ಒತ್ತಡಗಳ ಭಾರ ಹೊತ್ತುಕೊಂಡೇ ಬದ್ಧತೆ ತೋರುವ ಸಿರಾಜ್
ಭಾರತ-ಪಾಕಿಸ್ತಾನ ಪಂದ್ಯ ಊಹಿಸಿಕೊಳ್ಳಿ. ಕಿಕ್ಕಿರಿದ ಕ್ರೀಡಾಂಗಣ. ಪಂದ್ಯ ರೋಚಕ ಹಂತ ತಲುಪಿದೆ. ಆಗಸಕ್ಕೆ ಪಾಕಿಸ್ತಾನಿ ದಾಂಡಿಗ ಚೆಂಡು ಹೊಡೆಯುತ್ತಾನೆ. ಕೆಳಗೆ ಸಿರಾಜ್ ಆ ಚೆಂಡನ್ನು ಹಿಡಿಯಲು ಅಣಿಯಾಗಿದ್ದಾನೆ. ಆ ಕ್ಷಣ ಸಿರಾಜ್ ಮೇಲಿರುವ ಒತ್ತಡವನ್ನು ನಾವು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲವೆನಿಸುತ್ತದೆ. ಸಿರಾಜ್ ಕ್ಯಾಚ್ ಹಿಡಿದರೆ ಜನ ಸಂಭ್ರಮಿಸಿ ಭಾರತ ಗೆದ್ದಿತು ಎಂದು ಬೀಗುತ್ತಾರೆ. ಅದೇ, ಕ್ಯಾಚ್ ಕೈಚೆಲ್ಲಿದರೆ?
ಜನವರಿ 2021. ಭಾರತ ಕ್ರಿಕೆಟ್ ತಂಡ ಸುದೀರ್ಘ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿತ್ತು. ಭಾರತ ಆ ಸರಣಿಯಲ್ಲಿ ಪ್ರಬಲ ಆಸ್ಟ್ರೇಲಿಯನ್ನರ ಮೇಲೆ ಐತಿಹಾಸಿಕ 2-1ರ ಗೆಲುವು ಸಾಧಿಸಿತ್ತು. ಇಡೀ ಪ್ರವಾಸದಲ್ಲಿ ಶುಭಮನ್ ಗಿಲ್, ಪಂತ್, ಪೂಜಾರ ಆಟ ಮತ್ತು ರಹಾನೆಯ ನಾಯಕತ್ವ ನೆನಪಿನಲ್ಲಿ ಉಳಿದಿದೆ. ಆ ಸರಣಿ ನನಗೆ ವಿಶೇಷವಾಗಿದ್ದು ಮುಹಮದ್ ಸಿರಾಜ್ ಅವರ ಸಾಧನೆಯಿಂದ.
ಮೊದಲ ಟೆಸ್ಟ್ ಅಡಿಲೇಡಿನಲ್ಲಿ ನಡೆಯಿತು. ಭಾರತ ಕೇವಲ 36ರನ್ಗಳಿಗೆ ಅಲ್ಔಟ್ ಆಗಿ ಹೀನಾಯ ಸೋಲು ಅನುಭವಿಸಿತು. ಮೊದಲ ಟೆಸ್ಟ್ ನಂತರ ನಾಯಕ ವಿರಾಟ್ ಕೊಹ್ಲಿ ತನ್ನ ಮೊದಲ ಮಗು ಹುಟ್ಟುವ ಸಮಯದಲ್ಲಿ ಮಡದಿಯ ಜೊತೆಯಲ್ಲಿರಬೇಕೆಂದು ತವರಿಗೆ ವಾಪಸಾದರು. ಮಾಜಿ ಆಸ್ಟ್ರೇಲಿಯನ್ ಕ್ರಿಕೆಟ್ ದಿಗ್ಗಜರಾದ ರಿಕಿ ಪಾಂಟಿಂಗ್, ಶೇನ್ ವಾರ್ನ್ ಆಸ್ಟ್ರೇಲಿಯ 4-0ಅಂತರದಲ್ಲಿ ಸುಲಭವಾಗಿ ಸರಣಿ ಗೆಲ್ಲುವುದೆಂದು ಭವಿಷ್ಯ ನುಡಿದರು.
ಭಾರತ ತೀವ್ರ ವೂದಲಿಕೆ ಟ್ರೋಲ್ಗಳಿಗೆ ಗುರಿಯಾಯಿತು. ಅಷ್ಟರಲ್ಲಿ ತಂಡದಲ್ಲಿದ್ದ ಸಿರಾಜ್ ಅವರಿಗೆ ಬರಸಿಡಿಲಿನಂತೆ ಇನ್ನೊಂದು ಸುದ್ದಿ ಬಂದು ಬಡಿದಿತ್ತು. ಅದು ಅವರ ಸ್ಫೂರ್ತಿಯಾದ ಪ್ರೀತಿಯ ತಂದೆಯ ಸಾವಿನ ಸುದ್ದಿ! ತಂದೆಯ ಅಂತ್ಯಸಂಸ್ಕಾರಕ್ಕೂ ಹೋಗದೆ ತಂಡದ ಜೊತೆ ಉಳಿಯಲು ಸಿರಾಜ್ ನಿರ್ಧರಿಸಿದರು! ಪಂದ್ಯವಾಡುವ ತಂಡಕ್ಕೆ ಆಯ್ಕೆಯಾದರು.
ಈ ನಡುವೆ ಆಸ್ಟ್ರೇಲಿಯದಲ್ಲಿ ವರ್ಣಾಧಾರಿತ, ಧಾರ್ಮಿಕ ನಿಂದನೆಗೂ ಸಿರಾಜ್ ಒಳಗಾಗಿದ್ದರು. ಪಂದ್ಯಾರಂಭಕ್ಕೆ ಮುನ್ನ ತಂಡಗಳು ರಾಷ್ಟ್ರಗೀತೆ ಹಾಡುವುದು ಕ್ರೀಡಾಚರಣೆಗಳಲ್ಲಿ ಒಂದು. ಅಂದು ರಾಷ್ಟ್ರಗೀತೆ ಹಾಡುವಾಗ ಸಿರಾಜ್ ಕಣ್ಣೀರಿಡುತ್ತಿದ್ದರು. ತಂದೆಯ ಸಾವು, ಧಾರ್ಮಿಕ ನಿಂದನೆಗಳು ಸಿರಾಜ್ ಅವರನ್ನು ಘಾಸಿಗಿಳಿಸಿದ್ದವು ಎಂದು ಆಸ್ಟ್ರೇಲಿಯ ತಂಡದ ಆಟಗಾರ ಟಿಮ್ ಪೇನ್ ನೆನಪಿಸಿಕೊಳ್ಳುತ್ತಾರೆ. ದೇಶ ಪ್ರತಿನಿಧಿಸುವ ತಂದೆಯ ಆಸೆಯನ್ನು ಸಿರಾಜ್ ಪೂರೈಸಿದ್ದರು. ಆದರೆ ಆ ಸಾಧನೆ ಸವಿಯಲು, ಆನಂದಬಾಷ್ಪ ಹರಿಸಲು ತಂದೆ ಬದುಕುಳಿದಿರಲಿಲ್ಲ. ಮನದಲ್ಲಿ ದುಃಖ ಸಾಗರವನ್ನೇ ಅಡಗಿಸಿಟ್ಟು ಪಂದ್ಯವಾಡಿದ ಸಿರಾಜ್ ಆತ್ಮಸ್ಥೈರ್ಯ ಎಂಥದ್ದು! ಸಿರಾಜ್ ಆ ಐತಿಹಾಸಿಕ ಸರಣಿಯಲ್ಲಿ 13 ವಿಕೆಟ್ಗಳನ್ನು ಪಡೆದು ಭಾರತ ಸರಣಿ ಗೆಲ್ಲುವುದರಲ್ಲಿ ಪ್ರಮುಖ ಪಾತ್ರವಹಿಸಿದರು.
ಭಾರತವನ್ನು ಪ್ರತಿನಿಧಿಸುವ ಸಿರಾಜ್ ಅವರಂಥ ಆಟಗಾರರ ಮೇಲೆ ಮಾಧ್ಯಮ, ಹಗೆ ತುಂಬಿದ ಮನಸ್ಸುಗಳು ಸದಾ ನಿಗಾ ಇಡುತ್ತವೆ. ಆತ ತಿಲಕವಿಡಿಸಿಕೊಳ್ಳಲಿಲ್ಲ, ತಂಡ ಗೆದ್ದು ಶಾಂಪೇನ್ ಚಿಮ್ಮಿಸುವಾಗ ವೇದಿಕೆಯಲ್ಲಿರಲಿಲ್ಲವೆಂಬ ಕ್ಷುಲ್ಲಕ ಟೀಕೆಗೆ ಗುರಿಯಾಗುತ್ತಾರೆ. ಸಿರಾಜ್ ಅಂಥವರು ನಾವು ಭಾರತೀಯರೆಂದು ಸಾಬೀತು ಮಾಡುತ್ತಲೇ ಇರಬೇಕಾಗುತ್ತದೆ. ಈ ಒತ್ತಡ ಬಹುಶಃ ತಂಡದ ಬೇರಾರಿಗೂ ಇರಲಾರದು.
ಉದಾಹರಣೆಗೆ ಭಾರತ-ಪಾಕಿಸ್ತಾನ ಪಂದ್ಯ ಊಹಿಸಿಕೊಳ್ಳಿ. ಕಿಕ್ಕಿರಿದ ಕ್ರೀಡಾಂಗಣ. ಪಂದ್ಯ ರೋಚಕ ಹಂತ ತಲುಪಿದೆ. ಆಗಸಕ್ಕೆ ಪಾಕಿಸ್ತಾನಿ ದಾಂಡಿಗ ಚೆಂಡು ಹೊಡೆಯುತ್ತಾನೆ. ಕೆಳಗೆ ಸಿರಾಜ್ ಆ ಚೆಂಡನ್ನು ಹಿಡಿಯಲು ಅಣಿಯಾಗಿದ್ದಾನೆ. ಆ ಕ್ಷಣ ಸಿರಾಜ್ ಮೇಲಿರುವ ಒತ್ತಡವನ್ನು ನಾವು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲವೆನಿಸುತ್ತದೆ. 1983ರ ವಿಶ್ವಕಪ್ ವೇಳೆಯಲ್ಲಿ ಕಪಿಲ್, ವಿವಿಯನ್ ರಿಚರ್ಡ್ಸ್ ಅವರ ಕ್ಯಾಚ್ ಹಿಡಿಯಲಿದ್ದ ಒತ್ತಡದ ನೂರು ಪಟ್ಟು ಎಂದುಕೊಳ್ಳಬಹುದೇನೋ. ಸಿರಾಜ್ ಕ್ಯಾಚ್ ಹಿಡಿದರೆ ಜನ ಸಂಭ್ರಮಿಸಿ ಭಾರತ ಗೆದ್ದಿತು ಎಂದು ಬೀಗುತ್ತಾರೆ. ಸಿರಾಜ್ ಕ್ಯಾಚ್ ಕೈಚೆಲ್ಲಿದರೆ ಅವರನ್ನು ಜನ ಪಾಕಿಸ್ತಾನಿ ಎಂದು ಜರೆಯಬಹುದು! ಆ ಕ್ಯಾಚ್ ಬರಿಯ ಸಿರಾಜ್ ಕ್ಷಮತೆಯನ್ನು ಅಳೆಯುವುದಿಲ್ಲ. ಅವರ ಸಮುದಾಯದ ಬದ್ಧತೆ, ರಾಷ್ಟ್ರಪ್ರೇಮದ ಮಾಪನವಾಗುತ್ತದೆ! ಇದು ಒತ್ತಡ. ಸಿರಾಜ್ ಹೊತ್ತು ಸಾಗುವ ಹೊರೆ.
ಐಪಿಎಲ್ ವೇಳೆಯಲ್ಲಿ ಕೆಲ ಜೂಜಿನ ಏಜೆಂಟ್ಗಳು ಸಿರಾಜ್ ಸಂಪರ್ಕ ಬೆಳೆಸಲು ಪ್ರಯತ್ನಿಸಿದರು. ತಂಡದ ಮಾಹಿತಿ ಹಂಚಿಕೊಂಡರೆ ಮಾಲಾಮಾಲ್ ಆಗುವೆ ಎಂದು ಆಮಿಷವೊಡ್ಡಿದರು. ಸಿರಾಜ್ ವಿಷಯವನ್ನು ಪ್ರಾಮಾಣಿಕವಾಗಿ ಬಿಸಿಸಿಐ ಭ್ರಷ್ಟ ನಿಗ್ರಹ ಘಟಕಕ್ಕೆ ಮುಟ್ಟಿಸಿದ್ದರು. ಏಜೆಂಟರು ಸಿರಾಜ್ ಅವರನ್ನೇ ಏಕೆ ಸಂಪರ್ಕಿಸಿದರು? ಏಜೆಂಟರ ಆಲೋಚನೆಗಳ ಹಿಂದಿದ್ದ ಹುನ್ನಾರ ಯಾವುದು? ಈ ಪ್ರಶ್ನೆಗಳಿಗೆ ಉತ್ತರ ಸಿಗಲಿಕ್ಕಿಲ್ಲ. ಆದರೆ ಈ ಪ್ರಶ್ನೆಗಳು ಸಿರಾಜ್ ದಿನನಿತ್ಯ ಎದುರಿಸಬಹುದಾದ ಸವಾಲುಗಳನ್ನು ಮಾತ್ರ ನಮ್ಮ ಮುಂದಿಡುತ್ತವೆ.
ನಮ್ಮ ದೇಶದ ಬಹು ಮಂದಿಗೆ ಈಚಿನ ದಿನಗಳಲ್ಲಿ, ಎಲ್ಲ ಮುಸ್ಲಿಮರ ರಾಷ್ಟ್ರೀಯತೆ, ಅವರ ಬದ್ಧತೆಯನ್ನು ಪದೇ ಪದೇ ಪ್ರಶ್ನಿಸುವುದು, ಅವರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣುವುದು, ಅನ್ಯರೆಂದು ಜರೆದು ಅವರ ಆಹಾರ, ಧಾರ್ಮಿಕ ಆಚರಣೆಗಳನ್ನು ಹೀಯಾಳಿಸುವುದು ಸರ್ವೇ ಸಾಮಾನ್ಯವಾಗಿದೆ. ಮುಸ್ಲಿಮರು ಈ ದೇಶವಾಸಿಗಳೇ, ಅವರ ಬದ್ಧತೆಯನ್ನು ಪ್ರಶ್ನಿಸುವ, ಅವರನ್ನು ಸಂದೇಹದಿಂದ ಕಾಣುವ ಅಗತ್ಯವಿಲ್ಲ ಎಂಬುದನ್ನು ಸಿರಾಜ್ ಈಗ ಮತ್ತೊಮ್ಮೆ ಏಶ್ಯ ಕಪ್ ಫೈನಲ್ನಲ್ಲಿ ತೋರಿಸಿದ್ದಾರೆ. ಸಿರಾಜ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಧರ್ಮಾಂಧ ಸಂಕುಚಿತ ಮನಸ್ಸುಗಳಿಗೆ ಮುಜುಗರ ಮೂಡಿಸುತ್ತಿರಲಿ.