ಬೀದಿ ನಾಯಿಗಳ ಹಾವಳಿ: ನಿರ್ಲಕ್ಷ್ಯ ಯಾಕೆ?

Image Source : PTI
ನಾಡಿನ ಗ್ರಾಮಾಂತರ, ಪಟ್ಟಣ ಮತ್ತು ನಗರ ಪ್ರದೇಶಗಳೆಲ್ಲೆಡೆ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಿಳಿದುಕೊಳ್ಳಲು ಅಂಕಿ- ಅಂಶ, ಪತ್ರಿಕಾ ವರದಿ ಇತ್ಯಾದಿ ಅಗತ್ಯವಿಲ್ಲ. ನಮ್ಮ ಊರಿನ ಪರಿಸರದೆಡೆಗೆ ಕಣ್ಣು, ಕಿವಿಗಳನ್ನು ಎಚ್ಚರವಾಗಿಟ್ಟರೆ ಸಾಕು. ಆದರೆ ನಾವು ಯಾವಾತ್ತೂ ಕಾರ್ಯಪ್ರವೃತ್ತರಾಗುವುದು ಅನಾಹುತಗಳಾದ ಮೇಲಲ್ಲವೇ? ಬೀದಿ ನಾಯಿಗಳ ಹಾವಳಿಯಿಂದ ಜನರ ಸಾವಿನ ಪ್ರಕರಣಗಳು ಪತ್ರಿಕೆಗಳಲ್ಲಿ ಮತ್ತೆ ಮತ್ತೆ ವರದಿಯಾಗುತ್ತಿವೆ. ಕೆಲವೊಮ್ಮೆ ರೇಬಿಸ್ ಪೀಡಿತ ನಾಯಿಗಳ ದಾಳಿಗಳ ಕುರಿತು ವರದಿಗಳಿರುತ್ತವೆ. ಆದರೆ ನಿರಂತರವಾಗಿ ನಡೆಯುವಂತಹ ಬೀದಿ ನಾಯಿ ಕಡಿತ, ಅಟ್ಟಾಡಿಸುವಿಕೆ ಇತ್ಯಾದಿ ಬಗ್ಗೆ ಹೊರಗೆ ತಿಳಿಯುವುದಿಲ್ಲ. ಪರಿಸ್ಥಿತಿ ಹೀಗಿದ್ದರೂ ಹೊಣೆಯರಿತು ಕಾರ್ಯನಿರ್ವ ಹಿಸಬೇಕಾಗಿದ್ದ ಸ್ಥಳೀಯಾಡಳಿತ ಸಂಸ್ಥೆಗಳ ನಿರ್ಲಕ್ಷ್ಯ ಮಾತ್ರ ಕಡಿಮೆಯಾದಂತಿಲ್ಲ. ಯಾಕೆ ಹೀಗಾಗುತ್ತಿದೆ?
ಕೆಲವು ದಿನಗಳ ಹಿಂದೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಐದು ವರ್ಷದ ಬಾಲಕನೊಬ್ಬ ಬೀದಿ ನಾಯಿಗಳ ದಾಳಿಗೆ ಬಲಿಯಾಗಿ ಹೋದ. ಈ ಘಟನೆಯ ವಿವರಗಳು ಮನಸ್ಸು ಕಲಕುವಂತಿತ್ತು. ಶೌಚಕ್ಕೆ ತೆರಳಿದ್ದ ತಾಯಿಯನ್ನು ಹುಡುಕುತ್ತಾ ಹೋದ ಬಾಲಕನ ಮೇಲೆ ದಾಳಿ ಮಾಡಿದ ಬೀದಿ ನಾಯಿಗಳು ಸಾಕ್ಷಾತ್ ಮೃತ್ಯು ಸ್ವರೂಪಿಗಳಾಗಿ ಬಿಟ್ಟವು. ಇದರಿಂದ ಬಾಲಕನ ಮನೆ ಮಂದಿಯ ಪಾಡು ಏನಾಗಿರಬಹುದು? ಮುಂದೆ ಮನೆಯ ಬೆಳಕಾಗಿ ಬೆಳಗಬೇಕಾಗಿದ್ದ ಬಾಲಕ ನಿಷ್ಕಾರಣವಾಗಿ ಸಾವನ್ನಪ್ಪಿದ್ದು ನೋವನ್ನು ಉಂಟು ಮಾಡುತ್ತದೆ. ಈ ಘಟನೆ ನಮ್ಮ ಕಣ್ಣು ತೆರೆಸುವಂತಾಗ ಬೇಕು.
ಬೀದಿ ನಾಯಿಗಳ ಉಪಟಳ, ದಾಳಿಗಳ ಸುದ್ದಿ ಪುನರಾವರ್ತನೆಯಾಗುತ್ತಲೇ ಇವೆ. ಎಳೆ ವಯಸ್ಸಿನ ಮಕ್ಕಳು ಬೀದಿ ನಾಯಿಗಳ ಆಕ್ರಮಣಕ್ಕೆ ಸುಲಭದಲ್ಲಿ ತುತ್ತಾಗುತ್ತಾರೆ. ಹಾಗೆಯೇ ವಯಸ್ಸಾದವರು, ದೈಹಿಕವಾಗಿ ದುರ್ಬಲರಾದವರು ಕೂಡ ತೊಂದರೆಗೆ ಒಳಗಾಗುತ್ತಾರೆ. ನಿರ್ಜನ ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದಾಡುತ್ತಿರಬೇಕಾದರೆ ಯಾವುದೋ ಒಂದು ನಾಯಿ ಬೊಗಳಿದರೆ ಸಾಕು, ಎಲ್ಲೆಲ್ಲೋ ಇರುವಂತಹ ನಾಯಿಗಳು ಒಟ್ಟು ಸೇರಿ ಸುತ್ತುವರಿದು ಬಿಡುತ್ತವೆ, ಏಕಾಂಗಿಯಾಗಿರುವವರಿಗೆ ಇದರಿಂದ ತಪ್ಪಿಸಿಕೊಳ್ಳುವುದು ಕಷ್ಟ ಸಾಧ್ಯ. ದುರ್ಬಲರಾಗಿರುವವರ ಪರಿಸ್ಥಿತಿ ಹೇಳುವುದೇ ಬೇಡ. ಅವುಗಳ ಕಡಿತಗಳಿಂದ ಬಚಾವಾಗಿ ಬಿಟ್ಟರೆ ಪುಣ್ಯ. ಮಾರಣಾಂತಿಕ ಗಾಯಗಳಾದರೆ ಜೀವಾಪಾಯ ತಪ್ಪಿದ್ದಲ್ಲ. ನಾಯಿಗಳು ವೈಯಕ್ತಿಕ ನಿಷ್ಠೆಗೆ ಹೆಸರಾದ ಪ್ರಾಣಿಗಳಾಗಿದ್ದರೂ ಆಕ್ರಮಣಕಾರಿ ಸ್ವಭಾವವನ್ನು ಹೊಂದಿರುವಂತಹದ್ದು. ಬೀದಿಗೆ ಬಿದ್ದ ನಾಯಿಗಳಂತೂ ಆಹಾರ, ಆರೈಕೆಗಳಿಲ್ಲದೆ ಗುಂಪಿನಲ್ಲಿ ಕ್ರೂರವಾಗಿ ವರ್ತಿಸುತ್ತವೆ. ಅದರಲ್ಲೂ ರೇಬಿಸ್ ಪೀಡಿತ ನಾಯಿಗಳ ನಿಯಂತ್ರಣವಿಲ್ಲದ ವರ್ತನೆ, ದಾಳಿಗಳು ಅತ್ಯಂತ ಮಾರಕವಾಗಿ ಪರಿಣಮಿಸ ಬಲ್ಲುದು.
ಕೆಲವು ಸಮಯದ ಹಿಂದೆ ಜನ ವಸತಿ ಪ್ರದೇಶದಲ್ಲಿ ಬೆಳಿಗ್ಗೆ ವಾಕ್ ಹೊರಟ ಮಹಿಳೆಯೋರ್ವರನ್ನು ಹತ್ತಾರು ಬೀದಿ ನಾಯಿಗಳು ಸುತ್ತುವರಿದು ಎಳೆದಾಡಿ ನೆಲಕ್ಕುರುಳಿಸಿ ದಾಳಿ ಮಾಡಿದಂತಹ ವೀಡಿಯೊವೊಂದು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿತ್ತು. ಕೊನೆಗೆ ಅಲ್ಲಿ ಸೇರಿಕೊಂಡ ಜನರೆಲ್ಲ ನಾಯಿಗಳನ್ನು ಓಡಿಸಲು ಹರ ಸಾಹಸ ಮಾಡಿದಂತಿತ್ತು. ಇಂತಹ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ. ಇದರಿಂದ ಸಾವುಗಳಾದರೆ ಒಮ್ಮೆ ದೊಡ್ಡ ಮಟ್ಟದ ಸುದ್ದಿಯಾಗುತ್ತವೆ. ಆದರೆ ಕಡಿತದಿಂದ ಸಣ್ಣ ಪುಟ್ಟ ಗಾಯಗಳಿಂದ ಹಿಡಿದು ಗಂಭೀರ ಗಾಯಗಳಾಗುವುದನ್ನು ತಪ್ಪಿಸುವುದು ಸಾಧ್ಯವಿಲ್ಲ. ಜನರು ಬೀದಿ ನಾಯಿ ಕಡಿತಕ್ಕೆ ರೇಬಿಸ್ ಚುಚ್ಚು ಮದ್ದನ್ನು ಕಡ್ಡಾಯವಾಗಿ ತೆಗೆದು ಕೊಳ್ಳ ಬೇಕಾಗುತ್ತದೆ. ಇಲ್ಲಿ ಎಷ್ಟೋ ಮಂದಿ ನಿರ್ಲಕ್ಷ್ಯ ಮಾಡಿ ಸಾವನ್ನು ಆಹ್ವಾನಿಸಿದ್ದೂ ಇದೆ. ಒಟ್ಟಿನಲ್ಲಿ ಬೀದಿ ನಾಯಿಗಳಿಂದ ಕಿರುಕುಳ ಮತ್ತು ಅಪಾಯ ಯಾವತ್ತೂ ತಪ್ಪಿದ್ದಲ್ಲ.
ಬೀದಿ ನಾಯಿಗಳು ಬೆಳಗ್ಗಿನ ನಡಿಗೆ ಮಾಡುವಂತಹ ವ್ಯಕ್ತಿಗಳಿಗೆ ತುಂಬಾ ಸಮಸ್ಯೆಯನ್ನು ಉಂಟು ಮಾಡುತ್ತವೆ. ಮುಖ್ಯವಾಗಿ ಒಬ್ಬೊಬ್ಬರೇ ನಡಿಗೆಯಲ್ಲಿ ತೊಡಗಿಸಿ ಕೊಂಡವರು ಭಯ ಪಟ್ಟುಕೊಂಡೇ ಹೊರಗೆ ಕಾಲಿಡುವಂತಹ ಪರಿಸ್ಥಿತಿ ಕೆಲವು ಪ್ರದೇಶಗಳಲ್ಲಿವೆ. ಏಕಾಏಕಿ ಮೈ ಮೇಲೆ ಎರಗಲು ಬರುವ ನಾಯಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ರಸ್ತೆಗೆ ಬಿದ್ದೋ ಚರಂಡಿಗೆ ಬಿದ್ದೋ ಕೈಕಾಲು ಮುರಿದುಕೊಂಡವರು ಸಾಕಷ್ಟು ಮಂದಿ ಇದ್ದಾರೆ. ದ್ವಿಚಕ್ರ ಸವಾರರಿಗಂತೂ ಬೀದಿ ನಾಯಿಗಳು ಯಮ ಸ್ವರೂಪಿಗಳಾಗಿವೆ. ಎಷ್ಟೋ ಮಂದಿ ದ್ವಿಚಕ್ರ ಸವಾರರು ಬೀದಿ ನಾಯಿಗಳಿಂದ ಪ್ರಾಣ ಕಳೆದು ಕೊಂಡಿರುವ ಉದಾಹರಣೆಗಳಿವೆ.
ಬೀದಿ ನಾಯಿಗಳ ಕಡಿತಕ್ಕೆ ಸಂಬಂಧಿಸಿದ ಕೆಲವು ಅಂಕಿ-ಅಂಶಗಳು ಪರಿಸ್ಥಿತಿಯ ಗಂಭೀರತೆಯನ್ನು ಪ್ರತಿಬಿಂಬಿಸುವಂತಿವೆ. ಸುಮಾರು ಶೇ. 96ರಷ್ಟು ನಾಯಿ ಕಡಿತವು ಬೀದಿ ನಾಯಿಗಳಿಂದ ಸಂಭವಿಸುತ್ತವೆ ಎನ್ನಲಾಗಿದೆ. ಜೊತೆಗೆ ಪ್ರಾಣಿ ಕಡಿತಗಳಲ್ಲಿ ಶೇ. 75ರಷ್ಟು ಬಡವರು ಮತ್ತು ಕಡಿಮೆ ಆದಾಯದ ಗುಂಪಿನನವರಿಗೆ ಸಂಭವಿಸುತ್ತದೆ ಎನ್ನಲಾಗುತ್ತಿದೆ. ಈ ಪ್ರಾಣಿ ಕಡಿತದ ಪ್ರಮಾಣದಲ್ಲಿ ನಾಯಿ ಕಡಿತದ್ದೇ ಸಿಂಹ ಪಾಲು ಎಂಬುದನ್ನು ಪ್ರತ್ಯೇಕವಾಗಿ ಹೇಳ ಬೇಕಾಗಿಲ್ಲ. ಎಲ್ಲಾ ರೀತಿಯ ಸಾಮಾಜಿಕ ಸಮಸ್ಯೆಗಳಲ್ಲಿ ಬಡವರ್ಗವೇ ಸಂಕಷ್ಟಕ್ಕೆ ಈಡಾಗುವಂತೆ ಇಲ್ಲಿಯೂ ಅದೇ ವರ್ಗ ಬಲಿಪಶುಗಳಾಗಿರುವುದು ನೋವಿನ ವಿಚಾರ. ಶ್ರೀಮಂತ ವರ್ಗದವರು ವಾಹನದಲ್ಲಿಯೇ ಹೆಚ್ಚಾಗಿ ಓಡಾಡುವುದರಿಂದ ಸಮಸ್ಯೆಯ ತೀವ್ರತೆ ಅವರನ್ನು ಹೆಚ್ಚಾಗಿ ತಟ್ಟುವುದಿಲ್ಲ. ಹೀಗಾಗಿ ನಮ್ಮ ನಾಯಕರಾದವರು ಮತ್ತು ಅಧಿಕಾರಿ ವರ್ಗದವರಿಗೆ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಒತ್ತಡವೂ ಕಡಿಮೆ. ಮೇಲಾಗಿ ಬೀದಿ ನಾಯಿಗಳ ಹಾವಳಿಯಿಂದ ಸಾಮೂಹಿಕವಾಗಿ ಹಾನಿಯಾಗದೇ ಬಿಡಿ ಬಿಡಿ ನೆಲೆಯಲ್ಲಿ ತೊಂದರೆಯಾಗುತ್ತಿರುವುದರಿಂದ ಸಮಸ್ಯೆ ಕಡೆಗಣಿಸಲ್ಪಡುವುದೇ ಹೆಚ್ಚು.
ಬೀದಿ ನಾಯಿಗಳ ನಿರ್ವಹಣೆ, ನಿಯಂತ್ರಣಕ್ಕೆ ಸಂಬಂಧ ಪಟ್ಟಂತೆ ಸರಕಾರದ ಕಾನೂನುಗಳು, ನ್ಯಾಯಾಲಯದ ತೀರ್ಪುಗಳೆಲ್ಲ ಸ್ಪಷ್ಟವಾಗಿಯೇ ಇವೆ. ಆದರೆ ಅವುಗಳ ಅನುಷ್ಠಾನದ ಹಂತದಲ್ಲಿ ಮಾತ್ರ ಲೋಪವಾಗುತ್ತಿವೆ. ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚು ಮದ್ದು, ಸಂತಾನ ಹರಣ ಚಿಕಿತ್ಸೆಗಳನ್ನು ಮಾಡುವಂತಹ ನಿಯಮಗಳು ಜಾರಿಯಲ್ಲಿವೆ. ಇದೆಲ್ಲವೂ ಸಮಸ್ಯೆ ಉಲ್ಬಣಿಸಿದಾಗ ಅಥವಾ ದೊಡ್ಡ ಮಟ್ಟದಲ್ಲಿ ಸುದ್ದಿಯಾದಾಗ ಒಂದು ಹಂತದವರೆಗೆ ಕ್ರಮ ಕೈಗೊಂಡು ನಂತರ ಮರೆತು ಬಿಡುವುದು ಸಾಮಾನ್ಯವೆಂಬಂತಾಗಿದೆ. ಇದನ್ನು ನಿಯಮಿತವಾಗಿ, ನಿರಂತರವಾಗಿ ಮಾಡಿ ನಿಯಂತ್ರಣ ಸಾಧಿಸುವುದು ಅತ್ಯಗತ್ಯ. ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಸ್ಥಳೀಯಾಡಳಿತದ ಜವಾಬ್ದಾರಿಯಾಗಿದೆ. ಆದರೆ ಈ ನಿಟ್ಟಿನಲ್ಲಿ ದಯನೀಯ ವೈಫಲ್ಯವೇ ಸಮಸ್ಯೆಯ ಮೂಲ. ಈ ಸಮಸ್ಯೆಯಲ್ಲಿ ಜನತೆಯ ಪಾಲೂ ಇದೆ. ಆಹಾರ ತ್ಯಾಜ್ಯಗಳನ್ನು ರಸ್ತೆಗಳಿಗೆ ಚೆಲ್ಲುವುದು, ಮನೆ ನಾಯಿಗಳನ್ನು ಬೀದಿಗೆ ತಳ್ಳುವುದು ಇತ್ಯಾದಿ ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡಿದೆ. ಆದ್ದರಿಂದ ಜನತೆ ಮತ್ತು ಸ್ಥಳೀಯಾಡಳಿತದ ಸಹಕಾರ, ಸಹಭಾಗಿತ್ವದಲ್ಲಿ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವೆನ್ನಬಹುದು.