ಪೊಲೀಸ್ ಉತ್ತರದಾಯಿತ್ವ ಕಾಯ್ದೆ ಈ ಹೊತ್ತಿನ ತುರ್ತು
ಅಪರಾಧಿ ಎಷ್ಟೇ ಚಾಣಾಕ್ಷನಾಗಿದ್ದರೂ, ಅವನಿಗಿಂತಲೂ ಸೂಕ್ಷ್ಮಮತಿಗಳಾಗಿರುವ ಪೊಲೀಸರು ಅಪರಾಧ ಪ್ರಕರಣಗಳನ್ನು ಹೇಗೆ ಭೇದಿಸುತ್ತಾರೆ ಎಂಬುದರ ಸುತ್ತ ಹೆಣೆಯಲಾಗಿರುವ ಕತೆಗಳ ಕುತೂಹಲಕಾರಿ ಧಾರಾವಾಹಿಗಳನ್ನು ನೋಡಿದ ಯಾರಿಗಾದರೂ ನಮ್ಮ ಪೊಲೀಸರ ತನಿಖಾ ಸಾಮರ್ಥ್ಯದ ಬಗ್ಗೆ ಒಂದು ಕ್ಷಣ ಹೆಮ್ಮೆ ಮೂಡದೆ ಇರಲಾರದು. ಆದರೆ, ವಾಸ್ತವ ಅಷ್ಟು ಚೇತೋಹಾರಿಯಾಗಿಲ್ಲ.
ರಾಷ್ಟ್ರೀಯ ಅಪರಾಧ ದಾಖಲೆಗಳ ದಳದ ೨೦೨೧-೨೨ನೇ ಸಾಲಿನ ವರದಿಯ ಪ್ರಕಾರ, ಅಪರಾಧ ಪ್ರಕರಣಗಳ ಕುರಿತು ನ್ಯಾಯಾಲಯಗಳಲ್ಲಿ ಪೊಲೀಸರ ದೋಷಾರೋಪ ಸಾಬೀತಾಗಿರುವ ಪ್ರಮಾಣ ಶೇ. ೫೭ರಷ್ಟಿದೆ. ಅಂದರೆ, ೧೦೦ ಪ್ರಕರಣಗಳ ಪೈಕಿ ೪೩ ಪ್ರಕರಣಗಳ ಆರೋಪಿಗಳು ತಮ್ಮ ವಿರುದ್ಧದ ಆರೋಪಗಳು ಸಾಬೀತಾಗದೆ ನ್ಯಾಯಾಲಯಗಳಿಂದ ಖುಲಾಸೆಯಾಗುತ್ತಿದ್ದಾರೆ. ಈ ದತ್ತಾಂಶವು ಪೊಲೀಸ್ ವ್ಯವಸ್ಥೆಯಲ್ಲಿನ ತನಿಖಾ ದಕ್ಷತೆಯ ದೌರ್ಬಲ್ಯಕ್ಕೆ ಕನ್ನಡಿ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ, ಅದೂ ಕೂಡಾ ಅಷ್ಟು ಸತ್ಯವಲ್ಲ. ಕಾರಣ: ನಾವು ಒಪ್ಪಿಕೊಂಡಿರುವ ಬ್ರಿಟಿಷರ ಪೊಲೀಸ್ ವ್ಯವಸ್ಥೆಯಲ್ಲಿ ಕೇವಲ ತನಿಖೆ ಮಾತ್ರ ಸಮರ್ಪಕವಾಗಿದ್ದರೆ ಸಾಲದು; ಆ ತನಿಖೆಗೆ ಪೂರಕವಾಗಿ ಪ್ರಾಥಮಿಕ ಮಾಹಿತಿ ವರದಿ, ದೋಷಾರೋಪ ಪಟ್ಟಿಯನ್ನು ಅತ್ಯಂತ ತರ್ಕಬದ್ಧ ಹಾಗೂ ಕಾನೂನುಬದ್ಧವಾಗಿ ಸಲ್ಲಿಸುವುದೂ ಅಷ್ಟೇ ಮುಖ್ಯ.
ಉದಾಹರಣೆಗೆ, ದೂರುದಾರರೊಬ್ಬರು ನನ್ನ ಮೊಬೈಲ್ ಕಳ್ಳತನವಾಗಿದೆ ಎಂದು ದೂರು ಕೊಟ್ಟರೆ, ಪೊಲೀಸರು ಆ ದೂರಿಗೆ ಪ್ರತಿಯಾಗಿ ಕಳ್ಳತನಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಅಡಿಯಲ್ಲಿ ಮಾತ್ರ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡು ತನಿಖೆ ನಡೆಸಬೇಕು ಹಾಗೂ ತನಿಖೆ ಪೂರ್ಣಗೊಂಡ ನಂತರ ಆ ಸೆಕ್ಷನ್ ಅಡಿಯಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಅದರ ಬದಲು ದೂರುದಾರ ನೀಡಿರುವ ದೂರಿಗೆ ವ್ಯತಿರಿಕ್ತವಾಗಿ ಮೊಬೈಲ್ ಫೋನ್ ಕಳೆದು ಹೋಗಿದೆ ಎಂಬ ಸೆಕ್ಷನ್ ಅಡಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರೆ, ನ್ಯಾಯಾಲಯವು ಮುಲಾಜಿಲ್ಲದೆ ಅಂತಹ ಪ್ರಕರಣಗಳನ್ನು ವಜಾಗೊಳಿಸುತ್ತದೆ ಹಾಗೂ ಆ ಪ್ರಕರಣದ ಆರೋಪಿಯನ್ನು ದೋಷಮುಕ್ತಗೊಳಿಸುತ್ತದೆ. (ಆರೋಪಿ ನಿಜ ಅಪರಾಧಿಯೇ ಆಗಿದ್ದರೂ ಸಹ). ಯಾಕೆಂದರೆ, ದೂರುದಾರರ ದೂರು ಯಾವ ಭಾರತೀಯ ದಂಡ ಸಂಹಿತೆ ಹಾಗೂ ಅಪರಾಧ ದಂಡ ಸಂಹಿತೆಯ ಸೆಕ್ಷನ್ ಅನ್ನು ಆಕರ್ಷಿಸುತ್ತದೋ, ಆ ಸೆಕ್ಷನ್‌ಗಳಡಿ ಮಾತ್ರ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರೆ ಮಾತ್ರ ನ್ಯಾಯಾಲಯದಲ್ಲಿ ಊರ್ಜಿತವಾಗುತ್ತದೆ. ಇಲ್ಲವಾದರೆ, ಪ್ರತಿವಾದಿ ವಕೀಲರು ಈ ವೈರುಧ್ಯವನ್ನು ನ್ಯಾಯಾಲಯದ ಗಮನಕ್ಕೆ ತಂದರೆ, ಅಂತಹ ಪ್ರಕರಣಗಳು ನ್ಯಾಯಾಲಯದಲ್ಲಿ ಮುಲಾಜಿಲ್ಲದೆ ವಜಾಗೊಳ್ಳುತ್ತವೆ.
ನ್ಯಾಯಾಲಯಗಳಲ್ಲಿ ದೋಷಾರೋಪ ಸಾಬೀತಾಗುವ ಪ್ರಮಾಣ ಕೇವಲ ಶೇ. ೫೭ರಷ್ಟಿರುವುದಕ್ಕೆ ಇದೂ ಕೂಡಾ ಮುಖ್ಯ ಕಾರಣ. ನಮ್ಮ ನ್ಯಾಯಾಂಗ ವ್ಯವಸ್ಥೆಯು, ‘‘ನೂರು ಮಂದಿ ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ; ಆದರೆ, ಒಬ್ಬನೇ ಒಬ್ಬ ನಿರಪರಾಧಿಗೂ ಶಿಕ್ಷೆಯಾಗಕೂಡದು’’ ಎಂಬ ಉದಾತ್ತ ಆಶಯವನ್ನು ಹೊಂದಿದೆ. ಈ ಉದಾತ್ತ ಆಶಯದ ದುರ್ಬಳಕೆಯ ಪರಿಣಾಮವೇ ನ್ಯಾಯಾಲಯಗಳಲ್ಲಿ ದೋಷಾರೋಪ ಸಾಬೀತಾಗುವ ಪ್ರಮಾಣ ಹತ್ತಿರತ್ತಿರ ಶೇ. ೫೦ರಷ್ಟು ಕಡಿಮೆ ಇರುವುದು. ಹಾಗಂತ, ಪೊಲೀಸರು ತನಿಖಾ ಹಂತದಲ್ಲೇ ವಿಫಲರಾಗಿರುತ್ತಾರೆ ಎಂದು ಭಾವಿಸಿದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಬದಲಿಗೆ, ಪೊಲೀಸರು ಆರೋಪಿಗಳು ಅಥವಾ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು, ಪ್ರಾಥಮಿಕ ಮಾಹಿತಿ ವರದಿ ದಾಖಲಿಸುವಾಗಲೇ ದೂರಿಗೆ ಸಂಬಂಧವೇ ಇಲ್ಲದ ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಿಕೊಂಡಾಗ ಮಾತ್ರ ಅವು ನ್ಯಾಯಾಲಯದಲ್ಲಿ ನಿಲ್ಲದೆ ಅಪರಾಧಿಗಳು ನಿರಾಯಾಸವಾಗಿ ಕಾನೂನಿನ ಶಿಕ್ಷೆಯಿಂದ ಪಾರಾಗುತ್ತಾರೆ.
ಪೊಲೀಸ್ ವ್ಯವಸ್ಥೆಯಲ್ಲಿ ತನಿಖಾಧಿಕಾರಿಗಳಿಗೆ ವಿಶೇಷವಾದ ಮಾನಸಿಕ ಸಾಮರ್ಥ್ಯ ಇರಬೇಕಾಗುತ್ತದೆ. ಯಾವುದೇ ಅಪರಾಧ ಪ್ರಕರಣಗಳನ್ನು ಬಹು ಆಯಾಮದಲ್ಲಿ ತನಿಖೆ ಮಾಡುವ ಸಾಮರ್ಥ್ಯ ಇರುವ ಪೊಲೀಸ್ ಅಧಿಕಾರಿ ಮಾತ್ರ ಅಪರಾಧ ಪ್ರಕರಣಗಳನ್ನು ದಕ್ಷವಾಗಿ ಭೇದಿಸಬಲ್ಲವನಾಗಿರುತ್ತಾನೆ. ಹಾಗೆ ನೋಡಿದರೆ, ತನಿಖಾಧಿಕಾರ ಹೊಂದಿರುವ ಯಾವ ಪೊಲೀಸ್ ಅಧಿಕಾರಿಯೂ ಅಪರಾಧ ಪ್ರಕರಣಗಳ ಜಾಡನ್ನು ಭೇದಿಸಲಾಗದಷ್ಟು ಮಾನಸಿಕ ದೌರ್ಬಲ್ಯ ಹೊಂದಿರುವುದಿಲ್ಲ. ಯಾಕೆಂದರೆ, ಅಂತಹ ತನಿಖಾಧಿಕಾರ ಹೊಂದಿರುವ ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ತರಬೇತಿ ಸಂದರ್ಭದಲ್ಲಿಯೇ, ‘‘ಅಪರಾಧಿ ಎಷ್ಟೇ ಚಾಣಾಕ್ಷನಾದರೂ, ಆತ ತನ್ನ ಅಪರಾಧ ಕೃತ್ಯದ ಬಗ್ಗೆ ಸಣ್ಣ ಸುಳಿವನ್ನಾದರೂ ಬಿಟ್ಟಿರುತ್ತಾನೆ’’ ಎಂಬುದನ್ನು ಮನದಟ್ಟು ಮಾಡಿಕೊಡಲಾಗಿರುತ್ತದೆ. ಹಾಗೆಯೇ ಅಂತಹ ಸಣ್ಣ ಸುಳಿವುಗಳನ್ನು ಆಧರಿಸಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಅಪರಾಧಿ ಹಾಗೂ ಅಪರಾಧ ಕೃತ್ಯದ ಹಿಂದಿನ ಉದ್ದೇಶ ಅಥವಾ ಕಾರಣವನ್ನು ಹೇಗೆ ಪತ್ತೆ ಹಚ್ಚಬೇಕು ಎಂಬುದರ ಕುರಿತೂ ತರಬೇತಿ ನೀಡಲಾಗಿರುತ್ತದೆ.
ಈಗಿನ ಆಧುನಿಕ ಜಗತ್ತಿನಲ್ಲಂತೂ ಡಿಜಿಟಲ್ ಸಾಕ್ಷ್ಯಗಳ ಮೂಲಕವೇ ಯಾವುದೇ ಅಪರಾಧ ಪ್ರಕರಣವನ್ನು ಭೇದಿಸಬಲ್ಲಷ್ಟು ತಂತ್ರಜ್ಞಾನ ಮುಂದುವರಿದಿದೆ. ಹೀಗಿದ್ದೂ ನ್ಯಾಯಾಲಯಗಳಲ್ಲಿ ದೋಷಾರೋಪ ಸಾಬೀತಾಗುವ ಪ್ರಮಾಣ ಮಾತ್ರ ಇಷ್ಟು ಕಳವಳಕಾರಿ ಪ್ರಮಾಣದಲ್ಲಿ ಕಡಿಮೆ ಇರುವುದೇಕೆ? ಪ್ರಾಥಮಿಕ ಮಾಹಿತಿ ವರದಿ ದಾಖಲು ಹಾಗೂ ದೋಷಾರೋಪ ಪಟ್ಟಿ ಸಲ್ಲಿಕೆಯ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ನುಸುಳುವ ಲೋಪಗಳು!! ಹೌದು, ಈ ಹಂತದಲ್ಲಿ ಉದ್ದೇಶಪೂರ್ವಕವಾಗಿ ನುಸುಳುವ ಲೋಪಗಳಿಂದಾಗಿಯೇ ದೋಷಾರೋಪ ಸಾಬೀತಾಗುವ ಪ್ರಮಾಣ ಇಷ್ಟು ಆಘಾತಕಾರಿ ಪ್ರಮಾಣದಲ್ಲಿ ಕಡಿಮೆ ಇರುವುದು!!!
ಈಗ ಅಸಲಿ ವಿಷಯಕ್ಕೆ ಬರೋಣ: ಬೆಳ್ತಂಗಡಿಯಲ್ಲಿ ನಡೆದಿದ್ದ ಸೌಜನ್ಯಾ ಎಂಬ ಅಪ್ರಾಪ್ತ ವಯಸ್ಕಳನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯು ಸುದೀರ್ಘಾವಧಿಯ ನಂತರ ನಿರ್ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯದಿಂದ ಬಿಡುಗಡೆಯಾಗಿದ್ದಾರೆ. ಆದರೆ, ಈ ಪ್ರಕರಣದ ನಿಜ ಆರೋಪಿ ಯಾರೆಂಬುದು ಈವರೆಗೂ ನಿಗೂಢವಾಗಿಯೇ ಉಳಿದಿದೆ!! ಕಂಬಾಲಪಲ್ಲಿಯಲ್ಲಿ ದಲಿತರು ಸಜೀವ ದಹನವಾದಾಗಲೂ ನ್ಯಾಯಾಲಯದಿಂದ ಇಂತಹುದೇ ವ್ಯತಿರಿಕ್ತ ತೀರ್ಪು ಬಂದಿತ್ತು. ಅಪರಾಧ ಕೃತ್ಯ ನಡೆದಿರುವುದಕ್ಕೆ ಸುಟ್ಟು ಕರಕಲಾಗಿರುವ ದಲಿತರ ಶವಗಳು ಕಣ್ಣ ಮುಂದಿದ್ದರೂ, ಆ ಅಪರಾಧ ಕೃತ್ಯ ಎಸಗಿದ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣ ನೀಡಿ, ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಹಾಗಾದರೆ ಅಪರಾಧಿಗಳು ಯಾವ ಸೂಕ್ಷ್ಮ ಸುಳಿವೂ ದೊರೆಯದಂತೆ ಅಂತಹ ಬರ್ಬರ ಕೃತ್ಯವನ್ನು ಎಸಗಿದ್ದರೆ ಎಂದು ಪ್ರಶ್ನಿಸಿದರೆ, ಅದೂ ಕೂಡಾ ಇಲ್ಲ ಎಂಬ ಉತ್ತರವೇ ದೊರೆಯುತ್ತದೆ. ಹೀಗಿದ್ದೂ ಕೃತ್ಯದಲ್ಲಿ ಭಾಗಿಯಾಗಿದ್ದ ಅಪರಾಧಿಗಳಿಗೆ ಶಿಕ್ಷೆಯಾಗದೆ ಹೋದದ್ದು ಹೇಗೆ? ಸಾಕ್ಷ್ಯಾಧಾರಗಳ ಕೊರತೆ!!
ಯಾವುದೇ ಬಗೆಯ ಅಪರಾಧ ಕೃತ್ಯವು ನ್ಯಾಯಾಲಯಗಳಲ್ಲಿ ಸಾಬೀತಾಗುವುದರಲ್ಲಿ ತನಿಖಾಧಿಕಾರಿಗಳು ಸಂಗ್ರಹಿಸುವ ಸಾಕ್ಷ್ಯಾಧಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆಯೇ, ದೂರುದಾರರ ದೂರಿಗೆ ಸರಿ ಹೊಂದುವಂಥ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಾಗಿರಬೇಕಾಗುತ್ತದೆ. ದೂರುದಾರನ ದೂರಿನ ಸಾರಾಂಶ, ಆ ದೂರು ಆಕರ್ಷಿಸುವ ಸೆಕ್ಷನ್‌ಗಳಡಿ ಪ್ರಾಥಮಿಕ ಮಾಹಿತಿ ವರದಿ ದಾಖಲು, ಪ್ರಾಥಮಿಕ ಮಾಹಿತಿ ವರದಿಯನ್ನು ಆಧರಿಸಿ ಸೂಕ್ತ ಸಾಕ್ಷ್ಯಗಳ ಸಂಗ್ರಹ, ಆ ಸಾಕ್ಷ್ಯಗಳ ರುಜುತ್ವವನ್ನು ದೋಷಾರೋಪ ಪಟ್ಟಿಯ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದು - ಈ ಸರಪಣಿ ಪ್ರಕ್ರಿಯೆಯಲ್ಲಿ ಯಾವುದೇ ಒಂದು ಹಂತವು ದುರ್ಬಲವಾಗಿದ್ದರೂ ನ್ಯಾಯಾಲಯದಲ್ಲಿ ಪ್ರಕರಣ ನಿಲ್ಲುವುದಿಲ್ಲ; ಅಪರಾಧಿಗಳಿಗೆ ಶಿಕ್ಷೆಯಾಗುವುದಿಲ್ಲ. ಈ ಸರಪಣಿ ಪ್ರಕ್ರಿಯೆಯು ಒಂದಕ್ಕೊಂದು ಪೂರಕವಾಗಿದ್ದಾಗ ಮಾತ್ರ ಯಾವುದೇ ಆರೋಪಿಯ ವಿರುದ್ಧದ ದೋಷಾರೋಪವು ನ್ಯಾಯಾಲಯದಲ್ಲಿ ಊರ್ಜಿತವಾಗುವುದು.
ಈ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಎಂತಹುದೇ ನಿಗೂಢ ಅಪರಾಧ ಕೃತ್ಯವನ್ನು ಭೇದಿಸಬಲ್ಲ ತಂತ್ರಜ್ಞಾನ ನಮ್ಮ ಪೊಲೀಸ್ ವ್ಯವಸ್ಥೆಯ ಬಳಿ ಇದೆ. ಆದರೆ, ಪ್ರಾಥಮಿಕ ಮಾಹಿತಿ ವರದಿ ದಾಖಲು ಹಾಗೂ ದೋಷಾರೋಪ ಪಟ್ಟಿ ಸಲ್ಲಿಕೆಯ ಸಂದರ್ಭದಲ್ಲಿ ರಾಜಿ ಅಥವಾ ಹೊಂದಾಣಿಕೆಯ ಕಾರಣಕ್ಕಾಗಿಯೇ ಬಹುತೇಕ ಪ್ರಕರಣಗಳಲ್ಲಿ ನಿಜ ಅಪರಾಧಿಗಳು ನ್ಯಾಯಾಲಯದಿಂದ ದೋಷ ಮುಕ್ತರಾಗಿ ಹೊರ ಬರುತ್ತಿದ್ದಾರೆ. ಇಂತಹ ಲೋಪಕ್ಕೆ ಹಣಕಾಸು ಆಮಿಷಗಳಲ್ಲದೆ ರಾಜಕೀಯ ಒತ್ತಡ, ಪ್ರಭಾವಗಳೂ ನೇರವಾಗಿಯೇ ಪರಿಣಾಮ ಬೀರುತ್ತಿವೆ. ಇದರಿಂದಾಗಿ ನೂರಾರು ಅಪರಾಧಿಗಳು ದೋಷ ಮುಕ್ತರಾಗುತ್ತಿದ್ದರೆ, ಸಹಸ್ರಾರು ನಿರಪರಾಧಿಗಳು ತಾವು ಮಾಡದ ತಪ್ಪಿಗೆ ವಿಚಾರಣಾಧೀನ ಕೈದಿಗಳಾಗಿ ಬಂದಿಖಾನೆಗಳಲ್ಲಿ ಹಲವಾರು ವರ್ಷಗಳಿಂದ ಕೊಳೆಯುತ್ತಿದ್ದಾರೆ. ಇಂತಹ ನ್ಯಾಯದಾನದ ಲೋಪಕ್ಕಿರುವ ಪ್ರಮುಖ ಕಾರಣ: ಪೊಲೀಸ್ ವ್ಯವಸ್ಥೆಗೆ ಉತ್ತರದಾಯಿತ್ವ ಇಲ್ಲದಿರುವುದು.
ನಮ್ಮ ಆಡಳಿತ ವ್ಯವಸ್ಥೆಯಲ್ಲಿ ರಾಜಕಾರಣಿಯೊಬ್ಬ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ, ಆತ ತನಗೆ ಮತ ನೀಡುವ ಜನರಿಗೆ ಉತ್ತರದಾಯಿಯಾಗಿದ್ದಾನೆ. ವೈದ್ಯರು ರೋಗಿಗಳ ಆರೈಕೆಯಲ್ಲಿ ಲೋಪವೆಸಗಿದರೆ, ಅವರೂ ಕೂಡಾ ಕಾನೂನಿಗೆ ಉತ್ತರದಾಯಿಗಳಾಗಿದ್ದಾರೆ. ಆದರೆ, ಅಪರಾಧ ಪ್ರಕರಣಗಳನ್ನು ಭೇದಿಸಿ, ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕಾದ ಗುರುತರ ಹೊಣೆಗಾರಿಕೆ, ಕರ್ತವ್ಯ ಹೊಂದಿರುವ ಪೊಲೀಸ್ ತನಿಖಾಧಿಕಾರಿಗಳಿಗೆ ಮಾತ್ರ ಇಂತಹ ಯಾವುದೇ ಉತ್ತರದಾಯಿತ್ವ ಇಲ್ಲ! ಅವರು ನಿಯಮಾವಳಿಗಳ ಪ್ರಕಾರ, ಪ್ರಾಥಮಿಕ ಮಾಹಿತಿ ವರದಿ ದಾಖಲು, ಸಾಕ್ಷಿ ಸಂಗ್ರಹ ಹಾಗೂ ದೋಷಾರೋಪ ಪಟ್ಟಿ ಸಲ್ಲಿಕೆಯಂತಹ ಯಾಂತ್ರಿಕ ಕ್ರಿಯೆಗಳಲ್ಲಿ ಮುಳುಗಿದ್ದಾರೆಯೇ ಹೊರತು, ತಾವು ದೋಷಾರೋಪ ಹೊರಿಸಿದ ವ್ಯಕ್ತಿಗೆ ಶಿಕ್ಷೆ ಕೊಡಿಸಲೇಬೇಕಾದ ಯಾವುದೇ ಉತ್ತರದಾಯಿತ್ವ ಹೊಂದಿಲ್ಲ. ಹೀಗಾಗಿಯೇ ನಮ್ಮ ದೇಶದಲ್ಲಿನ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಕರುಣಾಜನಕ ಸ್ಥಿತಿಯಲ್ಲಿದೆ. ಇದು ಎಷ್ಟು ಭೀಕರವಾಗಿದೆಯೆಂದರೆ, ಸ್ವತಃ ಸಂತ್ರಸ್ತನೇ ತನಗೆ ನ್ಯಾಯ ದೊರೆತಾಗ ಅಚ್ಚರಿ, ಆಘಾತಕ್ಕೊಳಗಾಗುವಷ್ಟು!!
ಪೊಲೀಸ್ ಉತ್ತರದಾಯಿತ್ವ ಕಾಯ್ದೆಯ ಸಾಧ್ಯತೆ
ಯಾವುದೇ ಅಪರಾಧ ಕೃತ್ಯದ ಕುರಿತ ತನಿಖೆ ತಾರ್ಕಿಕ ಅಂತ್ಯ ತಲುಪಿ, ನಿಜ ಅಪರಾಧಿಗೆ ಶಿಕ್ಷೆ ಆಗಲೇಬೇಕಿದ್ದರೆ, ಪೊಲೀಸ್ ಉತ್ತರದಾಯಿತ್ವ ಕಾಯ್ದೆ ಅತ್ಯಗತ್ಯವಾಗಿ ಜಾರಿಯಾಗಬೇಕಿದೆ. ಈ ಕಾಯ್ದೆಯನ್ನೂ ಅತ್ಯಂತ ಸರಳವಾಗಿ ರೂಪಿಸಬಹುದಾಗಿದೆ. ಯಾವುದೇ ಅಪರಾಧ ಪ್ರಕರಣದ ತನಿಖೆ ನಡೆಸುವ ತನಿಖಾಧಿಕಾರಿ, ತನ್ನ ದೋಷಾರೋಪ ಪಟ್ಟಿಯನ್ನು ಸುಪ್ರೀಂ ಕೋರ್ಟ್‌ವರೆಗೂ ಸಮರ್ಥಿಸಿಕೊಂಡು, ನೈಜ ಅಪರಾಧಿಗೆ ಶಿಕ್ಷೆಯಾಗುವುದನ್ನು ಖಾತ್ರಿಗೊಳಿಸಲೇಬೇಕು. ಇಲ್ಲವಾದರೆ, ಯಾವ ವ್ಯಕ್ತಿಯ ವಿರುದ್ಧ ತನಿಖಾಧಿಕಾರಿಯು ದೋಷಾರೋಪ ಹೊರಿಸಿಯೂ ಅದನ್ನು ಸಾಬೀತು ಪಡಿಸುವಲ್ಲಿ ವಿಫಲನಾಗುತ್ತಾನೋ, ಅಂತಹ ತನಿಖಾಧಿಕಾರಿಯನ್ನು ಖಾಯಂ ಆಗಿ ಸೇವೆಯಿಂದ ಬಿಡುಗಡೆಗೊಳಿಸಬೇಕು. ಅಲ್ಲದೆ, ಪೊಲೀಸರ ದೋಷಾರೋಪ ಸಾಬೀತಾಗದ ಆರೋಪಿಗೆ ನ್ಯಾಯಾಲಯ ವೆಚ್ಚ ಹಾಗೂ ಪರಿಹಾರ ಮೊತ್ತವಾಗಿ ಗರಿಷ್ಠ ೨೫ ಲಕ್ಷ ರೂಪಾಯಿವರೆಗೂ ನೀಡಬೇಕು. ಹೀಗೆ ನೀಡಲಾಗುವ ಪರಿಹಾರದ ಮೊತ್ತವನ್ನು ತನಿಖಾಧಿಕಾರಿಯ ವೇತನ, ಪಿಂಚಣಿ, ಗ್ರಾಚ್ಯುಟಿ ಇತ್ಯಾದಿ ಆತನ ಉದ್ಯೋಗ ಸಂಬಂಧಿ ಭತ್ತೆಗಳಿಂದಲೇ ಭರಿಸುವಂತಾಗಬೇಕು.
ಒಟ್ಟಿನಲ್ಲಿ ಯಾವುದೇ ಆರೋಪಿಯ ವಿರುದ್ಧ ದೋಷಾರೋಪ ಹೊರಿಸುವ ತನಿಖಾಧಿಕಾರಿಯು, ತನ್ನ ದೋಷಾರೋಪವನ್ನು ಉನ್ನತ ಹಂತದ ನ್ಯಾಯಾಲಯದವರೆಗೂ ಸಮರ್ಥಿಸಿಕೊಳ್ಳುವ ಉತ್ತರದಾಯಿತ್ವ ಹೊಂದಿರಬೇಕು. ಒಂದು ವೇಳೆ ನ್ಯಾಯಾಲಯದಲ್ಲಿ ತನ್ನ ದೋಷಾರೋಪವನ್ನು ಉನ್ನತ ಹಂತದ ನ್ಯಾಯಾಲಯಗಳಲ್ಲಿ ಸಮರ್ಥಿಸಿಕೊಳ್ಳಲು ವಿಫಲನಾದರೆ, ಅಂತಹ ತನಿಖಾಧಿಕಾರಿಯನ್ನು ಸೇವೆಯಿಂದ ಬಿಡುಗಡೆಗೊಳಿಸುವ ಕಠಿಣ ಕಾನೂನು ಜಾರಿಗೊಳಿಸಬೇಕು. ಆಗ ಮಾತ್ರ ಪೊಲೀಸರ ರಾಜಿ ಹಾಗೂ ಹೊಂದಾಣಿಕೆಯಿಂದ ಸಂತೋಷ್ ರಾವ್‌ರಂಥ ಅಮಾಯಕರು ಅನ್ಯಾಯವಾಗಿ ಆರೋಪಿಗಳಾಗಿ, ತಮ್ಮ ವಿರುದ್ಧ ಯಾವುದೇ ಗಟ್ಟಿ ಸಾಕ್ಷ್ಯಗಳಿಲ್ಲದಿದ್ದರೂ, ಬಂದಿಖಾನೆಗಳಲ್ಲಿ ಕೊಳೆಯುವುದು ತಪ್ಪುತ್ತದೆ.
ಬ್ರಿಟಿಷರ ಕಾನೂನುಗಳ ಬದಲು ಭಾರತೀಯ ನ್ಯಾಯ ಸಂಹಿತೆಯನ್ನು ಜಾರಿಗೊಳಿಸುವುದಕ್ಕಿಂತ ಪೊಲೀಸ್ ಉತ್ತರದಾಯಿತ್ವ ಕಾಯ್ದೆಯನ್ನು ಜಾರಿಗೊಳಿಸಬೇಕಿರುವುದೇ ಈ ಹೊತ್ತಿನ ತುರ್ತು. ಈ ದಿಕ್ಕಿನತ್ತ ಎಲ್ಲ ಸಾಮಾಜಿಕ ಹೋರಾಟಗಾರರು, ಮಾನವ ಹಕ್ಕು ಕಾರ್ಯಕರ್ತರು ಆಳುವ ಸರಕಾರಗಳ ಮೇಲೆ ಒತ್ತಡ ಹೇರಬೇಕಿದೆ.