ಆದಿವಾಸಿಗಳಿಗೆ ತಲುಪದ ಸ್ವಾತಂತ್ರ್ಯದ ಬೆಳಕು
ವಿದ್ಯುತ್, ರಸ್ತೆ ಸೌಲಭ್ಯಕ್ಕಾಗಿ ಕಾಯುತ್ತಿದ್ದಾರೆ ಕುದುರೆಮುಖ ರಾ. ಉದ್ಯಾನವನದ ಒಳಗಿನ ನಿವಾಸಿಗಳು
ಬೆಳ್ತಂಗಡಿ, ಆ.೧೪: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ನಾವು ವಿಶ್ವ ಗುರುವಾಗುವ ಬಗ್ಗೆ ಮಾತನಾಡುತ್ತಿರುವಾಗಲೂ ಬೆಳ್ತಂಗಡಿ ತಾಲೂಕಿನ ನೂರಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಇನ್ನೂ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಬದುಕು ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ೮ ಗ್ರಾಮಗಳಲ್ಲಿ ಸುಮಾರು ೧೨೦ ಕುಟುಂಬಗಳಿಗೆ ಇನ್ನೂ ವಿದ್ಯುತ್ ತಲುಪಿಲ್ಲ. ಇವರು ವಾಸಿಸುವ ಪ್ರದೇಶಗಳಿಗೆ ಇನ್ನೂ ಸಮರ್ಪಕವಾದ ರಸ್ತೆಗಳಿಲ್ಲ. ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳಿಂದಲೂ ವಂಚಿತರಾಗಿ ಬದುಕನ್ನು ನಡೆಸುತ್ತಿದ್ದಾರೆ. ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನ ವನದೊಳಗೆ ಬದುಕು ಕಟ್ಟಿಕೊಂಡ ಆದಿವಾಸಿಗಳ ಸಂಕಷ್ಟದ ಕಥೆ.
ಬೆಳ್ತಂಗಡಿ ತಾಲೂಕಿನ ನಾರಾವಿ, ಕುತ್ಲೂರು, ಸುಲ್ಕೇರಿ ಮೊಗ್ರು, ನಾವರ, ಶಿರ್ಲಾಲು, ಸವಣಾಲು, ನಡ, ನಾವೂರು, ಮಲವಂತಿಗೆ ಹೀಗೆ ೯ ಗ್ರಾಮಗಳಲ್ಲಿ ಕುದುರೆಮುಖ ರಾ. ಉದ್ಯಾನವನ ಆವರಿಸಿಕೊಂಡಿದ್ದು, ತಲತಲಾಂತರದಿಂದ ಈ ಉದ್ಯಾನವನದೊಳಗೆ ಬದುಕನ್ನು ನಡೆಸುತ್ತಾ ಬಂದಿದ್ದ ಆದಿವಾಸಿಗಳು ಇದೀಗ ಕಾನೂನುಗಳಿಂದಾಗಿ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
೨ ದಶಕದ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾಗುವುದರೊಂದಿಗೆ ಇವರ ಸಂಕಷ್ಟದ ಬದುಕೂ ಆರಂಭಗೊಂಡಿದೆ. ಆರಂಭದಲ್ಲಿ ಉದ್ಯಾನವನದೊಳಗಿರುವ ಎಲ್ಲರನ್ನೂ ಒಕ್ಕಲೆಬ್ಬಿಸಲು ಸರಕಾರ ಮುಂದಾಗಿತ್ತು. ಆದರೆ ಆ ವೇಳೆಗೆ ಅಲ್ಲಿ ಆದಿವಾಸಿಗಳ ಪರ ನಕ್ಸಲ್ ಹೋರಾಟ ರೂಪುಗೊಂಡಿತ್ತು. ಆದಿವಾಸಿ ಯುವಕರೂ ಇದರ ಭಾಗವಾಗಿ ಜೀವ ಕಳೆದುಕೊಂಡರು. ಆ ವೇಳೆಗೆ ಎಚ್ಚೆತ್ತುಕೊಂಡ ಸರಕಾರ ಆದಿವಾಸಿಗಳಿಗೆ ಇಲ್ಲಿಯೇ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿತು. ನಕ್ಸಲ್ ಪ್ಯಾಕೇಜ್ಗಳು ಘೋಷಣೆಯಾದವು. ಬಳಿಕ ನಿಲುವು ಬದಲಿಸಿದ ಸರಕಾರ ಪುನರ್ವಸತಿಯ ಭರವಸೆ ನೀಡಿತ್ತು. ಸೂಕ್ತ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸುವುದಾಗಿ ತಿಳಿಸಿ ಅನುದಾನ ಬಿಡುಗಡೆಯೂ ಮಾಡಿತ್ತು. ಈ ವೇಳೆ ಬೆರಳೆಣಿಕೆಯ ಕುಟುಂಬಗಳು ಅರಣ್ಯದಿಂದ ಹೊರಬಂದರು. ಕೆಲವರಿಗೆ ಸೂಕ್ತ ಪರಿಹಾರ ದೊರೆತರೆ ಇನ್ನೂ ಹಲವು ಕುಟುಂಬಗಳು ವಂಚನೆಗೆ ಒಳಗಾದವು.
ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದ ಬಳಿಕ ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಈ ಪ್ರದೇಶಗಳಲ್ಲಿ ಅಭಿವೃದ್ಧಿ ನಡೆಸಬಹುದು ಎಂದು ಸರಕಾರಗಳು, ಅಧಿಕಾರಿಗಳು ಆಗಾಗ ಭರವಸೆಗಳನ್ನು ನೀಡುತ್ತಾರೆ. ಆದರೆ ಈ ಕಾಯ್ದೆ ಅಡಿಯಲ್ಲಿ ಇನ್ನೂ ಇಲ್ಲಿ ಅಭಿವೃದ್ಧಿ ಆಗಿಲ್ಲ ಎಂಬುದು ಸತ್ಯ. ಅರಣ್ಯ ಹಕ್ಕು ಕಾಯ್ದೆಯ ಮೂಲಕ ತಮಗೂ ವಿದ್ಯುತ್ ಲಭಿಸಲಿದೆ. ತಮ್ಮ ಪ್ರದೇಶಗಳೂ ಅಭಿವೃದ್ಧಿಯಾಗಲಿದೆ ಎಂದು ಇವರು ದಶಕದಿಂದ ನಿರಂತರ ತಮ್ಮ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ಅವರ ಪ್ರಯತ್ನಗಳೆಲ್ಲವೂ ವಿಫಲವಾಗುತ್ತಿದೆ.
ನಾರಾವಿ ಗ್ರಾಪಂ ವ್ಯಾಪ್ತಿಯ ಕುತ್ಲೂರು ನಕ್ಸಲ್ ಹೋರಾಟದ ಮೂಲಕ ದೇಶದ ಗಮನಸೆಳೆದ ಗ್ರಾಮ. ಇಲ್ಲಿನ ಇಬ್ಬರು ಯುವಕರು ನಕ್ಸಲ್ ಚಳವಳಿಯ ಭಾಗವಾಗಿ ಜೀವ ಕಳೆದುಕೊಂಡರು. ಇಲ್ಲಿಯ ವಿಠಲ ಮಲೆಕುಡಿಯ ಎಂಬ ಯುವಕನಿಗೆ ನಕ್ಸಲ್ ಪಟ್ಟ ಕಟ್ಟಿದ್ದರೂ ಅದರಿಂದ ಅವರು ಮುಕ್ತರಾಗಿ ಹೊರಬಂದರು. ರಾಷ್ಟ್ರೀಯ ಉದ್ಯಾನವನದೊಳಗೆ ಅಲಂಬ, ಬರೆಂಗಾಡಿ, ಪಂಜಾಲು, ಅಂಜರೊಟ್ಟು ಪ್ರದೇಶದಲ್ಲಿ ಇದೀಗ ೨೭ಆದಿವಾಸಿಕುಟುಂಬಗಳು ಹಾಗೂ ಮೂರು ಇತರ ಕುಟುಂಬಗಳು ಸೇರಿದಂತೆ ೩೦ ಕುಟುಂಬಗಳು ವಾಸಿಸುತ್ತಿದೆ.ಎಲ್ಲ ಮೂಲಭೂತ ಸೌಲಭ್ಯಗಳಿಂದಲೂ ವಂಚಿತರಾಗಿರುವ ಇವರು ಇನ್ನೂ ಕತ್ತಲೆಯಲ್ಲೇ ಬದುಕು ಸಾಗಿಸುತ್ತಿದ್ದಾರೆ. ನಾರಾವಿ ಗ್ರಾಮದ ಮಾಪಾಲು ಪರಿಸರದಲ್ಲಿಯೂ ೪ ಕುಟುಂಬಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅರಣ್ಯ ಹಕ್ಕಿನಲ್ಲಿ ವಿದ್ಯುತ್ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಕನಿಷ್ಠ ಅರ್ಜಿ ಸಲ್ಲಿಕೆಯ ಕಾರ್ಯವೂ ಇನ್ನೂ ನಡೆದಿಲ್ಲ.
ನಾವೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವನದೊಳಗೆ ಪಂಜಾಲ, ಎರ್ಮಲೆ, ಪುಳಿತ್ತಡಿ, ಕಾಸರೋಳಿ, ಮಲ್ಲ ಪ್ರದೇಶಗಳಲ್ಲಿ ೨೦ ಆದಿವಾಸಿ ಕುಟುಂಬಗಳು ವಾಸಿಸುತ್ತಿದೆ. ಇಲ್ಲಿನ ನಿವಾಸಿಗಳಿಗೆ ಇನ್ನೂ ವಿದ್ಯುತ್ ಬಂದಿಲ್ಲವಾದರೂ, ಇವರೆಲ್ಲರ ಮನೆಗಳಿಗೂ ಮೀಟರ್ ಬಂದಿದೆ ಎಂಬುದು ವಿಶೇಷ. ಇವರ ಮನೆಗಳಿಗೆ ಮೀಟರ್ ಹಾಕಿ ಐದು ವರ್ಷಗಳು ಕಳೆದಿದೆ. ೨೦೧೮ರ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಗ್ರಾಪಂನಿಂದ ಮೀಟರ್ ಅಳವಡಿಕೆ ಕಾರ್ಯ ನಡೆದಿತ್ತು. ಇಲ್ಲಿನ ಜನರನ್ನು ಅಣಕಿಸುತ್ತಾ ಈ ಮೀಟರ್ಗಳು ಗೋಡೆಗಳ ಮೇಲೆ ರಾರಾಜಿಸುತ್ತಿವೆ. ಕಾನೂನು ಪ್ರಕಾರ ಇನ್ನೂ ಇವರಿಗೆ ವಿದ್ಯುತ್ ಸಂಪರ್ಕಕ್ಕಾಗಿ ಯಾರೂ ಅರಣ್ಯಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಿಲ್ಲ.
ಅಳದಂಗಡಿ ಗ್ರಾಪಂ ವ್ಯಾಪ್ತಿಯ ಸುಲ್ಕೇರಿ ಮೊಗ್ರು ಗ್ರಾಮದ ಮಾಳಿಗೆ, ಬಲ್ಯ, ಬೊಟ್ಟಿಹಿತ್ತಿಲು ಪ್ರದೇಶದ ನಿವಾಸಿಗಳ ಬದುಕೂ ಇದರಿಂದ ಭಿನ್ನವಾಗಿಲ್ಲ. ಇಲ್ಲಿ ೧೦ ಆದಿವಾಸಿ ಕುಟುಂಬಗಳು ಹಾಗೂ ೧೫ ಇತರ ಜಾತಿಯವರ ಕುಟುಂಬಗಳೂ ಇವೆ. ಇವರು ವಿದ್ಯುತ್ಗಾಗಿ ನಡೆಸಿದ ಹೋರಾಟವೇ ಒಂದು ದೊಡ್ಡ ಕಥೆ. ಈಗಾಗಲೇ ಇವರು ಲಕ್ಷಾಂತರ ರೂ. ಹಣವನ್ನು ಖರ್ಚು ಮಾಡಿದ್ದಾರೆ. ಆದರೆ ವಿದ್ಯುತ್ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಅರಣ್ಯ ಹಕ್ಕಿನ ಮೂಲಕ ವಿದ್ಯುತ್ ಪಡೆಯಬಹುದು ಎಂದು ಇವರು ಇಲಾಖೆಗಳನ್ನು ಸಂಪರ್ಕಿಸಿದರೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಯಾರಿಗೂ ಮಾಹಿತಿಯೇ ಇಲ್ಲ. ಕೊನೆಗೂ ಇಲ್ಲಿನ ನಿವಾಸಿಗಳೆಲ್ಲ ಸೇರಿ ಖಾಸಗಿಯವರ ಮೂಲಕ ೫೦ ಸಾವಿರ ರೂ. ಖರ್ಚು ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರು. ಕಳೆದ ೬ ವರ್ಷಗಳಿಂದ ಇವರು ಇದಕ್ಕಾಗಿ ಅಲೆಯುತ್ತಲೇ ಇದ್ದಾರೆ. ದಿಲ್ಲಿಗೂ ಹಲವು ಬಾರಿ ಹೋಗಿ ಬಂದರು. ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಅನುಮೋದನೆ ಸಿಕ್ಕಿದೆ. ಆದರೆ ಅರಣ್ಯ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಮೋದನೆ ದೊರೆಯಲಿಲ್ಲ.
ನಾವರ ಗ್ರಾಮದ ಕಲ್ಲಂಡ, ಕೇಡೇಲು, ಕಂಬುಜೆ ಪರಿಸರದಲ್ಲಿ ೬ ಆದಿವಾಸಿ ಕುಟುಂಬಗಳು ವಾಸಿಸುತ್ತಿದೆ.
ಇವರೂ ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ೫೦ ಸಾವಿರ ರೂ. ಖರ್ಚು ಮಾಡಿ ಖಾಸಗಿ ವ್ಯಕ್ತಿಗಳ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ ತಾಂತ್ರಿಕ ಕಾರಣದಿಂದಾಗಿ ಅರ್ಜಿ ಸ್ವೀಕಾರವಾಗಿಲ್ಲ ಮತ್ತೆ ಅರ್ಜಿ ಸಲ್ಲಿಸಲು ಹಣ ಖರ್ಚು ಮಾಡುವ ಶಕ್ತಿಯೂ ಇವರಿಗಿಲ್ಲವಾಗಿದೆ.
ಮಲವಂತಿಗೆ ಗ್ರಾಮದಲ್ಲಿಯೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬಂಗೇರಪಳ್ಕೆ, ತಿಮ್ಮಯ್ಯ ಕಂಡ, ಸುರುಳಿ, ಕುದ್ಕೋಳಿ, ಪಾತಳಿಕೆ, ಬೊಳ್ಳಿ ಪರಿಸರದಲ್ಲಿ ಸುಮಾರು ೨೦ಕ್ಕೂ ಅಧಿಕ ಕುಟುಂಬಗಳು ರಸ್ತೆ ವಿದ್ಯುತ್ ಸಂಪರ್ಕ ಇಲ್ಲದೆ ಬದುಕನ್ನು ನಡೆಸುತ್ತಿದ್ದಾರೆ.
ಇವರಿಗೆ ನೆರವಾಗಬಹುದಾಗಿದ್ದ ಬಹು ನಿರೀಕ್ಷೆಯ ದಿಡುಪೆಯಿಂದ ಸಂಸೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ೪ ವರ್ಷದ ಹಿಂದೆ ಶಾಸಕರ ನೇತೃತ್ವದಲ್ಲಿ ಶಿಲಾನ್ಯಾಸ ನಡೆದರೂ ಅದು ಎಂದೆಂದಿಗೂ ನಡೆಯದ ಕಾಮಗಾರಿಯಾಗಿಯೇ ಉಳಿದಿದೆ.
ಆದಿವಾಸಿಗಳು ತಮಗೆ ವಿದ್ಯುತ್ ಹಾಗೂ ರಸ್ತೆಯನ್ನು ಕೊಡಿ ಎಂಬ ಬೇಡಿಕೆ ಮಾತ್ರ ಸರಕಾರದ ಮುಂದಿಡುತ್ತಿದ್ದಾರೆ. ಆದರೆ ಅದನ್ನು ಒದಗಿಸಲು ಸರಕಾರಗಳು, ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ನಕ್ಸಲ್ ಪ್ಯಾಕೇಜ್ನ ದಿನಗಳಿಂದ ಹಲವು ಬಾರಿ ಇವರಿಗೆ ಸೋಲಾರ್ ದೀಪಗಳನ್ನು ನೀಡಲಾಗಿತ್ತು. ಆದರೆ ಅದು ಹೆಚ್ಚು ಪ್ರಯೋಜನಕಾರಿಯಾಗುತ್ತಿಲ್ಲ. ಆಗಾಗ ಸೋಲಾರ್ ಹಾಳಾಗುತ್ತಿದೆ. ಮಳೆಗಾಲದಲ್ಲಂತೂ ಅದು ಪ್ರಯೋಜನಕ್ಕೆ ಬಾರದು. ತಮಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿ ಎಂಬುದು ಇವರ ಒತ್ತಾಯವಾಗಿದೆ.
ಆದಿವಾಸಿಗಳು ತಲೆತಲಾಂತರದಿಂದ ಅರಣ್ಯದಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಮಾತ್ರ ಅವರು ಕೇಳುತ್ತಿದ್ದಾರೆ. ಅದನ್ನು ನೀಡದೆ ಆದಿವಾಸಿಗಳ ಬದುಕುವ ಹಕ್ಕನ್ನು ಸರಕಾರ ಕಸಿದುಕೊಳ್ಳುತ್ತಿದೆ. ಸರಕಾರ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತಂದು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
| ಜಯಾನಂದ ಪಿಲಿಕಳ,
ಬೆಳ್ತಂಗಡಿ ತಾಲೂಕು ಮಲೆಕುಡಿಯರ ಸಂಘದ ಕಾರ್ಯದರ್ಶಿ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿ ಸುವ ಈ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ನೂರಾರು ಕುಟುಂಬಗಳು ವಾಸಿಸುತ್ತಿದೆ ಎಂದರೆ ನಾವು ತಲೆ ತಗ್ಗಿಸಬೇಕಾದ ವಿಚಾರ. ನಾವು ಪಡೆದ ಸ್ವಾತಂತ್ರ್ಯಕ್ಕೆ ಅರ್ಥ ಬರಬೇಕಾದರೆ ಇವರಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗಿದೆ.
| ಶೇಖರ ಲಾಯಿಲ,
ಸಾಮಾಜಿಕ ಕಾರ್ಯಕರ್ತ ಬೆಳ್ತಂಗಡಿ
ಏನಿದು ಆನ್ಲೈನ್ ಅರ್ಜಿ
ವಿದ್ಯುತ್ ಸಂಪರ್ಕಕ್ಕಾಗಿ ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಹಿಂದಿನ ಯುಪಿಎ ಸರಕಾರ ಅರಣ್ಯ ವಾಸಿಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಲು ಅರಣ್ಯ ಹಕ್ಕು ಕಾಯ್ದೆ 2006ನ್ನು ಜಾರಿಗೆ ತಂದಿತ್ತು. ಆರಂಭದಲ್ಲಿ ಅರಣ್ಯ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ 2016ರ ಬಳಿಕ ಇದು ಬದಲಾಗಿದ್ದು, ಯಾವುದೇ ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕಾಗಿದೆ. ಕೇಂದ್ರ ಸರಕಾರವೇನೋ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೇಳಿದೆ. ಆದರೆ ಯಾವೊಬ್ಬ ಅಧಿಕಾರಿಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬರುವುದೇ ಇಲ್ಲ. ಈ ಹಿಂದೆ ಹಲವು ಬಾರಿ ಅಧಿಕಾರಿಗಳಿಗೆ ಈ ಬಗ್ಗೆ ತರಬೇತಿ ನೀಡಿದರೂ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ. ಕೆಲವು ಖಾಸಗಿಯವರು ಅರ್ಜಿ ಸಲ್ಲಿಸುತ್ತಾರಾದರೂ ಅದಕ್ಕಾಗಿ ದುಬಾರಿ ಶುಲ್ಕ ಪಡೆಯುತ್ತಾರೆ. ಇದರಿಂದಾಗಿ ಮೂಲಭೂತ ಸೌಲಭ್ಯಗಳಿಗಾಗಿ ಕನಿಷ್ಠ ಅರ್ಜಿ ಸಲ್ಲಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.
ಇದೀಗ ಅರಣ್ಯ ಹಕ್ಕು ಕಾಯ್ದೆ 2006ರೊಂದಿಗೆ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅಡಿಯಲ್ಲಿಯೂ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗಿದೆ. ಆದರೆ ಈ ಕಾಯ್ದೆಗಳ ಅಡಿಯಲ್ಲಿ ಅನುಮೋದನೆ ಪಡೆಯಲು ಹೋದವರೆಲ್ಲ ಇನ್ನೂ ಕಾನೂನುಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆಯೇ ಹೊರತು ಅನುಮತಿ ಮಾತ್ರ ಇನ್ನೂ ಯಾರಿಗೂ ಸಿಕ್ಕಿಲ್ಲ.