ಮಣಿಪುರ ಸಂಘರ್ಷದ ಭಯಾನಕ ಮುಖ: ನಿಧಾನವಾಗಿ ಬಯಲಾಗುತ್ತಿರುವ ಅತ್ಯಾಚಾರದ ಕಥೆಗಳು
ಹೊತ್ತಿ ಉರಿಯುತ್ತಿರುವ ಮಣಿಪುರವನ್ನು ಹಿಂದಕ್ಕೆ ಸರಿಸಿ ಉತ್ತರ ಭಾರತದಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆ, ಅದರಿಂದುಂಟಾದ ಪ್ರವಾಹ ಮತ್ತು ವಿನಾಶದ ಸುದ್ದಿಗಳು ಮುನ್ನೆಲೆಗೆ ಬಂದಿವೆ. ಆದರೆ ಹೀಗೆಯೇ ಇರುವುದಿಲ್ಲ. ಮಣಿಪುರ ಹಿಂಸಾಚಾರದ ಬಗ್ಗೆ ಮತ್ತೆ ಮಾಧ್ಯಮಗಳು ಗಮನ ಹರಿಸುವುದು ಅನಿವಾರ್ಯವಾಗಲಿದೆ.
ಎರಡು ತಿಂಗಳಿಗಿಂತ ಹೆಚ್ಚು ಸಮಯದ ನಂತರ, ಅಂತಿಮವಾಗಿ ಈ ಸಂಘರ್ಷ ಪೀಡಿತ ಈಶಾನ್ಯ ರಾಜ್ಯದ ಕುರಿತು ಹೆಚ್ಚು ಆಳವಾದ ವರದಿಗಳು ಹೊರಬೀಳತೊಡಗಿವೆ. ಹೆಚ್ಚಾಗಿ ಸ್ವತಂತ್ರ ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ಮತ್ತು ಕೆಲವು ಅಂತರ್‌ರಾಷ್ಟ್ರೀಯ ಮಾಧ್ಯಮಗಳಲ್ಲಿ ಮಣಿಪುರದ ವಾಸ್ತವ ಕಾಣಿಸುತ್ತಿದೆ.
'ಸುನೋ ಇಂಡಿಯಾ'ದ ಗ್ರೀಷ್ಮಾ ಮಣಿಪುರದಿಂದ ಪ್ರತಿದಿನ ಪಾಡ್‌ಕಾಸ್ಟ್ ಮಾಡುತ್ತಿದ್ದಾರೆ. ಅವುಗಳಲ್ಲಿ ಕೊಡುತ್ತಿರುವ ವಿವರಗಳ ಕಾರಣಕ್ಕಾಗಿಯೇ ಅವರು ಗಮನ ಸೆಳೆಯುತ್ತಿದ್ದಾರೆ ಮತ್ತು ಮಣಿಪುರದ ಸಂತ್ರಸ್ತರ ಧ್ವನಿಯನ್ನು ಕೇಳಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ. ಗ್ರೀಷ್ಮಾ ಅವರ ಇತ್ತೀಚಿನ ವರದಿ, ಸೈಕುಲ್‌ನ ಖಮೆನ್‌ಲೋಕ್ ಪ್ರದೇಶದಲ್ಲಿ ಜನಾಂಗೀಯ ಹಿಂಸಾಚಾರದ ನಂತರದ ಕರಾಳ ಸ್ಥಿತಿಯನ್ನು ವಿವರಿಸಿದೆ. 10 ಕುಕಿ ಗ್ರಾಮಗಳ ಕುಟುಂಬಗಳು ಹೇಗೋ ಬದುಕಿದರೆ ಸಾಕು ಎಂದು ಕಾಡಿಗೆ ಓಡಿಹೋದ ಬಳಿಕ ಬೇರೆಬೇರೆಯಾಗಿ ಹೋದ ತಾಯಿ ಮಗಳ ಕಥೆ ಅದು. ಕಿಮ್ನಿಯೊ ಮತ್ತು ಆಕೆಯ ಮಗಳು ಲಿಂಗ್ನೆಹಾಲ್ ಹಲವು ದಿನಗಳ ಕಾಲ ಸಂಪರ್ಕವಿಲ್ಲದೆ ಕಳೆಯಬೇಕಾಗಿ ಬಂದ ಅತಿ ಸಂಕಟದ ಕಥೆ ಅದು. ಮಹಿಳೆಯರು ಮತ್ತು ಮಕ್ಕಳ ಮೇಲೆ ಈ ಸಂಘರ್ಷದ ಶಾಶ್ವತ ಪರಿಣಾಮ ಎಂಥದಿರಬಹುದು ಎಂಬುದನ್ನು ಈ ಪ್ರಸಂಗ ಎತ್ತಿ ತೋರಿಸುತ್ತದೆ. ಇದು ಅವರಿಬ್ಬರ ಕಥೆಯಾಗಿರದೆ, ಅವರಂಥ ಸಾವಿರಾರು ಮಂದಿ ಏನನ್ನು ಅನುಭವಿಸಿದ್ದಾರೆ ಎಂಬುದರ ವಾಸ್ತವವನ್ನೂ ಹೇಳುತ್ತದೆ. ಅವರೆಲ್ಲರ ಆರೋಗ್ಯದ ಕಾಳಜಿಯೂ ಸೇರಿದಂತೆ ಸಂತ್ರಸ್ತರ ಚೇತರಿಕೆಗೆ ಅಗತ್ಯ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಬೇಕಿರುವ ಅಗತ್ಯವನ್ನು ಈ ವರದಿ ಒತ್ತಿಹೇಳುತ್ತದೆ.
ಮಣಿಪುರ ಸಂಘರ್ಷದ ಕುರಿತು ಅಂತರ್‌ರಾಷ್ಟ್ರೀಯ ಸುದ್ದಿ ವೇದಿಕೆಗಳ ಇತ್ತೀಚಿನ ವರದಿಗಳಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು 'ದಿ ಗಾರ್ಡಿಯನ್'ಗಾಗಿ ಆಕಾಶ್ ಹಾಸನ್ ಮಾಡಿರುವ ಒಂದು ವರದಿ. ಆ ವರದಿಯಲ್ಲಿ, ಕುಕಿ ರೈತನೊಬ್ಬ ಹೇಳುವ ಮಾತು, ಸರಕಾರ ಗಮನವಿಟ್ಟು ಆಲಿಸಿದರೆ ಅದರ ಕಣ್ತೆರೆಸಲೇಬೇಕು. ಆತ ಹೇಳುತ್ತಾನೆ: ''ಜನರು ಎರಡೂ ಕಡೆಗಳಲ್ಲಿ ಬಂಕರ್‌ಗಳನ್ನು ನಿರ್ಮಿಸುತ್ತಿದ್ದಾರೆ, ಬಂದೂಕುಗಳನ್ನು ಜೋಡಿಸುತ್ತಿದ್ದಾರೆ. ಇದು ಯುದ್ಧದ ತಯಾರಿ ಎಂಬುದನ್ನು ದಿಲ್ಲಿ ಅರ್ಥಮಾಡಿಕೊಳ್ಳಬೇಕು.'' ಬಿಬಿಸಿಯ ಸೌತಿಕ್ ಬಿಸ್ವಾಸ್ ವರದಿಯೂ ಮಣಿಪುರದ ಇತ್ತೀಚಿನ ಪರಿಸ್ಥಿತಿಯನ್ನು ಚಿತ್ರಿಸುತ್ತದೆ. ಆತಂಕಪಡುವಂಥದ್ದೇನಿಲ್ಲ ಎಂದು ಸರಕಾರ ಹೇಳುತ್ತ ಬಂದಿರುವುದಕ್ಕಿಂತ ಭಿನ್ನವಾದ, ಸಹಜವಲ್ಲದ ಸನ್ನಿವೇಶವೊಂದು ಮಣಿಪುರದಲ್ಲಿದೆ, ಎಲ್ಲವೂ ಸರಿಯಿಲ್ಲ ಎಂಬುದನ್ನೇ ಈ ಎರಡೂ ವರದಿಗಳು ನಮಗೆ ನೆನಪಿಸುತ್ತವೆ.
ವರದಿ ಮಾಡುವಿಕೆಯಲ್ಲಿ ತುಸು ಉತ್ಪ್ರೇಕ್ಷೆಯ ಅಂಶಗಳು ನುಸುಳಿರಬಹುದಾದರೂ, ಸಂಘರ್ಷದ ಕುರಿತ ಹೆಚ್ಚು ನಿಖರ ಆಯಾಮಗಳೂ ಇಲ್ಲದೆ ಇಲ್ಲ. ಬಹಳ ದೀರ್ಘಕಾಲದವರೆಗೆ ಬಯಲಿಗೇ ಬಾರದೆ ಮುಚ್ಚಿಹೋಗುವ ಮತ್ತು ಕಡೆಗಣಿಸಲ್ಪಡುವ ಹಿಂಸಾಚಾರದ ಅಂಥ ಒಂದು ಮಗ್ಗುಲೆಂದರೆ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ.
ಧಾರ್ಮಿಕ ಅಥವಾ ಜನಾಂಗೀಯ ಗುಂಪುಗಳ ನಡುವಿನ ಘರ್ಷಣೆಗಳು, ಸ್ಥಳೀಯ ಜನರು ಮತ್ತು ಪೊಲೀಸ್ ಅಥವಾ ಸೇನೆಯ ನಡುವಿನ ಸಂಘರ್ಷಗಳ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಸಂಭವಿಸುತ್ತದೆ. ದಶಕಗಳಿಂದ, ಅತ್ಯಾಚಾರವು ಯುದ್ಧದ ಅಸ್ತ್ರವಾಗಿ ಬಳಸಲ್ಪಟ್ಟಿದೆ. 1994ರಲ್ಲಿ ರುವಾಂಡಾದ ಅಂತರ್‌ರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ಅತ್ಯಾಚಾರವನ್ನು ಯುದ್ಧ ಅಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಘೋಷಿಸಿತು.
ಸಂಪ್ರದಾಯವಾದಿ ಸಮಾಜಗಳಲ್ಲಿ ಅತ್ಯಾಚಾರಕ್ಕೆ ತುತ್ತಾದವರನ್ನು ಕಳಂಕಿತರೆಂಬಂತೆ ಕಾಣುವುದರಿಂದ ಆ ಭಯದಿಂದಲೇ ಅಂಥ ಪ್ರಕರಣಗಳು ಹೆಚ್ಚಾಗಿ ಪೊಲೀಸರಿಗೆ ವರದಿಯಾಗುವುದಿಲ್ಲ. ಮಹಿಳೆಯರಾಗಲೀ ಅವರ ಕುಟುಂಬಗಳಾಗಲೀ ಲೈಂಗಿಕ ದೌರ್ಜನ್ಯದ ನೋವನ್ನು ನುಂಗಿಕೊಂಡೇ ಉಳಿಯುತ್ತವೆ. ಸಾಮಾನ್ಯ ಸಂದರ್ಭಗಳಲ್ಲಿಯೂ ಮಹಿಳೆಯರ ಮೇಲಿನ ಇಂಥ ಪ್ರಕರಣಗಳು ನಡೆಯುತ್ತವಾದರೂ, ಸಂಘರ್ಷದ ಸ್ಥಿತಿಯಲ್ಲಿ ಇನ್ನೂ ಹೆಚ್ಚಾಗುತ್ತವೆ.
ಈ ವಾರ, ಮಣಿಪುರದಲ್ಲಿ ಲೈಂಗಿಕ ದೌರ್ಜನ್ಯದ ಮೊದಲ ವರದಿಗಳು ಕಾಣಿಸಿಕೊಂಡಿವೆ. 'ದಿ ಪ್ರಿಂಟ್'ನಲ್ಲಿನ ಸೋನಾಲ್ ಮಾಥಾರು ಅವರ ವರದಿ ಈ ಸಾಲಿನಲ್ಲಿ ಮೊದಲನೆಯದು. ವರದಿಗಾರ ದಾಖಲಿಸಿರುವ ಭಯಗ್ರಸ್ಥ ಸಾಕ್ಷಗಳು, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಳ್ಳಲು ಸಂತ್ರಸ್ತರು ಹಿಂಜರಿಯುವುದನ್ನೇ ಸೂಚಿಸುತ್ತವೆ.
ಮಣಿಪುರದಲ್ಲಿ ಭೀಕರ ಹಿಂಸಾಚಾರ ಪ್ರಾರಂಭವಾದ ಎರಡು ತಿಂಗಳ ನಂತರ ಈ ಕಥೆಗಳು ಈಗ ಬಯಲಾಗುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. 2002ರಲ್ಲಿ ಗುಜರಾತ್‌ನಲ್ಲಿ ಕೋಮುಗಲಭೆಯ ನಂತರ ನಡೆದದ್ದೂ ಇದೇ ಎಂದು ಹಿಂದಿನ ಅನುಭವದಿಂದ ನಮಗೆ ತಿಳಿದಿದೆ. ಬಿಲ್ಕಿಸ್ ಬಾನು ಅವರ ಕಥೆ ಬಹಿರಂಗಕ್ಕೆ ಬಂದದ್ದು ನ್ಯಾಯಕ್ಕಾಗಿ ಹೋರಾಡುವ ಅವರ ದೃಢ ಸಂಕಲ್ಪದ ಕಾರಣದಿಂದಾಗಿ. ಆದರೆ ಇಂಥ ಒಬ್ಬ ದಿಟ್ಟ ಬಿಲ್ಕಿಸ್‌ಗೆ ಪ್ರತಿಯಾಗಿ ಅದೆಷ್ಟೋ ನೊಂದ ಹೆಣ್ಣುಮಕ್ಕಳು ಮೌನವಾಗಿಯೇ ಉಳಿದುಬಿಡುತ್ತಾರೆ.
2013ರಲ್ಲಿ ಉತ್ತರ ಪ್ರದೇಶದ ಮುಝಪ್ಫರ್‌ನಗರ ಮತ್ತು ಶಾಮ್ಲಿಯಲ್ಲಿ ನಡೆದ ಕೋಮು ಹಿಂಸಾಚಾರದ ವೇಳೆಯೂ ಇಂಥದೇ ಘಟನೆಗಳು ನಡೆದದ್ದನ್ನು ನಾವು ತಿಳಿದಿದ್ದೇವೆ. ಮಹಿಳಾ ಗುಂಪುಗಳು ಮತ್ತು ಈ ಕಥೆಗಳನ್ನು ಅನುಸರಿಸಿದ ನೇಹಾ ದೀಕ್ಷಿತ್ ಅವರಂತಹ ಪತ್ರಕರ್ತರ ಸತ್ಯಶೋಧನೆಯ ಪ್ರಯತ್ನಗಳ ನಂತರವೇ ಅತ್ಯಾಚಾರದ ಕಥೆಗಳು ಬಹಿರಂಗಗೊಂಡವು. ಬದುಕುಳಿದವರಲ್ಲಿ ಬೆರಳೆಣಿಕೆಯಷ್ಟು ಸಂತ್ರಸ್ತರು ಮಾತ್ರವೇ ನ್ಯಾಯಕ್ಕಾಗಿ ಹೋರಾಡಲು ಮುಂದಾದರಾದರೂ, ನ್ಯಾಯವನ್ನು ಪಡೆಯುವ ಅವರ ಪ್ರಯಾಣ ಮಾತ್ರ ಕೊನೆಯಿಲ್ಲದ್ದು ಎಂಬ ಕಟು ವಾಸ್ತವವೂ ನಮ್ಮ ಕಣ್ಣೆದುರು ಇದೆ. ಮುಝಪ್ಫರ್‌ನಗರ ಅತ್ಯಾಚಾರದಲ್ಲಿ ಬದುಕುಳಿದವರ ನೋವಿನ ಕಥೆಯ ಬಗ್ಗೆ ಸ್ಕ್ರಾಲ್ ವರದಿ ಹೇಳುತ್ತದೆ.
ಹೀಗಾಗಿ, ಕುಕಿ ಮತ್ತು ಮೈತೈ ಎರಡೂ ಸಮುದಾಯಗಳ ಮಣಿಪುರಿ ಮಹಿಳೆಯರು ತಾವು ಅನುಭವಿಸಿದ ಸಂಗತಿಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಾರೆ. ಆದರೂ, ಅದನ್ನು ದಾಖಲಿಸುವುದು ಮತ್ತು ಹೇಳುವುದು ಮುಖ್ಯ. ಆ ಮೂಲಕ, ಜನಾಂಗೀಯ ಸಂಘರ್ಷದಂಥವುಗಳಿಗೆ ತೆರಬೇಕಾದ ನಿಜವಾದ ಬೆಲೆ ಎಂಥದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯ.
ಅತ್ಯಾಚಾರ ದುರಂತದ ಮೂಕ ಸಂತ್ರಸ್ತರಿಗಿಂತ ಭಿನ್ನವಾಗಿ ಮಣಿಪುರದ ಮಹಿಳೆಯರು, ಅದರಲ್ಲೂ ವಿಶೇಷವಾಗಿ 'ಮೀರಾ ಪೈಬಿ' ಎಂಬ ಗುಂಪಿನ ಭಾಗವಾಗಿರುವ ಮೈತೈ ಮಹಿಳೆಯರು ಬೇರೆಯದೇ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಸೇನೆಯು ಅವರನ್ನು ಪ್ರತಿರೋಧಿಗಳು ಎಂದು ಬಿಂಬಿಸಿದರೆ, ಕುಕಿ ಸಮುದಾಯ ಅವರನ್ನು ಪಕ್ಷಪಾತೀಯ ದೃಷ್ಟಿಯಿಂದ ನೋಡುತ್ತದೆ. ಸತ್ಯ ಬಹುಶಃ ಎಲ್ಲೋ ನಡುವೆ ಇರುತ್ತದೆ. ಆದರೆ ಈಗಿನ ಅತಿರೇಕದ ಧ್ರುವೀಕರಣದ ಸಮಯದಲ್ಲಿ ತಪ್ಪುತೀರ್ಮಾನಗಳಿಗೆ ಹೋಗುವುದು ಸುಲಭ. ಈ ಮಹಿಳೆಯರು ಯಾರು, ಮುಖ್ಯವಾಗಿ ಭದ್ರತಾ ಪಡೆಗಳ ವಿರುದ್ಧದ ಅವರ ಉಗ್ರ ನಿಲುವಿಗೆ ಕಾರಣಗಳು ಮತ್ತು ಪ್ರಸಕ್ತ ಸಂಘರ್ಷದಲ್ಲಿ ಅವರು ಏಕೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.
ಇಂದು ಸುದ್ದಿಗಳನ್ನು, ಹೆಚ್ಚಾಗಿ ಟಿವಿ ವಾಹಿನಿಗಳಲ್ಲಿ ಬರೀ ಮುಖ್ಯಾಂಶಗಳು, ಕೆಲವೇ ಪ್ಯಾರಾಗಳು ಅಥವಾ ಸಂಚಲನ ಮೂಡಿಸುವುದಕ್ಕೆ ಮತ್ತು ತಮ್ಮದೇ ಅಭಿಪ್ರಾಯಗಳನ್ನು ತುಂಬುವುದಕ್ಕೆ ಸೀಮಿತಗೊಳಿಸಲಾಗುತ್ತಿದೆ. ಮಣಿಪುರದಂಥ ಘರ್ಷಣೆಗೆ ಕಾರಣವಾಗುವ ಇತಿಹಾಸ ಮತ್ತು ಪ್ರಕ್ರಿಯೆಗಳನ್ನು ಸಾಮಾನ್ಯವಾಗಿ ಕಡೆಗಣಿಸಲಾಗುತ್ತದೆ.
ಉತ್ತರ ಭಾರತದಲ್ಲಿ ಪ್ರಳಯದಿಂದ ಉಂಟಾದ ವಿನಾಶವನ್ನು ವರದಿ ಮಾಡುವಾಗ ಕೂಡಾ ಇತಿಹಾಸ ಮತ್ತು ಪ್ರಕ್ರಿಯೆಯ ಈ ತಿಳುವಳಿಕೆ ಅತ್ಯಗತ್ಯ. ನಾವು ವಿನಾಶದ ಚಿತ್ರಗಳನ್ನು ನೋಡುತ್ತೇವೆ. ಆದರೆ ನಿರಂತರ ಮತ್ತು ಭಾರೀ ಮಳೆಯ ಹೊರತಾಗಿ, ಅದಕ್ಕೆ ಕಾರಣವಾದ ಇತರ ಅಂಶಗಳು ಯಾವುವು ಎಂಬ ಪ್ರಶ್ನೆಯನ್ನೂ ಉತ್ತರಿಸಿಕೊಳ್ಳಬೇಕಾಗುತ್ತದೆ.
ತಜ್ಞರು ಮತ್ತು ಪತ್ರಕರ್ತರು ಇದನ್ನು ಗಮನದಲ್ಲಿಟ್ಟುಕೊಂಡು ಬರೆದಿರುವುದಿದೆ. ಹಿಮಾಲಯದ ದುರ್ಬಲತೆಯನ್ನು ಪರಿಗಣಿಸದೆ ರಸ್ತೆಗಳಂತಹ ಮೂಲಸೌಕರ್ಯ ಯೋಜನೆಗಳನ್ನು ಹೇಗೆ ನಿರ್ಮಿಸಲಾಗುತ್ತಿದೆ ಎಂಬುದರ ಕುರಿತು ಅವರ ಬರಹಗಳು ತಿಳಿಸುತ್ತವೆ. ನದಿಯ ದಡದ ಹತ್ತಿರ ಕಾಂಕ್ರಿಟ್ ನಿರ್ಮಾಣಗಳು ಇರಕೂಡದು ಎಂಬ ನಿಯಮಗಳ ಹೊರತಾಗಿಯೂ, ಕಳೆದ ವಾರ ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳು ಸೇರಿದಂತೆ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದನ್ನೇ ಮಾಡಲಾಗುತ್ತಿದೆ ಎಂಬ ಮಾಹಿತಿಗಳನ್ನು ಆ ಬರಹಗಳು ನೀಡುತ್ತವೆ. ಅಂತಿಮವಾಗಿ ಕೆರಳಿದ ನದಿಗಳು ಮಣ್ಣು ಮತ್ತು ಮರದ ದಿಮ್ಮಿಗಳನ್ನೆಲ್ಲ ಹೊತ್ತು ತಂದು ಹಿಮಾಚಲ ಪ್ರದೇಶದ ಸಣ್ಣ ಪಟ್ಟಣಗಳ ಬೀದಿಗಳಲ್ಲಿ ರೌದ್ರಾವತಾರ ತೋರಿದ್ದರ ಹಿಂದಿರುವುದು ಇಂಥವೇ ಮನುಷ್ಯ ನಿರ್ಮಿತಿಗಳು ಎಂಬುದನ್ನು ನೆನಪಿನಲ್ಲಿಡಬೇಕು.
ದುರದೃಷ್ಟವಶಾತ್, ನಮ್ಮ ಮಾಧ್ಯಮಗಳಲ್ಲಿ ಅಂತಹ ಮಾಹಿತಿಗಳೆಲ್ಲ ವಿನಾಶದ ನಂತರ ಕಾಣಿಸಿಕೊಳ್ಳುತ್ತವೆ, ವಿನಾಶಕ್ಕೆ ಮೊದಲೇ ಎಚ್ಚರಿಸುವ ಕೆಲಸಗಳಾಗುವುದಿಲ್ಲ.
ಕಳೆದ ವಾರದ ಪ್ರಳಯದಂಥ ಹವಾಮಾನ ಸಂಬಂಧಿತ ಘಟನೆಗಳು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪ್ರಪಂಚದಾದ್ಯಂತ ಆಗಾಗ ಸಂಭವಿಸುತ್ತಿವೆ ಎಂಬುದು ಸ್ಪಷ್ಟವಾಗಿದೆ. ನ್ಯೂಯಾರ್ಕ್ ಟೈಮ್ಸ್ ಜುಲೈ 10ರಂದು, ಇತ್ತೀಚಿನ ವಾರಗಳಲ್ಲಿ ಅಮೆರಿಕ ಅನುಭವಿಸಿದ ತೀವ್ರತರವಾದ ಶಾಖ, ಬಿರುಗಾಳಿಗಳು, ಪ್ರವಾಹಗಳು ಮತ್ತು ಅದಕ್ಕೆ ಸಂಭವನೀಯ ಕಾರಣಗಳ ಕುರಿತು ವರದಿ ಮಾಡಿದೆ.
ಹವಾಮಾನ ಬದಲಾವಣೆ ಮತ್ತು ಸ್ಥಳೀಯ ಪ್ರವಾಹದ ನಡುವಿನ ಸಂಪರ್ಕವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು, ಪತ್ರಕರ್ತರು ಜಾಗತಿಕ ತಾಪಮಾನದ ಹಿಂದಿನ ವಿಜ್ಞಾನವನ್ನು ನಿರಂತರವಾಗಿ ತಿಳಿಯುತ್ತಿರಬೇಕು. ಬಹಳ ಹಿಂದೆಯೇ, ದೇಶದ ಪ್ರಮುಖ ಪತ್ರಿಕೆಗಳು ಪೂರ್ಣಾವಧಿಯ ಪರಿಸರ ವರದಿಗಾರರನ್ನು ಹೊಂದಿದ್ದವು.
ಯಾವುದೇ ಸುಶಿಕ್ಷಿತ ವರದಿಗಾರ ಈ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವರದಿ ಮಾಡಲು ಸಾಧ್ಯವಾಗುತ್ತದೆ ಎಂದು ನೀವು ವಾದಿಸಬಹುದು. ಆದರೆ ಹೆಚ್ಚಿನ ವರದಿಗಾರರಿಗಿರುವ ಕೆಲಸದ ಹೊರೆಯ ಹಿನ್ನೆಲೆಯಲ್ಲಿ ಇದು ಸಂಪೂರ್ಣವಾಗಿ ಸಾಧ್ಯವಿಲ್ಲ, ಅಲ್ಲದೆ ಪರಿಸರ, ಆರೋಗ್ಯ ಅಥವಾ ಗ್ರಾಮೀಣ ಮತ್ತು ನಗರಾಭಿವೃದ್ಧಿಯಂತಹ ವಿಷಯಗಳಲ್ಲಿ ವಿಶೇಷ ತಿಳುವಳಿಕೆಯ ಅಗತ್ಯವಿದೆ. ಮಾಧ್ಯಮಗಳು ಪರಿಸರದಂತಹ ಮಹತ್ವದ ವಿಚಾರದಲ್ಲಿ ವರದಿಗಾರರನ್ನು ಹೊಂದಿದ್ದರೆ, ವಿಶೇಷವಾಗಿ ಗುಡ್ಡಗಾಡು ರಾಜ್ಯಗಳಲ್ಲಿನ ವಿಪತ್ತಿನ ಬಗ್ಗೆ ಕೆಲವು ಮುನ್ನೆಚ್ಚರಿಕೆಗಳನ್ನು ಕಂಡುಕೊಳ್ಳಲು ಹೆಚ್ಚು ಅವಕಾಶವಾಗಲಿದೆ.
(ಕೃಪೆ: newslaundry.com)