ಶಿಕ್ಷಕರಿಗೆ ಆತ್ಮಸ್ಥೈರ್ಯ ತುಂಬುವ ದಿನಾಚರಣೆಯಾಗಲಿ
ಇಂದು ವಿಶ್ವ ಶಿಕ್ಷಕರ ದಿನಾಚರಣೆ
ಇಂದು(ಅ.5) ವಿಶ್ವ ಶಿಕ್ಷಕರ ದಿನಾಚರಣೆ. ಯುನೆಸ್ಕೊ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಆಚರಿಸುವ ಈ ದಿನಾಚರಣೆಯ ಈ ಬಾರಿಯ ಘೋಷವಾಕ್ಯ ‘ಶಿಕ್ಷಕರ ಅಭಿಪ್ರಾಯಕ್ಕೆ ಬೆಲೆ ನೀಡುವುದು ಮತ್ತು ಹೊಸ ಬಗೆಯ ಶಿಕ್ಷಣಕ್ಕಾಗಿ ಅವರ ಜೊತೆ ಹೊಸ ಸಾಮಾಜಿಕ ಒಪ್ಪಂದದ ಕಡೆಗೆ’ ಆಲೋಚನೆ ಮಾಡುವುದು ಎಂಬುದಾಗಿದೆ. ಈ ಆಚರಣೆಯು ಶಿಕ್ಷಣದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ವಹಿಸಬೇಕಾದ ಪ್ರಮುಖ ಪಾತ್ರವನ್ನು ಒತ್ತಿ ಹೇಳುತ್ತದೆ. ಜೊತೆಗೆ ಸರಕಾರಗಳು ಶೈಕ್ಷಣಿಕ ನೀತಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಶಿಕ್ಷಕರ ದೃಷ್ಟಿಕೋನ, ಬೇಕು-ಬೇಡಗಳ ಬಗ್ಗೆ ಹೊಸ ಬಗೆಯ ಸಂವಾದ ಮತ್ತು ಎಲ್ಲ ತೀರ್ಮಾನಗಳ ಪ್ರಕ್ರಿಯೆಯಲ್ಲಿ ಅವರನ್ನು ಒಳಮಾಡಿಕೊಳ್ಳುವ ತುರ್ತು ಅಗತ್ಯವನ್ನು ಒತ್ತಿ ಹೇಳುತ್ತದೆ.
ಶಿಕ್ಷಕರ ಸ್ಥಾನಮಾನಕ್ಕೆ ಸಂಬಂಧಿಸಿದ 1966ರಲ್ಲಿ ಐಎಲ್ಒ/ಯುನೆಸ್ಕೊ ಶಿಫಾರಸು ಮತ್ತು ಉನ್ನತ ಶಿಕ್ಷಣ ಬೋಧನಾ ಸಿಬ್ಬಂದಿಯ ಸ್ಥಾನಮಾನಕ್ಕೆ ಸಂಬಂಧಿಸಿದ 1997ರ ಯುನೆಸ್ಕೋ ಶಿಫಾರಸುಗಳನ್ನು ಅಂಗೀಕರಿಸಿದ ನೆನಪಿಗಾಗಿ ಯುನೆಸ್ಕೊ ಅಕ್ಟೋಬರ್ 5ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸುತ್ತದೆ. ಈ ಒಡಂಬಡಿಕೆಯ ಶಿಫಾರಸುಗಳು ಶಿಕ್ಷಕರ ಹಕ್ಕುಗಳು ಹಾಗೂ ಜವಾಬ್ದಾರಿ ಕುರಿತಂತೆ ಮತ್ತು ಶಿಕ್ಷಕರ ಪ್ರಮುಖ ವೃತ್ತಿಪರ, ಸಾಮಾಜಿಕ, ನೈತಿಕ ಮತ್ತು ಭೌತಿಕ ಕಾಳಜಿಗಳಿಗೆ ಅಂತರ್ರಾಷ್ಟ್ರೀಯ ಮಾನದಂಡಗಳನ್ನು ನಿಗದಿಪಡಿಸುತ್ತವೆ.
ಈ ವರ್ಷ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ನೇತೃತ್ವದ ಬೋಧನಾ ವೃತ್ತಿಯ ಉನ್ನತ ಮಟ್ಟದ ಸಮಿತಿಯು ಶಿಕ್ಷಣದ ಪರಿವರ್ತನೆಯಲ್ಲಿ ಶಿಕ್ಷಕರ ಪಾತ್ರವನ್ನು ಬಲಪಡಿಸಲು ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ 4ನೇ ಗುರಿಯನ್ನು ಮುನ್ನಡೆಸಲು ಅಗತ್ಯವಿರುವ ಶಿಫಾರಸುಗಳನ್ನು ಕೂಡ ಪ್ರಕಟಿಸಿದೆ. ಮೇಲಿನ 1996 ಮತ್ತು 1997ರ ಪ್ರಮಾಣಕ ಸಾಧನಗಳನ್ನು ಪರಿಶೀಲಿಸುವ ಮತ್ತು ಅವುಗಳನ್ನು ಮತ್ತಷ್ಟು ಸುಧಾರಿಸುವ ಅಗತ್ಯವನ್ನು ಈ ಶಿಫಾರಸುಗಳು ಎತ್ತಿ ತೋರಿಸುತ್ತವೆ. ಜೊತೆಗೆ ಶಿಕ್ಷಣಕ್ಕಾಗಿ ಶಿಕ್ಷಕರ ಜೊತೆ ಹೊಸ ಸಾಮಾಜಿಕ ಒಪ್ಪಂದದ ಮೂಲಕ ಕಲಿಕೆಯನ್ನು ಪರಿವರ್ತಿಸುವ ಆಶಯವನ್ನು ಹೊಂದಿದೆ.
ಈ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ, ಯಾವುದೇ ಸರಕಾರಗಳು ಶಿಕ್ಷಣದ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಶಿಕ್ಷಕರ ಅಭಿಪ್ರಾಯ ಮತ್ತು ಭಾಗವಹಿಸುವಿಕೆಯನ್ನು ಗೌರವಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ. ಲಭ್ಯವಿರುವ ಇತ್ತೀಚಿನ ಸಂಶೋಧನೆಗಳ ಪ್ರಕಾರ, ಪ್ರಪಂಚದಾದ್ಯಂತ ಹೆಚ್ಚು ಮತ್ತು ಕಡಿಮೆ ಆದಾಯವಿರುವ ಎರಡೂ ಬಗೆಯ ದೇಶಗಳಲ್ಲಿ, ಬೋಧನಾ ವೃತ್ತಿಗೆ ನೀಡಲಾದ ಮೌಲ್ಯವು ಸಾಮಾನ್ಯವಾಗಿ ಕಡಿಮೆಯಾಗಿರುವುದಲ್ಲದೆ ಕೆಲವೆಡೆ ಕುಸಿಯುತ್ತಿದೆ ಎಂದು ವರದಿಯಲ್ಲಿ ಗ್ರಹಿಸಲಾಗಿದೆ. ಯುನೆಸ್ಕೊ ಮತ್ತು ಇಂಟರ್ನ್ಯಾಷನಲ್ ಟೀಚರ್ ಟಾಸ್ಕ್ಫೋರ್ಸ್ ಇತ್ತೀಚೆಗೆ ಪ್ರಕಟಿಸಿದ ಶಿಕ್ಷಕರ ಕುರಿತ ಜಾಗತಿಕ ವರದಿ (2024)ರ ಅನ್ವಯ, ಜಾಗತಿಕವಾಗಿ ಶಿಕ್ಷಕರ ಕೊರತೆ ಮತ್ತು ಶಿಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದೆ.
ಶಿಕ್ಷಕ ವೃತ್ತಿಯು ಎದುರಿಸುತ್ತಿರುವ ಸವಾಲುಗಳು ಮತ್ತು ಈ ಸವಾಲುಗಳ ಬಹು ಆಯಾಮವನ್ನು ಗಮನಿಸಿದರೆ ಗಾಬರಿಯಾಗುತ್ತದೆ. ಕಾರಣ, ಈ ಸಮಸ್ಯೆಗಳನ್ನು ನಾವು ಬಹಳಷ್ಟು ವರ್ಷಗಳಿಂದ ಬಗೆಹರಿಸಲು ವಿಫಲರಾಗಿದ್ದೇವೆ. ಉದಾಹರಣೆಗೆ , ಕಳಪೆ ಕೆಲಸದ ಪರಿಸ್ಥಿತಿಗಳು, ಸ್ಪರ್ಧಾತ್ಮಕವಲ್ಲದ ಸಂಭಾವನೆ ಮತ್ತು ಹೆಚ್ಚಿನ ಕೆಲಸದ ಹೊರೆಗಳು ಶಿಕ್ಷಕರನ್ನು ವೃತ್ತಿಗೆ ಬಾರದಂತೆ ಅಥವಾ ಬಂದರೂ ಹೆಚ್ಚು ಕಾಲ ಆ ವೃತ್ತಿಯಲ್ಲಿ ಮುಂದುವರಿಯದಂತೆ ನಿರುತ್ಸಾಹಗೊಳಿಸುತ್ತಿವೆ. ಕಲಿಕೆಯ ಭೌತಿಕ ಪರಿಸ್ಥಿತಿಗಳನ್ನು ಹೊರತುಪಡಿಸಿ ನೋಡುವುದಾದರೂ ಅವರಿಗೆ ಸಿಗಬೇಕಾದ ಸಾಮಾಜಿಕ ಮನ್ನಣೆಯ ಕೊರತೆ, ವೃತ್ತಿಪರ ಸ್ವಾಯತ್ತತೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಶಿಕ್ಷಕರ ಅಭಿಪ್ರಾಯವನ್ನು ನಿರ್ಲಕ್ಷಿಸುವುದು ನಿರಂತರವಾಗಿ ಮುಂದುವರಿದಿದೆ . ಈ ಎಲ್ಲಾ ಬೆಳವಣಿಗೆಗಳು ಶಿಕ್ಷಕರ ಸ್ಥಾನಮಾನ, ಪ್ರೇರಣೆ, ಬದ್ಧತೆ ಮತ್ತು ಶಿಕ್ಷಕರ ಕಾರ್ಯ ವೈಖರಿಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುವುದಲ್ಲದೆ, ಒಟ್ಟಾರೆ ಶಿಕ್ಷಣ ನೀತಿ ಮತ್ತು ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.
ಎಲ್ಲ ಹಂತದಲ್ಲಿ ನೀತಿ ನಿರೂಪಕರು ಅರ್ಥ ಮಾಡಿಕೊಳ್ಳಬೇಕಾದ ಒಂದು ಮುಖ್ಯ ವಿಚಾರವೆಂದರೆ, ಕೋವಿಡ್-19ರ ಸಾಂಕ್ರಾಮಿಕ ರೋಗ ಇಡೀ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡುವ ಮೂಲಕ ಶಾಲೆಗಳನ್ನು ಮುಚ್ಚಲು ಕಾರಣವಾದಾಗ, ಇದೇ ಶಿಕ್ಷಕರು ತೋರಿದ ಹೊಸ ಬಗೆಯ ವಿಧಾನಗಳು ಹಾಗೂ ಮಧ್ಯಪ್ರವೇಶಿಕೆಗಳು ಶಿಕ್ಷಣ ವ್ಯವಸ್ಥೆಯನ್ನು ಸಂಕಷ್ಟ ಕಾಲದಲ್ಲಿ ಮುಂದುವರಿಸಲು ಹೇಗೆ ಸಹಾಯವಾಯಿತೆಂಬುದು. ಶಿಕ್ಷಕರಿಗೆ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯನ್ನು ನೀಡಿದರೆ, ವಾಸ್ತವವಾಗಿ ಸ್ಥಳೀಯ ನೆಲೆಯ ಶೈಕ್ಷಣಿಕ ನಿರ್ಧಾರಗಳ ಮೂಲಕ ಮಕ್ಕಳ ಕಲಿಕೆ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಉತ್ತಮಪಡಿಸುವ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಲು ಶಿಕ್ಷಕರು ಸಮರ್ಥರು ಎಂಬುದನ್ನು ಕೋವಿಡ್ ಸಂದರ್ಭ ನಮಗೆ ದೃಢಪಡಿಸಿದೆ. ಈ ಸಂದರ್ಭದಲ್ಲಿ ನಾವು ಕಂಡುಕೊಂಡ ಸತ್ಯವೆಂದರೆ ಶಿಕ್ಷಕರು ಸಂಶೋಧನೆ ನಡೆಸಲು, ಹೊಸ ಬಗೆಯ ವಿಧಾನಗಳನ್ನು ಅಳವಡಿಸಿಕೊಳ್ಳಲು, ಪಠ್ಯಕ್ರಮದ ವಿನ್ಯಾಸ ಹಾಗೂ ಕಲಿಕೆಯನ್ನು ಮರು ವ್ಯಾಖ್ಯಾನಿಸಲು, ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಹೊಸ ಬಗೆಯಲ್ಲಿ ನಿರ್ಣಯಿಸಿ ಮತ್ತು ಸಂದರ್ಭೋಚಿತಗೊಳಿಸಲು ಮತ್ತು ಶಿಕ್ಷಣವನ್ನು ಮಕ್ಕಳ ನೆಲೆಯಲ್ಲಿ ವೈಯಕ್ತೀಕರಿಸಿ ತಮ್ಮ ತರಗತಿ ಕೋಣೆಗಳಲ್ಲಿನ ಕಲಿಕಾ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮರ್ಥರಿದ್ದಾರೆ ಎಂಬುದು.
ಶಿಕ್ಷಕರಿಗೆ ಈ ಬಗೆಯ ಅಪರಿಮಿತ ಸಾಮರ್ಥ್ಯವಿದ್ದರೂ ನಮ್ಮ ದೇಶವನ್ನೂ ಒಳಗೊಂಡಂತೆ ಹಲವು ದೇಶಗಳಲ್ಲಿ ಶಿಕ್ಷಕರನ್ನು ಶಿಕ್ಷಣದ ನೀತಿನಿರೂಪಣೆ ಮತ್ತು ಸಂಬಂಧಿಸಿದ ಸುಧಾರಣೆಯಲ್ಲಿ ಅವರನ್ನು ತೊಡಗಿಸಿಕೊಳ್ಳುತ್ತಿಲ್ಲ ಎಂಬ ಬಲವಾದ ನೋವು ಶಿಕ್ಷಕರಿಗಿದೆ.
ಐಎಲ್ಒ/ಯುನೆಸ್ಕೊ ಶಿಫಾರಸು(1966) ಹೇಳು ವಂತೆ ಶಿಕ್ಷಣ ನೀತಿ ಮತ್ತು ಅದರ ನಿಖರವಾದ ಉದ್ದೇಶ ಗಳನ್ನು ವ್ಯಾಖ್ಯಾನಿಸಲು ಮತ್ತು ಸೂಕ್ತ ನೀತಿ ಹಾಗೂ ಕಾರ್ಯಕ್ರಮಗಳನ್ನು ರೂಪಿಸುವಾಗ ಸರಕಾರಗಳು ಶಿಕ್ಷಕರು ಹಾಗೂ ಶಿಕ್ಷಕರ ಸಂಘಟನೆಗಳ ಜೊತೆ ಮತ್ತು ಕಲಿಕೆ ಹಾಗೂ ಸಂಶೋಧನಾ ಸಂಸ್ಥೆಗಳ ನಡುವೆ ನಿಕಟ ಸಹಕಾರ ಇರಬೇಕು ಎಂದು ಆಶಿಸುತ್ತದೆ. ಇದು ಸಂಭವಿಸಲು, ಸಂವಾದ, ಶಿಕ್ಷಕರ ಭಾಗವಹಿಸುವಿಕೆಗೆ ಕಾರ್ಯವಿಧಾನಗಳು, ಶಿಕ್ಷಕರ ಅಭಿಪ್ರಾಯ ಕೇಳಲು ಅನುಮತಿಸುವುದು, ವಿಶ್ವಾಸ ಮತ್ತು ಸಹಯೋಗದ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವುದು, ಸ್ವಾಯತ್ತ ಶೈಕ್ಷಣಿಕ ಸ್ವಾತಂತ್ರ್ಯವನ್ನು ಬೆಳೆಸುವುದು ಮತ್ತು ಶಿಕ್ಷಕರನ್ನು ತರಗತಿಯ ಒಳಗೆ ಮತ್ತು ಹೊರಗೆ ಗೌರವಿಸುವ ಸಂಸ್ಕೃತಿ ಉತ್ತಮ ಭೂಮಿಕೆಯನ್ನು ಕಟ್ಟಿಕೊಡುತ್ತದೆ ಎಂದು ಹೇಳುತ್ತದೆ.
ಈ ಚೌಕಟ್ಟಿನ ಹಿನ್ನೆಲೆಯಲ್ಲಿ, ನಮ್ಮ ರಾಜ್ಯದ ಶಿಕ್ಷಕರ ಪರಿಸ್ಥಿತಿಯನ್ನು ಗಮನಿಸಿದರೆ ತುಂಬಾ ಚಿಂತಾಜನಕವಾಗಿದೆ. ರಾಜ್ಯದಲ್ಲಿ ಸುಮಾರು 1,87,993 ಲಕ್ಷ ಶಿಕ್ಷಕರ ಮಂಜೂರಾದ ಹುದ್ದೆಗಳಿದ್ದು 1,44,774 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬರೋಬ್ಬರಿ 43,246 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಅವರನ್ನು ಪ್ರಾಥಮಿಕ ಶಾಲಾ ಶಿಕ್ಷಕರೆಂದು ನೇಮಕಾತಿ ಆದೇಶ ನೀಡಿ 1ರಿಂದ 7ನೇ ತರಗತಿಯ ಮಕ್ಕಳಿಗೆ ಕಲಿಸಲು ನೀಡಿದ್ದ ಅವಕಾಶವನ್ನು ಕಸಿದು ಅವರಿಗೆ ಹಿಂಭಡ್ತಿ ನೀಡುವ ಮೂಲಕ ಆ ಹುದ್ದೆಗಿದ್ದ ಕನಿಷ್ಠ ಗೌರವವನ್ನು ಕಳೆಯುವ ತೀರ್ಮಾನವನ್ನು ನೀತಿ ನಿರೂಪಕರು ಮಾಡಿದ್ದಾರೆ.
ಯಾವುದೇ ಬಗೆಯ ಹೊಸ ನೀತಿಯನ್ನು ಪ್ರಕಟಿಸುವಾಗ ಅದನ್ನು ಪೂರ್ವಾನ್ವಯಗೊಳಿಸಬಾರದೆಂಬ ಕನಿಷ್ಠ ವಿವೇಕವನ್ನು ನಾವು ಕಳೆದುಕೊಳ್ಳುವ ಮೂಲಕ ಶಿಕ್ಷಕರ ನೇಮಕಾತಿಯ ಒಪ್ಪಂದವನ್ನೇ ಮುರಿದಿದ್ದೇವೆ. ಅವರಿಗೆ ಎಲ್ಲಾ ಶೈಕ್ಷಣಿಕ ಅರ್ಹತೆ ಮತ್ತು ಸೇವಾ ಜ್ಯೇಷ್ಠತೆ ಇದ್ದರೂ ಭಡ್ತಿ ಗಗನ ಕುಸುಮವಾಗಿದೆ. ಇನ್ನು ಅತಿಥಿ ಶಿಕ್ಷಕರ ಪಾಡು ಕೇಳುವಂತಿಲ್ಲ. ಅವರಿಗೆ ಸೇವಾ ಭದ್ರತೆ, ಕನಿಷ್ಠ ಸಂಬಳ, ಆರೋಗ್ಯಕರವಾದ ಕೆಲಸದ ವಾತಾವರಣ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅವರ ಬೇಕು-ಬೇಡಗಳನ್ನು ಕೇಳಿಸಿಕೊಳ್ಳುವ ಕನಿಷ್ಠ ಸೌಜನ್ಯವೂ ಇಲ್ಲದಂತಾಗಿದೆ. ಅವರು ಅಲ್ಪ ಮಾನವರಂತೆ ಬದುಕುತ್ತಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಶಿಕ್ಷಕರ ಬದುಕು ಇದಕ್ಕಿಂತ ಭಿನ್ನವಾಗಿಲ್ಲ. ಒಟ್ಟಾರೆ, ಈ ಎಲ್ಲಾ ವಿಷಯಗಳ ಬಗ್ಗೆ ವಿಶ್ವ ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ನೀತಿ ನಿರೂಪಕರು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಕೂಡಿ ಬಂದಿದೆ.