ಎ.ಜಿ. ನೂರಾನಿ ಎಂಬ ನಿರ್ಭೀತ ವಿದ್ವಾಂಸ
Photo : newindianexpress
ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಮಂದಿರ ನಿರ್ಮಾಣ 1990ರ ದಶಕದಿಂದಲೂ ಭಾರತದ ರಾಜಕೀಯವನ್ನು ಆಳವಾಗಿ ಪ್ರಭಾವಿಸಿದೆ. ಇದರೊಂದಿಗೆ 370ನೇ ವಿಧಿ ರದ್ದತಿಯ ರಾಜಕೀಯವೂ ಕಾಶ್ಮೀರದ ಕುರಿತ ಚರ್ಚೆಯನ್ನು ಬದಲಾಯಿಸಿತು. ಈ ವಿಷಯಗಳ ಬಗ್ಗೆ ಸತತವಾಗಿ ಸಂಶೋಧನಾತ್ಮಕವಾಗಿ ಬರೆದು ಹಲವು ಮಹತ್ವದ ಸತ್ಯಗಳನ್ನು ತೆರೆದಿಟ್ಟವರು ಎ.ಜಿ. ನೂರಾನಿ. ಅವರು ಆಗಸ್ಟ್ 29ರಂದು ನಿಧನರಾಗಿದ್ದಾರೆ.
ಅಬ್ದುಲ್ ಗಫೂರ್ ಮಜೀದ್ ನೂರಾನಿ.
ಅವರ ಹೆಸರು ಎಷ್ಟು ದೀರ್ಘವಾಗಿದೆಯೋ ಅವರ ಕೆಲಸ ಅದಕ್ಕಿಂತಲೂ ಬಹಳ ಬಹಳ ದೀರ್ಘ. ಒಂದೆರಡಲ್ಲ, ಹಲವು ವಿಷಯಗಳಲ್ಲಿ ಪರಿಣತಿಯಿದ್ದ, ಅಧಿಕಾರಯುತವಾಗಿ ಬರೆಯಬಲ್ಲ ವಕೀಲ, ಲೇಖಕ ಮತ್ತು ಬುದ್ಧಿಜೀವಿ ಅವರಾಗಿದ್ದರು. 1960ರಿಂದ ಅವರು ದೇಶ ವಿದೇಶಗಳ ಪತ್ರಿಕೆಗಳು, ನಿಯತಕಾಲಿಕಗಳಿಗೆ ಬರೆಯಲು ಶುರು ಮಾಡಿದ್ದರು. ಅಲ್ಲಿಂದ 60 ವರ್ಷಗಳ ಕಾಲ ನಿರಂತರವಾಗಿ ಬರೆದರು. ದೇಶ ವಿದೇಶಗಳ ಕೋಟ್ಯಂತರ ಓದುಗರ ಮೇಲೆ ಪ್ರಭಾವ ಬೀರಿದ್ದರು ಮತ್ತು ಅವರೆಲ್ಲರ ಬದುಕಿನ ಭಾಗವೇ ಆಗಿದ್ದರು.
ಅವರು ಬರೆದದ್ದು ಓದಿಕೊಂಡರೇ ನಮ್ಮ ಬದುಕು ರೂಪುಗೊಳ್ಳುವಷ್ಟಿದೆ. ಅವರು ಬರೆದ ಪುಸ್ತಕಗಳದ್ದೇ ಒಂದು ಸುದೀರ್ಘ ಪಟ್ಟಿಯಾದರೆ, ಅವರು ಬರೆದಿರುವ ವಿದ್ವತ್ ಪೂರ್ಣ ಲೇಖನಗಳಿಗೆ ಬಹುಶಃ ಲೆಕ್ಕವೇ ಇಲ್ಲ. ಅವರು ಕೊಟ್ಟಿರುವ ಉಪನ್ಯಾಸಗಳದ್ದು ಇನ್ನೊಂದು ಸುದೀರ್ಘ ಪಟ್ಟಿಯಾಗುತ್ತದೆ. ಈಗ ಕಾನೂನು ಹಾಗೂ ಸಾಂವಿಧಾನಿಕ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತಾಡುವ ಇನ್ನೊಬ್ಬ ವಿದ್ವಾಂಸ ಫೈಝಾನ್ ಮುಸ್ತಫಾ ಅವರು ಹೇಳುತ್ತಾರೆ
‘‘ನಾನೊಮ್ಮೆ ನಾಲ್ಕು ಗಂಟೆ ಅವರ ಜೊತೆ ಕಳೆದಿದ್ದೆ. ಆ ನಾಲ್ಕು ಗಂಟೆಗಳಲ್ಲಿ ಅವರಿಂದ ನಾನು ಕಲಿತಿದ್ದನ್ನು ನನ್ನ ಜೀವಮಾನವಿಡೀ ಬೇರೆ ಕಡೆ ಕಲಿಯಲು ಸಾಧ್ಯವಿಲ್ಲ. ಭಾರತದ ಸ್ವಾತಂತ್ರ್ಯ ಚಳವಳಿ ಬಗ್ಗೆ ಅವರಿಗಿದ್ದ ಜ್ಞಾನ ನೋಡಿ ನಾನು ಅಚ್ಚರಿಪಟ್ಟಿದ್ದೆ. ಯಾವ ವರ್ಷ, ಎಲ್ಲಿ, ಏನಾಗಿತ್ತು ? ಯಾರು ಏನು ಹೇಳಿದ್ದರು ? ಯಾರು ಏನು ಬರೆದಿದ್ದರು ? ಎಂಬ ಎಲ್ಲ ಮಾಹಿತಿ ಅವರಿಂದ ಪಟಪಟನೆ ಬರುತ್ತಿತ್ತು. ಪುರಾತನ ದಾಖಲೆಗಳ ಅಧ್ಯಯನದಲ್ಲಿ, ಓದಿದ್ದನ್ನು ನೆನಪಿಟ್ಟುಕೊಳ್ಳುವ ಜ್ಞಾಪಕ ಶಕ್ತಿಯಲ್ಲಿ ನೂರಾನಿ ಅವರಿಗೆ ನೂರಾನಿ ಅವರೇ ಸಾಟಿ, ಅವರ ಅಗಲಿಕೆ ಒಂದು ಯುಗಾಂತ್ಯ’’.
ಎ.ಜಿ. ನೂರಾನಿ ಅವರ ಬಗ್ಗೆ ಈಗ ಸಂತಾಪ ಸೂಚಿಸುತ್ತಿರುವ ಎಲ್ಲ ರಾಜಕಾರಣಿಗಳು, ಸಂಪಾದಕರು, ಬುದ್ದಿಜೀವಿಗಳು, ಆಕ್ಟಿವಿಸ್ಟ್ ಗಳು ‘ನಿರ್ಭೀತ’ ಎಂಬ ಒಂದು ಪದವನ್ನು ಸಾಮಾನ್ಯವಾಗಿ ಬಳಸುತ್ತಿದ್ದಾರೆ. ತಾನು ಅಧ್ಯಯನದ ಬಳಿಕ ಕಂಡುಕೊಂಡ ಕಹಿ ಸತ್ಯಗಳನ್ನು ಯಾವುದೇ ಹಿಂಜರಿಕೆ ಅಥವಾ ಮುಲಾಜಿಲ್ಲದೆ ನಿರ್ಭೀತವಾಗಿ ಮುಂದಿಟ್ಟುಬಿಡುವ ಅಪ್ರತಿಮ ಧೈರ್ಯಶಾಲಿಯಾಗಿದ್ದರು ಎ.ಜಿ. ನೂರಾನಿ ಇನ್ನು ಮುಂದೆ ಬಹಳಷ್ಟು ಕಾಲ ಅವರ ಸಾಲುಗಳನ್ನು ನೆನಪಿಸಲಾಗುತ್ತದೆ, ಉಲ್ಲೇಖಿಸಲಾಗುತ್ತದೆ.
ಈ ದೇಶದ ಪ್ರಮುಖ ರಾಜಕಾರಣಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದಾರೆ ಎ.ಜಿ. ನೂರಾನಿ ಅವರೊಬ್ಬ ಕಾನೂನು ಹಾಗೂ ಸಂವಿಧಾನ ತಜ್ಞ, ವಿದ್ವಾಂಸ, ಮಹಾನ್ ಬುದ್ಧಿಜೀವಿ, ನಿರ್ಭೀತ ಲೇಖಕ, ಮಾನವ ಹಕ್ಕುಗಳ ಹೋರಾಟಗಾರ, ನಿಷ್ಪಕ್ಷ ಅಧ್ಯಯನಕಾರ, ಸಾಕ್ಷಿಪ್ರಜ್ಞೆ ಎಲ್ಲವೂ ಆಗಿದ್ದರು. ಮೊಗಲಾಯಿ ಆಹಾರವನ್ನು ಇಷ್ಟಪಡುತ್ತಿದ್ದ ಎ.ಜಿ. ನೂರಾನಿಯವರಲ್ಲಿ ವಿಮಾನದಲ್ಲೊಮ್ಮೆ ಯಾವ ಆಹಾರ ಇಷ್ಟಪಡುತ್ತೀರಿ? ಎಂದು ಕೇಳಿದ್ದಕ್ಕೆ ‘‘ ಚಿಟಿಣi veg’’ ಎಂದು ಹೇಳಿದ್ದರಂತೆ.
370ನೇ ವಿಧಿ ಬಗ್ಗೆ ಸುದ್ದಿ ಮತ್ತು ಗದ್ದಲ ಎಲ್ಲರಿಗೂ ಗೊತ್ತಿರುತ್ತದೆ. ಆದರೆ 370ನೇ ವಿಧಿ ಬಗ್ಗೆ ನೂರಾನಿಯವರು ಬರೆದದ್ದನ್ನು ಓದದೆ ಅದರ ಬಗ್ಗೆ ಪೂರ್ಣವಾಗಿ ತಿಳಿದಿದ್ದೇವೆಂದುಕೊಳ್ಳುವುದು ಸಾಧ್ಯವೇ ಇಲ್ಲ. ಅಷ್ಟು ಆಳವಾಗಿ ಅದರ ಬಗ್ಗೆ ಅಧ್ಯಯನ ಮಾಡಿ ಬಹಳ ವಿವರವಾಗಿ ಬರೆದಿದ್ದಾರೆ ಎ.ಜಿ. ನೂರಾನಿ.
ವಾಟ್ಸ್ಆ್ಯಪ್ ಯೂನಿವರ್ಸಿಟಿಯ ಮಂದಿ ಕೂಡ ಒಮ್ಮೆ ನೂರಾನಿಯವರ ಪುಸ್ತಕಗಳನ್ನು ತೆರೆದು ನೋಡಬೇಕಿದೆ. ನೂರಾನಿಯವರ ಕೃತಿಗಳನ್ನು ಓದಿ ಒಬ್ಬ ನಾಯಕ, ಒಬ್ಬ ಕಾರ್ಯಕರ್ತ, ಒಬ್ಬ ವಕ್ತಾರ ತಯಾರಾದರೆ, ಆತ ಈ ದೇಶದ ನಿಜವಾದ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತಾಡಬಲ್ಲವನಾಗಿಯೂ ತಯಾರಾಗಿರುತ್ತಾನೆ. ತಮ್ಮ 93ನೇ ವಯಸ್ಸಿನಲ್ಲಿ ಬದುಕಿಗೆ ವಿದಾಯ ಹೇಳಿರುವ ನೂರಾನಿಯವರನ್ನು ಓದುವವರೆಲ್ಲ ಜೀವನದುದ್ದಕ್ಕೂ ಅವರ ಸಾಲುಗಳಿಗೆ ಅಡಿಗೆರೆ ಎಳೆಯುತ್ತಲೇ ಇರಬೇಕಾಗುತ್ತದೆ.
ಅವರೊಬ್ಬ ಬಿಡುವಿಲ್ಲದ ವಕೀಲರಾಗಿದ್ದರು, ಅದಕ್ಕಿಂತಲೂ ಬಿಡುವಿರದಂಥ ಇತಿಹಾಸಕಾರರಾಗಿದ್ದರು, ಅದಕ್ಕೂ ಮೀರಿದ ಅವಿರತ ಬುದ್ಧಿಜೀವಿಯಾಗಿದ್ದರು. ಅವರ ಕೃತಿಗಳ ಹೆಸರುಗಳನ್ನು ನೋಡಿದರೇ ಗೊತ್ತಾಗಿಬಿಡುತ್ತದೆ, ಅವರು ಈ ದೇಶದ ಅದೆಷ್ಟು ವಿಷಯಗಳ ಬಗ್ಗೆ ಸತ್ಯ ಮತ್ತು ಸಂದರ್ಭಗಳ ಹಿನ್ನೆಲೆಯಲ್ಲಿ ಎಷ್ಟೆಲ್ಲವನ್ನೂ ಬರೆದಿದ್ದಾರಲ್ಲ ಎಂಬುದು. ಕಾಶ್ಮೀರ, ಆರೆಸ್ಸೆಸ್, ಬಾಬರಿ ಮಸೀದಿ, ಸಂವಿಧಾನ, ಭಯೋತ್ಪಾದನೆ ಇಂಥ ಸಾಕಷ್ಟು ಸಂಕೀರ್ಣ ವಿಷಯಗಳ ಬಗ್ಗೆ ಅತ್ಯಂತ ವಿವರವಾಗಿ ಬರೆದವರು ಅವರು.
ಚರಿತ್ರೆ ಮತ್ತು ವರ್ತಮಾನವನ್ನು ಬೆಸೆಯುವಂಥ ರಾಜಕೀಯ ವ್ಯಾಖ್ಯಾನದಂತೆ ಅವರ ಕೃತಿಗಳಿವೆ. ರಾಜಕೀಯ ಭಾಷೆಯ ಮೇಲೆ ಪ್ರಬಲ ಹಿಡಿತವಿದ್ದ ಕೆಲವೇ ಕೆಲವು ಲೇಖಕರಲ್ಲಿ ನೂರಾನಿಯವರೂ ಒಬ್ಬರಾಗಿದ್ದರು. ಸಂಶೋಧಿಸುವ, ಸುಳ್ಳನ್ನು ಪತ್ತೆ ಮಾಡುವ ಮತ್ತು ಸತ್ಯವನ್ನು ಮುಟ್ಟಿಸುವ ಅವರ ಹಸಿವು ಕಡೆಯತನಕವೂ ತಣಿದಿರಲಿಲ್ಲ. ಕಡೆಯ ದಿನವೂ ಅವರು ಬಾಬರಿ ಮಸೀದಿ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪುಸ್ತಕ ಬರೆಯುವುದರಲ್ಲಿ ತೊಡಗಿದ್ದರು.
ಕಾಶ್ಮೀರದ ಸೌಂದರ್ಯ ಅವರನ್ನೆಷ್ಟು ಪ್ರಭಾವಿಸಿತ್ತೊ ಗೊತ್ತಿಲ್ಲ, ಆದರೆ ಕಾಶ್ಮೀರ ಮತ್ತು ಅದರ ಜನರೊಡನೆ ಬೆಸೆದುಕೊಂಡಿರುವ ಇತಿಹಾಸವನ್ನು ಮಾತ್ರ ಆಳವಾಗಿ ಗ್ರಹಿಸಿದ್ದರು ಮತ್ತು ಎಲ್ಲರೆದುರು ಅದನ್ನು ಇಡಲು ಯತ್ನಿಸಿದ್ದರು. ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರಕಟಿಸಿರುವ 370ನೇ ವಿಧಿ ಕುರಿತ ತಮ್ಮ ಕೃತಿಯಲ್ಲಿ ಅವರು 370ನೇ ವಿಧಿ ಬಗ್ಗೆ ಸಂವಿಧಾನ ಸಭೆಯಲ್ಲಿ ಐದು ತಿಂಗಳುಗಳ ಕಾಲ ನೆಹರೂ ಮತ್ತು ಅವರ ಜೊತೆಯವರು ವಿಚಾರ ಮಂಥನ ಮಾಡಿದ್ದನ್ನು ಪ್ರಸ್ತಾಪಿಸುತ್ತಾರೆ.
370ನೇ ವಿಧಿ ವಿಚಾರವಾಗಿ ಭಾರತದ ರಾಜಕಾರಣದಲ್ಲಿ ಆರಂಭದಿಂದಲೂ ವಿವಾದ ಇದ್ದೇ ಇತ್ತು. ಕಾಶ್ಮೀರಕ್ಕಿಂತಲೂ ಹೆಚ್ಚಾಗಿ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಇತ್ತು. ಅದರ ಬಗೆಗಿನ ಎಲ್ಲ ಅರಿವಿನ ಕೊರತೆಯನ್ನು ನೀಗಿಸುವುದಕ್ಕಾಗಿಯೇ ನೂರಾನಿಯವರು ತಮ್ಮ ಬದುಕಿನ ಬಹುಭಾಗವನ್ನು ಅದರ ಕುರಿತ ಸಂಶೋಧನೆಯಲ್ಲಿ ಮತ್ತು ಅದೆಲ್ಲವನ್ನೂ ತಿಳಿಸುವಲ್ಲಿ ಕಳೆದಿದ್ದರು. ಅನೇಕ ಲೇಖನಗಳನ್ನು ಬರೆದಿದ್ದರು.
370ನೇ ವಿಧಿ ರದ್ದತಿ ಕ್ರಮವನ್ನು ಸರಿ ಎಂದೇ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ನೂರಾನಿಯವರು ತಮ್ಮದೇ ಆದ ನಿಲುವು ಹೊಂದಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, 370 (3) ನೇ ವಿಧಿ ಜಮ್ಮು-ಕಾಶ್ಮೀರವನ್ನು ಭಾರತದ ಒಕ್ಕೂಟದೊಂದಿಗೆ ಒಗ್ಗೂಡಿಸುವ ಗುರಿ ಹೊಂದಿತ್ತೇ ಹೊರತು ವಿಘಟನೆಯನ್ನಲ್ಲ.
1949ರಲ್ಲಿ ಭಾರತದೊಂದಿಗೆ ವಿಲೀನಗೊಂಡ ನಂತರ ಜಮ್ಮು ಮತ್ತು ಕಾಶ್ಮೀರವು ಯಾವುದೇ ಆಂತರಿಕ ಸಾರ್ವಭೌಮತ್ವವನ್ನು ಹೊಂದಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ಆಂತರಿಕ ಸಾರ್ವಭೌಮತ್ವವಿದೆ ಎಂದು ಯಾವುದೇ ಸಾಂವಿಧಾನಿಕ ಪಠ್ಯ ಹೇಳುವುದಿಲ್ಲ ಎಂದಿತ್ತು.
ಜೀವನದುದ್ದಕ್ಕೂ ನೂರಾನಿಯವರು 370ನೇ ವಿಧಿ ಕುರಿತು ಸಂಶೋಧನೆ ಮಾಡಿದ್ದರು. ಆದರೆ ಆ ವಿಚಾರದಲ್ಲಿ ಎಷ್ಟು ಮಂದಿ ರಾಜಕೀಯ ನಾಯಕರು ಅವರ ಬಳಿ ಹೋಗಿ ಚರ್ಚಿಸಿದ್ದಿತ್ತು? ಎಷ್ಟು ಮಂದಿ ನಾಯಕರು ಜನರ ಬಳಿ ಹೋಗಿ ನೂರಾನಿಯವರು 370ನೇವಿಧಿ ಬಗ್ಗೆ ಬರೆದದ್ದನ್ನು ಒಮ್ಮೆ ಓದಿ ಎಂದು ಹೇಳಿದ್ದಿತ್ತು?
ನೆಹರೂ ಸಂಪುಟದಲ್ಲಿ ಮಂತ್ರಿಯಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ ಆನಂತರ ಜನಸಂಘ ಸೇರಿದ್ದರು.ಅವರು ನೆಹರೂ ಸಂಪುಟದಲ್ಲಿದ್ದ ಹೊತ್ತಲ್ಲಿಯೇ 370ನೇ ವಿಧಿ ಜಾರಿಗೆ ಬಂದಿತ್ತು. ಅವರು ಅದನ್ನು ವಿರೋಧಿಸಿರಲಿಲ್ಲ, ರಾಜೀನಾಮೆ ನೀಡಿರಲಿಲ್ಲ. ಈಗ ಬಿಜೆಪಿಯವರ ಪಾಲಿಗೆ ಪ್ರಾತಃ ಸ್ಮರಣೀಯರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಯಾಕೆ ಅವತ್ತೇ ರಾಜೀನಾಮೆ ನೀಡಿರಲಿಲ್ಲ?
370ರ ಬಗ್ಗೆ ಬರೆಯುವಾಗ ಪ್ರತಿಯೊಂದು ಸಂದರ್ಭದ ಬಗ್ಗೆಯೂ ನೂರಾನಿಯವರು ಉಲ್ಲೇಖಿಸುತ್ತಾರೆ. ಪ್ರತಿಯೊಂದನ್ನೂ ಆಧಾರ ಸಹಿತವಾಗಿ ಹೇಳುತ್ತಾರೆ. ಯಾವ ರಾಜಕೀಯ ಪಕ್ಷಕ್ಕೆ ತಮ್ಮೊಡನೆ ಮಾತನಾಡುವುದು ಕಷ್ಟಕರ ಎಂಬುದು ನೂರಾನಿಯವರಿಗೆ ತಿಳಿದಿತ್ತು.
ಇತಿಹಾಸದ ಸೂಕ್ಷ್ಮಗಳನ್ನು ನೂರಾನಿಯವರ ಬರಹಗಳು ತಿಳಿಸಿಕೊಡುತ್ತವೆ. ಸುದೀರ್ಘ ಅಧ್ಯಯನದಲ್ಲಿ ಕಂಡ ಸತ್ಯ ಮತ್ತು ಅದು ಬೆಸೆದುಕೊಂಡಿರುವ ಸಂದರ್ಭವನ್ನು ನೂರಾನಿಯವರು ಓದುಗರ ಮುಂದೆ ತೆರೆದಿಡುತ್ತಾರೆ. ಅವರನ್ನು ಓದದ ಹೊರತು ಭಾರತದ ಎಷ್ಟೋ ಸಂಕೀರ್ಣ ರಾಜಕೀಯ, ಐತಿಹಾಸಿಕ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದೇ ಸಾಧ್ಯವಿಲ್ಲ.
ಜಮ್ಮು-ಕಾಶ್ಮೀರದ ವಿಚಾರವಾಗಿ, ಜಮ್ಮುವನ್ನು ಪ್ರತ್ಯೇಕವಾಗಿಸುವ ಯತ್ನ ಆರಂಭದಿಂದಲೂ ನಡೆದಿತ್ತು ಎಂದು ನೂರಾನಿಯವರು ಹೇಳಿದ್ದಿದೆ. ಮೋದಿಯವರನ್ನು ಪ್ರಬಲ ನಾಯಕ ಎಂದು ಬಿಂಬಿಸುವ ಯತ್ನಗಳು ನಡೆದಿದ್ದ ಸಂದರ್ಭದಲ್ಲಿ ನೂರಾನಿಯವರು ಆರ್ಚಿ ಬ್ರೌನ್ ಅವರ ‘ಮಿಥ್ ಆಫ್ ದಿ ಸ್ಟ್ರಾಂಗ್ ಲೀಡರ್’ ಎಂಬ ಪುಸ್ತಕದ ಬಗ್ಗೆ ಬರೆಯುತ್ತ, ರಾಜಕೀಯ ಪ್ರಾಬಲ್ಯವನ್ನು ತೋರಿಸಿಕೊಳ್ಳುವವರು ಪ್ರಜಾಪ್ರಭುತ್ವಕ್ಕೆ ಗಂಡಾಂತರಕಾರಿಯಾಗಿ ಪರಿಣಮಿಸುತ್ತಾರೆ ಎಂದು ಹೇಳಿದ್ದರು.
ತನ್ನನ್ನು ಪ್ರಬಲ ನಾಯಕ ಎಂದು ಕರೆಸಿಕೊಳ್ಳುವ ನಾಯಕನ ಬಳಿಯೂ ಒಂದು ದಿನಕ್ಕೆ ಇರುವುದು 24 ಗಂಟೆಗಳು ಮಾತ್ರ. ಹಾಗಾಗಿ, ಪ್ರಬಲ ನಾಯಕ ಎಂದು ಬಿಂಬಿಸುವ ಯತ್ನಗಳನ್ನು ವಿರೋಧಿಸಬೇಕಿದೆ ಎಂಬುದು ನೂರಾನಿಯವರ ಪ್ರತಿಪಾದನೆಯಾಗಿತ್ತು. ನಿಜವಾದ ನಾಯಕ ಜನರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಳ್ಳುತ್ತಾನೆ ಮತ್ತು ಅರ್ಥ ಮಾಡಿಕೊಳ್ಳುತ್ತಾನೆ. ಅದನ್ನು ಗಮನದಲ್ಲಿಟ್ಟುಕೊಂಡೇ ತೀರ್ಮಾನ ತೆಗೆದುಕೊಳ್ಳುತ್ತಾನೆ.
ನಾಯಕನಾದವನು ಪ್ರಜಾಸತ್ತೆಯ ತತ್ವಗಳನ್ನು ತಾನು ಮೊದಲು ಪಾಲಿಸಬೇಕಿರುತ್ತದೆ. ನೂರಾನಿಯವರನ್ನು ಓದಿಕೊಳ್ಳದೆ ಪ್ರಸಕ್ತ ಸಮಯದ ಪ್ರಮುಖ ವಿದ್ಯಮಾನಗಳ ಬಗ್ಗೆ ಹೇಳುವುದು ಅಥವಾ ಬರೆಯುವುದು ಅಸಾಧ್ಯ. ವಿಪಕ್ಷಗಳನ್ನೂ ನೂರಾನಿಯವರು ಸುಮ್ಮನೆ ಬಿಟ್ಟಿರಲಿಲ್ಲ.
ಸೆಂಟ್ರಲ್ ವಿಸ್ತಾ ಕುರಿತ ತಮ್ಮ ಬರಹವೊಂದರಲ್ಲಿ ನೂರಾನಿಯವರು ಸೋನಿಯಾ ಮತ್ತು ರಾಹುಲ್ ಅವರ ಮೌನದ ಬಗ್ಗೆ ಪ್ರಶ್ನೆಯೆತ್ತುತ್ತಾರೆ. ಯಾವುದೇ ಭಯವೂ ಇಲ್ಲದೆ ತಾವು ಹೇಳಬೇಕಿದ್ದುದನ್ನು ಹೇಳಬಲ್ಲವರಾಗಿದ್ದರು ನೂರಾನಿ. ಈ ಭಯವಿಲ್ಲದಿರುವ ನಿಲುವಿನಲ್ಲಿಯೇ ನಾವು ನೂರಾನಿಯವರ ಮತ್ತು ಅವರ ಬರಹಗಳ ತಾಕತ್ತನ್ನು ಕಾಣಬಹುದಾಗಿದೆ. ಎ.ಜಿ. ನೂರಾನಿಯವರಂತಹ ವಿದ್ವಾಂಸರು, ಲೇಖಕರು, ಬುದ್ಧಿಜೀವಿಗಳು ಆಗಾಗ ಬರುವುದಿಲ್ಲ, ಸಿಗುವುದೂ ಇಲ್ಲ.
ನಾವು ಕನಿಷ್ಠ ಎ.ಜಿ. ನೂರಾನಿಯವರ ಬರಹಗಳನ್ನು ಓದಿಕೊಂಡು, ಈ ದೇಶದ ಸಂವಿಧಾನದ ಆಶಯಗಳನ್ನು ಪಾಲಿಸುತ್ತಾ, ಆ ಆಶಯಗಳಿಗೆ ಬದ್ಧರಾಗಿರುವುದೇ ಅವರಿಗೆ ಸಲ್ಲಿಸುವ ಅತ್ಯುತ್ತಮ ಶ್ರದ್ಧಾಂಜಲಿ.