‘ವಾರ್ತಾಭಾರತಿ’ಯ ಬೆಳವಣಿಗೆ ‘ಕಾಲುದಾರಿ’ ಪತ್ರಿಕೋದ್ಯಮಕ್ಕೆ ಹರ್ಷ ತರುವ ಸಂಗತಿ
ಜನದನಿಯ ಸಾರಥಿ ಎಂಬ ವಿಶೇಷಣವನ್ನು ತನ್ನ ಹೆಸರಿನಡಿಯಲ್ಲಿ ಹೊತ್ತಿರುವ ‘ವಾರ್ತಾಭಾರತಿ’ 20 ವರ್ಷ ಪೂರೈಸಿರುವುದು ಸಂತಸದ ವಿಷಯ. ಇದು ಸಂತಸದ ವಿಷಯ ಮಾತ್ರವಲ್ಲ, ಗಮನಾರ್ಹ ವಿಷಯ ಕೂಡ. ‘ವಾರ್ತಾಭಾರತಿ’ ಅಂತಹ ದಢೂತಿ ಪತ್ರಿಕಾ ಸಂಸ್ಥೆಯೇನಲ್ಲ. ಭಾರೀ ಭಾರೀ ಪತ್ರಿಕಾ ಸಂಸ್ಥೆಗಳೇ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಡಿಜಿಟಲ್ ಮಾಧ್ಯಮಗಳ ಭರಾಟೆಯಲ್ಲಿ ತಮ್ಮ ಮುದ್ರಣ ಮಾಧ್ಯಮದ ಆವೃತ್ತಿಗಳನ್ನು ಕಾಪಾಡಿಕೊಳ್ಳಲು ಕಷ್ಟ ಪಡುತ್ತಿರುವುದು ಗೊತ್ತಿರುವ ಸಂಗತಿಯೇ. ಅಂತಹದರಲ್ಲಿ ‘ವಾರ್ತಾಭಾರತಿ’ ತನ್ನ ಮೂರು ಆವೃತ್ತಿಗಳನ್ನು ನಿರಂತರವಾಗಿ ಪ್ರಕಟಗೊಳಿಸುತ್ತಾ ಇರುವುದು ಒಂದು ರೀತಿಯಲ್ಲಿ ‘ಕಾಲುದಾರಿ’ ಪತ್ರಿಕೋದ್ಯಮಕ್ಕೆ ಹರ್ಷ ತರುವ ಸಂಗತಿಯಾಗಿದೆ.
ಕನ್ನಡದಲ್ಲಿ ಜನಪರ ಧೋರಣೆ ಹೊಂದಿರುವ ಮುಖ್ಯ ವಾಹಿನಿಯ ಕೆಲವು ದಿನಪತ್ರಿಕೆಗಳಿವೆ. ಆದರೆ ಮಾರುಕಟ್ಟೆಯಲ್ಲಿ ಅದರಲ್ಲೂ ಜಾಹೀರಾತು ಪೈಪೋಟಿಯಲ್ಲಿ ಉಳಿದುಕೊಳ್ಳುವುದಕ್ಕಾಗಿ ‘ಮಧ್ಯಮ ಮಾರ್ಗ’ ಧೋರಣೆಯನ್ನು ಅನುಸರಿಸಬೇಕಾದ ಅನಿವಾರ್ಯತೆಗೆ ಗುರಿಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಪತ್ರಿಕಾ ಬಳಗದಲ್ಲಿ ಬಹಳಷ್ಟು ಪ್ರಗತಿಪರ ವಾದಿಗಳು ಇರಬಹುದು. ಆದರೆ ಅವರ ನಿಲುವು ವ್ಯಕ್ತಪಡಿಸಲು ಮಾಲಕರ ಸಮ್ಮತಿ ಇರಬೇಕಲ್ಲ! ಮಾಲಕರಿಗೂ ಇದೇ ಜನಪರ ಧೋರಣೆ ಇರಬಹುದು ಆದರೆ ಮಾರುಕಟ್ಟೆ ಅವರ ಕೈಗಳನ್ನು ಕಟ್ಟಿ ಹಾಕದೆ ಬಿಡುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪ್ರಸಾರದಲ್ಲಿ ನಂಬರ್ ಒನ್ ಅಲ್ಲದಿದ್ದರೂ ತನ್ನ ಜನಪರ ಧೋರಣೆಯಲ್ಲಿ ನಂಬರ್ ಒನ್ ಆಗಿರಲು ‘ವಾರ್ತಾಭಾರತಿ’ ಸದಾ ಪ್ರಯತ್ನಿಸುತ್ತಾ ಬಂದಿರುವುದನ್ನು ಓದುಗರು ಖಂಡಿತ ಗಮನಿಸಿರುತ್ತಾರೆ.
ಇದನ್ನು ಬರೀ ಪರ್ಯಾಯ ಪತ್ರಿಕೋದ್ಯಮ ಎಂದು ಬಿಡಲು ಸಾಧ್ಯವಿಲ್ಲ. ಈ ಮೊದಲು ದಿನಪತ್ರಿಕೆಗಳು ವಿವರಿಸಲಾಗದ ವಿಷಯಗಳನ್ನು ವಿಶ್ಲೇಷಿಸಿ ಜನರಿಗೆ ತಲುಪಿಸಲು ಟ್ಯಾಬ್ಲಾಯ್ಡಾ ಪತ್ರಿಕೆಗಳಿದ್ದವು. ಈಗಲೂ ಕೆಲವು ಟ್ಯಾಬ್ಲಾಯ್ಡಾ ಪತ್ರಿಕೆಗಳಿವೆ. ಆದರೆ ಅವು ಲಂಕೇಶರಿದ್ದ ಕಾಲದ ಅಥವಾ ನಂತರದಲ್ಲಿ ಗೌರಿ ಲಂಕೇಶರಿದ್ದ ಅಥವಾ ‘ಅಗ್ನಿ’ ವಾರ ಪತ್ರಿಕೆ ಪ್ರಕಟವಾಗುತ್ತಿದ್ದ ಕಾಲದ ಕಾಳಜಿಗಳನ್ನು ಹೊಂದಿವೆ ಎನ್ನಲಾಗದು. ಪರ್ಯಾಯ ಧೋರಣೆ ಎನ್ನುವುದು ಸಹಜವಾಗಿ ಮುಖ್ಯವಾಹಿನಿ ರಾಜಕೀಯ ಮತ್ತು ಶಿಷ್ಟ ಸಂಸ್ಕೃತಿ ನಿಲುವಿನ ಬಗ್ಗೆ ವಿಮರ್ಶಾತ್ಮಕ ನಿಲುವನ್ನು ಹೊಂದಿರುತ್ತದೆ. ತಾನು ಪ್ರಕಟಿಸುವ ಪ್ರತೀ ಸುದ್ದಿ ಮತ್ತು ಸುದ್ದಿ ವಿಶ್ಲೇಷಣೆ ಅಥವಾ ಸಂಪಾದಕೀಯ ನಿಲುವು, ಲೇಖನಗಳು, ಅಂಕಣಗಳು ಪ್ರತಿಯೊಂದು ಕೂಡ ಜನಮುಖಿಯಾದ ಸಂಸ್ಕೃತಿ, ಬಹುತ್ವದ ಪರವಾದ, ನೊಂದ-ದಮನಕ್ಕೀಡಾದ ಜನರ ಪರವಾಗಿರುವಂತೆ ಕಾಳಜಿ ವಹಿಸುವ ಮೂಲಕ ‘ವಾರ್ತಾಭಾರತಿ’ ಕರ್ನಾಟಕದ ಬಹುಪಾಲು ‘ವ್ಯವಸ್ಥೆ ವಿರೋಧಿ’ ನಿಲುವುಗಳಿಗೆ ವೇದಿಕೆಯಾಗಿರುವುದು ಅದರ ವಿಶೇಷತೆ.
ಪರ್ಯಾಯ ಪತ್ರಿಕೋದ್ಯಮ, ಕಾಲುದಾರಿ ಪತ್ರಿಕೆಗಳು ಮೊದಲಿನಿಂದಲೂ ಕರ್ನಾಟಕದಲ್ಲಿ ಇಂತಹದೊಂದು ಪಾತ್ರ ನಿರ್ವಹಿಸುತ್ತಾ ಬಂದಿದೆ. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ, ಕರ್ನಾಟಕ ಏಕೀಕರಣ ಸಂದರ್ಭದಲ್ಲಿ, ತುರ್ತು ಪರಿಸ್ಥಿತಿಯ ಕಾಲದಲ್ಲಿ ಕಾಲಕಾಲಕ್ಕೆ ಪ್ರತಿಭಟನೆಯ ನ್ಯಾಯಪರ ನಿಲುವುಗಳಿಗೆ ದನಿಯೊದಗಿಸಿದ್ದು ಪರ್ಯಾಯ ಪತ್ರಿಕೋದ್ಯಮವೇ. ಅವುಗಳ ಪ್ರಸಾರ ಸಂಖ್ಯೆ ಲಕ್ಷಗಳನ್ನು ಮುಟ್ಟಿರಲಿಲ್ಲ. ಆದರೆ ಪರಿಣಾಮದ ದೃಷ್ಟಿಯಿಂದ ಮಾತ್ರ ಲಕ್ಷಾಂತರ ಜನರನ್ನು ಪ್ರಭಾವಿಸಿದ ಹಿರಿಮೆ ಅವುಗಳಿಗಿದೆ. ರಾಜಕೀಯ ಹೋರಾಟಗಳಿಗೆ ಮಾತ್ರವಲ್ಲದೆ ಸಾಹಿತ್ಯ-ಸಂಸ್ಕೃತಿ -ಕಲೆ-ಸಿನೆಮಾಗಳಿಗೂ ಇಂತಹ ಪರ್ಯಾಯ ಪತ್ರಿಕೆಗಳೇ ವೇದಿಕೆ ಒದಗಿಸಿದ್ದು. ನವ್ಯ ಸಾಹಿತ್ಯ, ದಲಿತ-ಬಂಡಾಯ ಸಾಹಿತ್ಯ ಇವುಗಳ ಬೆಳವಣಿಗೆಯ ಹಿಂದೆ ಮುಖ್ಯವಾಹಿನಿಗೆ ಸೇರಿರದ ಹವ್ಯಾಸಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾಗಿತ್ತು.
ಇಂತಹ ಪರಂಪರೆಯನ್ನು ‘ವಾರ್ತಾಭಾರತಿ’ ಬಹಳ ಅರ್ಥಪೂರ್ಣವಾಗಿ ಮುಂದುವರಿಸುತ್ತಿದೆ ಎಂಬುದು ಗಮನಾರ್ಹ ಸಂಗತಿ. ಇದು ಹಾಗೆ ನೋಡಿದರೆ ಮುಖ್ಯ ವಾಹಿನಿ ಪತ್ರಿಕೆಯಲ್ಲ ಎನ್ನಲೂ ಬರುವುದಿಲ್ಲ. ಇದು ಹವ್ಯಾಸಿ ಪತ್ರಿಕೆ ಹಂತವನ್ನು ಮೀರಿ ಮುಖ್ಯವಾಹಿನಿ ಪತ್ರಿಕೋದ್ಯಮದಲ್ಲೇ ತನ್ನ ಯಶಸ್ಸನ್ನು ದಾಖಲಿಸುತ್ತಾ, ಕನ್ನಡ ರಾಜ್ಯಮಟ್ಟದ ಪ್ರಸಾರದ ವ್ಯಾಪ್ತಿಯುಳ್ಳ ದಿನಪತ್ರಿಕೆ ಎಂದಾಗಿರುವುದು ಮೆಚ್ಚ್ಚುಗೆ ಹುಟ್ಟಿಸುವ ವಿಷಯ. ಅನ್ಯಾಯ ನಡೆದಾಗ, ನ್ಯಾಯಕ್ಕಾಗಿ ಆಗ್ರಹಿಸುವಾಗ ಜನಮುಖಿಯಾದ ಪ್ರಜಾಪ್ರಭುತ್ವ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸಬೇಕಾದ ಸಂದರ್ಭ ಬಂದಾಗ ಕನ್ನಡದ ಮುಖ್ಯ ಬರಹಗಾರರು, ಚಿಂತಕರಿಗೆ ತಪ್ಪದೆ ‘ವಾರ್ತಾಭಾರತಿ’ ನೆನಪಾಗುತ್ತದೆ ಎಂಬುದೇನೂ ಸಣ್ಣ ಸಂಗತಿಯಲ್ಲ.
ಹಿರಿಯ ಲೇಖಕರಿಗೆ ಅವಕಾಶ ಕೊಟ್ಟಂತೆಯೇ ಕಿರಿಯ ಲೇಖಕರನ್ನೂ ಬೆಂಬಲಿಸಿ ಬೆಳಕಿಗೆ ತರುತ್ತಿರುವ ‘ವಾರ್ತಾಭಾರತಿ’ ಪಕ್ಷಪಾತವಿಲ್ಲದ, ಪೂರ್ವಾಗ್ರಹ ಪೀಡಿತವಲ್ಲದ, ಆಳುವ ಸರಕಾರಗಳ ಮುಲಾಜಿಗೆ ಕಾಯದೆ ತಾನು ನಂಬಿದ ಮಾರ್ಗದಲ್ಲಿ ನಡೆಯುತ್ತಿರುವುದರಿಂದಲೇ ಅದು ಕೇಳಿಸಿಕೊಳ್ಳಬೇಕಾದ ದನಿಯಾಗಿ, ಓದಬೇಕಾದ ಸುದ್ದಿಗಳಿರುವ ಪತ್ರಿಕೆಯಾಗಿ ಸಾರ್ಥಕತೆ ಕಾಣುವತ್ತ ಸಾಗಿದೆ.
ಅದರ ಮುಕ್ತ ಮನೋಸ್ಥಿತಿ ಹಾಗೂ ತಾರತಮ್ಯವಿಲ್ಲದ ವಿವೇಚನೆ ಹೀಗೆಯೇ ಮುಂದುವರಿಯುವುದು ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ ವಾತಾವರಣಕ್ಕೆ ತುಂಬಾ ಅಗತ್ಯ. ಅದು ತನ್ನ ಹಾದಿಯಲ್ಲಿ ಹೀಗೆಯೇ ಮುಂದುವರಿಯುತ್ತಿರಲಿ ಹಾಗೂ ಯಶಸ್ಸು ಪಡೆಯಲಿ ಎಂಬುದು ನನ್ನ ಹಾಗೂ ನನ್ನಂತಹ ಹಲವರ ಅಪೇಕ್ಷೆ ಮತ್ತು ಹಾರೈಕೆ.