ಮಹಿಳೆಯರ ಮೇಲೆ ನಿಲ್ಲದ ದೌರ್ಜನ್ಯಗಳೂ.. ರಾಜಕೀಯ ನಾಯಕರು ನೋಡುವ ದೃಷ್ಟಿಯೂ...
ಕೋಲ್ಕತಾದಲ್ಲಿ ನಡೆಯಬಾರದ ಹೇಯ ಘಟನೆಯೊಂದು ನಡೆದುಹೋಗಿದೆ.
ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿರುವ ಈ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಅಪರಾಧಿಗಳನ್ನು ಕೂಡಲೇ ಕಂಡು ಹಿಡಿದು ಕಠಿಣ ಶಿಕ್ಷೆಗೆ ಒಳಪಡಿಸಬೇಕಾಗಿದೆ.
ಆದರೆ ಈಗ ಬಲಿಪಶು ವೈದ್ಯೆಗೆ ನ್ಯಾಯ ಕೊಡಿಸುವುದಕ್ಕಿಂತ ಹೆಚ್ಚು ರಾಜಕೀಯವೇ ನಡೆಯುತ್ತಿರುವ ಹಾಗೆ ಕಾಣುತ್ತಿದೆ. ಪಶ್ಚಿಮ ಬಂಗಾಳ ಸರಕಾರ ಮತ್ತು ಕೊಲ್ಕೊತಾ ಪೊಲೀಸರು ಹೆಜ್ಜೆ ಹಜ್ಜೆಗೂ ಆರೋಪಗಳನ್ನು ಕೇಳಿಸಿಕೊಳ್ಳುವಂತಾಗಿದೆ. ಬಿಜೆಪಿಯವರು ಮಮತಾ ಸರಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಮಮತಾ ಸರಕಾರದ ವಿರುದ್ಧ ಇನ್ನಿಲ್ಲದಂತೆ ಅಪಪ್ರಚಾರದ ಅಭಿಯಾನ ನಡೆಯುತ್ತಿದೆ.
ಬಿಜೆಪಿಯವರು ಆಕ್ರಮಣಕ್ಕೆ ಇಳಿದಿರುವ ರೀತಿಯಂತೂ ತಮ್ಮ ಆಡಳಿತದ ರಾಜ್ಯಗಳಲ್ಲಿ ಮಹಿಳೆಯರು ಅತ್ಯಂತ ಸುರಕ್ಷಿತರಾಗಿದ್ದಾರೆ ಎಂದು ಬಿಂಬಿಸುತ್ತಿರುವ ಹಾಗಿದೆ. ಆದರೆ ಇದೇ ರೀತಿಯ ಹೇಯ ಪ್ರಕರಣಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಡೆದಾಗ ಬಿಜೆಪಿ ಹಾಗೂ ಪ್ರಧಾನಿ ಮೋದಿ ಹೇಗೆ ವರ್ತಿಸಿದ್ದರು?
ಬಿಜೆಪಿಯೇತರ ಸರಕಾರಗಳಿರುವಲ್ಲಿ ಇಂಥ ಘಟನೆಗಳಾದರೆ ಬೊಬ್ಬೆ ಹೊಡೆಯುವ, ಅಲ್ಲಿನ ಸರಕಾರವನ್ನು ದೂಷಿಸುವ ಬಿಜೆಪಿ, ತನ್ನದೇ ಸರಕಾರವಿರುವಲ್ಲಿ ಅಂಥ ಘಟನೆಗಳಾದರೆ ಏನು ಮಾಡುತ್ತದೆ? ಒಂದೋ ಬಲಿಪಶುವನ್ನೇ ದೂಷಿಸುತ್ತದೆ, ಇಲ್ಲವೇ ಮೌನವಹಿಸುತ್ತದೆ, ಇಲ್ಲವೇ ಆರೋಪಿಗಳ ಪರ ವಹಿಸುತ್ತದೆ. ಅತ್ಯಾಚಾರ ಪ್ರಕರಣಗಳು, ಮಹಿಳೆಯರ ವಿರುದ್ಧದ ಘೋರ ದೌರ್ಜನ್ಯಗಳು ಬಿಜೆಪಿ ಸರಕಾರವಿರುವ ರಾಜ್ಯಗಳಲ್ಲಿ ನಡೆದಾಗ ಮೋದಿ ಅಂಥ ಘಟನೆ ಖಂಡಿಸಿ ಮಾತಾಡಿದ್ದಿದೆಯೇ?
ಅವರದೇ ಪಕ್ಷಗಳಿಗೆ ಸಂಬಂಧಪಟ್ಟವರು, ಅವರ ಜೊತೆಗೇ ಫೋಟೊದಲ್ಲಿರುವವರು ಅತ್ಯಾಚಾರದಂಥ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಾಗ ಪ್ರಧಾನಿಗೆ ಯಾವತ್ತಾದರೂ ಅದರ ಬಗ್ಗೆ ಕಳವಳವಾಗಿತ್ತೇ? ನೋಡುತ್ತ ಹೋದರೆ ಸಾಲು ಸಾಲು ಘಟನೆಗಳು ಕಾಣುತ್ತಿವೆ.
ಬಿಜೆಪಿ ಸರಕಾರವಿರುವ ಮಣಿಪುರದಲ್ಲಿ ನಡುಬೀದಿಯಲ್ಲಿಯೇ ಮಹಿಳೆಯರನ್ನು ನಗ್ನಗೊಳಿಸಿ ಅತ್ಯಾಚಾರವೆಸಗಲಾಯಿತು. ಅಂಕಿತಾ ಭಂಡಾರಿ ಹತ್ಯೆ ನಡೆದ ಉತ್ತರಾಖಂಡದಲ್ಲಿರುವುದು ಬಿಜೆಪಿ ಸರಕಾರ. ಅದರಲ್ಲಿ ಬಿಜೆಪಿ ಮುಖಂಡನ ಪುತ್ರನೇ ಆರೋಪಿ. ಬಿಜೆಪಿ ಆಡಳಿತವಿದ್ದ ಹಾಥರಸ್, ಕಥುವಾಗಳಲ್ಲಿ ಹೆಣ್ಣುಮಕ್ಕಳ ನ್ನು ಬಲಿ ಪಡೆದ ಘೋರ ಘಟನೆಗಳು ನಡೆಯಿತು.
ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಅವಧಿಗೆ ಮೊದಲೇ ಬಿಡುಗಡೆ ಮಾಡಿ ಹೂ ಹಾರ ಹಾಕಿ ಸ್ವಾಗತಿಸಿದ್ದು ಬಿಜೆಪಿಯವರೇ ಆಗಿದ್ದರು. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪೆನ್ಡ್ರೈವ್ ಪ್ರಕರಣ ಕೂಡ ಜಗತ್ತಿಗೆ ಬಯಲಾಗುವ ಮೊದಲೇ ಬಿಜೆಪಿಗೆ ಗೊತ್ತಿತ್ತು. ಇಂಥ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿರುವವರಲ್ಲಿ ಕುಲದೀಪ್ ಸೆಂಗಾರ್, ಬ್ರಿಜ್ ಭೂಷಣ್ ಸಿಂಗ್ ಇವರೆಲ್ಲರೂ ಬಿಜೆಪಿಯವರೇ.
ವಿಪಕ್ಷಗಳ ಸರಕಾರವಿರುವಲ್ಲಿ ಇಂಥ ಪ್ರಕರಣಗಳು ನಡೆದರೆ ಕೋಲಾಹಲವೆಬ್ಬಿಸುತ್ತದೆ ಬಿಜೆಪಿ ಮತ್ತು ಸಂಘ ಪರಿವಾರ. ಆದರೆ ತನ್ನದೇ ಆಡಳಿತದಲ್ಲಿ ಹಾಗೆ ನಡೆದರೆ ಅದಕ್ಕಾಗಿ ಸಂಕಟಪಡುವ ಬದಲು, ವಿಪಕ್ಷಗಳ ಕಡೆ ಬೊಟ್ಟು ಮಾಡುತ್ತ, ಅವುಗಳ ಸರಕಾರವಿರುವಲ್ಲಿ ನಡೆದಿಲ್ಲವೇ ಎಂದು ಪ್ರಶ್ನಿಸುವ ಹೊಣೆಗೇಡಿತನ ಮತ್ತು ನಾಚಿಕೆಗೇಡುತನವನ್ನು ಪ್ರದರ್ಶಿಸುತ್ತದೆ.
ಉತ್ತರಾಖಂಡದಲ್ಲಿ 13 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕ ಅಮಿತ್ ಸೈನಿ ಮತ್ತವನ ಸಹಾಯಕನನ್ನು ಕಳೆದ ತಿಂಗಳು ಪೊಲೀಸರು ಬಂಧಿಸಿದ್ದಾರೆ. ಆದರೆ ಅದರ ಬಗ್ಗೆ ಎಲ್ಲರೂ ಬಾಯಿಮುಚ್ಚಿಕೊಂಡಿದ್ದಾರೆ.
ಕೋಲ್ಕತಾದಲ್ಲಿ ವೈದ್ಯೆಯನ್ನು ಬಲಿ ಪಡೆದಿರುವ ಸಂದರ್ಭದಲ್ಲೇ ಉತ್ತರಾಖಂಡದ ನರ್ಸ್ ಒಬ್ಬಳನ್ನು ಅತ್ಯಾಚಾರ ಮಾಡಿ ಕೊಲೆಗೈದಿರುವುದು ಸುದ್ದಿಯಾಗುತ್ತಲೇ ಇಲ್ಲ. ಆರೋಪಿ ಧರ್ಮೇಂದ್ರ ಬಂಧನವಾಗಿದೆ. ಆದರೆ ಯಾವುದೇ ಪ್ರತಿಭಟನೆಯಿಲ್ಲ, ಬೊಬ್ಬೆ ಇಲ್ಲ, ಆಕ್ರೋಶ ಇಲ್ಲವೇ ಇಲ್ಲ.
ಅತ್ಯಾಚಾರಿಗಳಿಗೆ ಭಯವೇ ಇಲ್ಲದಂತಾಗಿರುವುದನ್ನು ತಪ್ಪಿಸಲು ಗಲ್ಲುಶಿಕ್ಷೆಯಂಥ ಕಠಿಣ ಕ್ರಮಗಳ ಅಗತ್ಯವಿದೆ ಎಂದು ಮೊನ್ನೆ ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಇದೇ ಬಿಜೆಪಿ ಸರಕಾರ ಮಾಡುತ್ತಿರುವುದೇನು? ಬಿಜೆಪಿ ಸರಕಾರ ಇರುವಲ್ಲಿ ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಆಗಿರುವ ಜೈಲು ಶಿಕ್ಷೆಯನ್ನು ಮಾಫಿ ಮಾಡಲಾಗುತ್ತದೆ. ಇಂಥದ್ದರ ಬಗ್ಗೆ ಅನೇಕರು ಪ್ರಶ್ನೆ ಎತ್ತಿದರೂ ಮೋದಿ ಸರಕಾರ ಏನೂ ಮಾಡಿದ್ದಿಲ್ಲ. ಇಂಥ ಪ್ರಕರಣಗಳು ನಡೆದಾಗೆಲ್ಲ ಮೋದಿ ಮೌನವಾಗಿರುವ ಬಗ್ಗೆಯೂ ಅನೇಕರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಮಹಿಳೆಯರ ಸುರಕ್ಷತೆ ಬಗ್ಗೆ ಈಗ ಮಾತಾಡುವ ಮೋದಿ, ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಅವಧಿಗೆ ಮೊದಲೇ ಬಿಡುಗಡೆ ಮಾಡಿ ಹಾರ ಹಾಕಿ ಸ್ವಾಗತಿಸಿದ್ದ ಬಗ್ಗೆ ತಕರಾರು ತೆಗೆದಿರಲೇ ಇಲ್ಲ. ಕೊನೆಗೆ ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಬೇಕಾಯಿತು ಮತ್ತು ಅಪರಾಧಿಗಳನ್ನು ಮತ್ತೆ ಅದು ಜೈಲಿಗೆ ಕಳಿಸಿತು.
ಅತ್ಯಾಚಾರವೆಸಗಿ ಕೊಲೆ ಮಾಡಿದ ರಾಮ್ ರಹೀಮ್ ಸಿಂಗ್ಗೆ ಬಿಜೆಪಿ ಸರಕಾರ ಇರುವ ಹರ್ಯಾಣದಲ್ಲಿ ಬೇಕಾದಾಗಲೆಲ್ಲ ಹಲವು ದಿನಗಳ ಬಿಡುಗಡೆ ನೀಡಲಾಗುತ್ತದೆ. ಅದರ ಬಗ್ಗೆ ಪ್ರಧಾನಿ ತಕರಾರು ತೆಗೆಯುವುದಿಲ್ಲ. ಬಿಜೆಪಿ ಶಾಸಕನೇ ಪ್ರಧಾನ ಆರೋಪಿಯಾಗಿದ್ದ 2017ರ ಉನ್ನಾವೋ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಅದೆಷ್ಟು ಕೆಟ್ಟದಾಗಿ ನಡೆದುಕೊಂಡಿತು ಯುಪಿಯ ಆದಿತ್ಯನಾಥ್ ಸರಕಾರ.
ಆರೋಪಿ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಾಗಲು ಸಂತ್ರಸ್ತೆ ಬಾಲಕಿ ಸಿಎಂ ಮನೆಯ ಮುಂದೆ ತನಗೆ ತಾನೇ ಬೆಂಕಿ ಹಚ್ಚಿಕೊಳ್ಳಬೇಕಾಯಿತು. ಆಮೇಲೆ ಆಕೆಯ ತಂದೆಯನ್ನು ಸುಳ್ಳು ಕೇಸಲ್ಲಿ ಸಿಲುಕಿಸಿ ಚಿತ್ರಹಿಂಸೆ ನೀಡಿ ಕೊಂದೇ ಬಿಡಲಾಯಿತು.
ಅಷ್ಟೇ ಅಲ್ಲ, ಪ್ರಕರಣದ ಸಾಕ್ಷಿಗಳ ಜೊತೆ ಸಂತ್ರಸ್ತೆ ಹೋಗುತ್ತಿರುವಾಗ ಟ್ರಕ್ ಒಂದು ಬಂದು ಗುದ್ದಿ ಇಬ್ಬರು ಬಲಿಯಾದರು, ಸಂತ್ರಸ್ತೆ ತೀವ್ರ ಗಾಯಗೊಂಡಳು. ಕೊನೆಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಛೀಮಾರಿ ಹಾಕಿ ಪ್ರಕರಣವನ್ನೇ ದಿಲ್ಲಿಗೆ ವರ್ಗಾಯಿಸಬೇಕಾಯಿತು. ಯುಪಿಯ ಹಾಥರಸ್ನಲ್ಲಿ ದಲಿತ ಯುವತಿಯ ಅತ್ಯಾಚಾರ, ಕೊಲೆ ನಡೆದಾಗ ಬಿಜೆಪಿ ಮುಖಂಡರು ಅದೆಷ್ಟು ಹೇಯವಾಗಿ ವರ್ತಿಸಿದ್ದಾರೆಂದರೆ ಆಕೆಯ ಮೇಲೆ ಅತ್ಯಾಚಾರ ನಡೆದೇ ಇಲ್ಲ ಎಂದು ಬಿಂಬಿಸಲು ಆಕೆಯ ವಿರುದ್ಧವೇ ಅಪಪ್ರಚಾರ ನಡೆಸಿದ್ದರು. ಆಕೆಯ ಮನೆಯವರಿಗೆ ಆಕೆಯ ಮುಖವನ್ನೂ ತೋರಿಸದೆ ರಾತ್ರೋ ರಾತ್ರಿ ಗದ್ದೆಯಲ್ಲಿ ಆಕೆಯ ಮೃತದೇಹವನ್ನು ಸುಟ್ಟು ಬಿಡಲಾಯಿತು.
ಈಗ ಪಶ್ಚಿಮ ಬಂಗಾಳದ ವೈದ್ಯೆ ಅತ್ಯಾಚಾರ ಮತ್ತು ಕೊಲೆ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಸರಕಾರವನ್ನು ದೂಷಿಸಲಾಗುತ್ತಿದೆ. ಅಲ್ಲಿನ ಪೊಲೀಸರ ಮೇಲೆಯೂ ವಿಶ್ವಾಸ ತೋರಿಸುತ್ತಿಲ್ಲ.
ಪ್ರಧಾನಿ ಮೋದಿಯ ಕ್ಷೇತ್ರ ಬನಾರಸ್ನಲ್ಲಿ ವಿವಿ ಕ್ಯಾಂಪಸ್ನಲ್ಲಿಯೇ ಯುವತಿ ಮೇಲೆ ಅತ್ಯಾಚಾರ ಮಾಡಿದ್ದವರು ಮೋದಿ ಜೊತೆ ಫೋಟೊಗೆ ಪೋಸ್ ಕೊಟ್ಟಿದ್ದ ಅವರದೇ ಬಿಜೆಪಿಯ ಕುನಾಲ್ ಪಾಂಡೆ, ಅಭಿಷೇಕ್ ಚೌಹಾಣ್ ಮತ್ತು ಸಕ್ಷಮ್ ಪಟೇಲ್ ಆಗಿದ್ದರು. ಆದರೆ ಅವರನ್ನು ಬಂಧಿಸಲು ಪ್ರತಿಭಟನೆ ನಡೆಸಿ ಒತ್ತಡ ಹೇರಬೇಕಾಯಿತು. ಅವರನ್ನು ಬಂಧಿಸಲು 7 ದಿನ ತೆಗೆದುಕೊಳ್ಳಲಾಯಿತು.
ಈ ನಡುವೆ ಅವರೆಲ್ಲ ಮಧ್ಯಪ್ರದೇಶದಲ್ಲಿ ಬಿಜೆಪಿಗಾಗಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿ ಬಿಟ್ಟಿದ್ದರು. ಪ್ರಧಾನಿ ಅದರ ಬಗ್ಗೆ ಏನಾದರೂ ಮಾತನಾಡಿದ್ದರಾ? ಆ ಮೂವರು ಮೋದಿ ಜೊತೆ ಫೋಟೊದಲ್ಲಿ ಕಾಣಿಸಿಕೊಂಡಿದ್ದ ಹಾಗೆ ಮಮತಾ ಬ್ಯಾನರ್ಜಿ ಅಥವಾ ಇನ್ನಾವುದೇ ವಿಪಕ್ಷ ನಾಯಕರ ಜೊತೆ ಫೋಟೊ ತೆಗೆಸಿಕೊಂಡಿದ್ದರೆ ಹೇಗೆಲ್ಲ ಪ್ರಚಾರ ನಡೆಯುತ್ತಿತ್ತು ಎಂಬುದನ್ನು ಯಾರೂ ಊಹಿಸಬಹುದಾಗಿದೆ.
ಮಹಿಳಾ ಕುಸ್ತಿಪಟುಗಳು ಬಿಜೆಪಿ ಸಂಸದನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದರು. ಹತಾಶೆಯಿಂದ ಕ್ರೀಡಾ ಬದುಕಿಗೇ ನಿವೃತ್ತಿ ಘೋಷಿಸಿದರು. ಕಣ್ಣೀರು ಹಾಕಿದರು. ಆದರೆ ಮೋದಿ ಸರಕಾರ ಆ ಮಹಿಳಾ ಕುಸ್ತಿಪಟುಗಳಿಗಾಗಿ ಏನು ಮಾಡಿತು? ಇಂದಿಗೂ ಆರೋಪಿ, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಆವತ್ತಿನ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಬಂಧನ ಆಗಲೇ ಇಲ್ಲ.
ಪಶ್ಚಿಮ ಬಂಗಾಳದಲ್ಲಿ ಈಗ ವೈದ್ಯೆ ಮೇಲಿನ ಅತ್ಯಾಚಾರ ಘಟನೆ ಹಿನ್ನೆಲೆಯಲ್ಲಿ ಹೆಜ್ಜೆ ಹೆಜ್ಜೆಗೂ ಮಮತಾ ಬ್ಯಾನರ್ಜಿಯವರನ್ನು ದೂಷಿಸಲಾಗುತ್ತಿದೆ, ಒತ್ತಡ ಹೇರಲಾಗುತ್ತಿದೆ. ಆದರೆ ಗುಜರಾತ್, ಉತ್ತರ ಪ್ರದೇಶದಂತಹ ರಾಜ್ಯಗಳ ಸಿಎಂಗಳ ಮೇಲೆ ಹೀಗೆಯೇ ಒತ್ತಡ ಹೇರಲಾಗುತ್ತಿತ್ತೆ? ಖಂಡಿತ ಹಾಗಾಗುತ್ತಿರಲಿಲ್ಲ. ಯಾಕೆಂದರೆ ಅವರು ಬಿಜೆಪಿ ಮುಖ್ಯಮಂತ್ರಿಗಳು.
ಇಂಥ ಪ್ರಕರಣದಲ್ಲಿ ಆರೋಪಿಯಾದವರಿಗೆ ಯಾವುದೇ ಜಾತಿ, ಧರ್ಮದವರಾಗಿರಲಿ ಕ್ಷಮೆ ಇರಕೂಡದು, ವಿನಾಯಿತಿ ಇರಕೂಡದು. ಹಾಗೆಯೇ ಹೆಣ್ಣೊಬ್ಬಳ ಮೇಲೆ ದೌರ್ಜನ್ಯ ನಡೆದಾಗ ಆಕೆಯ ಧರ್ಮ, ಜಾತಿ, ಹುದ್ದೆ, ಸ್ಥಾನಮಾನ, ಹಿನ್ನೆಲೆ ನೋಡದೆ ಅದನ್ನು ಹೆಣ್ಣಿನ ಮೇಲಿನ ಕ್ರೌರ್ಯ ಎಂದು ಮಾತ್ರ ಪರಿಗಣಿಸಿ ಗಂಭೀರವಾಗಿ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಆದರೆ ಭಾರತದಲ್ಲಿ ಹಾಗೆ ಆಗುತ್ತಿದೆಯೇ?