‘ವಾರ್ತಾಭಾರತಿ’ಯಿಂದ ಪ್ರಜಾಪ್ರಭುತ್ವ ಬಲವರ್ಧನೆ
- ಕೃಷ್ಣ ಮೂಲ್ಯ
ಕರಾವಳಿ ಕರ್ನಾಟಕ ಮಂಗಳೂರಿನಲ್ಲಿ 20 ವರ್ಷಗಳ ಹಿಂದೆ ಆರಂಭಗೊಂಡ ‘ವಾರ್ತಾಭಾರತಿ’ ದಿನಪತ್ರಿಕೆ ಕನ್ನಡಿಗರ ಪ್ರೀತಿ, ನಂಬಿಕೆಗೆ ಪಾತ್ರವಾಗಿದೆ. ಜನ ಸಮುದಾಯದಲ್ಲಿ ಬಲವಾಗಿ ಬೇರೂರಿದೆ. ಅಷ್ಟೇ ಅಲ್ಲ, ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಪತ್ರಿಕಾ ಮಾಧ್ಯಮವು ಪ್ರಜೆಗಳಲ್ಲಿ ಜಾಗೃತಿ, ಶಿಕ್ಷಣ, ಸಬಲೀಕರಣ ಮತ್ತು ಹಿತರಕ್ಷಣೆಗೆ ನೆರವಾಗುತ್ತಾ ಪ್ರಜಾಪ್ರಭುತ್ವದ ಬಲವರ್ಧನೆಗೂ ಮಿಷನ್ ಮೋಡ್ನಲ್ಲಿ ನಿಸ್ವಾರ್ಥವಾಗಿ ಮತ್ತು ನಿರ್ಭಯವಾಗಿ ಕೆಲಸ ಮಾಡುವುದು ಅಗತ್ಯವಾಗಿದೆ. ಇಂದು ಕೆಲವು ಮಾಧ್ಯಮಗಳು ಉದ್ಯಮವಾಗಿ ಪರಿವರ್ತನೆಗೊಂಡು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಮೂಲ ಆಶಯವನ್ನು ಮರೆತಿದ್ದರೂ ‘ವಾರ್ತಾಭಾರತಿ’ ಮಾತ್ರ ಪತ್ರಿಕಾ ಮಾಧ್ಯಮದ ಆಶಯದಂತೆ ಜನ ಸಮುದಾಯಕ್ಕೆ ವಸ್ತುನಿಷ್ಠ ವರದಿ, ಸುದ್ದಿ, ಮಾಹಿತಿಗಳನ್ನು ಒದಗಿಸುತ್ತಿದೆ. ಜನರ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯುತ್ತಾ ಜನರಲ್ಲಿ ಅರಿವು, ಪ್ರಗತಿಪರ ಚಿಂತನೆ ಮೂಡಿಸುತ್ತಾ ಆಡಳಿತ ಮತ್ತು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯ ಪಾಲುದಾರಿಕೆ ವಹಿಸುತ್ತಿದೆ. ಮತದಾರರ ಜಾಗೃತಿ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಯೊಂದಿಗೆ ಉತ್ತಮ ಆಡಳಿತ, ಅಭಿವೃದ್ಧಿ, ಸಾಮಾಜಿಕ ನ್ಯಾಯದ ಗುರಿ ಸಾಧನೆಗೆ ಸಹಕರಿಸುತ್ತಿರುವ ‘ವಾರ್ತಾಭಾರತಿ’ ಮುಂದಿನ ದಿನಗಳಲ್ಲೂ ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸಿ ಪ್ರಜಾಪ್ರಭುತ್ವವನ್ನು ಉಳಿಸಿ, ಬೆಳೆಸಿ ಬಲಪಡಿಸಲು ಪೂರಕ ಮತ್ತು ಪ್ರೇರಕ ವಾತಾವರಣ ನಿರ್ಮಿಸುವಲ್ಲಿ ನಿಷ್ಪಕ್ಷಪಾತ, ನಿರ್ಭೀತ, ಸತ್ಯದ, ಸತ್ವದ ಜನರ ಶಕ್ತಿಯ ಪತ್ರಿಕೆಯಾಗಿ ಬೆಳೆದು ಬರಲಿ ಎಂದು ಹಾರೈಸುತ್ತೇನೆ.