ಮೋದಿಯವರ ‘ನವಭಾರತ’ದಲ್ಲಿನ ವಾಸ್ತವಗಳು
ಪೀಟರ್ ಫ್ರೆಡ್ರಿಕ್
ಮಧ್ಯಪ್ರದೇಶದಲ್ಲಿ ಪ್ರವೇಶ್ ಶುಕ್ಲಾ ಎಂಬ ಬಿಜೆಪಿ ನಾಯಕ ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜಿಸುತ್ತಿದ್ದ ವೀಡಿಯೊ ಕಳೆದ ವಾರ ವೈರಲ್ ಆಗಿದ್ದುದನ್ನೂ, ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತ್ರಸ್ತನ ಪಾದ ತೊಳೆದಿದ್ದುದನ್ನೂ ನೋಡಿದೆವು.
ದೇಶಾದ್ಯಂತ ಶೌಚಾಲಯಗಳನ್ನು ನಿರ್ಮಿಸಲು ಯತ್ನಿಸಿದ ಪ್ರಧಾನಿ ಮೋದಿಯವರ ಬೃಹತ್ ಸ್ವಚ್ಛ ಭಾರತ ಅಭಿಯಾನದ ಹೊರತಾಗಿಯೂ ಅವರ ಪಕ್ಷದ ನಾಯಕನಿಗೆ ಶೌಚಾಲಯವೊಂದು ಸಿಗಲಿಲ್ಲ. ತನ್ನ ಪಾಡಿಗೆ ತಾನು ರಸ್ತೆಯ ಮೂಲೆಯಲ್ಲಿ ಕುಳಿತಿದ್ದ ಆದಿವಾಸಿಯೊಬ್ಬನ ಮೇಲೆ ಮೂತ್ರ ವಿಸರ್ಜಿಸುವಷ್ಟು ಸೊಕ್ಕು. ಇದಕ್ಕೂ ಕೆಲದಿನಗಳಿಗೆ ಮೊದಲು, ಪ್ರಧಾನಿ ಮೋದಿ ತಮ್ಮ ಒಂಭತ್ತು ವರ್ಷಗಳ ಅಧಿಕಾರಾವಧಿಯ ಮೊದಲ ಪತ್ರಿಕಾಗೋಷ್ಠಿಯಲ್ಲಿ ಒಂದು ಪ್ರಶ್ನೆ ಎದುರಿಸಬೇಕಾಯಿತು. ಅದಕ್ಕೆ ಅವರು ಉತ್ತರಿಸಿದ ಪ್ರಕಾರ, ‘‘ಭಾರತದಲ್ಲಿ ಜಾತಿ, ಪಂಥ, ಧರ್ಮ, ಲಿಂಗ ತಾರತಮ್ಯವಿಲ್ಲ. ಯಾಕೆಂದರೆ, ಪ್ರಜಾಪ್ರಭುತ್ವ ಈ ದೇಶದ ರಕ್ತನಾಡಿಯಲ್ಲಿಯೇ ಇದೆ.’’ ಆದರೆ ಅದೇ ಮೋದಿಯವರ ‘ನವಭಾರತ’ದಲ್ಲಿ ಪ್ರವೇಶ್ ಶುಕ್ಲಾನಂತಹ ಆಡಳಿತಾರೂಢ ಪಕ್ಷದ ದುರಹಂಕಾರಿ ಮಂದಿಯ ನಡವಳಿಕೆ ಈಗ ಸರ್ವೇಸಾಮಾನ್ಯ ರೂಢಿಯೇ ಆಗಿಬಿಟ್ಟಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ದುರ್ಮಾರ್ಗಕ್ಕಿಂತ ಬೇರೇನಲ್ಲ.
ಇತ್ತೀಚಿನ ದಿನಗಳಲ್ಲಿ ಇಂಥ ದುರ್ಮಾರ್ಗಿಗಳೂ ಅವರ ವಿಕೃತಿಯೂ ಮತ್ತೆ ಮತ್ತೆ ಕಾಣಿಸುತ್ತಲೇ ಇದೆ. ಬಿಜೆಪಿ ಆಡಳಿತದಲ್ಲಿ ಅಚ್ಛೇ ದಿನಗಳು ದಲಿತ ಸಮುದಾಯದ ಪಾಲಿಗಂತೂ ಎಂದಿಗೂ ಬರುವುದಿಲ್ಲ ಎಂದುಕೊಳ್ಳದೆ ವಿಧಿಯಿಲ್ಲ. ‘‘ಭಾರತದಲ್ಲಿ ಜಾತಿ ಆಧಾರಿತ ತಾರತಮ್ಯದ ಪ್ರಶ್ನೆಯೇ ಇಲ್ಲ’’ ಎಂದು ಮೋದಿಯವರೇ ಶ್ವೇತಭವನದಲ್ಲಿ ಹೇಳಿದರೂ, ಬ್ರಾಹ್ಮಣ ಸಮುದಾಯದ ಪ್ರವೇಶ್ ಶುಕ್ಲಾ ಆದಿವಾಸಿಯ ಮೇಲೆ ಮೂತ್ರ ವಿಸರ್ಜಿಸಿದ್ದು ಮತ್ತೇನನ್ನು ತೋರಿಸುತ್ತದೆ ಎಂದು ಕೇಳಬೇಕಾಗಿದೆ.
ದಲಿತರ ವಿರುದ್ಧದ ವಿಕೃತಿಗಳ ಕಡೆಗೊಮ್ಮೆ ನೋಡಬೇಕು.
ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ದಲಿತ ಹಕ್ಕುಗಳ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಅವರನ್ನು ಗುಂಡಿಕ್ಕಿ ಕೊಲ್ಲುವ ಯತ್ನ ನಡೆಯಿತು. ಗುಜರಾತ್‌ನಲ್ಲಿ ದಲಿತ ಹುಡುಗನೊಬ್ಬ ಮೇಲ್ಜಾತಿಯವರ ಗುಂಪು ಬಳಸುತ್ತಿದ್ದ ಕ್ರಿಕೆಟ್ ಚೆಂಡನ್ನು ಮುಟ್ಟಿದನೆಂಬ ಕಾರಣಕ್ಕೆ ಅವನ ಚಿಕ್ಕಪ್ಪನನ್ನು ಪ್ರಜ್ಞಾಹೀನವಾಗುವಷ್ಟು ಥಳಿಸಲಾಯಿತು ಮಾತ್ರವಲ್ಲ, ಎಡಗೈ ಹೆಬ್ಬೆರಳನ್ನು ಕತ್ತರಿಸಲಾಯಿತು. ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ಜನ್ಮದಿನ ಆಚರಿಸಿದರು ಎಂದು ಆರೋಪಿಸಿ ಕಿರಾಣಿ ಅಂಗಡಿಯಲ್ಲಿ ಇಬ್ಬರು ದಲಿತ ಯುವಕರ ಮೇಲೆ ಗುಂಪೊಂದು ಹಲ್ಲೆ ನಡೆಸಿತಲ್ಲದೆ, ಒಬ್ಬನನ್ನು ಕೊಂದೇಬಿಟ್ಟಿತು.
ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಕೆಲವು ಮೇಲ್ಜಾತಿಯವರ ಗುಂಪೊಂದು ತಾವು ಬಳಸುವ ಜಗ್‌ನಿಂದ ನೀರು ಕುಡಿದಿದ್ದಾರೆ ಎಂದು ಆರೋಪಿಸಿ ಇಬ್ಬರು ದಲಿತ ಯುವಕರ ಮೇಲೆ ಹಲ್ಲೆ ಮಾಡಿ ಕೊಂದರು. ಮಾರ್ಚ್ ನಲ್ಲಿಯೂ ಕರ್ನಾಟಕದಲ್ಲಿ ಗ್ರಾಮ ಜಾತ್ರೆಯಲ್ಲಿ ಕೆಲವು ದಲಿತ ಮಕ್ಕಳು ಮೆರವಣಿಗೆಯಲ್ಲಿ ನೃತ್ಯ ಮಾಡಿದ್ದರಿಂದ ರಾತ್ರಿ ಅವರ ಮನೆಗಳಿಗೆ ಬೆಂಕಿ ಹಚ್ಚಲಾಯಿತು.
ಫೆಬ್ರವರಿಯಲ್ಲಿ ಉತ್ತರ ಪ್ರದೇಶದಲ್ಲಿ ದಲಿತ ಹುಡುಗಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲಾಯಿತು. ಅದೇ ತಿಂಗಳು, ಕರ್ನಾಟಕದಲ್ಲಿ ದಲಿತ ಮಹಿಳೆಯ ಹಸು ತನ್ನ ಹೊಲಕ್ಕೆ ಬಂತೆಂದು ನೆರೆಯ ವ್ಯಕ್ತಿ ಆಕೆಯ ಮೇಲೆ ಹಲ್ಲೆ ನಡೆಸಿದ. ಪಂಜಾಬ್‌ನಲ್ಲಿ ದಲಿತ ವ್ಯಕ್ತಿಯ ಮೇಕೆ ಹೀಗೆಯೇ ನೆರೆಯವರ ಹೊಲಕ್ಕೆ ನುಗ್ಗಿದ್ದೇ ನೆಪವಾಗಿ, ಅವರು ಆ ದಲಿತನನ್ನು ಕೊಂದುಹಾಕಿದರು.
ಜನವರಿಯಲ್ಲಿ ಉತ್ತರಪ್ರದೇಶದಲ್ಲಿ, ಮೇಲ್ಜಾತಿ ಮಂದಿಯ ಗುಂಪೊಂದು ಸೈಕಲ್‌ನಲ್ಲಿ ಬಂದ ದಲಿತ ವ್ಯಕ್ತಿಯನ್ನು ತಮಗೆ ಸರಿಯಾಗಿ ದಾರಿಬಿಡಲಿಲ್ಲ ಎಂಬ ನೆಪಮಾಡಿ ಥಳಿಸಿದರು. ಮತ್ತೊಂದು ಘಟನೆಯಲ್ಲಿ ದಲಿತ ಹುಡುಗನೊಬ್ಬ ಬೈಕ್‌ನಲ್ಲಿ ಬಂದು ಆಕಸ್ಮಿಕವಾಗಿ ರಸ್ತೆಯಲ್ಲಿ ಒಬ್ಬನಿಗೆ ಗುದ್ದಿದ್ದಕ್ಕೆ ಅವನನ್ನು ಹೊಡೆದು ಕೊಲ್ಲಲಾಯಿತು. ಅದೇ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ನೇತೃತ್ವದ ಗುಂಪೊಂದು ದಲಿತ ಸಮುದಾಯದ ಮೇಲೆ ದಾಳಿ ನಡೆಸಿತು. ಮೇಲ್ಜಾತಿ ಜನರ ಗುಂಪು 10 ವರ್ಷದ ದಲಿತ ಬಾಲಕನ ಕೊಲೆ ಮಾಡಿ ಮರಕ್ಕೆ ನೇತು ಹಾಕಿತು. ತೆಲಂಗಾಣದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಯೋಜಿಸುತ್ತಿದ್ದ ದಲಿತ ಸಂಘಟನೆಯ ಮೇಲೆ ದಾಳಿ ನಡೆಸಲಾಯಿತು ಮತ್ತು ದಲಿತ ವ್ಯಕ್ತಿಯೊಬ್ಬರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅವರನ್ನು ವಿಶ್ವ ಹಿಂದೂ ಪರಿಷತ್‌ನ ಕೆಲವರು ಥಳಿಸಿದರು.
ಇಷ್ಟೆಲ್ಲ ಆದರೂ, ಭಾರತದಲ್ಲಿ ಜಾತಿ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲ ಎಂಬ ಮೋದಿಯವರ ಭರವಸೆಯನ್ನು ನಾವು ನಂಬಬೇಕು.
ಇನ್ನು ಮುಸ್ಲಿಮರ ವಿರುದ್ಧದ ವಿಕೃತಿಗಳ ಕೆಲವು ಉದಾಹರಣೆಗಳನ್ನು ಗಮನಿಸೋಣ.
ಶ್ವೇತಭವನದಲ್ಲಿ ನಿಂತು, ತಮ್ಮ ಆಡಳಿತದಲ್ಲಿ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲ ಎಂದು ಮೋದಿ ಹೇಳಿದರು. ಆದರೆ ಸಾಲುಸಾಲಾಗಿ ಅದರ ಆಸುಪಾಸಿನಲ್ಲೇ ಮುಸ್ಲಿಮರನ್ನು ಗುರಿಯಾಗಿಸಿದ ಘಟನೆಗಳು ನಡೆದವು.
ಮಧ್ಯಪ್ರದೇಶದಲ್ಲಿ ಜೂನ್‌ನಲ್ಲಿ ಇಬ್ಬರು ಮುಸ್ಲಿಮರನ್ನು ಗೋಮಾಂಸ ಸಾಗಿಸುತ್ತಿದ್ದರೆಂಬ ಶಂಕೆಯಿಂದ ಬಜರಂಗದಳದ ಮಂದಿ ಥಳಿಸಿದರು. ಮಹಾರಾಷ್ಟ್ರದಲ್ಲಿ ಮುಸ್ಲಿಮ್ ಯುವಕನೊಬ್ಬ ಹಸುಗಳನ್ನು ಸಾಗಿಸುತ್ತಿದ್ದ ಕಾರಣಕ್ಕೆ ಬಜರಂಗದಳದ ಕೆಲವರು ಆತನನ್ನು ಕೊಂದರು. ಬಿಹಾರದಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬ ಪ್ರಾಣಿಗಳ ಮೂಳೆ ಸಾಗಿಸುತ್ತಿದ್ದನೆಂದು ಆರೋಪಿಸಿ ಕೊಲೆ ಮಾಡಲಾಯಿತು. ಒಡಿಶಾದಲ್ಲಿ ಇಬ್ಬರು ಮುಸ್ಲಿಮ್ ಪುರುಷರು ಮೇಕೆ ಶವಗಳನ್ನು ಸಾಗಿಸುತ್ತಿದ್ದಾಗ ಸುತ್ತುವರಿದ ಗುಂಪೊಂದು ಅವರನ್ನು ಕಟ್ಟಿಹಾಕಿ ಥಳಿಸಿತು. ರಾಜಸ್ಥಾನದಲ್ಲಿ ಸ್ಥಳೀಯ ಬಿಜೆಪಿ ನಾಯಕನೂ ಇದ್ದ ಗುಂಪೊಂದು ಮಸೀದಿಗೆ ಬೆಂಕಿ ಹಚ್ಚಿತು. ಗುಜರಾತ್‌ನಲ್ಲಿ ಸ್ಥಳೀಯ ಮಸೀದಿಯನ್ನು ಕೆಡವುದರ ವಿರುದ್ಧ ಪ್ರತಿಭಟಿಸುತ್ತಿದ್ದ ಮುಸ್ಲಿಮರ ಗುಂಪಿನ ಮೇಲೆ ಹಲ್ಲೆ ಮಾಡಲಾಯಿತು.
ಮೇ ತಿಂಗಳಲ್ಲಿ ರಾಜಸ್ಥಾನದಲ್ಲಿ ಮುಸ್ಲಿಮ್ ಹಜ್ ಯಾತ್ರಾರ್ಥಿಗಳನ್ನು ವಿಮಾನ ನಿಲ್ದಾಣಕ್ಕೆ ಸಾಗಿಸುತ್ತಿದ್ದ ಬಸ್ ಅನ್ನು ತಡೆದ ಗುಂಪೊಂದು ಪ್ರಯಾಣಿಕರ ಮೇಲೆ ದಾಳಿ ಮಾಡಿತು. ತೆಲಂಗಾಣದಲ್ಲಿ ಗುಂಪೊಂದು ಮುಸ್ಲಿಮ್ ವ್ಯಕ್ತಿಯನ್ನು ಥಳಿಸಲು ಮನೆಯಿಂದ ಹೊರಗೆ ಎಳೆದೊಯ್ದಿಗ ರಕ್ಷಣೆಗೆ ಮುಂದಾದ ಆತನ ಗರ್ಭಿಣಿ ಸಹೋದರಿ ತನ್ನ ಮಗುವನ್ನು ಕಳೆದುಕೊಂಡಳು. ಕರ್ನಾಟಕದಲ್ಲಿ ಮುಸ್ಲಿಮ್ ಕಾಲೇಜು ವಿದ್ಯಾರ್ಥಿಯೊಬ್ಬ ಹಿಂದೂ ಮಹಿಳಾ ಸಹಪಾಠಿಯೊಂದಿಗೆ ಜ್ಯೂಸ್ ಕುಡಿಯುತ್ತಿರುವುದನ್ನು ಕಂಡು ಬಜರಂಗದಳದ ಗುಂಪೊಂದು ಥಳಿಸಿತು. ಮಧ್ಯಪ್ರದೇಶ ದಲ್ಲಿಯೂ ಮುಸ್ಲಿಮ್ ಕಾಲೇಜು ವಿದ್ಯಾರ್ಥಿ ಹಿಂದೂ ಹುಡುಗಿಯೊಂದಿಗೆ ಕೆಫೆಯಲ್ಲಿ ಕುಳಿತಿರುವುದನ್ನು ಕಂಡು ಹೀಗೆಯೇ ಥಳಿಸಲಾಯಿತು.
ಎಪ್ರಿಲ್‌ನಲ್ಲಿ ಉತ್ತರ ಪ್ರದೇಶದಲ್ಲಿ ಮಾಜಿ ಸಂಸದರಾಗಿದ್ದ ಮುಸ್ಲಿಮ್ ವ್ಯಕ್ತಿಯೊಬ್ಬರು ತಮ್ಮ ಸಹೋದರನೊಂದಿಗೆ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಹತ್ಯೆಗೀಡಾದರು. ಹರ್ಯಾಣ ದಲ್ಲಿ ಆರೆಸ್ಸೆಸ್ ಮತ್ತು ವಿಎಚ್‌ಪಿ ಸದಸ್ಯರ ಶಸ್ತ್ರಸಜ್ಜಿತ ಗುಂಪು ಸಂಜೆಯ ಪ್ರಾರ್ಥನೆಯ ಸಮಯದಲ್ಲಿ ಮಸೀದಿಯೊಂದಕ್ಕೆ ನುಗ್ಗಿ ಥಳಿಸಿತು ಮತ್ತು ಕೆಲವರನ್ನು ಇರಿಯಲಾಯಿತು. ಜಾರ್ಖಂಡ್‌ನಲ್ಲಿ ಮುಸ್ಲಿಮ್ ಬಾಲಕನ ಮೇಲೆ ಕಳ್ಳತನದ ಆರೋಪ ಹೊರಿಸಿ ಆತನನ್ನು ಕಂಬಕ್ಕೆ ಕಟ್ಟಿ ಕೊಲೆ ಮಾಡಲಾಯಿತು.
ಮಾರ್ಚ್‌ನಲ್ಲಿ ಬಿಹಾರದಲ್ಲಿ ಗುಂಪೊಂದು ಶತಮಾನದಷ್ಟು ಹಳೆಯದಾದ ಮದ್ರಸಾವನ್ನು ಸುಟ್ಟುಹಾಕಿತು. ಬಿಹಾರದಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬ ಗೋಮಾಂಸ ಹೊಂದಿದ್ದನೆಂದು ಆರೋಪಿಸಿ ಹತ್ಯೆ ಮಾಡಲಾಯಿತು. ಮಹಾರಾಷ್ಟ್ರದಲ್ಲಿ ಮುಸುಕುಧಾರಿಗಳು ಮಸೀದಿಯೊಂದಕ್ಕೆ ನುಗ್ಗಿ, ಇಮಾಮ್ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದರು. ಅವರು ಹಿಂದೂ ಘೋಷಣೆಯನ್ನು ಪಠಿಸಲು ನಿರಾಕರಿಸಿದ್ದು ಇದಕ್ಕೆ ಕಾರಣವಾಗಿತ್ತು. ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ವ್ಯಾಪಾರಿಯನ್ನು ಬೀದಿಗಳಲ್ಲಿ ಅಟ್ಟಿಸಿಕೊಂಡು ಹೋಗಿ ಪದೇ ಪದೇ ಥಳಿಸಲಾಯಿತು. ಮಧ್ಯಪ್ರದೇಶದಲ್ಲಿ ಹಿಂದೂ ಹುಡುಗಿಯ ಜೊತೆ ಪಾರ್ಕ್‌ನಲ್ಲಿ ಕುಳಿತಿದ್ದ ಮುಸ್ಲಿಮ್ ಹುಡುಗನನ್ನು ನೋಡಿದ ಬಜರಂಗದಳದ ಗುಂಪೊಂದು ಆತನನ್ನು ಥಳಿಸಿತು.
ಫೆಬ್ರವರಿಯಲ್ಲಿ ಬಿಹಾರದಲ್ಲಿ ಮುಸ್ಲಿಮ್ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಲೆ ಮಾಡಿತ್ತು. ಹರ್ಯಾಣದಲ್ಲಿ ಇಬ್ಬರು ಮುಸ್ಲಿಮರನ್ನು ಬಜರಂಗದಳದ ಸದಸ್ಯರ ಗುಂಪೊಂದು ಅಪಹರಿಸಿ ಬೆಂಕಿ ಹಚ್ಚಿ ಕೊಲೆ ಮಾಡಿತು. ಉತ್ತರ ಪ್ರದೇಶದಲ್ಲಿ ವಿಎಚ್‌ಪಿ ಮತ್ತು ಬಜರಂಗದಳ ಸದಸ್ಯರು ನಿರ್ಮಾಣ ಹಂತದಲ್ಲಿರುವ ಮಸೀದಿಯನ್ನು ಧ್ವಂಸಗೊಳಿಸಿದರು. ಮಧ್ಯಪ್ರದೇಶದಲ್ಲಿ ಮಸೀದಿಗೆ ಹೋಗುತ್ತಿದ್ದ ಇಮಾಮ್ ಮೇಲೆ ಗುಂಪೊಂದು ಹೊಂಚುಹಾಕಿ ಚಾಕುವಿನಿಂದ ಇರಿಯಿತು.
ಒಂದೆಡೆ ಹೀಗೆ ದಲಿತರು ಮತ್ತು ಮುಸ್ಲಿಮರ ಮೇಲೆ ಸರಣಿ ದಾಳಿಗಳನ್ನು ನಡೆಸುತ್ತಿರುವ ಅದೇ ಹಿಂದೂ ಗುಂಪುಗಳೇ ಕ್ರಿಶ್ಚಿಯನ್ನರ ವಿರುದ್ಧವೂ ಅಂಥದೇ ವಿಕೃತಿ ಮೆರೆಯುತ್ತಿವೆ. ಮೋದಿಯವರ ‘ನವಭಾರತ’ದಲ್ಲಿ ಯಾವುದೇ ತಾರತಮ್ಯದ ಪ್ರಶ್ನೆಯಿಲ್ಲದಿರುವಾಗಲೂ, ಕ್ರಿಶ್ಚಿಯನ್ನರ ಮೇಲಿನ ಈ ದಾಳಿಗಳು ಏನು?
ಜೂನ್‌ನಲ್ಲಿ ಹರ್ಯಾಣದಲ್ಲಿ ಶಸ್ತ್ರಸಜ್ಜಿತ ಗುಂಪು ಚರ್ಚ್ ಮುಚ್ಚಲು ಪಾದ್ರಿಗೆ ಗಡುವನ್ನು ನೀಡಿತು. ಹತ್ತಿರದ ಇನ್ನೊಂದು ಚರ್ಚ್‌ನಲ್ಲಿ ನೂರಾರು ವಿಎಚ್‌ಪಿ ಮತ್ತು ಬಜರಂಗದಳದ ಮಂದಿ ಬೆದರಿಕೆಯೊಡ್ಡಿದರು.
ಮೇ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ಕ್ರೈಸ್ತರು ಖಾಸಗಿ ಪ್ರಾರ್ಥನೆಗಾಗಿ ಒಟ್ಟುಗೂಡಿದಾಗ ಪೊಲೀಸರು 10 ಮಂದಿಯನ್ನು ಬಂಧಿಸಿದರು. ಧಾರ್ಮಿಕ ಮತಾಂತರ ಚಟುವಟಿಕೆಯಲ್ಲಿ ತೊಡಗಿರುವ ಆರೋಪ ಹೊರಿಸಲಾಯಿತು. ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿಯೂ ಬುಡಕಟ್ಟು ಕ್ರಿಶ್ಚಿಯನ್ನರನ್ನೇ ಗುರಿಯಾಗಿಸಲಾಗಿದೆ. ನೂರಾರು ಚರ್ಚುಗಳನ್ನು ಸುಟ್ಟು ಹಾಕಲಾಗಿದೆ.
ಎಪ್ರಿಲ್‌ನಲ್ಲಿ ಉತ್ತರ ಪ್ರದೇಶದಲ್ಲಿ ರವಿವಾರದ ಆರಾಧನೆಯ ನಂತರ ಪಾದ್ರಿ ಮತ್ತು ಅವರ ಪತ್ನಿಯನ್ನು ಬಲವಂತದ ಮತಾಂತರ ಆರೋಪದ ಮೇಲೆ ಬಂಧಿಸಲಾಯಿತು.
ಮಾರ್ಚ್‌ನಲ್ಲಿ ಉತ್ತರ ಪ್ರದೇಶದಲ್ಲಿ ಬಜರಂಗದಳದ ಸದಸ್ಯರು ಕ್ರೈಸ್ತರ ಮನೆಯೊಂದಕ್ಕೆ ದಾಳಿ ಮಾಡಿದರು. ಮತಾಂತರ ಚಟುವಟಿಕೆ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದರು. ಅದೇ ರಾಜ್ಯದಲ್ಲಿ 100 ವರ್ಷಗಳಷ್ಟು ಹಳೆಯದಾದ ಕ್ರಿಶ್ಚಿಯನ್ ಆಸ್ಪತ್ರೆಯನ್ನು ಮುಚ್ಚಲಾಯಿತು. ಇದು ಕೂಡ ಮತಾಂತರ ಆರೋಪದ ನೆಪದಲ್ಲೇ ನಡೆಯಿತು. ದಿಲ್ಲಿಯಲ್ಲಿ ಪುಸ್ತಕ ಮೇಳದಲ್ಲಿ ಗುಂಪೊಂದು ಕ್ರಿಶ್ಚಿಯನ್ ಪುಸ್ತಕ ಮಳಿಗೆ ಮೇಲೆ ದಾಳಿ ಮಾಡಿತು.
ಫೆಬ್ರವರಿಯಲ್ಲಿ ಉತ್ತರ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಗುಂಪು ಚರ್ಚ್ ಪಾದ್ರಿ ಮತ್ತು ಅವರ ಜೊತೆಗಿದ್ದವರನ್ನು ಥಳಿಸಿತು ಮತ್ತು ಕಟ್ಟಡವನ್ನು ಧ್ವಂಸಗೊಳಿಸಿತು. ಗುಜರಾತ್‌ನಲ್ಲಿ ವಿಎಚ್‌ಪಿ ಮತ್ತು ಬಜರಂಗದಳದ ಸದಸ್ಯರು ಇಡೀ ದಿನ ಕ್ರಿಶ್ಚಿಯನ್ ಶಾಲೆಯ ಕ್ಯಾಂಪಸ್‌ನಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಹಾಕುವಂತೆ ಬಲವಂತ ಮಾಡಿದರು. ಮಧ್ಯಪ್ರದೇಶದಲ್ಲಿ ವಿಧ್ವಂಸಕರು ಚರ್ಚ್‌ಗೆ ನುಗ್ಗಿ ಬೆಂಕಿ ಹಚ್ಚಿದರು.
ಜನವರಿಯಲ್ಲಿ ಬಿಹಾರದಲ್ಲಿ ಕ್ರಿಶ್ಚಿಯನ್ ದಂಪತಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಗುಂಪೊಂದು ಅವರ ಮೇಲೆ ದಾಳಿ ಮಾಡಿತು. ಮಧ್ಯಪ್ರದೇಶದಲ್ಲಿ, ಕೆಥೊಲಿಕ್ ಪಾದ್ರಿಯೊಬ್ಬರು ಮಾಸ್ ನಡೆಸಲು ಹೋಗುತ್ತಿದ್ದಾಗ ಅವರನ್ನು ಬಂಧಿಸಲಾಯಿತು ಮತ್ತು ಮೋಸದ ಮತಾಂತರದ ಆರೋಪ ಹೊರಿಸಲಾಯಿತು. ಮಹಾರಾಷ್ಟ್ರದಲ್ಲಿ 17 ವರ್ಷದ ಬಾಲಕ ಸೇರಿದಂತೆ 14 ಕ್ರಿಶ್ಚಿಯನ್ನರನ್ನು ಮತಾಂತರದಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಬಂಧಿಸಲಾಯಿತು. ಛತ್ತೀಸ್‌ಗಡದಲ್ಲಿ ಇಬ್ಬರು ಸ್ಥಳೀಯ ಬಿಜೆಪಿ ನಾಯಕರನ್ನು ಒಳಗೊಂಡ ಶಸ್ತ್ರಸಜ್ಜಿತ ಗುಂಪೊಂದು ಚರ್ಚ್‌ಗೆ ನುಗ್ಗಿ ಅದರ ಆವರಣವನ್ನು ಧ್ವಂಸಗೊಳಿಸಿತು. ಮಹಾರಾಷ್ಟ್ರದಲ್ಲಿ, ಕ್ರಿಶ್ಚಿಯನ್ ಸ್ಮಶಾನದಲ್ಲಿ ಸಮಾಧಿ ಗುರುತುಗಳನ್ನು ಪುಡಿಮಾಡಲಾಯಿತು.
ಇವೆಲ್ಲವೂ ಒಂದೆಡೆಗಾದರೆ, ಯಾವ ಶ್ವೇತಭವನದಲ್ಲಿ ನಿಂತು ಮೋದಿ ತಾರತಮ್ಯದ ಪ್ರಶ್ನೆಯೇ ಇಲ್ಲ ಎಂದರೊ, ಅದೇ ಶ್ವೇತಭವನದ ವರದಿಗಾರ್ತಿ ಸಬ್ರಿನಾ ಸಿದ್ದೀಕಿ ಅವರಿಗೆ ಮೋದಿಯವರನ್ನು ಪ್ರಶ್ನೆ ಕೇಳಿದ್ದಕ್ಕಾಗಿ ಪ್ರಾಣಬೆದರಿಕೆಗಳೂ ಬಂದವೆಂಬುದು ಮತ್ತೊಂದೆಡೆ. ಇದು ಏನನ್ನು ಸೂಚಿಸುತ್ತದೆ ಎಂಬುದನ್ನು ವಿವರಿಸಬೇಕಿಲ್ಲ.
ಸತ್ಯವೇನೆಂದರೆ, ಪ್ರವೇಶ್ ಶುಕ್ಲಾ ಎಂಬ ಆ ವ್ಯಕ್ತಿ ಬಡ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜಿಸುವಾಗ, ಮೋದಿ ಆಡಳಿತದಲ್ಲಿ ನಿಜವಾಗಿಯೂ ನಡೆಯುತ್ತಿರುವುದೇನು ಎಂಬುದನ್ನೇ ಜಗತ್ತಿಗೆ ತೋರಿಸುತ್ತಿದ್ದ.
ಮೋದಿ ಆಳ್ವಿಕೆಯಲ್ಲಿ ಸಂಭವಿಸಿದ ಮತ್ತು ಸಂಭವಿಸುತ್ತಲೇ ಇರುವ ದೌರ್ಜನ್ಯಗಳ ಈ ಸುದೀರ್ಘ ಸರಣಿಯನ್ನು ನೋಡಿದರೆ, ಇದು ಎಂಥ ದುರ್ಮಾರ್ಗ ಎಂಬುದು ಗೋಚರವಾಗುತ್ತ ಹೋಗುತ್ತದೆ ಮತ್ತು ಇವೆಲ್ಲವೂ ಮೋದಿ ಆಡಳಿತದಲ್ಲಿ ರೂಢಿಗೆ ಹೊರತಲ್ಲ, ಅವರ ‘ನವಭಾರತ’ದಲ್ಲಿ ಇವೆಲ್ಲವೂ ಸರ್ವೇಸಾಮಾನ್ಯ ಅಸಹ್ಯಗಳು ಎಂದು ಮಾತ್ರ ನಾವು ಅರ್ಥೈಸಬಹುದಾಗಿದೆ.
(ಕೃಪೆ: countercurrents.org)