ಮರೆಯಲಾಗದ ಕಲಾವಿದ ಮೋಹನ ಸೋನ
ಸಂಪೂರ್ಣ ಸಾಕ್ಷರತಾ ಆಂದೋಲನ 1990-91ನೇ ವರ್ಷದಲ್ಲಿ ರಾಜ್ಯದಲ್ಲಿ ಪ್ರಥಮವಾಗಿ ದ.ಕ. ಜಿಲ್ಲೆಯಲ್ಲಿ ಕಾರ್ಯರೂಪಕ್ಕೆ ಬಂತು. ಜಿಲ್ಲೆಯ ಸಾಹಿತಿಗಳು, ಕಲಾವಿದರು ಅದನ್ನೊಂದು ಚಳವಳಿಯಾಗಿ ರೂಪಿಸಿದ್ದರು. ಇದೇ ಅಕ್ಟೋಬರ್ 12 ರಂದು ತೀರಿಕೊಂಡ ಜಿಲ್ಲೆಯ ಖ್ಯಾತ ಚಿತ್ರಕಲಾವಿದ ಮೋಹನ ಸೋನ ಹತ್ತಾರು ಚಿತ್ರಕಲಾವಿದ ಮಿತ್ರರಿಂದ ಚಿತ್ರಗಳನ್ನು ಬರೆಯಿಸಿ ಜಿಲ್ಲಾಡಳಿತದ ನೆರವಿನೊಂದಿಗೆ 5 ದಿನಗಳ ಸಾಕ್ಷರತಾ ಚಿತ್ರಕಲಾ ಜಾಥಾ ನಡೆಯಿಸಿದ್ದು ಇನ್ನೂ ಅನೇಕರ ನೆನಪಿನಲ್ಲಿದೆ.
ಸುಳ್ಯ ತಾಲೂಕಿನ ಸೋಣಂಗೇರಿ ಹಳ್ಳಿಯ ರೈತ ಕುಟುಂಬ ಮೋಹನ ಸೋನ ಅವರದು. ಮಂಗಳೂರಿನಲ್ಲಿ ಶಿಕ್ಷಕ ತರಬೇತಿ, ಚಿತ್ರಕಲಾ ಶಿಕ್ಷಣದ ಬಳಿಕ ಸುಳ್ಯ ತಾಲೂಕಿನ ದೊಡ್ಡ ತೋಟ ಎಂಬಲ್ಲಿ ಶಾಲಾ ಶಿಕ್ಷಕರಾಗಿದ್ದಾಗಲೇ ಮಕ್ಕಳ ಮೂಲಕ ಹೊಸ ಬಗೆಯ ನಾಟಕಗಳನ್ನು ಆಡಿಸಿದರು. ಕುರುಸೋವಾನ ‘ರಾಶೋಮನ್’ ಆಧರಿಸಿದ ‘ದಿಡ್ಡಿಬಾಗಿಲು’ ನಾಟಕವನ್ನು 1979ರಲ್ಲಿ ತುಳುಭಾಷೆಯಲ್ಲಿ ಆಡಿಸಿದರು. ಬಳಿಕ ಅದೇ ವರ್ಷ ಸಮುದಾಯದ ಪ್ರಥಮ ಜಾಥಾ ಸುಳ್ಯಕ್ಕೆ ಬಂದಾಗ, ಸಂಪರ್ಕ ಬೆಳೆಸಿಕೊಂಡರು. ಮುಂದೆ ಅವರು ವಿಟ್ಲದಲ್ಲಿರುವ ಕೃಷಿ ಸಂಶೋಧನಾ ಸಂಸ್ಥೆ ಸಿಪಿಸಿಆರ್‌ಐಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯುದ್ದಕ್ಕೂ ವಿಟ್ಲದಲ್ಲಿ, ಸುಳ್ಯದಲ್ಲಿ, ಸೋಣಂಗೇರಿ, ಪುತ್ತೂರುಗಳಲ್ಲಿ ರಂಗಭೂಮಿ ಚಟುವಟಿಕೆಗಳಲ್ಲೂ, ಸೃಜನಶೀಲ ಚಿತ್ರರಚನೆಯಲ್ಲೂ ತೊಡಗಿಸಿಕೊಂಡರು.
ಖ್ಯಾತ ಕಲಾವಿದ ಜಾನ್ ದೇವರಾಜ್ ಅವರು 1984ರಲ್ಲಿ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ರಸ್ತೆಬದಿ ಚಿತ್ರಪ್ರದರ್ಶನವನ್ನು ಏರ್ಪಡಿಸಿದಾಗ ಮೋಹನ ಸೋನ ಅವರೊಂದಿಗೆ ಜಿಲ್ಲೆಯ ಹತ್ತಾರು ಕಲಾವಿದರು ತಮ್ಮ ಚಿತ್ರಗಳನ್ನು ಪ್ರದರ್ಶಿಸುವುದರೊಂದಿಗೆ, ಈ ಕಲಾವಿದರಿಗೆ ಸಾಂಸ್ಕೃತಿಕ ವಲಯದಲ್ಲಿ ಅಪೂರ್ವ ಮನ್ನಣೆ ಬಂತು. ಅಲ್ಲಿ ಎದ್ದುಕಂಡ ಕಲಾಪ್ರತಿಭೆ ಮೋಹನ ಸೋನರದು.
1990ರಲ್ಲಿ ಮೋಹನ ಸೋನರ ನೇತೃತ್ವದ ಗುಂಪು 5 ದಿನಗಳ ಸಾಕ್ಷರತಾ ಕಲಾ ಜಾಥಾ ಮಾಡಿದರಷ್ಟೆ. 1993ರಲ್ಲಿ ಸಾಹಿತಿ ಶಿವರಾಮ ಕಾರಂತರಿಗೆ 90 ವರ್ಷ ತುಂಬಿದ ನೆನಪಲ್ಲಿ ಚಿತ್ರ ಕಾರಂತ ಎಂಬ ಪ್ರದರ್ಶನವನ್ನು ಸೋನರ ಬಳಗ ಏರ್ಪಡಿಸಿತು. ಒಂದು ಶಿಬಿರದಲ್ಲಿ ರಾಜ್ಯದ ಖ್ಯಾತ ಕಲಾವಿದರು ಕಲಾಕೃತಿ ರಚಿಸಿದಂದಿನಿಂದ ತೊಡಗಿದ ಕಾರ್ಯಕ್ರಮ 90 ದಿನ 90 ಚಿತ್ರ ಎಂಬ ಪ್ರಚಾರದೊಂದಿಗೆ ಜಾಥಾ ಜಿಲ್ಲಾದ್ಯಂತ ಸಾಗಿತು. ಪುತ್ತೂರಿನಲ್ಲಿ ನಡೆದ ಜಾಥಾ ಉದ್ಘಾಟನಾ ಸಮಾರಂಭದಲ್ಲಿ ಸ್ವತಃ ಕಾರಂತರೂ, ಖ್ಯಾತ ಕಲಾವಿದ ಕೆ.ಕೆ.ಹೆಬ್ಬಾರರೂ ಭಾಗವಹಿಸಿದ್ದರು. ಜಾಥಾ ಕಾರಂತರ ಹುಟ್ಟೂರು ಕೋಟ ತಲುಪಿದಾಗ ಅಲ್ಲಿ ಕಾರಂತ ಉತ್ಸವ ನಡೆಯುತ್ತಿತ್ತು.
ಜಾಥಾ ಜಿಲ್ಲೆ ಸುತ್ತಿ ಸೋಣಂಗೇರಿಗೆ ತಲುಪಿದಾಗ ಖ್ಯಾತ ರಂಗ ನಿರ್ದೇಶಕರಾದ ಬಿ.ವಿ.ಕಾರಂತರು ಬಂದು ಉತ್ಸವದಲ್ಲಿ ಭಾಗವಹಿಸಿದರು. ಅದೇ ವರ್ಷ ಸೋಣಂಗೇರಿಯಲ್ಲಿ ಬಯಲು ಚಿತ್ರಾಲಯವನ್ನು ಮೋಹನ ಸೋನ ಪ್ರಾರಂಭಿಸಿದರು. ಅದರ ಭಾಗವಾಗಿ ಹಳ್ಳಿಯ 40 ಮನೆಗಳಲ್ಲಿ ರಾಜ್ಯದ ಬೇರೆ ಬೇರೆ ಭಾಗದ ಚಿತ್ರಕಲಾವಿದರು ಉಳಿದುಕೊಂಡು ಕನಿಷ್ಠ ಒಂದು ಚಿತ್ರವನ್ನು ಆ ಮನೆಗಳಲ್ಲಿ ರಚಿಸಿ ಪ್ರದರ್ಶನಕ್ಕಿಡುವ ವ್ಯವಸ್ಥೆಯಾಯಿತು. ಆ ದಿನಗಳಲ್ಲಿ ಇದೊಂದು ವಿಶಿಷ್ಟವಾದ ಪರಿಕಲ್ಪನೆ. ಶಿವರಾಮ ಕಾರಂತರ ‘ಚೋಮನ ದುಡಿ’ ಕಥೆಯನ್ನು ಗೋಡೆಯ ಮೇಲೆ ರೂಪಿಸಿದ್ದು ರಾಜ್ಯಕ್ಕೆ ಸುದ್ದಿ ಮಾಡಿದ ಸಂಗತಿ. ಅದು ನಡೆದದ್ದು 1994ರಲ್ಲಿ.
ಸೋಣಂಗೇರಿಯ ಮೋಹನ ಸೋನರ ಮನೆ ಮತ್ತು ತೋಟವನ್ನು ಸುತ್ತಿರುವ ಮಣ್ಣಿನ ಬರೆ (ದರೆ/ಕಾಂಪೌಂಡ್) ಮೇಲೆ 600 ಅಡಿಗಳಷ್ಟು ಉದ್ದಕ್ಕೆ 13 ಭಾಗಗಳಲ್ಲಿ ‘ಚೋಮನ ದುಡಿ’ ಕಥೆಯನ್ನು ಚಿತ್ರಿಸಲಾಯಿತು. ಮಣ್ಣಿನ ಗೋಡೆಯ ಮೇಲೆ ಸಿಮೆಂಟ್ ಉಬ್ಬುಶಿಲ್ಪದಲ್ಲಿ ಕಲಾವಿದರ ಗುಂಪು ಕೆಲಸ ಹಂಚಿಕೊಂಡು ಈ ಚಿತ್ರಕಥೆ ಪೂರ್ಣಗೊಳಿಸಿದಾಗ, ತಿಂಗಳುದ್ದಕ್ಕೂ ಸೋಣಂಗೇರಿಯ ಸೋನರ ಮನೆಯಲ್ಲಿ, ಸಮೀಪದ ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಜ್ಯದ ಮೂಲೆ ಮೂಲೆಯಿಂದ ಕಲಾಸಕ್ತರು ಭೇಟಿ ಇತ್ತರು. ಐದಾರು ವರ್ಷ ಹಾಳಾಗದೆ ಇದ್ದ ‘ಚೋಮನ ದುಡಿ’ ಚಿತ್ರ ಮಾಲಿಕೆಯ ತುಣುಕುಗಳು ಇನ್ನೂ ಕೆಲವು ಉಳಿದಿವೆ.
1979ರ ಸಮುದಾಯದ ಸಾಂಸ್ಕೃತಿಕ ಜಾಥಾದ ಬಳಿಕ ರಂಗಭೂಮಿಯಲ್ಲೂ ಮೋಹನ ಸೋನ ಕೆಲಸ ಮಾಡಿದ್ದಾರೆ. ರಾಜ್ಯ ಸಮುದಾಯ ತಂಡದ ಭಾಗವಾಗಿ 1981ರಲ್ಲಿ ಭೋಪಾಲದಲ್ಲಿ ನಡೆದ ಬೀದಿ ನಾಟಕ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಅವರು ಚಿತ್ರಕಲಾವಿದರಾಗಿರುವುದರಿಂದ ಅವರು ಭಾಗವಹಿಸಿರುವ ನಾಟಕಗಳಲ್ಲಿ ಬಣ್ಣ, ಬೆಳಕು, ರಂಗವಿನ್ಯಾಸ ಇವುಗಳು ವಿಶಿಷ್ಟ ದೃಶ್ಯ ಪರಿಣಾಮಗಳನ್ನು ಉಂಟುಮಾಡುತ್ತಿದ್ದವು. 1986ರಲ್ಲಿ ವಿಟ್ಲದಲ್ಲಿ ಅವರೇ ನಿರ್ದೇಶಿಸಿದ ಚೋಮ ಒಂದು ಉನ್ನತ ರಂಗಕೃತಿ. ಹಾಗೆಯೇ ಈಗ ನಾಲ್ಕು ವರ್ಷಗಳ ಹಿಂದೆ ಕೊನೆಯದಾಗಿ ಅವರು ನಿರ್ದೇಶಿಸಿದ ಕಾರಂತರ ಕೃತಿ ‘ಮೂಕಜ್ಜಿಯ ಕನಸುಗಳು’ ಕೂಡಾ; ಪುತ್ತೂರಿನ ಕಾರಂತರ ಬಾಲವನದಲ್ಲಿ ಅದು ಪ್ರದರ್ಶಿತವಾಯಿತು. ಈ ಮಧ್ಯೆ ಅರೆಭಾಷೆಯಲ್ಲಿ ತೇಜಸ್ವಿಯವರ ‘ಕರ್ವಾಲೋ’ವನ್ನೂ ನಿರ್ದೇಶಿಸಿದ್ದಾರೆ. ಗಾರ್ಕಿಯ ಕಥೆಯನ್ನಾಧರಿಸಿ ‘ಮಕರಚುದ್ರ’, ಉಳ್ಳಾಲದ ಅಬ್ಬಕ್ಕ ರಾಣಿಯರ ಕಥೆ ‘ಮಣ್ಣಿನ ಗೋಡೆ’ (ಐ.ಕೆ.ಬೊಳುವಾರು ಜೊತೆಗೆ), ‘ಕೆರೆಗೆ ಹಾರ’ ಆಧರಿಸಿದ ‘ಭಾಗೀರಥಿ’ ಮೋಹನ ಸೋನರು ನಿರ್ದೇಶಿಸಿದ ಕೆಲವು ನಾಟಕಗಳು.
ಅಭಿನಯ ಸುಳ್ಯ ತಂಡದವರು 1980ರಲ್ಲಿ ಪ್ರದರ್ಶಿಸಿದ ‘ಚೋಮ’ನನ್ನು ಒಳಗೊಂಡು ಅದೇ ತಂಡದ ‘ನಾಳೆ ಯಾರಿಗೂ ಇಲ್ಲ’, ‘ತೆರೆಗಳು’ ನಾಟಕಕ್ಕೆ, ಗೆಳೆಯರು ನಿರ್ದೇಶಿಸಿದ ‘ಬಂಕಾಪುರದ ಬಯಲಾಟ’, ‘ಮಹಾಮಾಯಿ’ ನಾಟಕಕ್ಕೆ ಕಲಾನಿರ್ದೇಶನ, ಬೆಳಕು ರೂಪಿಸಿದ್ದಾರೆ. 1992ರಿಂದ 8 ವರ್ಷ ಸೋಣಂಗೇರಿಯಲ್ಲಿ ಪ್ರತಿವರ್ಷ ತಿಂಗಳ ಕಾಲ ಮಕ್ಕಳ ಹಬ್ಬ ಬೇರೆ ಬೇರೆ ಶೀರ್ಷಿಕೆಯಲ್ಲಿ ನಡೆಸಿದ್ದಾರೆ. ಇದೇ ಸಂದರ್ಭಗಳಲ್ಲಿ ಬೆಂಗಳೂರು ಸಮುದಾಯದ ‘ಸಂಕ್ರಾಂತಿ’, ‘ಮಹಾಚೈತ್ರ’ ನಾಟಕಗಳನ್ನೂ, ಬಿ.ಜಯಶ್ರೀ ಅವರ ‘ಲಕ್ಷಾಪತಿ ರಾಜನ ಕಥೆ’ ನಾಟಕವನ್ನೂ ಕರೆಯಿಸಿ, ಸೋಣಂಗೇರಿಯ ಹಳ್ಳಿ ಜನರಿಗೆ ಪ್ರದರ್ಶಿಸಿದ್ದಾರೆ. ವಿಟ್ಲದಲ್ಲಿ ಆರು ವರ್ಷ ಮಕ್ಕಳ ಶಿಬಿರ ಮಾಡಿಸಿದ್ದಾರೆ. ಸುಬ್ರಹ್ಮಣ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಐ.ಕೆ.ಬೊಳುವಾರು ಅವರೊಂದಿಗೆ ಸೇರಿ 2 ರಂಗಶಿಬಿರಗಳನ್ನೂ, 7 ನಾಟಕಗಳನ್ನೂ ನಿರ್ದೇಶಿಸಿದ್ದಾರೆ.
ಪುಸ್ತಕಗಳಿಗೆ ಅವರು ರಚಿಸಿದ ಮುಖಚಿತ್ರಗಳಿಗೂ, ಒಳಗಿನ ವಿಷಯ ಚಿತ್ರಗಳಿಗೂ ಲೆಕ್ಕವಿಲ್ಲ. ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್, ಐ.ಕೆ.ಬೊಳುವಾರು, ನೃತ್ಯ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ ಅವರು ತಮ್ಮ ರಂಗಕೃತಿಗೆ ಮೋಹನ ಸೋನರ ಕಲಾನಿರ್ದೇಶನ ಪಡೆದುಕೊಂಡಿದ್ದಾರೆ. ಬೊಳುವಾರು ಮಹಮದ್ ಕುಂಞಿಯವರು ತಮ್ಮ ಕೃತಿ ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಮತ್ತು ಡಾ. ವಿಠಲ ಭಂಡಾರಿ ತಮ್ಮ ಬಂಡಾಯ ಪ್ರಕಾಶನದ ಪುಸ್ತಕಗಳಿಗೂ ಮೋಹನ ಸೋನ ಮುಖಚಿತ್ರ ಬರೆದುದನ್ನು ನೆನಪಿಸಿಕೊಳ್ಳುತ್ತಾರೆ. ಪುತ್ತೂರಿನ ಬಾಲವನ ದಲ್ಲಿ, ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರ ಕಲಾಕೃತಿಗಳು ನೋಡಲು ಲಭ್ಯವಿದೆ. ಕಾರವಾರದ ರಾಕ್ ಗಾರ್ಡನ್ ಅವರು ಮತ್ತು ಅವರ ಕಲಾಗುರು ಚಂದ್ರಶೇಖರ ಮಾಸ್ತರ ಪುತ್ರರಾದ ಕಲಾವಿದ ಸುದೇಶ್ ಮಹಾನ್ ಜೊತೆಗೂಡಿ ರೂಪಿಸಿದ ಅದ್ಭುತ ಕಲಾಕೃತಿಯಾಗಿದೆ.
ಸಮುದಾಯ ಕರ್ನಾಟಕ ಆಯೋಜಿಸಲು ಅಂದುಕೊಂಡಿದ್ದ ರಾಜ್ಯ ಮಟ್ಟದ ಚಿತ್ರಕಲಾವಿದರ ಶಿಬಿರ ಮತ್ತು ಚಿತ್ರಪ್ರದರ್ಶನಕ್ಕೆ ತಾನು ವ್ಯವಸ್ಥೆ ಮಾಡುವುದಾಗಿ ಎರಡು ವರ್ಷಗಳ ಹಿಂದೆ ಮೋಹನ ಸೋನ ಒಪ್ಪಿಕೊಂಡಿದ್ದರು. ಅವರು ಇದ್ದಿದ್ದರೆ ಅದು ಬರುವ ಬೇಸಗೆಯಲ್ಲಿ ಆಗಬೇಕಿತ್ತು. ಆದರೆ ಅವರು ಅಷ್ಟರಲ್ಲಿ ಇಲ್ಲವಾಗಿದ್ದಾರೆ. ಅದೂ ತೀರಾ ವಿಚಿತ್ರ ರೀತಿಯಲ್ಲಿ. ಲಕ್ಷ ಮಂದಿಗೆ ಒಬ್ಬರಿಗೆ ಬರುವಂತಹ ಕಾಯಿಲೆ ಇರುವುದಾಗಿ ಈಗ ವರ್ಷದ ಹಿಂದೆಯಷ್ಟೇ ಅವರನ್ನು ತಪಾಸಣೆಗೊಳಿಸಿದ ವೈದ್ಯರು ಅವರಿಗೆ ಹೇಳಿದ್ದರು. ಅದಕ್ಕೆ ಔಷಧಿಯನ್ನು ತೆಗೆದು ಕೊಳ್ಳುತ್ತಲೂ ಇದ್ದರು. ಮೊನ್ನೆ ಮೂರೇ ದಿನ ಏಕಾಯೇಕಿ ಉಲ್ಬಣಿಸಿದ ಕಾಯಿಲೆ ಅವರನ್ನು ಮೃತ್ಯುವಿಗೆ ಒಯ್ದದ್ದಂತೂ ಅವರಿಗೆ ನಿರೀಕ್ಷಿತವೇ ಇರಬೇಕು.
ಸದಾ ಮಂದಸ್ಮಿತರೂ, ಸೌಮ್ಯ ಸ್ವಭಾವದವರೂ, ನಿಗರ್ವಿಗಳೂ ಆಗಿದ್ದ ದೊಡ್ಡ ಕಲಾವಿದರನ್ನು ನಾವು ಕಳೆದುಕೊಂಡಿದ್ದೇವೆ. ಇದು ಅವರಿಗೆ ನಮ್ಮ ನುಡಿನಮನ.