ಆಳುವವರ ನವ ವಸಾಹತು: ಗ್ರಾಮ ಭಾರತ
ವಸಾಹತು ಶಾಹಿ ಶೋಷಣೆಯಿದ್ದಾಗ ಅದರ ವಿಸ್ತರಿತ ಕೈಗಳಾಗಿ ಅಧಿಕಾರಶಾಹಿ ಮತ್ತು ಉದ್ಯಮಿಗಳು ಇದ್ದರಷ್ಟೆ. ಅದರಿಂದ ಮುಕ್ತಿ ಪಡೆದಾಗ ಈ ದೇಶಗಳಲ್ಲಿ ಇವು ಮಾಯವಾದವೇ?
ಸ್ವಾತಂತ್ರ್ಯ ಗಳಿಸಿದ ಮೇಲೆ ಆಯಾ ದೇಶಗಳ ಜನರಿಗೆ ಈ ಶಕ್ತಿಗಳ ಮೇಲೆ ನಿಯಂತ್ರಣ ಸಾಧ್ಯವಾಯಿತೇ ಎಂಬುದನ್ನು ಗಮನಿಸುತ್ತಾ ನಮ್ಮ ಈ ಭಾರತ ದೇಶದ ಸ್ಥಿತಿಯನ್ನು ಚರ್ಚಿಸಬೇಕಾಗಿದೆ.
ಈ ದೇಶಗಳಲ್ಲಿ ವಸಾಹತುಶಾಹಿ ಜೊತೆ ಕೈ ಜೋಡಿಸಿದ್ದ ಆಳುವ ವರ್ಗಕ್ಕೆ ಈಗ ತನಗೆ ಬೇಕಾದ ಸಂಪನ್ಮೂಲವನ್ನು ಅಗ್ಗವಾಗಿ ಹೊರಗಿನಿಂದ ತರುವ ಸಾಧ್ಯತೆ ಇರಲಿಲ್ಲ! ಅಂತರ್ರಾಷ್ಟ್ರೀಯವಾಗಿಯೂ ಅಮೆರಿಕ, ಯುರೋಪುಗಳು ಹಿಂದಿನಂತೆ ಎಗ್ಗಿಲ್ಲದ ಸೂರೆಗೆ ಕೈ ಹಾಕುವಂತಿರಲಿಲ್ಲ. ಆಯಾ ದೇಶಗಳ ‘ಚುನಾಯಿತ’/‘ಪ್ರಾತಿನಿಧಿಕ’ ಸರಕಾರಗಳೊಡನೆ ಒಪ್ಪಂದ ಮಾಡಿಕೊಂಡೇ ಈ ಸೂರೆ ಮುಂದುವರಿಸುವ ಹೊಸ ವ್ಯವಸ್ಥೆಯೇ ಜಾಗತೀಕರಣ. ಭಾರತ ಮೊದಲ ನಾಲ್ಕೈದು ದಶಕ ಇದರಿಂದ ಹೇಗೋ ತಕ್ಕ ಮಟ್ಟಿಗೆ ತಪ್ಪಿಸಿಕೊಂಡಿತು. ಆದರೆ ಕಳೆದ 25 ವರ್ಷಗಳಲ್ಲಿ ಇದು ಅಧಿಕೃತ ನೀತಿಯಾಗಿ ಜಾರಿಗೊಂಡಿದೆಯಷ್ಟೇ.
ದೇಶದ ಉದ್ಯಮ ಪತಿಗಳಿಗೆ, ವ್ಯಾಪಾರಿಗಳಿಗೆ ಅಗ್ಗದ ಸಂಪನ್ಮೂಲ ಎಲ್ಲಿಂದ ಬರುತ್ತದೆ?
ದೇಶದ ಒಳಗೇ ಅಗ್ಗದ ಸಂಪನ್ಮೂಲಗಳ ಆಂತರಿಕ ವಸಾಹತಾಗಿ ಗ್ರಾಮ ಭಾರತವನ್ನು ಬಳಸುತ್ತಿರುವುದು ಈ ವ್ಯವಸ್ಥೆಯ ಮುಖ್ಯ ಲಕ್ಷಣ. ಅಪಾರ ಖನಿಜ ಸಂಪತ್ತಿರುವ ಪ್ರದೇಶಗಳಲ್ಲಿ ದಟ್ಟ ಅರಣ್ಯವಿರುವುದು, ಅಲ್ಲಿ ಆದಿವಾಸಿಗಳಿರುವುದು ಕಾಕತಾಳೀಯ. ಆಹಾರ ಧಾನ್ಯ, ಸರಳ ಮೌಲ್ಯವರ್ಧನೆಗೆ ಒಗ್ಗುವ ಕೃಷಿ ಉತ್ಪನ್ನ
ಗಳನ್ನು ಸೂರೆ ಮಾಡಲು ಕೃಷಿ ಲೋಕವನ್ನು ಬಳಸಿಕೊಂಡರೆ, ಖನಿಜ ಸಂಪತ್ತಿನ ಲೂಟಿಗೆ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಆರಂಭವಾದದ್ದು ಹೀಗೆ.
ಕೈಗಾರಿಕೆ (ಆಹಾರ ಸಂಸ್ಕರಣೆ, ಸರಬರಾಜೂ ಸೇರಿ) ಸೇವಾ ವಲಯಗಳ ಪ್ರಗತಿಯೇ ಜಿಡಿಪಿಯ ಜೀವಾಳ ಎಂದು ಭಾವಿಸಿರುವ ಪ್ರಭುತ್ವ ಅವುಗಳ ಅನುಕೂಲಕ್ಕೆ ಬೇಕಾದ ಎಲ್ಲಾ ಸಹಕಾರವನ್ನೂ ಬೆನ್ನು ಬಾಗಿಸಿ ನೀಡುತ್ತದೆ. ಭಾರತದ ರೈತ ಲೋಕ, ಆದಿವಾಸಿ ಲೋಕವನ್ನು ಈ ಆಢ್ಯ ಉದ್ಯಮಿಗಳಿಗೆ ತಕ್ಕಂತೆ ಉಪಯೋಗಿಸುತ್ತಿದೆ.
ಭಾರತದ ರೈತ ಲೋಕದ ಬಗ್ಗೆ ಸರಕಾರ ಎಷ್ಟು ಮೊಸಳೆ ಕಣ್ಣೀರು ಹಾಕಿದರೂ ಅದರ ಒಂದೊಂದು ಹೆಜ್ಜೆಯೂ ಈ ಲೋಕವನ್ನು ಶೋಷಿಸುವ ಕಾರ್ಯಸೂಚಿಯಾಗಿ ಅನಾವರಣಗೊಂಡಿದೆ.
2011ರ ಜನಗಣತಿಯಲ್ಲೇ ಈ ದೇಶದ ರೈತರ ಸಂಖ್ಯೆ ಕಡಿಮೆಯಾಗಿ ಕೃಷಿ ಕೂಲಿಕಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. 2001ರಲ್ಲಿ 12.7 ಕೋಟಿ ರೈತರಿದ್ದರೆ 2011ರಲ್ಲಿ ಅವರ ಸಂಖ್ಯೆ 11.8 ಕೋಟಿಗೆ ಇಳಿದರೆ, 10.6 ಕೋಟಿ ಕೃಷಿ ಕೂಲಿಕಾರರ ಸಂಖ್ಯೆ 14.4 ಕೋಟಿಗೇರಿದೆ. ಈ ರೈತರೇ ಕೂಲಿಕಾರರಾಗಿದ್ದಾರೆ ಎಂಬ ಸತ್ಯ ಕಣ್ಣಿಗೆ ಹಿಡಿಯಲು ಪಂಡಿತರೇ ಬರಬೇಕಿಲ್ಲ. ಶೇ.60ರಷ್ಟು ಮಳೆ ಆಶ್ರಿತ ಕೃಷಿ ಇರುವ ಈ ದೇಶದಲ್ಲಿ ಮುಕ್ಕಾಲು ಪಾಲು ಸಣ್ಣ, ಅತಿ ಸಣ್ಣ ರೈತರಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ.
2021ರಲ್ಲಿ ನಡೆಯಬೇಕಾಗಿದ್ದ ಜನಗಣತಿಯನ್ನು ಇನ್ನೂ ಮೋದಿ ಸರಕಾರ ನಡೆಸಿಲ್ಲ. ಜನಗಣತಿ ಅಷ್ಟೇಕೆ; ಯಾವುದೇ ಅಧ್ಯಯನ/ಪರಾಮರ್ಶೆಗೆ ಅನುಕೂಲವಾಗುವ ಯಾವುದೇ ಅಂಕಿ-ಅಂಶಗಳ ತಖ್ತೆ ನಡೆಸಲೂ ಹಿಂದೇಟು ಹಾಕುತ್ತಿದೆ. ಈ ರೈತರನ್ನು ಅನ್ನದಾತ ಇತ್ಯಾದಿ ಎಷ್ಟೇ ಹೊಗಳಿದರೂ ಅವರ ನೈಜ ಬದುಕಿನ ಸ್ಥಿತಿ ಬದಲಾಗದಿರುವುದಕ್ಕೆ ತನ್ನ ನೀತಿ ನಿರೂಪಣೆ, ತಾನು ತಂದಿರುವ ಸಂರಚನಾತ್ಮಕ ಬದಲಾವಣೆಗಳು ಕಾರಣವಿರಬಹುದೇ ಎಂಬ ಆತ್ಮ ವಿಮರ್ಶೆಯನ್ನು ಈ ಸರಕಾರ ನಡೆಸಿಲ್ಲ. ಅಷ್ಟೇಕೆ, ಯುಪಿಎ ಸರಕಾರ ಅಂಜಿ, ಅಳುಕಿ ಜಾರಿಗೆ ತರಲು ನೋಡುತ್ತಿದ್ದ ಖಾಸಗೀಕರಣ ಮತ್ತು ಕಾರ್ಪೊರೇಟ್ ಪ್ರೋತ್ಸಾಹದ ನೀತಿಯನ್ನು ಮೋದಿ ಸರಕಾರ ಎಗ್ಗಿಲ್ಲದೆ ನಡೆಸುತ್ತಿದೆ.
ಸರಕಾರ ಕೃಷಿ, ಕೃಷಿ ಉತ್ಪನ್ನ, ಮಾರುಕಟ್ಟೆ ಹೆಸರಿನಲ್ಲಿ ಜಾರಿಗೊಳಿಸುತ್ತಿರುವ ಪ್ರತಿಯೊಂದು ಉಪಕ್ರಮಗಳಲ್ಲೂ ಗ್ರಾಮ ಕೃಷಿ ಭಾರತವನ್ನು ತನ್ನ ಉಕ್ಕಿನ ಹಿಡಿತದ ವಸಾಹತಾಗಿ ನಿಯಂತ್ರಿಸುವುದು ಕಣ್ಣಿಗೆ ಗಿಡಿಯುತ್ತಿದೆ. ಮೂರು ಕೃಷಿ ಕಾನೂನುಗಳ ಸಹಿತ ಭೂಸ್ವಾಧೀನ ಕಾಯ್ದೆಯ ವಿರೂಪ, ಭೂ ಸುಧಾರಣಾ ಕಾನೂನಿನ ತಿದ್ದುಪಡಿ ಸಹಿತ ಎಲ್ಲಾ ಕಾಯ್ದೆ ಪ್ರಕ್ರಿಯೆಗಳೂ ಉದ್ಯಮಿಗಳಿಗೆ ಹಸಿರು ನಿಶಾನೆ ತೋರುವಂಥವೇ ಆಗಿವೆ.
ನಾವು ‘ಎಲ್ಪಿಜಿ’ ಎಂದೇ ಕರೆಯುವ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನಮ್ಮ ದೇಶದಲ್ಲಿ ಉದ್ಘಾಟನೆಯಾಗುವ ಮೊದಲು ರೈತರ ಆತ್ಮಹತ್ಯೆ ಎಂಬುದನ್ನು ಕಂಡಿರಲೇ ಇಲ್ಲ. ಆದರೆ ಕಳೆದ ಮೂರು ದಶಕದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ವಿದ್ಯಮಾನ ಅಧಿಕೃತವಾಗಿ ದಾಖಲಾಗಿದೆ. ಇದರ ಕಾರಣಗಳೇನಿರಬಹುದೆಂದು ಅಧ್ಯಯನ ಮಾಡಿದ ಬಹುತೇಕ ವರದಿಗಳು ಬೆಳೆನಾಶ, ಸಾಲ, ಬೆಲೆ ದಕ್ಕದಿರುವುದು ಮುಖ್ಯ ಕಾರಣಗಳೆಂದು ನಮೂದಿಸಿವೆ.
ಅರ್ಥಾತ್ ಕೃಷಿ ಕ್ಷೇತ್ರದ ಬಹುತೇಕ ಅಂಶಗಳನ್ನು ತನ್ನ ನಿಯಂತ್ರಣದಲ್ಲೇ ಉಳಿಸಿಕೊಂಡಿರುವ ಸರಕಾರ ಅತ್ತ ತಾನೂ ಪರಿಹಾರ ಮಾರ್ಗಗಳನ್ನು ಅನುಷ್ಠಾನ ಮಾಡಿಲ್ಲ, ರೈತರಿಗೆ ಸ್ವಾಯತ್ತವಾಗುವ ಹಾದಿಯನ್ನೂ ತೋರಿಸಿ ಕೊಟ್ಟಿಲ್ಲ. ಕೃಷಿ ಹೆಸರಿನ ಸಾಲದ ಬಹುಪಾಲು ಮುಂಬೈನ ವಿಳಾಸ ಹೊಂದಿರುವ ಸಂಸ್ಥೆ/ವ್ಯಕ್ತಿಗಳು ಪಡೆದಿರುವುದನ್ನು ಮಹಾರಾಷ್ಟ್ರದ ವರದಿಯೊಂದು ಅನಾವರಣಗೊಳಿಸಿದೆ! ಕಳೆದ 8 ವರ್ಷಗಳಲ್ಲಿ 12 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದು ಇದಿಷ್ಟೂ ಉದ್ಯಮಿ
ಗಳ ಸಾಲವೆಂಬುದು ಖಾತ್ರಿಯಾಗಿದೆ. ರೈತರ ಸಾಲ ಮನ್ನಾ ಮಾಡುವ ಪ್ರಮೇ
ಯವೇ ಇಲ್ಲವೆಂದು ಕೇಂದ್ರ ಸರಕಾರ ಪದೇ ಪದೇ ಹೇಳಿದ್ದನ್ನು ನಾವು ಮರೆಯ ಬಾರದು. ರೈತರ ಆಕ್ರೋಶ, ಆಕ್ರಂದನ ಹೆಚ್ಚಾದಾಗ ರಾಜ್ಯ ಸರಕಾರಗಳು ಅಷ್ಟಿಷ್ಟು ಮನ್ನಾ ಮಾಡಿದ್ದರೂ ಕೃಷಿ ಸಂಬಂಧ ನೀತಿ ನಿರೂಪಣೆ ಸಂಪೂರ್ಣ ಕಾರ್ಪೊ ರೇಟ್ ಪರವಾಗಿರುವ ಕಾರಣ ರೈತರ ಬವಣೆ ಮುಂದುವರಿಯುತ್ತಲೇ ಇದೆ.
ಈ ಕೆಲವು ಅಂಶಗಳನ್ನು ನೋಡಿ:
ಕೃಷಿಯ ಒಳಸುರಿಗಳಾದ ರಾಸಾಯನಿಕ ಗೊಬ್ಬರಗಳ ಸಬ್ಸಿಡಿಯನ್ನು ಈ ಸರಕಾರ 50 ಸಾವಿರ ಕೋಟಿ ರೂ.ಗಳಷ್ಟು ಕಡಿತಗೊಳಿಸಿದೆ. ಈ ಸಬ್ಸಿಡಿಯೂ ಉತ್ಪಾದಕ ಕಂಪೆನಿಗಳಿಗೇ ಹೋಗಿದೆ. ಕೀಟನಾಶಕಗಳ ಬಳಕೆಯಲ್ಲಿ ಭಾರತವೇ ನಂ.1. ಈ ಕೀಟನಾಶಕಗಳಲ್ಲಿ ಬಹುತೇಕ ಅಪಾಯಕಾರಿ ಕೀಟ ನಾಶಕಗಳೆಂದು ಸಾಬೀತಾಗಿದ್ದರೂ ಸರಕಾರ ಕಣ್ಮುಚ್ಚಿ ಕೂತಿದೆ. ಇವುಗಳ ಬೆಲೆ ಏರುತ್ತಲೇ ಇದ್ದರೂ ಸರಕಾರ ಕಡಿವಾಣ ಹಾಕುತ್ತಿಲ್ಲ. ಮುಕ್ಕಾಲು ಪಾಲು ಕೀಟ ನಾಶಕಗಳ ಉತ್ಪಾದನೆ ಬೆರಳೆಣಿಕೆ ಕಂಪೆನಿಗಳ ಕೈಯಲ್ಲಿದೆ.
ಬೀಜಲೋಕ ನೋಡಿದರೆ ಉತ್ಪಾದನಾ ಹೆಚ್ಚಳದ ಹೆಸರಿನಲ್ಲಿ ಸರಕಾರ ಹೈಬ್ರಿಡ್ ಬೀಜಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಈ ಹೈಬ್ರಿಡ್ ಬೀಜೋತ್ಪಾದನೆಯೂ ಖಾಸಗಿ ಕಂಪೆನಿಗಳ ಕೈಯಲ್ಲಿದೆ. ಇದೀಗ ಕುಲಾಂತರಿ ತಳಿಗಳಿಗೂ ಅನುಮತಿ ನೀಡುವ ಧಾವಂತದಲ್ಲಿ ಸರಕಾರವಿದೆ.
ಮಾರುಕಟ್ಟೆ ಆಯಾಮ ನೋಡಿದರೆ, ಕಟಾವಾಗುವ ಸಮಯ ಸರಕಾರಕ್ಕೂ ಗೊತ್ತು, ರೈತರಿಗೂ ಗೊತ್ತು, ಖಾಸಗಿ ವ್ಯಾಪಾರಿಗಳಿಗೂ ಗೊತ್ತು! ಭರಪೂರ ಕುಯಿಲಾಗುತ್ತಿದ್ದಂತೆ ಬೆಲೆ ಇಳಿಯುವ ಚೋದ್ಯ, ಅದೇನು ಯಕ್ಷ ಪ್ರಶ್ನೆಯೇ? ವರ್ಷಪೂರ್ತಿ ಬೇಡಿಕೆ ಇರುವ ಬೇಳೆಕಾಳು, ಎಣ್ಣೆಕಾಳು ಬಿಡಿ ಈರುಳ್ಳಿ, ಆಲೂಗೆಡ್ಡೆಯಂತಹ ಬೆಳೆಗಳ ಬೆಲೆ ರೈತರು ಮಾರಾಟಕ್ಕೆ ತರುವಾಗ ಕುಸಿಯುವುದೇಕೆ? ಹಾಗೆಂದು ಗ್ರಾಹಕರಿಗೆ ಬೇಳೆ ಕಾಳು, ಖಾದ್ಯ ತೈಲದ ಬೆಲೆ ಕಡಿಮೆಯಾದ ಉದಾಹರಣೆ ಇದೆಯೇ?
ತಾಳೆ ಕೃಷಿಗೆ ಪ್ರೋತ್ಸಾಹ ನೀಡುವ ನೀತಿ ಸರಕಾರ ಪ್ರಕಟಿಸಿದ ತಕ್ಷಣ ಪತಂಜಲಿ ಸಾವಿರಾರು ಎಕರೆ ಕರಾರು ಕೃಷಿಯ ತಾಳೆ ಕೃಷಿಯನ್ನು ಹಲವಾರು ರಾಜ್ಯಗಳಲ್ಲಿ ಕೈಗೆತ್ತಿಕೊಳ್ಳುವುದು ಹೇಗೆ ಸಾಧ್ಯ?
ಪಾರಂಪರಿಕ ಎಣ್ಣೆಕಾಳುಗಳ ಪ್ರದೇಶವೇಕೆ ಹೆಚ್ಚುತ್ತಿಲ್ಲ? ಅಥವಾ ಅವುಗಳಿಗೆ ಲಾಭದಾಯಕ ಬೆಲೆ ದೊರಕುತ್ತಿಲ್ಲ?
‘ಒಂದು ಜಿಲ್ಲೆ ಒಂದು ಉತ್ಪಾದನೆ’ಯಂತಹ ಥಳುಕಿನ ಯೋಜನೆ ಗಮನಿಸಿ. ಈ ಯೋಜನೆಯಲ್ಲಿ ಜಿಲ್ಲೆಯೊಂದರ ಪ್ರಮುಖ ಬೆಳೆಯನ್ನು ಗುರುತಿಸಿದ ತಕ್ಷಣ ರೈತರು ಅದನ್ನೇ ಆದ್ಯಂತ ಬೆಳೆಯತೊಡಗಿದ್ದಾರೆ. ಆದರೆ ಸರಕಾರ ಇಲ್ಲೆಲ್ಲೂ ರೈತರಿಗೆ ಲಾಭದಾಯಕ ಬೆಲೆ ದೊರಕಿಸಿಕೊಡುವ ಭರವಸೆ ಕೊಟ್ಟೇ ಇಲ್ಲ. ಬದಲು ಈ ಬೆಳೆಯ ಮೌಲ್ಯವರ್ಧನೆಗೆ ಬೇಕಾದ ಹೂಡಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಈ ಹೂಡಿಕೆಯ ಸಹಿತ ಈ ಬೆಳೆಯ ವ್ಯಾಪಾರದ ಲಾಭ ಯಾರಿಗೆ ಹೋಗುತ್ತದೆ ಎಂಬುದು ರಹಸ್ಯವೇನಲ್ಲ.
ನಮ್ಮ ರೈತರಿಗೆ ದೊರಕುವ ಬೆಳೆ ಸಾಲ ಸರಾಸರಿ 50 ಸಾವಿರ ರೂ. ಮೀರುವುದಿಲ್ಲ. ಒಂದು ರೈತ ಕುಟುಂಬದ ಆದಾಯ ದ್ವಿಗುಣವಾಗಬೇಕಿದ್ದರೆ ಬೇಲಿ, ನೀರಿನ ಸೌಲಭ್ಯ, ಪಶು ಸಂಗೋಪನೆ ಇತ್ಯಾದಿಗಳ ಸಂಯೋಜನೆಗೆ ಕನಿಷ್ಠ 5 ಲಕ್ಷ ರೂ.ಗಳ ಬಂಡವಾಳ ಬೇಕು. ಯಾವ ರೈತನಿಗೂ ಇಷ್ಟು ಪ್ರಮಾಣದ ದೀರ್ಘಕಾಲೀನ ಬಂಡವಾಳ ಲಭ್ಯವಾಗುವುದೇ ಇಲ್ಲ. ಇದೇ ಸರಕಾರ ಕೃಷಿ ಉತ್ಪನ್ನ ಆಧರಿಸಿದ ಉದ್ದಿಮೆಗಳಿಗೆ ಕೋಟ್ಯಂತರ ರೂ. ಸಾಲ ಸಹಿತ ಉಚಿತ ನೀರು, ವಿದ್ಯುತ್, ನೆಲ ಕೊಡಲು ಸಿದ್ಧವಿದೆ.
ಇಡೀ ನೀತಿಯ ತರ್ಕ ಹೇಗಿದೆಯೆಂದರೆ ‘ಬೆಳೆದ ಬೆಳೆಯ ಮಾರುಕಟ್ಟೆಯೇ ದೊಡ್ಡ ಸಮಸ್ಯೆ, ಅದನ್ನು ಕೊಂಡುಕೊಂಡು ಸಂಸ್ಕರಣೆ ಮಾಡುವ ಉಪಕಾರ ಖಾಸಗಿಯವರು ಮಾಡಿದರೆ ರೈತ ಉದ್ಧಾರವಾಗುತ್ತಾನೆ’ ಎಂದು ಈ ನೀತಿ ಹೇಳುತ್ತಿದೆ. ಇದರ ಪೊಳ್ಳುತನ ಗೊತ್ತಿದ್ದರೂ ನಮ್ಮ ಸರಕಾರಗಳು ಇದನ್ನು ಬೆಂಬಲಿಸುತ್ತಿವೆ.
ಗ್ರಾಮ ಭಾರತದ ಕೃಷಿ ಲೋಕ ಸದಾ ಅಗ್ಗದ ಉತ್ಪನ್ನಗಳನ್ನು
ಅಸಹಾಯಕವಾಗಿ ಬಿಕರಿ ಮಾಡುತ್ತಿರಬೇಕು. ಅದರ ಲಾಭ ನಗರೀಕೃತ ಉದ್ಯಮಗಳಿಗೆ ದಕ್ಕಬೇಕು; ರೈತರೇನಾದರೂ ಕೊಸರಾಡಿದರೆ ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ ಅಷ್ಟಿಷ್ಟು ಪರಿಹಾರ ನೀಡಿ ಅದು ತಾತ್ಕಾಲಿಕವಾಗಿ ಶಮನಗೊಳ್ಳುವಂತೆ ಮಾಡುವ ವಿದ್ಯೆ ಸರಕಾರಕ್ಕೆ ಕರಗತವಾಗಿದೆ.
ರೈತರಿಗೆ ಬೇಕಾದ ಸಹಾಯಗಳೇನು ಎಂದು ಕೇಳಿ ನೋಡಿ:
ಆಯಾ ಹಂಗಾಮಿನಲ್ಲಿ ಯಾವ ಬೆಳೆ ಬೆಳೆಯಬಹುದು ಎಂಬ ಮಾಹಿತಿ ರೈತರಿಗೆ ತಲುಪಿಸುವ ವಿಸ್ತರಣಾ ಘಟಕಕ್ಕೆ ಬಾಲಗ್ರಹ ಬಡಿದು ದಶಕವೇ ಸಂದಿದೆ. ಮಣ್ಣಿನ ಫಲವತ್ತತೆ ನಾಶವಾಗಿದ್ದು ಎಷ್ಟೇ ರಾಸಾಯನಿಕ ಸುರಿದರೂ ಅದು ತಿರುಗುಬಾಣವಾಗುತ್ತಿದೆ. ಹಾಗಿರುವಾಗ ಸಮುದಾಯಾಧಾರಿತವಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ಉಪಕ್ರಮಗಳ ಬಗ್ಗೆ ಸರಕಾರ ಮೂರು ಕಾಸಿನ ಪ್ರೋತ್ಸಾಹವೂ ನೀಡುತ್ತಿಲ್ಲ. ಈ ದೇಶದ ನೀರಾವರಿ ಪ್ರಮಾಣದಲ್ಲಿ ಸರಕಾರ ಕೊಳವೆ ಬಾವಿಯನ್ನೂ ಸೇರಿಸಿಕೊಂಡಿದೆ. ಇದರ ಪ್ರಮಾಣ ಕಾಲುವೆ ನೀರಾವರಿಗಿಂತ ಜಾಸ್ತಿ. ಇದು ಮೂಲತಃ ಅಕ್ಕಪಕ್ಕದವರ ಜಮೀನಿನಿಂದ ಕದಿಯುತ್ತಿರುವ ನೀರು. ಅದನ್ನು ಒಂದಷ್ಟಾದರೂ ಹಂಚಿಕೊಳ್ಳುವಂತೆ ಮಾಡುವ ನೈತಿಕ ಒತ್ತಡವನ್ನೂ ಸರಕಾರ ಮಾಡಿಲ್ಲ. ಆಯಾ ಗ್ರಾಮ ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹ, ಗ್ರೇಡಿಂಗ್ ಮಾಡಿ ಸಾಮುದಾಯಿಕ ಸಾಗಣೆ ವ್ಯವಸ್ಥೆ ಮಾಡಿದರೂ ಅದರ ಪರಿಣಾಮ ದೊಡ್ಡದಿರುತ್ತದೆ ಅಥವಾ ಕೊಳ್ಳುವವರು ಅಲ್ಲಿಗೇ ಬರುವಂತೆ ಮಾಡಬಹುದಷ್ಟೇ.
ಬೇಳೆಕಾಳು ಎಣ್ಣೆಕಾಳಿನ ಮೌಲ್ಯವರ್ಧನೆ ಮೂಲತಃ ಎರಡೇ ಹಂತದ್ದು. ನಮ್ಮ ಹಳ್ಳಿಯ ಗಾಣಿಗ ಮಾಡುವಷ್ಟನ್ನೇ ಅದಾನಿಯೂ ಮಾಡುವುದು. ಹಾಗಿರುವಾಗ ಕಾಳಿನಿಂದ ಬೇಳೆ, ಕಾಳಿನಿಂದ ಎಣ್ಣೆ ಸಂಸ್ಕರಿಸುವ ಸಣ್ಣ ಪ್ರಮಾಣದ ಸಮುಚ್ಚಯಗಳನ್ನು ಸೃಷ್ಟಿಸುವುದು ಕಷ್ಟದ ಮಾತೇ?
ಇಂತಹ ಸಾಮುದಾಯಿಕ ಸಹಕಾರಿ ಉತ್ಪನ್ನಗಳಿಗೆ ಒಂದು ಗುಣಮಟ್ಟ ಸೂಚಿ ಮತ್ತು ಬ್ರ್ಯಾಂಡಿಂಗ್ ಮಾಡುವುದು ಕಷ್ಟವೇ?
ಇವೆಲ್ಲಾ ಮಾಡಿದ ತಕ್ಷಣ ಈಗ ಇವುಗಳ ಮೇಲೆ ಉಕ್ಕಿನ ಹಿಡಿತ ಸಾಧಿಸಿರುವ ಅದಾನಿ, ಪತಂಜಲಿ ಸಹಿತ ಎಲ್ಲಾ ಕಾರ್ಪೊರೇಟುಗಳೂ ಸ್ಪರ್ಧಾತ್ಮಕತೆ ಕಳೆದುಕೊಂಡು ನಷ್ಟ ಅನುಭವಿಸಬೇಕಾಗುತ್ತದೆ.
ಅದನ್ನು ಸಂಭವಿಸಲು ಬಿಟ್ಟರೆ ಸರಕಾರ ಉಳಿದೀತೇ?
77ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರೈತರ ಕೈಕೋಳ ಸಡಿಲವಾದಂತೆ ಕಂಡರೂ ಅವರನ್ನು ಅಗ್ಗದ ಉತ್ಪಾದನೆಯ ಗಾಣಕ್ಕೆ ಕಟ್ಟಿರುವುದು ಗೋಚರಿಸುತ್ತದೆ. ಈ ಜೀತ ಬ್ರಿಟಿಷರ ಬಳುವಳಿ ಅಲ್ಲ, ನಮ್ಮದೇ ಸರಕಾರ ಎಂದು ನಾವು ಭಾವಿಸಿರುವ; ನಮ್ಮ ಆಳುವವರು ಕಾರ್ಪೊರೇಟ್ ಶಕ್ತಿಗಳ ಜೊತೆ ಶಾಮೀಲಾಗಿರುವ ಜನದ್ರೋಹದ ಕೆಲಸ.
ಆರ್ವೆಲ್ ಕಂಡ ದುಸ್ವಪ್ನ ಇದು.