ಜಾತ್ಯತೀತ ಪ್ರಜಾಪ್ರಭುತ್ವ ಮೌಲ್ಯಗಳು
ಇತಿಹಾಸ ಪಾಠಗಳ ಮೇಲೆ ಕೇಸರಿ ಛಾಯೆ | ಭಾಗ - 7
ಮೂಲ: ಡಾ. ಕೆ. ಬಾಲಗೋಪಾಲ್
ನಾಗರಿಕ ಹಕ್ಕುಗಳ ಹೋರಾಟಗಾರರು, ಚಿಂತಕರು
ಕನ್ನಡಕ್ಕೆ: ಡಾ. ಬಂಜಗೆರೆ ಜಯಪ್ರಕಾಶ್
►► ಭಾಗ -7
ನಮ್ಮ ರಾಜ್ಯದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಚಳವಳಿಗಳು ಬಹಳ ಹಿಂದಿನಿಂದಲೂ ನಡೆಯುತ್ತಿವೆ. ಇವುಗಳಲ್ಲಿ ವಿವಿಧ ಪ್ರವೃತ್ತಿಗಳಿದ್ದರೂ ಹೆಚ್ಚಿನವು ಜಾತ್ಯತೀತ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ನಂಬುವ ಚಳವಳಿಗಳಾಗಿವೆ, ಇವೆಲ್ಲವೂ ಸಮಾಜದಲ್ಲಿ ಜಾತ್ಯತೀತ ಪ್ರಜಾಸತ್ತಾತ್ಮಕ ಮೌಲ್ಯಗಳಿರಬೇಕು ಮತ್ತು ಸಮಾಜವು ಸಮಾನತೆಯ ಸಮಾಜದತ್ತ ಸಾಗಬೇಕು ಮತ್ತು ಆದ್ದರಿಂದ ಶಿಕ್ಷಣ ವ್ಯವಸ್ಥೆಯು ಅದಕ್ಕೆ ಅನುಗುಣವಾಗಿರಬೇಕು ಎಂದು ನಂಬುವ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಘಗಳು. ಈ ಸಂಘಟನೆಗಳು ಶಿಕ್ಷಕರ ಸೇವೆಯ ಸಮಸ್ಯೆಗಳ ಬಗ್ಗೆ, ರಾಜಕಾರಣಿಗಳು ಮತ್ತು ಪ್ರಭಾವಿಗಳ ಒತ್ತಡಗಳನ್ನು ನಿವಾರಿಸುವ ಬಗ್ಗೆ, ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಹಾಸ್ಟೆಲ್, ಪಠ್ಯಪುಸ್ತಕ ಇತ್ಯಾದಿಗಳ ಬಗ್ಗೆ ಪ್ರಬಲ ಚಳವಳಿಗಳನ್ನು ಸಂಘಟಿಸಿ ಯಶಸ್ವಿಯಾದವು. ಆದರೂ, ಶಿಕ್ಷಣದ ವಿಷಯದ ಬಗ್ಗೆ, ಪಠ್ಯಕ್ರಮದಲ್ಲಿ ಕಲಿಸುವ ವಿಷಯದ ಬಗ್ಗೆ, ಅದರ ನೈತಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ವರೂಪದ ಬಗ್ಗೆ ಯಾವುದೇ ಬಲವಾದ ಚಳವಳಿಗಳು ನಡೆಯಲಿಲ್ಲ.
ಇತ್ತೀಚಿನ ದಿನಗಳಲ್ಲಿ ಇದು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಯಾದರೂ, ದಕ್ಷಿಣ ಭಾರತದ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯ ಗಳಲ್ಲಿ ಜಾತ್ಯತೀತ ಪ್ರಜಾಸತ್ತಾತ್ಮಕ ರಾಜಕೀಯ ಶಕ್ತಿಗಳ ಪ್ರಾಬಲ್ಯ ಹೆಚ್ಚಾಗಿಯೇ ಉಳಿದುಕೊಂಡು ಬಂದಿದೆ. ಆದರೂ, ಪಠ್ಯಕ್ರಮದ ಮೇಲೆ ಅದರ ಪ್ರಭಾವ ಬಹಳ ಕಡಿಮೆಯಿದೆ.
ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯ ಎಂದರೇನು? ಈ ಪದಗಳ ವ್ಯಾಖ್ಯಾನಗಳನ್ನು ಕಾಂಗ್ರೆಸ್ನವರಿಗೆ ಬಿಡಲಾಯಿತು. ಅವರು ನೀಡಿದ ವ್ಯಾಖ್ಯಾನಗಳನ್ನು ಟೀಕಿಸಲಾಗಿದೆ. ಆದರೆ ಯಾವುದೇ ನಿರ್ದಿಷ್ಟ ವ್ಯಾಖ್ಯಾನವನ್ನು ಕೊಡುವುದಕ್ಕೆ ಪ್ರಯತ್ನಿಸಲಾಗಿಲ್ಲ. ಆ ವ್ಯಾಖ್ಯಾನಗಳಲ್ಲಿ ಕೆಲವು ಸಕಾರಾತ್ಮಕ ಅಂಶಗಳಿದ್ದರೂ ಅವುಗಳ ಬಗ್ಗೆ ಆಳವಾದ ಚರ್ಚೆ ನಡೆದಿಲ್ಲ. ಆ ಎಲ್ಲ ವ್ಯಾಖ್ಯಾನಗಳನ್ನು ತಿರಸ್ಕರಿಸಿದ ಸಂಘಪರಿವಾರ ಮತ್ತು ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಮತ್ತು ಜಾತ್ಯತೀತ ವಿರೋಧಿ ಅಜೆಂಡಾದೊಂದಿಗೆ ಮುಂದೆ ಬಂದು ದೇಶಕ್ಕೆ ಶಾಕ್ ನೀಡಿತು. ಸಂಘಪರಿವಾರದವರು ತಮ್ಮ ಅಜೆಂಡಾವನ್ನು ಜಾರಿಗೆ ತರಲು ಏನು ಮಾಡಬೇಕೆಂದು ನಿಖರವಾಗಿ ಗುರುತಿಸಿದರು. ಯಾವುದೇ ಹಿಂಜರಿಕೆಯಿಲ್ಲದೆ ಅವರು ಪಠ್ಯಕ್ರಮದಿಂದಲೇ ಪ್ರಾರಂಭಿಸಿದರು. ಯಾವುದೇ ಅವಕಾಶ ದೊರೆತರೂ ಅವರು ತಮ್ಮ ಸಿದ್ಧಾಂತವನ್ನು ಪಠ್ಯಕ್ರಮದಲ್ಲಿ ಪರಿಚಯಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ವಿದ್ಯಾರ್ಥಿವೇತನವನ್ನು ರದ್ದುಗೊಳಿಸಲಿಲ್ಲ. ಹಾಸ್ಟೆಲ್ಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತೇವೆನ್ನಲಿಲ್ಲ. ಅವರು ತಮ್ಮ ಸಿದ್ಧಾಂತವನ್ನು ಹರಡಲು ಶಾಲೆಗಳು ಮತ್ತು ಕಾಲೇಜುಗಳನ್ನೆಲ್ಲ ಆಧಾರವನ್ನಾಗಿ ಮಾಡಿಕೊಂಡರು. ಅವರು ಬಯಸಿದ ಭವಿಷ್ಯತ್ ತಲೆಮಾರನ್ನು ರೂಪಿಸಲು ಚಿಕ್ಕ ಮಕ್ಕಳ ಮನಸ್ಸಿನಲ್ಲಿ ತಮ್ಮ ಆಲೋಚನೆಗಳನ್ನು ಅಳವಡಿಸಲು ಪಠ್ಯಪುಸ್ತಕಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಶಿಕ್ಷಣದ ಪ್ರಭಾವವು ದೂರಗಾಮಿ ಎಂದು ನಮಗೆ ತಿಳಿದಿದೆ. ಚಿಕ್ಕ ವಯಸ್ಸಿನಲ್ಲಿ ನೆಟ್ಟ ಭಾವನೆಗಳು ಬೇಗನೆ ಬದಲಾಗುವುದಿಲ್ಲ. ಶಿಕ್ಷಣದ ಪರಿಣಾಮ ಏನು, ಆರೆಸ್ಸೆಸ್ನವರು ಅದನ್ನು ಹೇಗೆ ಬಳಸಿಕೊಂಡರು ಎಂಬುದನ್ನು ಗುಜರಾತ್ನ ಅನುಭವ ನಮಗೆ ಹೇಳುತ್ತದೆ. ಗುಜರಾತಿನಲ್ಲಿ ನಡೆದ ದೌರ್ಜನ್ಯದ ವಸ್ತುಸ್ಥಿತಿ ಪರಿಶೀಲನೆಗೆ ನಾವು ಹೋಗಿದ್ದೆವು. ಆದಿವಾಸಿಗಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳವರೆಗೆ ಎಲ್ಲರೂ ಒಂದೇ ರೀತಿ ಪ್ರತಿಕ್ರಿಯಿಸಿದರು. ಅವರು ಭಾರತೀಯ ಸಂಸ್ಕೃತಿ ಮತ್ತು ಮುಸ್ಲಿಮರ ದಾಳಿಗಳ ಬಗ್ಗೆ ಗಿಳಿಗಳಂತೆ ಮಾತನಾಡುತ್ತಿದ್ದರು. ಈ ವಿಷಯಗಳನ್ನು ನಿಮಗೆ ಯಾರು ಹೇಳಿದರು ಎಂದು ಕೇಳಿದಾಗ ನಮ್ಮ ಶಿಕ್ಷಕರು ಹೇಳಿದರು ಎಂದು ಆದಿವಾಸಿಗಳು ಹೇಳಿದರು. ಹಲವು ವರ್ಷಗಳಿಂದ ಅಧಿಕಾರದಲ್ಲಿರುವ ಸಂಘ ಪರಿವಾರದ ಶಕ್ತಿಗಳು ತಮ್ಮದೇ ಪಠ್ಯಕ್ರಮವನ್ನು ಹೇಳಿಕೊಟ್ಟಿದ್ದರಿಂದ ಅದರ ಪ್ರಭಾವ ಅವರ ಮೇಲೆ ಬಲವಾಗಿಯೇ ಉಳಿದಿದೆ. ಚುನಾವಣೆಯಲ್ಲಿ ಯಾರೇ ಗೆದ್ದರೂ ಆಡಳಿತದಲ್ಲಿ ಆರೆಸ್ಸೆಸ್ ಶಕ್ತಿಗಳು ಚೆನ್ನಾಗಿ ಬೇರೂರಿಬಿಟ್ಟಿವೆ. ಶಿಕ್ಷಣ ಕ್ಷೇತ್ರವನ್ನು ಒಂದು ನಮೂನೆ ಮೂಸೆಯಲ್ಲಿ ಅಭಿವೃದ್ಧಿಪಡಿಸಿದ್ದರು. ಧಾರ್ಮಿಕ ದ್ವೇಷವನ್ನು ಕೆರಳಿಸಬಲ್ಲವರಾದರು.
ಆದ್ದರಿಂದ ಜಾತ್ಯತೀತ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಲಿಸುವ ಪಠ್ಯಕ್ರಮವನ್ನು ಪರಿಚಯಿಸುವ ಅಗತ್ಯವಿದೆ. ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ವ್ಯಾಖ್ಯಾನಗಳು ಸೀಮಿತವಾಗಿ ಬೋಧಿಸಲಾಗಿದೆ. ಆ ಸೀಮಿತ ಅರ್ಥದಲ್ಲಿಯೂ ಧರ್ಮ ನಿರಪೇಕ್ಷತೆ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಅವರು.
ಧರ್ಮ ನಿರಪೇಕ್ಷತೆಯ ಬಗ್ಗೆ ಗಾಂಧೀಜಿ ಹೇಳಿದ್ದು - ‘‘ಎಲ್ಲ ಧರ್ಮಗಳಿಗೂ ಪ್ರಚಾರ ಮಾಡಲು ಇಲ್ಲಿ ಸಮಾನ ಅವಕಾಶವಿದೆ. ಈ ದೇಶ ಒಂದು ಧರ್ಮಕ್ಕೆ ಸೇರಿದ್ದಲ್ಲ. ಎಲ್ಲ ಧರ್ಮಗಳಿಗೂ ಸೇರಿದ್ದು.’’ ಇದು ಜಾತ್ಯತೀತತೆಯ ಒಂದು ಸಣ್ಣ ಅಂಶವಾಗಿದೆ. ಆದರೆ ಇದನ್ನೇ ಪ್ರಧಾನವನ್ನಾಗಿಸಿದರು. ಈ ಸೀಮಿತ ವ್ಯಾಖ್ಯಾನಕ್ಕೆ ಕೂಡ ನ್ಯಾಯ ದೊರೆಯುತ್ತಿಲ್ಲ. ಸಂವಿಧಾನವು ಮತ ಪ್ರಚಾರದ ಹಕ್ಕಿನೊಂದಿಗೆ ಮತಾಂತರದ ಹಕ್ಕನ್ನು ನೀಡಿದೆ. ಹಾಗೆಯೇ ಧರ್ಮವನ್ನು ಸೇರುವ ಮತ್ತು ಸೇರಿಸಿಕೊಳ್ಳುವ ಹಕ್ಕನ್ನು ನೀಡಿದೆ. ಆದರೂ ಸಂವಿಧಾನ ನೀಡಿರುವ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ.
ಪಠ್ಯಪುಸ್ತಕಗಳ ಮೂಲಕ, ಪಠ್ಯ ಪುಸ್ತಕಕ್ಕೆ ಸೀಮಿತವಾಗಿರದ ಬೋಧನೆಯ ಮೂಲಕ ನಾವು ಯಾವ ಮೌಲ್ಯಗಳನ್ನು ಕಲಿಸಲು ಸಾಧ್ಯವಾಗುತ್ತಿದೆ? ನಾವು ಜಾತ್ಯತೀತ ಪ್ರಜಾಸತ್ತಾತ್ಮಕ ಪರಿಕಲ್ಪನೆಗಳನ್ನು ಸೀಮಿತ ಅರ್ಥದಲ್ಲಾದರೂ ಬೋಧಿಸಲು ಸಾಧ್ಯವಾಗುತ್ತಿದೆಯೇ? ಜಾತ್ಯತೀತ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲವಾಗಿ ಅಭಿವೃದ್ಧಿಪಡಿಸಲು ಇತಿಹಾಸ ಮತ್ತು ಸಾಹಿತ್ಯವನ್ನು ಅವಲಂಬಿಸಬೇಕು. ಇವುಗಳನ್ನು ನಾವು ಹೇಗೆ ಕಲಿಸುತ್ತಿದ್ದೇವೆ ಮತ್ತು ಅರ್ಥೈಸುತ್ತಿದ್ದೇವೆ ಎಂಬುದನ್ನು ಪರಿಶೀಲಿಸಬೇಕು. ಸಾಹಿತ್ಯದ ಹೆಸರಿನಲ್ಲಿ ಬ್ರಾಹ್ಮಣೀಯ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಒಂದು ಅಥವಾ ಎರಡು ವಿನಾಯಿತಿಗಳು ಇರಬಹುದು. ಈ ಮೌಲ್ಯಗಳನ್ನೊಳಗೊಂಡಿರುವ ಪಠ್ಯ ವಿಷಯಗಳೇ ಪ್ರಧಾನವಾಗಿ ಇರುತ್ತಾ ಬಂದಿವೆ. ಹಿಂದೂ ರಾಷ್ಟ್ರ ದೃಷ್ಟಿಕೋನದಿಂದ ಇತಿಹಾಸವನ್ನು ಬರೆಯುವುದನ್ನು ಸಂಘ ಪರಿವಾರ ಆರಂಭಿಸುವುದಕ್ಕೂ ಮುಂಚೆ ಕೂಡ ಚರಿತ್ರೆ ರಚನೆಯನ್ನು ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಉತ್ತೇಜಿಸುವ ರೀತಿಯಲ್ಲಿ ಮಾಡಲಾಗಿಲ್ಲ.
ಸಂಘ ಪರಿವಾರದ ವಿಚಾರಗಳ ಪ್ರಕಾರ, ‘‘ಈ ದೇಶದ ಇತಿಹಾಸ ಆರ್ಯರಿಂದ ಪ್ರಾರಂಭವಾಯಿತು. ಆರ್ಯರು ಈ ದೇಶಕ್ಕೆ ಸೇರಿದವರು. ಅವರು ಹೊರಗಿನಿಂದ ಬಂದವರಲ್ಲ.’’ ಆದರೆ ಆರ್ಯರು ಹೊರಗಿನಿಂದ ಬಂದವರು ಎಂಬುದು ಸತ್ಯ. ಅವರಿಗೆ ವಾಸ್ತವದೊಂದಿಗೆ ಯಾವುದೇ ಸಂಬಂಧವಿಲ್ಲ. ಈ ದೇಶದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಪರದೇಶದವರಲ್ಲವಾದರೂ, ಅವರ ಆಲೋಚನೆಗಳು ಪರದೇಶಗಳವು, ಆದ್ದರಿಂದ ಅವರನ್ನು ಪರಕೀಯರೆಂದು ಕರೆಯಬೇಕು. ಹಾಗಿದ್ದಲ್ಲಿ ಆರ್ಯರು? ಚರಿತ್ರೆಕಾರರ ಪ್ರಕಾರ ಆರ್ಯರು ಭಾರತದ ಕಡೆಗೆ ವ್ಯಾಪಿಸುವ ಕ್ರಮದಲ್ಲಿ ಅಫ್ಘಾನಿಸ್ತಾನದಲ್ಲಿ ಇದ್ದಾಗ ಬರೆಯಲ್ಪಟ್ಟದ್ದು ಋಗ್ವೇದ. ಆದರೆ ಸಂಘ ಪರಿವಾರ ಅದನ್ನು ಒಪ್ಪುವುದಿಲ್ಲ. ಆರ್ಯರಿಗಿಂತ ಮೊದಲು ಭಾರತೀಯ ಉಪಖಂಡದಲ್ಲಿ ಸಂಸ್ಕೃತಿ ಮತ್ತು ನಾಗರಿಕತೆ ಇತ್ತು ಎಂಬುದನ್ನು ಕೂಡ ಆರೆಸ್ಸೆಸ್ ಒಪ್ಪುವುದಿಲ್ಲ. ಅವರ ಪ್ರಕಾರ ಹಿಂದೂ ಧರ್ಮ ಪುರಾತನ ಧರ್ಮ. ಅದನ್ನು ಪ್ರಚಾರ ಮಾಡಿದ್ದು ಆರ್ಯರು. ಆರ್ಯ ಸಂಸ್ಕೃತಿ, ವೇದಗಳು ಮತ್ತು ಹಿಂದೂ ನಾಗರಿಕತೆ ಒಂದು ಕಾಲದಲ್ಲಿ ಅದ್ಭುತವಾಗಿ ಬೆಳೆದಿದ್ದವು. ಜಾತಿಗಳ ಮೇಲೆ, ಸ್ತ್ರೀಯರ ಮೇಲೆ ಆ ಕಾಲದಲ್ಲಿ ದಬ್ಬಾಳಿಕೆ ಇರಲಿಲ್ಲ. ಮುಸ್ಲಿಮರು ಬಲಪ್ರಯೋಗದಿಂದ ಇಸ್ಲಾಮ್ ಧರ್ಮವನ್ನು ನೆಲೆಗೊಳಿಸಿದರು. ಅಲ್ಲಿಯವರೆಗೆ ಗಂಡನಿಗೆ ಸಮಾನಳಾದ ಮಹಿಳೆ ಮುಸ್ಲಿಮ್ ದಾಳಿಗೆ ಹೆದರಿ ಗಂಡನ ರಕ್ಷಣೆಗೆ ಸೇರಿಕೊಂಡು ಗುಲಾಮಳಾದಳು. ಗುಣದ ಆಧಾರದಲ್ಲಿ ವರ್ಗೀಕೃತವಾಗಿದ್ದ ವರ್ಣ ವ್ಯವಸ್ಥೆಯು ಆಗ ಮಾತ್ರ ಜಾತಿ ವ್ಯವಸ್ಥೆಯಾಗಿ ಬದಲಾಯಿತು ಎಂದು ಆರೆಸ್ಸೆಸ್ನವರು ನಂಬುತ್ತಾರೆ. ಮುಸ್ಲಿಮರು ಹಿಂದೂಗಳ ಮೇಲೆ ಆಳ್ವಿಕೆ ನಡೆಸುತ್ತಿರುವಾಗ ಕ್ರಿಶ್ಚಿಯನ್ನರು ಬಂದರು. ಅವರೂ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದರು. ಇವರಿಬ್ಬರ ಆಧಿಪತ್ಯದಿಂದ ದೇಶವನ್ನು ಮುಕ್ತಗೊಳಿಸುವುದೇ ಆರೆಸ್ಸೆಸ್ ಪ್ರವಚಿಸುವ ರಾಷ್ಟ್ರೀಯವಾದ. ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅದೇ ಗುಲಾಮಗಿರಿಯನ್ನು ಮುಂದುವರಿಸಿದೆ. ಇದು ಮೂಲತಃ ಸಂಘ ಪರಿವಾರದ ಚಿಂತನೆ.
ಜಾತ್ಯತೀತತೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರಕಾರದಲ್ಲೂ ಇಬ್ಬರು ಆರೆಸ್ಸೆಸ್ನವರು ಇದ್ದರು. ಬಹಿರಂಗವಾಗಿ ಏನನ್ನು ಹೇಳಿದರೂ ಅಂತರಂಗದಲ್ಲಿ ಮಾತ್ರ ಕೇಸರಿ ತುಂಬಿಕೊಂಡಿರುವವರು ಈ ದೇಶದಲ್ಲಿ ಬಹಳ ಮಂದಿ ಇದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ, ಅಧಿಕಾರಶಾಹಿಯಲ್ಲಿ ತುಂಬಿಕೊಂಡಿದ್ದಾರೆ. ಅನೇಕ ಬಾವುಟಗಳ ಅಡಿಯಲ್ಲಿ ಇದ್ದಾರೆ. ಅವರು ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ಎಲ್ಲೇ ಇದ್ದರೂ ನಾವು ಅವರನ್ನು ಗುರುತಿಸುವಂತಿರಬೇಕು. ಅವರ ಆಲೋಚನಾ ರೀತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಬೇಕು. ಗೋಳ್ವಾಲ್ಕರ್ರಿಂದ ಹಿಡಿದು ಇಂದಿನವರೆಗೂ ಸಂಘ ಪರಿವಾರದ ಚಿಂತನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಭಾರತದಲ್ಲಿ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ಎರಡೂ ಪರಸ್ಪರ ಹೆಣೆದುಕೊಂಡಿವೆ. ಇತರ ದೇಶಗಳಲ್ಲಿ ಕೆಥೊಲಿಕ್ ಚರ್ಚ್ ನಿಯಂತ್ರಣ ಸಾಮ್ರಾಜ್ಯದ ಮೇಲೆ ಪ್ರಬಲವಾಗಿತ್ತು. ಆ ದೇಶಗಳಲ್ಲಿ ಧರ್ಮ ನಿರಪೇಕ್ಷತೆ ಎಂದರೆ ಚರ್ಚಿನ ಪ್ರಭಾವದಿಂದ ರಾಜ್ಯವನ್ನು ಮುಕ್ತಗೊಳಿಸುವುದು. ಭಾರತದಲ್ಲಿ ಜಾತ್ಯತೀತತೆ ಎಂದರೆ ಎಲ್ಲಾ ಧರ್ಮಗಳ ಸಹಬಾಳ್ವೆ, ರಾಜ್ಯಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲದಿರುವುದು ಮಾತ್ರವಲ್ಲ, ಧರ್ಮವು ಮನುಷ್ಯನ ಆಧ್ಯಾತ್ಮಿಕ ಅಗತ್ಯಗಳಿಗೆ ಸೀಮಿತವಾಗಿರಬೇಕು. ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನವು ಧರ್ಮದಿಂದ ಪ್ರಭಾವಿತವಾಗಬಾರದು. ಇದು ಜಾತ್ಯತೀತೆಯ ವ್ಯಾಖ್ಯೆಯಲ್ಲವೇ? ಬ್ರಾಹ್ಮಣೀಯ ಸಿದ್ಧಾಂತ ಮತ್ತು ಹಿಂದುತ್ವ ಸಿದ್ಧಾಂತದಿಂದ ದೇಶವನ್ನು ಮುಕ್ತಗೊಳಿಸಬೇಕು.
‘ಧರ್ಮ’ದ ಪರಿಕಲ್ಪನೆಯು ತುಂಬಾ ಕೆಟ್ಟದು. ದುರದೃಷ್ಟವಶಾತ್ ಇದನ್ನು ಇಂಗ್ಲಿಷ್ನಲ್ಲಿ ಜಸ್ಟಿಸ್ ಎಂದು ಕರೆಯಲಾಗುತ್ತದೆ. ಜಸ್ಟಿಸ್ ಎಂದರೆ ನ್ಯಾಯ. ಧರ್ಮ ಎಂದರೆ ಈ ಸೃಷ್ಟಿ ಅಥವಾ ಪ್ರಪಂಚದಲ್ಲಿ ಪ್ರತಿಯೊಂದು ವಸ್ತುವಿಗೆ ಒಂದು ಸ್ಥಾನವಿದೆ. ಆ ಸ್ಥಾನಕ್ಕೆ ಅಂಟಿಕೊಂಡಿರುವುದೇ ಧರ್ಮ. ಈ ಪರಿಕಲ್ಪನೆ ಇರುವವರೆಗೆ ಭಾರತದಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳುವುದಿಲ್ಲ. ಎಲ್ಲಾ ಮಾನವರೂ ಒಂದೇ, ಎಲ್ಲರೂ ಸಮಾನರು ಮತ್ತು ಎಲ್ಲರಿಗೂ ಸಮಾನ ಅವಕಾಶಗಳು ಇರಬೇಕು ಎಂಬ ಪರಿಕಲ್ಪನೆಗಳು ಪ್ರಜಾಪ್ರಭುತ್ವಕ್ಕೆ ನಿರ್ಣಾಯಕವಾಗಿವೆ. ಅದಕ್ಕೆ ವಿರುದ್ಧವಾಗಿರುವುದು ಧರ್ಮ. ಅವರವರ ಸ್ಥಾನ ಅವರಿಗಿರುತ್ತದೆ. ಅದಕ್ಕೆ ಕಟ್ಟಬಿದ್ದಿರುವುದು ‘ಧರ್ಮ’. ಈ ಪರಿಕಲ್ಪನೆಯ ವಿಮರ್ಶೆ ನಮ್ಮ ಪಠ್ಯಪುಸ್ತಕಗಳಲ್ಲಿ ಕಂಡುಬರುವುದಿಲ್ಲ. ಮುಸಲ್ಮಾನರು ಭಾರತವನ್ನು ಆಳ್ವಿಕೆ ಮಾಡಿದರೂ ದೇಶದ ಜನರನ್ನೆಲ್ಲ ಇಸ್ಲಾಮ್ಗೆ ಮತಾಂತರಗೊಳಿಸಲಿಲ್ಲ. ಬಹುಸಂಖ್ಯಾತರು ಹಿಂದೂಗಳಾಗಿಯೇ ಇದ್ದಾರೆ. ಮುಸಲ್ಮಾನರು ಭಾರತಕ್ಕೆ ಕೃಷಿ ಮತ್ತು ಕೈಗಾರಿಕೆಗಳಲ್ಲಿ ತಾಂತ್ರಿಕ ಬೆಳವಣಿಗೆಯನ್ನು ತಂದರು ಎಂಬುದು ವಾಸ್ತವ. ಈ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವುದರಿಂದ ಪರಮತ ಸಹಿಷ್ಣುತೆ ಬೆಳೆಯುತ್ತದೆ. ಇದು ಎಲ್ಲರ ದೇಶ ಎಂಬ ಅರಿವು ಬೆಳೆಯುತ್ತದೆ. ಸಾಮಾಜಿಕ ಜೀವನದ ಮೇಲೆ ಬ್ರಾಹ್ಮಣೀಯ, ಏಣಿಶ್ರೇಣಿ ವ್ಯವಸ್ಥೆ ಮತ್ತು ಅದರ ಮೌಲ್ಯಗಳ ಪ್ರಭಾವವನ್ನು ತೆಗೆದುಹಾಕಬೇಕು. ಪಠ್ಯ ವಿಷಯಗಳಲ್ಲಿ ಅವುಗಳನ್ನು ಹೇಗೆ ಪರಿಚಯಿಸಬೇಕೆಂಬುದನ್ನು ಆಲೋಚಿಸಬೇಕು. ಆರೆಸ್ಸೆಸ್ನವರು ಈಗಾಗಲೇ ತಮ್ಮ ಸಿದ್ಧಾಂತಗಳನ್ನು ಪರಿಚಯಿಸಿದ್ದಾರೆ. ಗೋಳ್ವಾಲ್ಕರ್ ಪ್ರಬಲ ಹಿಂದೂ ರಾಷ್ಟ್ರವನ್ನು ರೂಪಿಸಬೇಕೆಂದರು. ಬಿಜೆಪಿ ಕಳೆದ ಚುನಾವಣೆಯಲ್ಲಿ ಇದೇ ಮಾತನ್ನು ಹೇಳಿತ್ತು. ರಾಷ್ಟ್ರ ಬಲಗೊಳ್ಳಬೇಕಾದರೆ ಎಲ್ಲರೂ ಆಳುವ ವರ್ಗಕ್ಕೆ ಅಧೀನರಾಗಿರಬೇಕು. ಇಲ್ಲದಿದ್ದರೆ ರಾಷ್ಟ್ರ ದುರ್ಬಲವಾಗುತ್ತದೆ. ಹಿಟ್ಲರ್ನ ಆರ್ಯ ಜಾತಿಯ ಸಿದ್ಧಾಂತವೂ ಕೂಡ ಇದೇ ಆಗಿತ್ತು. ‘‘ಮನೆ ಕಟ್ಟಲು ಕೆಳಗಡೆ ಒಂದಿಷ್ಟು ಇಟ್ಟಿಗೆಗಳಿರಬೇಕು. ಮೇಲೆ ಒಂದಷ್ಟು ಇಟ್ಟಿಗೆಗಳಿರಬೇಕು. ಎಲ್ಲಾ ಇಟ್ಟಿಗೆಗಳು ಮೇಲಿರಬೇಕೆಂದರೆ ಮನೆ ಏನಾಗುತ್ತದೆ?’’ ಎಂದು ಗೋಳ್ವಾಲ್ಕರ್ ಹೇಳಿದ್ದರು. ಅವರು ಈ ರೀತಿಯ ಚಿಂತನೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಭಾರತದಲ್ಲಿ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವವನ್ನು ಬೇರ್ಪಡಿಸಲಾಗದು. ಎರಡನ್ನೂ ಹರಡಲು ಶಿಕ್ಷಕರು ತಮ್ಮದೇ ಆದ ಕೌಶಲ್ಯವನ್ನು ಬಳಸಬೇಕು. ಸೂಕ್ತ ಪಠ್ಯಕ್ರಮವನ್ನು ರೂಪಿಸಲು ಶಿಕ್ಷಕರು ಮತ್ತು ವಿದ್ಯಾರ್ಥಿ ಸಂಘಗಳು ಒಟ್ಟಾಗಿ ಕೆಲಸ ಮಾಡಬೇಕು.