ಪನೆ ಹಿಂದಿನ ಕಾಲದಲ್ಲಿ ಇರದಿದ್ದರೂ ಬೇರೆ ಕಡೆಯಿಂದ ಕಲ್ಯಾಣಕ್ಕೆ ಬಂದ ಶರಣರು ಬಸವಣ್ಣನವರ ಶರಣಸಂಕುಲದಲ್ಲಿ ಸ್ಥಾನ ಪಡೆದಿದ್ದರು.
16ನೇ ಅಂಶ: ದೇಶ, ಕುಲ ಮತ್ತು ಧರ್ಮಗಳನ್ನು ಮೀರಿ ಮದುವೆ ಮಾಡಿಕೊಳ್ಳುವ ಹಕ್ಕಿದೆ.
ಇಂಥ ಹಕ್ಕನ್ನು ಚಲಾಯಿಸಿದರೆಂದು ಆರೋಪಿಸಿ ಹರಳಯ್ಯ ಮಧುರಸರಿಗೆ ಎಳೆಹೂಟೆ ಶಿಕ್ಷೆ ವಿಧಿಸಲಾಯಿತು.
17ನೇ ಅಂಶ: ಪ್ರತಿಯೊಬ್ಬರಿಗೂ ಆಸ್ತಿಯ ಹಕ್ಕಿದೆ.
ಬಸವಣ್ಣನವರ ಪ್ರಕಾರ ಶರಣರು ಸ್ವಾವಲಂಬಿಗಳಾಗಬೇಕು. ಆದರೆ ಸಮಾಜಸೇವೆಯ ಉದ್ದೇಶದೊಂದಿಗೆ ದಾಸೋಹ ಭಾವದಿಂದ ಕಾಯಕ ಮಾಡಬೇಕು.
‘‘ನಾನು ಆರಂಬವ ಮಾಡುವೆನಯ್ಯಾ ಗುರು ಪೂಜೆಗೆಂದು’’’. ಬರಿ ನನಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ಕಾಯಕ ಮಾಡುವುದಲ್ಲ. ನನ್ನ ಸಮಾಜಕ್ಕಾಗಿಯೂ ಕಾಯಕ ಮಾಡಬೇಕಾಗುತ್ತದೆ. ಆರಂಬ ಎಂದರೆ ಕೃಷಿ ಕಾರ್ಯ. ಗುರುಪೂಜೆ ಎಂದರೆ ಜ್ಞಾನಪೂಜೆ. ಕಾಯಕದ ಮೂಲಕ ಜ್ಞಾನ ಪಡೆಯುವುದು. ಇವನ್ನೆಲ್ಲ ಅವರು ಸಾಂಕೇತಿಕವಾಗಿ ಹೇಳುತ್ತಾರೆ. ‘‘ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು’’ ಎಂದರೆ ನಮ್ಮ ವ್ಯವಹಾರ ದೇವರ ಪೂಜೆಯ ಹಾಗೆ ಪವಿತ್ರವಾಗಿರಬೇಕು. ‘‘ನಾನು ಪರಸೇವೆಯ ಮಾಡುವೆನಯ್ಯಾ ಜಂಗಮ ದಾಸೋಹಕ್ಕೆಂದು’’. ಎಂದರೆ ಸಮಾಜಸೇವೆಗಾಗಿ ನಾನು ಬಿಜ್ಜಳನ ಪ್ರಧಾನಿಯಾಗಿರುವೆ ಎಂದು ಬಸವಣ್ಣನವರು ಸೂಚಿಸಿದ್ದಾರೆ. ತಾವು ಪ್ರಧಾನಿ ಎಂದು ಅವರು ಹೇಳಿಕೊಳ್ಳಲಿಲ್ಲ. ಜಂಗಮಕ್ಕೆ ಬಹಳಷ್ಟು ಅರ್ಥಗಳಿವೆ. ಇಲ್ಲಿ ಜಂಗಮ ಎಂದರೆ ಸಮಾಜ. ಸಮಾಜವನ್ನು ಸಮೃದ್ಧವಾಗಿ ಇಡುವುದಕ್ಕೋಸ್ಕರ ನಾನು ಪರಸೇವೆ ಮಾಡುತ್ತಲಿದ್ದೇನೆ ಎಂದು ಅವರು ಮಾರ್ಮಿಕವಾಗಿ ತಿಳಿಸಿದ್ದಾರೆ. ಹೀಗೆ ಮಾನವಹಕ್ಕುಗಳ ಜೊತೆಗೆ ಮಾನವ ಕರ್ತವ್ಯಗಳ ಬಗ್ಗೆಯೂ ಸೂಚಿಸಿದ್ದಾರೆ.
18ನೇ ಅಂಶ: ಪ್ರತಿಯೊಬ್ಬರೂ ವಿಚಾರ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯ ಪಡೆದಿದ್ದಾರೆ.
ಬಸವಧರ್ಮ ವಿಚಾರ ಸ್ವಾತಂತ್ರ್ಯದ ಮೇಲೆ ನಿಂತಿದೆ. ‘‘ಗಂಡ ಶಿವಲಿಂಗ ದೇವರ ಭಕ್ತ. ಹೆಂಡತಿ ಮಾರಿ ಮಸಣಿಯ ಭಕ್ತೆ’’ ಎಂದು ವಚನವೊಂದರಲ್ಲಿ ತಿಳಿಸಿದ್ದಾರೆ. ಈ ಇಬ್ಬರು ಬೇರೆ ಬೇರೆ ಧರ್ಮ ಪಾಲಿಸುತ್ತಿದ್ದರೂ ಗಂಡ ಹೆಂಡಿರಾಗಿ ಉಳಿದಿದ್ದಾರೆ.
19ನೇ ಅಂಶ: ಪ್ರತಿಯೊಬ್ಬರು ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹೊಂದಿದ್ದಾರೆ.
ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊದಲಿಗೆ ಎಲ್ಲಿಯಾದರೂ ನೋಡುವುದಾದರೆ ಅದು ಅನುಭವ ಮಂಟಪದಲ್ಲಿ.
ಬಸವಣ್ಣಣವರಿಗೆ ಪ್ರಶ್ನೆ ಕೇಳಿದಷ್ಟು ಯಾವ ದಾರ್ಶನಿಕನಿಗೂ ಕೇಳಿಲ್ಲ. ಹೆಂಡತಿ ಗಂಡನನ್ನು ಪ್ರಶ್ನಿಸಿದ ದಾಖಲೆ ಭಾರತೀಯ ಸಾಹಿತ್ಯದಲ್ಲಿ ಕಂಡುಬರುವುದಿಲ್ಲ. ಅದು ನಮಗೆ ಮೊದಲ ಬಾರಿಗೆ ಅನುಭವ ಮಂಟಪದಲ್ಲಿ ಸಿಗುವುದು. ‘‘ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ’’ ಎಂದು ಆಯ್ದಕ್ಕಿ ಲಕ್ಕಮ್ಮ, ಅವಶ್ಯಕತೆಗಿಂತಲೂ ಹೆಚ್ಚಿಗೆ ಅಕ್ಕಿಯನ್ನು ಆಯ್ದು ತಂದ ತನ್ನ ಪತಿ ಆಯ್ದಕ್ಕಿ ಮಾರಯ್ಯಗೆ ಪ್ರಶ್ನೆ ಮಾಡುತ್ತಾಳೆ. ಇಂಥ ಪ್ರಶ್ನಿಸುವ ಹಕ್ಕು ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸಿಕ್ಕಿದ್ದು ಬಸವಣ್ಣನವರಿಂದ.
20ನೇ ಅಂಶ: ಪ್ರತಿಯೊಬ್ಬರಿಗೂ ಶಾಂತಿಯುತವಾಗಿ ಸಭೆ ಸೇರುವ ಸ್ವಾಂತಂತ್ರ್ಯ ಇದೆ.
ಅನುಭವ ಮಂಟಪದಲ್ಲಿ ಶಾಂತಿಯುತವಾಗಿ ಇದ್ದಂಥ ಶರಣರಿಗೆ ಕಿರಿಕಿರಿ ಮಾಡಿದರು, ಬಹಳ ತೊಂದರೆ ಕೊಟ್ಟರು, ಅನೆಕ ಶರಣರ ಕೊಲೆ ಮಾಡಿದರು. ಅವರ ವಚನ ಸಾಹಿತ್ಯವನ್ನು ಸುಟ್ಟರು.
21ನೇ ಅಂಶ: ತಮ್ಮ ದೇಶದ ಸರಕಾರದಲ್ಲಿ ಭಾಗಿಯಾಗುವ ಹಕ್ಕನ್ನು ಪ್ರತಿಯೊಬ್ಬರು ಪಡೆದಿರುತ್ತಾರೆ.
ಬಸವಣ್ಣನವರು ಕಲ್ಯಾಣದ ಪ್ರಧಾನಿಯಾಗಿದ್ದರು.
22ನೇ ಅಂಶ: ಪ್ರತಿಯೊಬ್ಬರು ಸಾಮಾಜಿಕ ಭದ್ರತೆಯ ಹಕ್ಕನ್ನು ಹೊಂದಿರುತ್ತಾರೆ.
ಶರಣ ಸಂಕುಲದಿಂದಾಗಿ ಶರಣರು ಸಾಮಾಜಿಕ ಭದ್ರತೆ ಪಡೆದಿದ್ದರು.
23ನೇ ಅಂಶ: ಪ್ರತಿಯೊಬ್ಬರೂ ದುಡಿಯುವ ಮತ್ತು ಕಾರ್ಮಿಕ ಸಂಘವನ್ನು ರಚಿಸುವ ಹಕ್ಕನ್ನು ಪಡೆದಿದ್ದಾರೆ.
ಶರಣರು ಸ್ವಯಂ ಕಾಯಕಜೀವಿಗಳಾಗಿದ್ದರು. ಬಸವಧರ್ಮದ ಮೂಲಕ ಎಲ್ಲರೂ ಒಂದಾಗಿದ್ದರು.
24ನೇ ಅಂಶ: ಪ್ರತಿಯೊಬ್ಬರೂ ವಿಶ್ರಾಂತಿಯ ಹಕ್ಕನ್ನು ಪಡೆದಿದ್ದಾರೆ.
ಸ್ವತಂತ್ರ ಕಾಯಕದಿಂದಾಗಿ ಸಹಜವಾಗಿಯೇ ಶರಣರು ವಿಶ್ರಾಂತಿ ಪಡೆಯುತ್ತಿದ್ದರು.
25ನೇ ಅಂಶ: ಗುಣಮಟ್ಟದ ಬದುಕಿನ ಹಕ್ಕನ್ನು ಪ್ರತಿಯೊಬ್ಬರು ಪಡೆದಿದ್ದಾರೆ.
ಶರಣರು ಘನತೆವೆತ್ತ ಬದುಕನ್ನು ಬಾಳಿದರು.
26ನೇ ಅಂಶ: ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವ ಹಕ್ಕಿದೆ.
ಕಾಯಕಜೀವಿ ಶರಣರು ವಚನ ರಚನೆ ಮಾಡುವಷ್ಟು ಪ್ರತಿಭಾವಂತರಾಗಿದ್ದರು.
27ನೇ ಅಂಶ: ಸಮಾಜದ ಸಾಂಸ್ಕೃತಿಕ ಬದುಕಿನಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರತಿಯೊಬ್ಬರಿಗೆ ಇದೆ.
ಜಾತಿ ಮತಗಳನ್ನು ಮೀರಿದ ಶರಣರು ಹೊಸ ಸಮಾಜದ ಸಂಸ್ಕೃತಿಯನ್ನು ನಿರ್ಮಿಸಿ ಇತಿಹಾಸ ಸೃಷ್ಟಿಸಿದರು.
28ನೇ ಅಂಶ: ಮಾನವ ಹಕ್ಕುಗಳ ಘೋಷಣೆ ಪ್ರಕಾರ ಸಾಮಾಜಿಕ ಮತ್ತು ಅಂತರ್ರಾಷ್ಟ್ರೀಯ ವ್ಯವಸ್ಥೆಯನ್ನು ಬಯಸುವ ಹಕ್ಕು ಪ್ರತಿಯೊಬ್ಬರಿಗೆ ಇದೆ.
ತಮ್ಮ ಸರ್ವಸಮಾನತೆಯ ಸಮಾಜ ಲೋಕದಲ್ಲಿ ಹಬ್ಬಲಿ ಎಂದು ಶರಣರು ಬಯಸಿದ್ದರು.
29ನೇ ಅಂಶ: ಸಮಾಜಕ್ಕೆ ಸೇವೆ ಸಲ್ಲಿಸುವ ಕರ್ತವ್ಯ ಪ್ರತಿಯೊಬ್ಬರದಾಗಿದೆ.
ಶರಣರು ದಾಸೋಹದ ಮೂಲಕ ಸಮಾಜ ಸೇವೆಯ ಕರ್ತವ್ಯ ಪಾಲನೆ ಮಾಡಿದರು.
30ನೇ ಅಂಶ: ಮೇಲೆ ತಿಳಿಸಿದ ಮಾನವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಹಾಳುಮಾಡುವಂಥ ವ್ಯಾಖ್ಯಾನ ಮಾಡಬಾರದು.
ಶರಣರು ತಮ್ಮ ಬಲಿದಾನ ಮಾಡಿದರೇ ಹೊರತು ತತ್ವಗಳಿಂದ ವಿಮುಖರಾಗಲಿಲ್ಲ.
ಬಸವಾದಿ ಪ್ರಮಥರು ನಡೆನುಡಿಯಲ್ಲಿ ಮಾನವ ಹಕ್ಕುಗಳ ಪ್ರತಿಪಾದಕರಾಗಿ ಕಂಗೊಳಿಸುತ್ತಿದ್ದಾರೆ. ಈ ವಿಚಾರಗಳು ಪಾಶ್ಚಿಮಾತ್ಯ ಜಗತ್ತಿಗೆ ಹೊಳೆಯಲು 19ನೇ ಶತಮಾನದವರೆಗೆ ಕಾಯಬೇಕಾಯಿತು. ಅಲ್ಲದೆ ಎರಡು ಮಹಾಯುದ್ಧಗಳನ್ನು ಎದುರಿಸಬೇಕಾಯಿತು. ಭಾರತದ ಸಂವಿಧಾನ ಕೂಡ ಈ ಮಾನವಹಕ್ಕುಗಳನ್ನು ಒಳಗೊಂಡಿರುವುದರಿಂದ ಬಸವಣ್ಣನವರ ವಚನಗಳು ಭಾರತ ಸಂವಿಧಾನದ ಜೀವಾಳವಾಗಿವೆ. ಬಸವಣ್ಣನವರ ವಚನಗಳಂತೆ ನಡೆದರೆ ಅಂತರ್ರಾಷ್ಟ್ರೀಯ ಮಟ್ಟದ ಮಾನವ ಹಕ್ಕುಗಳನ್ನು ಮತ್ತು ನಮ್ಮ ದೇಶದ ಸಂವಿಧಾನವನ್ನು ಏಕಕಾಲಕ್ಕೆ ಗೌರವಿಸಿದಂತಾಗುತ್ತದೆ. ಬಸವಣ್ಣನವರ ವಚನಗಳಿಗೆ ವಿರುದ್ಧವಾಗಿ ನಡೆದರೆ ಸಂವಿಧಾನ ಬಾಹಿರ ಕೃತ್ಯವಾಗುತ್ತದೆ. ಅಲ್ಲದೆ ಅಂತರ್ರಾಷ್ಟ್ರೀಯ ಮಾನವ ಹಕ್ಕುಗಳಿಗೆ ಅಪಮಾನ ಮಾಡಿದಂತಾಗುತ್ತದೆ. ಕಲ್ಯಾಣ ಹತ್ಯಾಕಾಂಡಕ್ಕೆ ಕಾರಣವಾದ ಹರಳಯ್ಯ ಮಧುವರಸರ ಮಕ್ಕಳ ಮದುವೆಯನ್ನು ಇಂದು ಅಂತರ್ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭಾರತದ ಸಂವಿಧಾನ ಜೊತೆಯಾಗಿಯೇ ಗೌರವಿಸುತ್ತವೆ. ಅನುಭವ ಮಂಟಪದ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಬೀಜಗಳು ಈ ನೆಲದಲ್ಲಿ ಮೊಳಕೆ ಒಡೆದವು ಮತ್ತು ಮಾನವಹಕ್ಕುಗಳ ಹೂಗಳು ಅರಳಿದವು. ಹೀಗೆ ಬಸವಣ್ಣನವರು ಸಾಮಾಜಿಕ ನ್ಯಾಯದೊಂದಿಗೆ ಈ ನೆಲದ ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳ ಮೂಲ ಪುರುಷರಾದರು.
(ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವೆಬಿನಾರ್ನಲ್ಲಿ 2021ನೇ ಆಗಸ್ಟ್ 6ರಂದು ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ನ್ಯಾಯ ಪರಿಕಲ್ಪನೆ ಕುರಿತು ಮಾಡಿದ ಭಾಷಣದ ಆಯ್ದ ಭಾಗ)